Pyramid Meditation: ನಟ ದರ್ಶನ್‌ಗೆ ಪಿರಮಿಡ್ ಧ್ಯಾನ ಹೇಳಿಕೊಟ್ಟ ತುರುವನೂರು ಸಿದ್ಧಾರೂಢ; ಚೆನ್ನಾಗಿದೆ ಕಣೋ ಅಂದ್ರಂತೆ
Jul 24, 2024 08:14 PM IST
Pyramid Meditation: ನಟ ದರ್ಶನ್‌ಗೆ ಪಿರಮಿಡ್ ಧ್ಯಾನ ಹೇಳಿಕೊಟ್ಟ ತುರುವನೂರು ಸಿದ್ಧಾರೂಢ
- ನಾನು ಜುಲೈ 8ನೇ ತಾರೀಕು ಜೈಲು ಅಧಿಕಾರಿಗಳ ಅನುಮತಿ ಪಡೆದು ನಟ ದರ್ಶನ್‌ರನ್ನು ಭೇಟಿಯಾದೆ. ನನಗೆ ಅಲ್ಲಿ ದರ್ಶನ್‌ರನ್ನು ನೋಡಿದಾಗ ಬೇಸರವಾಯಿತು. ನಾನು ನಿಮ್ಮ ಅಭಿಮಾನಿ ಎಂದಾಗ ತಬ್ಬಿಕೊಂಡರು. ಅವರಿಗೆ ಪಿರಾಮಿಡ್ ಧ್ಯಾನ ಹೇಳಿಕೊಟ್ಟೆ ಎಂದು ಜೈಲಿನಿಂದ ಇತ್ತೀಚೆಗೆ ಬಿಡುಗಡೆಗೊಂಡ ತುರುವನೂರು ಸಿದ್ಧಾರೂಢ ಹೇಳಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ಸನ್ನಡತೆ ಆಧಾರದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡು ಹೊರಬಂದಿರುವ ತುರುವನೂರು ಸಿದ್ಧಾರೂಢ ಅವರು ಜೈಲಿನಲ್ಲಿದ್ದ ದರ್ಶನ್‌ರನ್ನು ಭೇಟಿಯಾದ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿವೆ. ಇಂದು ವಿವಿಧ ಟಿವಿ ಮಾಧ್ಯಮಗಳ ಸಂದರ್ಶನಗಳಲ್ಲಿಯೂ ಸಿದ್ಧಾರೂಢ ಕಾಣಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯವರ ಕ್ಷಮೆ ಕೇಳುವೆ ಎಂದು ದರ್ಶನ್ ಹೇಳಿಲ್ಲ. ಆ ವಿಚಾರಗಳನ್ನು ನನ್ನೊಂದಿಗೆ ಮಾತನಾಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ನಾನು ದರ್ಶನ್‌ಗೆ ಧ್ಯಾನ ಹೇಳಿಕೊಟ್ಟೆ ಎಂದು ಹೇಳಿದ್ದಾರೆ.
ನಾನು ಜುಲೈ 8ನೇ ತಾರೀಕು ಜೈಲು ಅಧಿಕಾರಿಗಳ ಅನುಮತಿ ಪಡೆದು ನಟ ದರ್ಶನ್‌ರನ್ನು ಭೇಟಿಯಾದೆ. ನನಗೆ ಅಲ್ಲಿ ದರ್ಶನ್‌ರನ್ನು ನೋಡಿದಾಗ ಬೇಸರವಾಯಿತು. ನಾನು ನಿಮ್ಮ ಅಭಿಮಾನಿ ಎಂದಾಗ ತಬ್ಬಿಕೊಂಡರು. ಅವರಿಗೆ ಪಿರಾಮಿಡ್ ಧ್ಯಾನ ಹೇಳಿಕೊಟ್ಟೆ. ನನಗೆ ಧ್ಯಾನ ಗೊತ್ತಿಲ್ಲ ಅಂದ್ರು. ಮಾಡಿ ಸಾರ್, ಚೆನ್ನಾಗಿರುತ್ತದೆ, ಇಲ್ಲಿಗೆ ಇದು ಅಗತ್ಯ ಎಂದೆ. ಅವರು ಒಪ್ಪಿಕೊಂಡರು. ಹತ್ತು ನಿಮಿಷ ಧ್ಯಾನ ಮಾಡಿದ್ರು. "ಇದು ಚೆನ್ನಾಗಿದೆ ಕಣೋ, ಕಂಟಿನ್ಯೂ ಮಾಡ್ತಿನಿ ಎಂದ್ರು" ಎಂದು ಜೈಲಿನಿಂದ ಬಿಡುಗಡೆಗೊಂಡ ಖೈದಿ ಸಿದ್ಧಾರೂಢ ಹೇಳಿದ್ದಾರೆ.
