Shalivahana Shake Review: ತಲೆಗೆ ಹುಳ ಬಿಟ್ಟು, ಸೀಟಿನ ತುದಿಗೆ ತಂದು ಕೂರಿಸುತ್ತೆ ಈ ಟೈಮ್ ಲೂಪ್ ಕಥೆ; ಶಾಲಿವಾಹನ ಶಕೆ ಸಿನಿಮಾ ವಿಮರ್ಶೆ
Sep 16, 2024 08:23 PM IST
ಶಾಲಿವಾಹನ ಶಕೆ ಸಿನಿಮಾ ವಿಮರ್ಶೆ
- Shalivahana Shake Review: ಕನ್ನಡದಲ್ಲಿ ಟೈಮ್ ಟ್ರಾವಲ್ ಮತ್ತು ಟೈಮ್ ಲೂಪ್ ಕಥೆಗಳು ಬರುವುದು ತುಂಬ ವಿರಳ. ಇತ್ತೀಚೆಗಷ್ಟೇ ಬ್ಲಿಂಕ್ ಸಿನಿಮಾ ಅಂಥದ್ದೊಂದು ಪ್ರಯತ್ನ ಮಾಡಿ ಗೆದ್ದಿತ್ತು. ಇದೀಗ ಶಾಲಿವಾಹನ ಶಕೆ ಸಿನಿಮಾ ಮೂಲಕ ಆ ವಿರಳ ಕಾನ್ಸೆಪ್ಟ್ ಅನ್ನು ಕೈಗೆತ್ತಿಕೊಂಡು, ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಹೊಸಬರಿಂದ ಆಗಿದೆ.
Shalivahana Shake Review: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಹೊಸಬರ ಹೊಸ ಹೊಸ ಸಿನಿಮಾಗಳು ಕಥೆಯ ವಿಚಾರಕ್ಕೆ ಸದ್ದು ಮಾಡುತ್ತಿವೆ. ಆ ಸಾಲಿಗೆ ಇದೀಗ ಇನ್ನೊಂದು ಸಿನಿಮಾ ಸೇರಿದೆ. ಅದುವೇ ಶಾಲಿವಾಹನ ಶಕೆ. ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿದ್ದ ಈ ಸಿನಿಮಾ ಮೊನ್ನೆ ಶುಕ್ರವಾರವಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಟೈಮ್ ಲೂಪ್ ಅನ್ನೋ ಪರಿಕಲ್ಪನೆಯ ಯೂನಿಕ್ ಕಥೆಯ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದೆ ಶಾಲಿವಾಹನ ಶಕೆ ಸಿನಿಮಾ.
ಕನ್ನಡದಲ್ಲಿ ಟೈಮ್ ಟ್ರಾವಲ್ ಮತ್ತು ಟೈಮ್ ಲೂಪ್ ಕಥೆಗಳು ಬರುವುದು ತುಂಬ ವಿರಳ. ಇತ್ತೀಚೆಗಷ್ಟೇ ಬ್ಲಿಂಕ್ ಸಿನಿಮಾ ಅಂಥದ್ದೊಂದು ಪ್ರಯತ್ನ ಮಾಡಿ ಗೆದ್ದಿತ್ತು. ಇದೀಗ ಆ ವಿರಳ ಕಾನ್ಸೆಪ್ಟ್ ಅನ್ನು ಕೈಗೆತ್ತಿಕೊಂಡು, ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಹೊಸಬರಿಂದ ಆಗಿದೆ. ಯಾಕೆಂದರೆ, ಇಂಥ ಕಥೆಗಳನ್ನು ಹಿಡಿದು ಪ್ರೇಕ್ಷಕನಿಗೆ, ಸೂಕ್ತ ಎಳೆಯ ಮೂಲಕ ತಲುಪಿಸುವುದು ಕೊಂಚ ಕಷ್ಟವೇ. ಆ ಪ್ರಯತ್ನವನ್ನು ನಿರ್ದೇಶಕ ಗಿರೀಶ್ ಮಾಡಿದ್ದಾರೆ.
