‘ಪುಣ್ಯಕೋಟಿ ವಂಶದವನು.. ಬಡವರ ಸಾರಥಿ, ಹೆಸರು ಉಮಾಪತಿ’; ರಾಬರ್ಟ್ ನಿರ್ಮಾಪಕರ ಬರ್ತ್‌ಡೇಗೆ ವಿಶೇಷ ಆಲ್ಬಂ ಹಾಡು ಬಿಡುಗಡೆ
Jul 24, 2024 06:02 AM IST
‘ಪುಣ್ಯಕೋಟಿ ವಂಶದವನು.. ಬಡವರ ಸಾರಥಿ, ಹೆಸರು ಉಮಾಪತಿ’; ರಾಬರ್ಟ್ ನಿರ್ಮಾಪಕರ ಬರ್ತ್‌ಡೇಗೆ ವಿಶೇಷ ಆಲ್ಬಂ ಹಾಡು ಬಿಡುಗಡೆ
- ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಬರ್ತ್‌ಡೇಗೆ ವಿಶೇಷ ಹಾಡೊಂದು ಬಿಡುಗಡೆ ಆಗಿದೆ. ಸಹಜವಾಗಿ ಬರ್ತ್‌ಡೇಗೆ ಸಿನಿಮಾ ಹೀರೋಗಳ ಹಾಡುಗಳು ಬಿಡುಗಡೆಯಾಗುತ್ತವೆ. ಇದೀಗ ನಿರ್ಮಾಪಕರ ಕುರಿತಾಗಿ ಹಾಡೊಂದು ರಿಲೀಸ್ ಆಗಿದ್ದು, ಅವರ ಕೆಲಸ ಕಾರ್ಯಗಳ ಬಗ್ಗೆ ಹಾಡಿನಲ್ಲಿ ವರ್ಣನೆ ಮಾಡಲಾಗಿದೆ.
The Kaptan Promotional Video Song: ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಆಡುವ ಮಾತು, ನಡೆದುಕೊಳ್ಳು ರೀತಿಯಿಂದಲೇ ತಮ್ಮದೇ ಆದ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ ಈ ನಿರ್ಮಾಪಕ. ಅದರಂತೆ ಇದೀಗ ಇವರ ಬರ್ತ್‌ಡೇಗೆ ವಿಶೇಷ ಹಾಡೊಂದು ಬಿಡುಗಡೆ ಆಗಿದೆ. ಸಹಜವಾಗಿ ಬರ್ತ್‌ಡೇಗೆ ಸಿನಿಮಾ ಹೀರೋಗಳ ಹಾಡುಗಳು ಬಿಡುಗಡೆಯಾಗುತ್ತವೆ. ಇದೀಗ ನಿರ್ಮಾಪಕರ ಕುರಿತಾಗಿ ಹಾಡೊಂದು ರಿಲೀಸ್ ಆಗಿದ್ದು, ಅವರ ಕೆಲಸ ಕಾರ್ಯಗಳ ಬಗ್ಗೆ ಹಾಡಿನಲ್ಲಿ ವರ್ಣನೆ ಮಾಡಲಾಗಿದೆ.
ದ ಕಫ್ತಾನ್ ಆಲ್ಬಂ ಸಾಂಗ್ ಬಿಡುಗಡೆ
ಹೌದು, ಜುಲೈ 27ರಂದು ಹೆಬ್ಬುಲಿ, ಒಂದಲ್ಲಾ ಎರಡಲ್ಲಾ ಹಾಗೂ ರಾಬರ್ಟ್ ಚಿತ್ರಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಬರ್ತ್‌ಡೇ. ಈ ನಿಮಿತ್ತ ಪೃಕೃತಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾದ ಶರಣಪ್ಪ ಗೌರಮ್ಮ ದ ಕಫ್ತಾನ್ ಎಂಬ ಆಲ್ಬಂ ಹಾಡನ್ನು ಹೊರತಂದಿದ್ದು, ಈ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶರಣಪ್ಪ ಗೌರಮ್ಮ, ಈ ಹಿಂದೆ ಯಾವ ಮೋಹನ ಮುರಳಿ ಕರೆಯಿತು ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ ಉಮಾಪತಿ ಅವರ ಕುರಿತಾಗಿ ಹಾಡು ನಿರ್ಮಿಸಿದ್ದಾರೆ.
ಹಾಡು ಹುಟ್ಟಿದ ಕಥೆ..