ಅಧ್ಯಾತ್ಮದ ದರ್ಶನ್ ಒಲವು
ನಟ ದರ್ಶನ್ ಹೆಚ್ಚು ಅಧ್ಯಾತ್ಮ ಪುಸ್ತಕಗಳನ್ನು ಓದುತ್ತಿದ್ದಾರೆ. ಜೈಲಿನಲ್ಲಿ ಅವರು ಕುಳಿತ ಸ್ಥಳದ ಸುತ್ತಮುತ್ತ ನೋಡಿದಾಗ ಸಾಕಷ್ಟು ಅಧ್ಯಾತ್ಮ ಪುಸ್ತಕಗಳು ಕಂಡವು ಎಂದು ಅವರು ಮಾಹಿತಿ ನೀಡಿದ್ದಾರೆ. ದರ್ಶನ್ ಆದಷ್ಟು ಬೇಗ ಹೊರಬರಲಿ. ಬೇಗ ಹೊರಗೆ ಬರುತ್ತಾರೆ ಎಂಬ ಭರವಸೆ ನನ್ನದು ಎಂದು ಅವರು ಹೇಳಿದ್ದಾರೆ.
ನನ್ನ ಬಗ್ಗೆಯೂ ವಿಚಾರಿಸಿದರು. ಜೈಲಿಗೆ ಯಾಕೆ ಬಂದೆ ಎಂದರು. ನನ್ನ ಪ್ರಕರಣದ ಬಗ್ಗೆ ತಿಳಿಸಿದೆ. ನಾನು ನಿನ್ನ ಸೆಲೆಬ್ರಿಟಿ, ನೀನು ನನ್ನ ಸೆಲೆಬ್ರಿಟಿ ಅಂದ್ರು. ದರ್ಶನ್ ಸರ್ ಜೈಲಿಗೆ ಹೋದ ಸಂಗತಿ ನನಗೆ ತುಂಬಾ ಬೇಜಾರು ಉಂಟು ಮಾಡ್ತು ಎಂದು ತುರುವನೂರು ಸಿದ್ಧಾರೂಢ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ನಟ ದರ್ಶನ್‌ಗೆ ವಿಐಪಿ ಟ್ರೀಟ್‌ಮೆಂಟ್ ಇಲ್ಲ. ನೆಲದ ಮೇಲೆ ಮಲಗುತ್ತಾರೆ. ಸೊಳ್ಳೆ ಪರದೆ ನೀಡಿದ್ದಾರೆ. ವಾಟರ್ ಕ್ಯಾನ್‌ನಲ್ಲಿ ಕುಡಿಯಲು ನೀರು ನೀಡುತ್ತಾರೆ ಅಷ್ಟೇ. ಎಲ್ಲರಂತೆ ದರ್ಶನ್‌ರನ್ನು ಜೈಲಿನಲ್ಲಿ ನೋಡಿಕೊಳ್ಳುತ್ತಾರೆ. ವಿಶೇಷ ಸೌಲಭ್ಯ ಏನೂ ಇಲ್ಲ" ಎಂದು ತುರುವನೂರು ಸಿದ್ಧಾರೂಢ ಹೇಳಿದ್ದಾರೆ.
ತುರುವನೂರು ಸಿದ್ಧಾರೂಢ ಹಲವು ವರ್ಷಗಳಿಂದ ಜೈಲಿನಲ್ಲಿದ್ದರು. ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಇದೀಗ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ. ಇವರು ಜೈಲಲ್ಲೇ ಕುಳಿತು ಪುಸ್ತಕವೊಂದನ್ನು ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೆಲವೊಂದು ವರದಿಗಳ ಪ್ರಕಾರ ಇವರು ಪೆರೋಲ್ ಮೂಲಕ ಜೈಲಿನಿಂದ ಹೊರಬಂದಿದ್ದಾರೆ.