logo
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡತಿ ಧಾರಾವಾಹಿ ನಟ ಕಿರಣ್‌ ರಾಜ್‌ ಈಗ ಹೀರೋ; ಮೇಘ ಸಿನಿಮಾದ ಟೀಸರ್‌ ಬಿಡುಗಡೆ

ಕನ್ನಡತಿ ಧಾರಾವಾಹಿ ನಟ ಕಿರಣ್‌ ರಾಜ್‌ ಈಗ ಹೀರೋ; ಮೇಘ ಸಿನಿಮಾದ ಟೀಸರ್‌ ಬಿಡುಗಡೆ

Praveen Chandra B HT Kannada

Jan 25, 2024 02:11 PM IST

google News

ಮೇಘ ಸಿನಿಮಾದ ಟೀಸರ್‌ ಬಿಡುಗಡೆ

    • Megha Kannada Movie:  ಚರಣ್‌ ನಿರ್ದೇಶನದ, ಕಿರಣ್‌ ರಾಜ್‌ ನಾಯಕ ನಟನಾಗಿ ನಟಿಸಿರುವ ಮೇಘ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. "ಕನ್ನಡತಿ" ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ಕಿರಣ್‌ ರಾಜ್‌ ಈ ಸಿನಿಮಾದಲ್ಲಿ ಹೀರೋ ಆಗಿ ಮಿಂಚಲಿದ್ದಾರೆ.
ಮೇಘ ಸಿನಿಮಾದ ಟೀಸರ್‌ ಬಿಡುಗಡೆ
ಮೇಘ ಸಿನಿಮಾದ ಟೀಸರ್‌ ಬಿಡುಗಡೆ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮೇಘ ಎಂಬ ಹೊಸ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಈ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. "ಕನ್ನಡತಿ" ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಚರಣ್ ನಿರ್ದೇಶನದ ಸಿನಿಮಾವಿದು.

ಮೇಘ ಚಿತ್ರದ ಟೀಸರ್‌ ಬಿಡುಗಡೆ

ಖ್ಯಾತ ಗೀತರಚನೆಕಾರ ಡಾ||ವಿ.ನಾಗೇಂದ್ರ ಪ್ರಸಾದ್ "ಮೇಘ" ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು "ಮೇಘ" ಚಿತ್ರದ ಕುರಿತು ಮಾತನಾಡಿದ್ದಾರೆ.

"ನಾನು ಮೂಲತಃ ಐಟಿ ಉದ್ಯೋಗಿ. ಕೋವಿಡ್ ನಂತರ ಐಟಿ ಕೆಲಸ ಬಿಟ್ಟು ಡಾ||ವಿ.ನಾಗೇಂದ್ರಪ್ರಸಾದ್ ಅವರ ಬಳಿ ಸಿನಿಮಾ ಕೆಲಸ ಕಲಿಯಲು ಆರಂಭಿಸಿದೆ. ಇನ್ನು "ಮೇಘ" ನನ್ನ ಮೊದಲ ನಿರ್ದೇಶನದ ಚಿತ್ರ. "ಮೇಘ" ಗಳು ಆಕಾಶದಲ್ಲಿ ಯಾವಾಗಲೂ ಒಟ್ಟಾಗೆ ಚಲಿಸುತ್ತದೆ. ಆದರೆ ಮಳೆಯನ್ನು ಎಲ್ಲೋ ಸುರಿಸುತ್ತದೆ. ಇದನ್ನೇ ಇಟ್ಟುಕೊಂಡು ಪ್ರೇಮ ಕಥೆ ಸಿದ್ದಮಾಡಿಕೊಂಡೆ. ನಮ್ಮ ಸಿನಿಮಾದಲ್ಲಿ "ಮೇಘ" ಎಂದರೆ ಪ್ರೀತಿ ಅಂತ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ನಾಯಕ - ನಾಯಕಿಯಾಗಿ ನಟಿಸಿದ್ದಾರೆ" ಎಂದು ಅವರು ವಿವರ ನೀಡಿದ್ದಾರೆ.

"ರಾಜೇಶ್ ನಟರಂಗ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಜೋಯಲ್ ಸಕ್ಕರಿ ಸಂಗೀತ ಸಂಯೋಜಿಸಿರುವ ಐದು ಸುಮಧುರ ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳನ್ನು ಗುರುಗಳಾದ ನಾಗೇಂದ್ರ ಪ್ರಸಾದ್ ಅವರು, ಬಾಕಿ ಮೂರು ಹಾಡುಗಳನ್ನು ನಾನು ಬರೆದಿದ್ದೇನೆ. ಯತೀಶ್ ಹೆಚ್ ಆರ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರ ಬಿಡುಗಡೆಯ ಹಂತದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ" ಎಂದರು.

ನನಗೆ ಸಿನಿಮಾ ರಂಗ ಹೊಸತು. ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಹಾಗೂ ತ್ರಿವಿಕ್ರಮ ಸಾಫಲ್ಯ ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿರುವುದಾಗಿ ನಿರ್ಮಾಪಕ ಯತೀಶ್ ಹೆಚ್ ಆರ್ ಹೇಳಿದರು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ "ಮೇಘ" ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಮ ಕಥಾನಕವಾಗಿದ್ದರೂ ಚಿತ್ರದ ಎಮೋಷನ್ ಎಲ್ಲರ ಗಮನ ಸೆಳೆಯುತ್ತದೆ. ಉದಾಹರಣೆಗೆ ನಾನು ಈ ಚಿತ್ರದ ಕಥೆ ಕೇಳಿ, ನನ್ನ ಅಪ್ಪನಿಗೆ ಬುಲೆಟ್ ಕೊಡಿಸಿದ್ದೇನೆ. ಈಗಿನ ಪೀಳಿಗೆಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ ಎಂದರು ನಾಯಕ ಕಿರಣ್ ರಾಜ್.

ಈ ಚಿತ್ರದ ವಿಶೇಷವೆಂದರೆ ನನ್ನ ಹಾಗೂ ನಾಯಕ ಇಬ್ಬರ ಹೆಸರು "ಮೇಘ" ಎಂದು. ಉತ್ತಮ ಕಥೆಯ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಾಯಕಿ ಕಾಜಲ್ ಕುಂದರ್ ಹೇಳಿದ್ದಾರೆ.

ಚಿತ್ರದ ಛಾಯಾಗ್ರಾಹಕ ಮತ್ತು ಸಂಕಲನಕಾರ ಗೌತಮ್ ನಾಯಕ್, ನಟಿ ಶ್ರೀವಿದ್ಯ ಹಾಗೂ ತ್ರಿವಿಕ್ರಮ ಸಾಫಲ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಿನಿಮಾ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ (kannada.hindustantimes.com) ನಿರಂತರವಾಗಿ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