ದ ಕಫ್ತಾನ್ ಹಾಡು ಹುಟ್ಟಿನ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಶರಣಪ್ಪ ಗೌರಮ್ಮ, ನನಗೆ ಉಮಾಪತಿ ಶ್ರೀನಿವಾಸ್ ಅವರ ಮೇಲೆ ಅಪಾರ ಪ್ರೀತಿ ಹಾಗೂ ಗೌರವ. ನಮ್ಮ ಎಲ್ಲಾ ಕೆಲಸಗಳಿಗೂ ಅವರ ಪ್ರೋತ್ಸಾಹ ಇರುತ್ತದೆ. ಹಾಗಾಗಿ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಮುಂಚಿತವಾಗಿಯೇ ಪ್ಲಾನ್ ಮಾಡಿದ್ದೆ. ಅದರಂತೆ, ಈ ಹಾಡು ಮೂಡಿಬಂದಿದೆ ಎಂಬುದು, ನಿರ್ಮಾಪಕ ಶರಣಪ್ಪ ಗೌರಮ್ಮ ಮಾತು. ಮಾಸ್ ಮ್ಯೂಸಿಕ್ ಅಡ್ಡ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆ ಆಗಿದೆ.
ಹಾಡಿನ ಹಿಂದಿರುವವರು..
ಪದ್ದಿ ಮಲ್ನಾಡ್ ದ ಕಫ್ತಾನ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅನಿಲ್ ಸಿ ಜೆ ಈ ಹಾಡಿ ಧ್ವನಿಯಾಗಿದ್ದಾರೆ. ದ ಕಫ್ತಾನ್ ಆಲ್ಬಂ ಸಾಂಗ್ ಮಾಸ್ ಮ್ಯೂಸಿಕ್ ಅಡ್ಡ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.
ಹಾಡಿನ ಸಾಹಿತ್ಯ ಹೀಗಿದೆ
ಗುರುವಾಗಿ ಬಂದನು ಗುರುತಾಗಿ ನಿಂತು..
ಆ ಪುಣ್ಯಕೋಟಿ ವಂಶದಿಂದ ಬಂದು ನಿಂತನು..
ಭಗವಂತ ನೀನಯ್ಯ, ಬಲವಂತ ನೀನಯ್ಯ..
ಭರವಸೆಯ ರೂಪ, ನಂದಾದೀಪ ನಮಗೆ ನೀನಯ್ಯ
ನಿನ್ನಿಂದ ಈ ಮಾನ, ನಿನಗಾಗಿ ಈ ಪ್ರಾಣ
ಆ ಒಳ್ಳೆಯತನಕೆ, ದೇಗುಲದಂತೆ ನಿನ್ನ ಆಸ್ಥಾನ
ಸಾರಥಿ.. ಬಡವರ ಸಾರಥಿ.. ಹೀಗೆ ಮೂಡಿಬಂದಿದೆ ಊ ಹಾಡು.
ದರ್ಶನ್ ವಿಚಾರವಾಗಿ ಮುನ್ನೆಲೆಗೆ ಬಂದ ಉಮಾಪತಿ
ದರ್ಶನ್ ಜತೆಗೆ ರಾಬರ್ಟ್ ಸಿನಿಮಾ ಮಾಡಿದ್ದ ಉಮಾಪತಿ ಶ್ರೀನಿವಾಸ್ ಗೌಡ, ಅದಾದ ಮೇಲೆ ಇಬ್ಬರ ನಡುವೆ ಒಂದಷ್ಟು ಕಾರಣಕ್ಕೆ ಮುನಿಸು ಮನೆ ಮಾಡಿತು. ಪರಸ್ಪರ ಕೌಂಟರ್ ಕೊಡುವ ಕೆಲಸವೂ ನಡೆದಿತ್ತು. ನಟ ದರ್ಶನ್ ವೇದಿಕೆ ಮೇಲೆಯೇ ತಗಡು, ಗುಮ್ಮುಸ್ಕೋತಿಯಾ ಎಂಬೆಲ್ಲ ಪದ ಪ್ರಯೋಗ ಮಾಡಿದ್ದರು. ಆವತ್ತು ದರ್ಶನ್ ಮಾತುಗಳಿಗೆ ಕಾಲ ಬರುತ್ತೆ ಹೆಚ್ಚು ಮಾತನಾಡಲ್ಲ ಎಂದು ಪ್ರತಿಕ್ರಿಯಿಸಿದ್ರು. ಇತ್ತೀಚಿಗೆ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋಗ್ತಿದ್ದಂತೆ, ದರ್ಶನ್ ಆಡಿದ ಮಾತುಗಳನ್ನು ನೆನಪಿಸಿಕೊಂಡಿದ್ದರು. ಮನುಷ್ಯನಿಗೆ ಮಾತಿನ ಮೇಲೆ ಹಿಡಿತವಿರಬೇಕು, ತಾಳ್ಮೆ ಬೇಕು ಎಂದಿದ್ದರು. ಮಾಡಿದ ಕರ್ಮ ಯಾರನ್ನೂ ಬಿಡಲ್ಲ" ಎಂದೂ ಹೇಳಿದ್ದರು ಉಮಾಪತಿ.