ಏನಿದು ಶಾಲಿವಾಹನ ಶಕೆ ಕಥೆ
ತುಮಕೂರು ಬಳಿಯ ಸಣ್ಣ ಹಳ್ಳಿಯೊಂದರಲ್ಲಿ ನಾಲ್ವರು ಹುಡುಗರ ನಡುವೆ ನಡೆಯುವ ಕಥೆ. ಉಂಡಾಡಿ ಗುಂಡನಂತೆ ಹಳ್ಳಿಯಲ್ಲಿ ಸುತ್ತಾಡ್ತಿದ್ದ ರಂಗನಿಗೆ (ಗಿರೀಶ್) ಒಂದು ದಿನ ಬಾವಿಯೊಂದರಲ್ಲಿ ಶಂಖ ಸಿಗುತ್ತದೆ. ಅಲ್ಲಿಂದ ಅಸಲಿ ಕಥೆ ಶುರುವಾಗುತ್ತದೆ. ಶಂಖ ಸಿಕ್ಕ ರಾತ್ರಿಯಿಂದಲೇ ಆತನ ಕನಸಿನಲ್ಲಿ ಬಗೆಬಗೆ ವಿಚಿತ್ರ ಘಟನೆಗಳು ಕಾಣಿಸುತ್ತವೆ. ಮುಂದೆ ನಡೆಯುವ ಘಟನೆಗಳು ಕನಸಲ್ಲಿ ತೇಲಿಬಂದು, ಅವನನ್ನೂ ಆತಂಕಕ್ಕೆ ದೂಡುತ್ತವೆ. ನಾಳಿನದ್ದನ್ನು ಇವತ್ತೇ ಕನಸಲ್ಲಿ ಕಂಡಿರುತ್ತಾನೆ.
ಹೀಗೆ ಕನಸು ಕಾಣುವ ರಂಗನಿಗೆ ಇದೆಲ್ಲದರ ಹಿಂದೆ ಶಂಖದ ಮಹಿಮೆ ಇದೆ ಎಂಬುದು ಗೊತ್ತಾಗುತ್ತದೆ. ಬಾವಿಗೆ ಬಿದ್ದು ನೀರಲ್ಲಿ ಮುಳುಗಿ ಸತ್ತ ಸ್ನೇಹಿತನನ್ನೂ ರಂಗ ಶಂಖದ ಮೂಲಕ ಕಾಪಾಡುತ್ತಾನೆ. ಹಳ್ಳಿಯಲ್ಲನ ಒಂದಷ್ಟು ವಿಸ್ಮಯಗಳಿಗೂ ಶಂಖ ಕಾರಣವಾಗಿರುತ್ತದೆ. ಆ ಶಂಖದ ಹಿನ್ನೆಲೆ ಏನು? ಮುಂದೆ ಏನೆಲ್ಲ ಘಟಿಸುತ್ತವೆ? ಪೌರಾಣಿಕ ಹಿನ್ನೆಲೆಯ ಟಚ್ ಈ ಚಿತ್ರಕ್ಕಿದೆ. ಅದ್ಯಾಕೆ ಇಲ್ಲಿ ಬಂತು? ಹೀಗೆ ತಲೆಗೆ ಹುಳ ಬಿಟ್ಟು, ಈ ಎಲ್ಲ ಸಂದೇಹಗಳಿಗೆ ಚಿತ್ರದಲ್ಲಿಯೇ ನಿರ್ದೇಶಕರು ಉತ್ತರ ನೀಡಿದ್ದಾರೆ.
ರೆಗ್ಯುಲರ್ ಫಾರ್ಮ್ಯಾಟ್‌ನ ಸಿನಿಮಾ ಅಲ್ಲ...
ಶಾಲಿವಾಹನ ಶಕೆ ಸಿನಿಮಾ ರೆಗ್ಯುಲರ್ ಫಾರ್ಮ್ಯಾಟ್‌ನ ಸಿನಿಮಾ ಜಾನರ್‌ಗೆ ಸೇರುವುದಿಲ್ಲ! ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಕೆಲಸ ಇಲ್ಲಾಗಿದೆ. ಈ ಸಿನಿಮಾದಲ್ಲಿ ದ್ವಾಪರಯುಗ, ತ್ರೇತಾಯುಗ, ಸತ್ಯಯುಗಗಳ ಮಿಳಿತವೂ ಕಾಣಿಸುತ್ತದೆ. ಒಟ್ಟಾರೆ, ನಿರ್ದೇಶಕರು ನೋಡುಗನನ್ನು ಒಂದು ಬೇರೆಯ ಪ್ರಪಂಚಕ್ಕೆ ಕರೆದೊಯ್ದಿದ್ದಾರೆ.
ಸಿನಿಮಾ ಶುರುವಾದರೆ ಪ್ರೇಕ್ಷಕ ಸಿನಿಮಾದ ಆಳಕ್ಕೆ ಇಳಿದು, ಆ ಕಥೆಯೇ ತಾನು ಎಂಬಂತೆ ಮುಂದಿನದನ್ನು ಊಹಿಸುತ್ತ ಸಾಗುತ್ತಾನೆ. ಆದರೆ, ಶಾಲಿವಾಹನ ಶಕೆ ಸಿನಿಮಾ ಮಾತ್ರ ಆ ಪ್ಯಾಟರ್ನ್‌ಗೆ ಸೇರುವುದಿಲ್ಲ. ನೋಡುಗನಿಗೆ ಮುಂದೇನಾಗುತ್ತದೆ ಎಂಬ ಕೌತುಕವನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಆದರೆ, ಟೈಮ್ ಲೂಪ್ ಕಥೆಯಾಗಿರುವುದರಿಂದ ಕೆಲ ದೃಶ್ಯಗಳು ಪದೇ ಪದೆ ತೆರೆಮೇಲೆ ಕಾಣಿಸುತ್ತವೆಯಾದರೂ ಅದನ್ನು ಸಹಿಸಿಕೊಳ್ಳಲೇಕು. ಇಲ್ಲವಾದರೆ, ಅದಕ್ಕೆ ಟೈಮ್ ಲೂಪ್ ಎನ್ನುವುದಿಲ್ಲ.
ನಿರ್ದೇಶಕನಾಗಿ ಮಾತ್ರವಲ್ಲದೆ, ನಾಯಕ ನಟನಾಗಿಯೂ ಗಿರೀಶ್ ಗಮನ ಸೆಳೆಯುತ್ತಾರೆ. ನಾಯಕಿಯಾಗಿ ಸುಪ್ರಿತಾ ನಾರಾಯಣ್, ಸುಂದರ್ ವೀಣಾ, ಚಿಲ್ಲರ್ ಮಂಜು, ಶೈಲೇಶ್ ಕುಮಾರ್, ದಯಾನಂದ್ ಸಾಗರ್ ಸಿಕ್ಕ ಪಾತ್ರದಲ್ಲಿ ದಿ ಬೆಸ್ಟ್ ಕೊಡುವ ಪ್ರಯತ್ನ ಮಾಡಿದ್ದಾರೆ. ಸಂಗೀತ ಚಿತ್ರಕ್ಕೆ ಪೂರಕವಾದರೆ, ಹಳ್ಳಿ ಸೊಗಡನ್ನು ಚಿತ್ರದಲ್ಲಿ ಚೆಂದವಾಗಿ ತೋರಿಸಿದ್ದಾರೆ.
ಒಟ್ಟಾರೆಯಾಗಿ ಟ್ರೈಮ್ ಲೂಪ್ ಸಿನಿಮಾ ಪ್ರಯತ್ನಗಳೇ ವಿರಳ. ಅದರಲ್ಲೂ ಕನ್ನಡದಲ್ಲಿ ಇಂತ ಸಿನಿಮಾಗಳು ಬರುವುದು ಅಪರೂಪ. ಸಮಯದ ಹಿಂದೆ ಓಡುವ ಕಥೆಗಳು ಹೇಗಿರುತ್ತವೆ ಎಂಬ ಕುತೂಹಲ ನಿಮಗಿದ್ದರೆ, ಅದಕ್ಕೆ ಅತ್ಯುತ್ತಮ ಉದಾಹರಣೆ ಈ ಶಾಲಿವಾಹನ ಶಕೆ. ಸಮಯ ಸಿಕ್ಕರೆ ಚಿತ್ರಮಂದಿರಕ್ಕೆ ಹೋಗಿ ಈ ಸಿನಿಮಾ ವೀಕ್ಷಣೆ ಮಾಡಬಹುದು.
ಚಿತ್ರ: ಶಾಲಿವಾಹನ ಶಕೆ
ನಿರ್ದೇಶನ: ಗಿರೀಶ್
ನಿರ್ಮಾಣ: ಸೈಡ್‌ವಿಂಗ್ ಸಿನಿಮಾಸ್
ತಾರಾಗಣ: ಗಿರೀಶ್, ಸುಪ್ರಿತಾ ನಾರಾಯಣ್, ಸುಂದರ್ ವೀಣಾ, ಚಿಲ್ಲರ್ ಮಂಜು, ಶೈಲೇಶ್ ಕುಮಾರ್, ದಯಾನಂದ್ ಸಾಗರ್ ಮುಂತಾದವರು.
ರೇಟಿಂಗ್: 3\5