ಕಾವೇರಿ ವಿಚಾರದಲ್ಲಿ ಕರ್ನಾಟಕ ಅಂದ್ರೆ ತಮಿಳಿಗರಿಗೆ ಪಾಕಿಸ್ತಾನ, ಶ್ರೀಲಂಕಾ ಆಗ್ಬಿಟ್ಟಿದೆ, ಯುದ್ಧಕ್ಕೇ ನಿಲ್ತಾರೆ; ಅನಂತ್ ನಾಗ್
Sep 21, 2023 03:27 PM IST
ಕಾವೇರಿ ವಿಚಾರದಲ್ಲಿ ಕರ್ನಾಟಕ ಅಂದ್ರೆ ತಮಿಳಿಗರಿಗೆ ಪಾಕಿಸ್ತಾನ, ಶ್ರೀಲಂಕಾ ಆಗ್ಬಿಟ್ಟಿದೆ, ಯುದ್ಧಕ್ಕೇ ನಿಲ್ತಾರೆ; ಅನಂತ್ ನಾಗ್
- ಬ್ರಿಟೀಷರ ಕಾಲದಿಂದಲೇ ತಮಿಳುನಾಡಿಗೆ ಹೆಚ್ಚು ನೀರು ಸಿಗುತ್ತಿದೆ. ಹಾಗೆ ಸಿಗುವಂತೆ ಮಾಡಿದ್ದೇ ಬ್ರಿಟೀಷರು. ಹಾಗಾಗಿ ಬ್ರಿಟೀಷರ ಕಾಲದಿಂದಲೂ ನಮಗೆ ಅನ್ಯಾಯವೇ ಆಗಿದೆ. ಅಂದಿನಿಂದ ಅದು ಸರಿ ಆಗಿಯೇ ಇಲ್ಲ. ಈ ಬಗ್ಗೆ ಈಗಲೇ ನಾವು ಎಚ್ಚೆತ್ತು ನಿಲ್ಲಬೇಕಿದೆ ಎಂದಿದ್ದಾರೆ ಹಿರಿಯ ನಟ ಅನಂತ್ ನಾಗ್.
Ananth Nag on Cauvery: ರಾಜ್ಯದಲ್ಲಿ ಕಾವೇರಿ ವಿವಾದ ತೀವ್ರವಾಗುತ್ತಿದೆ. ಮಳೆ ಕೊರತೆಯಿಂದ ಈ ಸಲ ನಿರೀಕ್ಷಿತ ಮಟ್ಟದಲ್ಲಿ ಜಲಾಶಯಗಳು ಭರ್ತಿ ಆಗಿಲ್ಲ. ಅದರಲ್ಲೂ ಕರ್ನಾಟಕದ ಕಾವೇರಿ ನದಿ ಪ್ರದೇಶದಲ್ಲಿ ಈ ಸಲ ನೀರಿನ ಮಟ್ಟವೂ ಕಡಿಮೆ ಆಗಿದೆ. ಈ ನಡುವೆಯೇ ತಮಿಳುನಾಡಿಗೆ ನೀರು ಹರಿಸಬೇಕಾಗಿದೆ. ಇದರ ವಿರುದ್ಧ ಕನ್ನಡ ಸಿನಿಮಾ ತಾರೆಯರು ಮತ್ತು ಕನ್ನಡ ಪರ ಹೋರಾಟಗಾರರು ಈ ಬಗ್ಗೆ ತಮ್ಮ ನಿಲುವು ತಿಳಿಸುತ್ತಿದ್ದಾರೆ. ಅದೇ ರೀತಿ ಹಿರಿಯ ನಟ ಅನಂತ್ ನಾಗ್ ಸಹ ಈ ಬಗ್ಗೆ ಮಾತನಾಡಿದ್ದಾರೆ.
"ಪ್ರತಿ ವರ್ಷದಂತೆ ಈ ವರ್ಷವೂ ಮಳೆ ಕಡಿಮೆ ಇದ್ದಾಗ, ಮತ್ತೊಮ್ಮೆ ತಮಿಳುನಾಡು ನೀರಿನ ವಿಚಾರದಲ್ಲಿ ಖ್ಯಾತೆ ತೆಗೆದಿದೆ. ಇದನ್ನು ನಾವು ಕಳೆದ 60 ವರ್ಷದಿಂದ ಇದನ್ನು ನೋಡುತ್ತಲೇ ಬಂದಿದ್ದೇವೆ. ಮೊದಲು ಹಳೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ಸಮಸ್ಯೆ ಇತ್ತು. ಅದಾದ ಬಳಿಕ ಅಣ್ಣಾದೊರೈ ಕಾಲದ ನಂತರ ಬಹುತೇಕ ಡಿಎಂಕೆ ಸರ್ಕಾರಗಳೇ ಅಧಿಕಾರಕ್ಕೆ ಬಂದಿವೆ. ಈ ದ್ರಾವಿಡ ಪಕ್ಷಗಳು ಪದೇ ಪದೆ ಅಲ್ಲಿನ ಜನರಿಗೆ ಕಾವೇರಿ ವಿಷಯದಲ್ಲಿ ತಪ್ಪು ದಾರಿಗೆ ಎಳೆದಿವೆ. ಕರ್ನಾಟಕವು ಕಾವೇರಿ ನೀರನ್ನು ಸರಿಯಾಗಿ ತಮಿಳುನಾಡಿಗೆ ಹರಿಸುತ್ತಿಲ್ಲ ಎಂಬಂತೆ ಬಿಂಬಿಸಿದ್ದಾರೆ. ಆದರೆ ನಾವು, ಅವರು ಕೇಳಿದ್ದಕ್ಕಿಂತ ಹೆಚ್ಚೇ ಕೊಡುತ್ತಿದ್ದೇವೆ" ಎಂದು ಈ ವರೆಗಿನ ಸ್ಥಿತಿ ವಿವರಿಸಿದ್ದಾರೆ.
"ಬ್ರಿಟೀಷರ ಕಾಲದಿಂದಲೇ ತಮಿಳುನಾಡಿಗೆ ಹೆಚ್ಚು ನೀರು ಸಿಗುತ್ತಿದೆ. ಹಾಗೆ ಸಿಗುವಂತೆ ಮಾಡಿದ್ದೇ ಬ್ರಿಟೀಷರು. ಹಾಗಾಗಿ ಬ್ರಿಟೀಷರ ಕಾಲದಿಂದಲೂ ನಮಗೆ ಅನ್ಯಾಯವೇ ಆಗಿದೆ. ಅಂದಿನಿಂದ ಅದು ಸರಿ ಆಗಿಯೇ ಇಲ್ಲ. ಈ ಬಗ್ಗೆ ಈಗಲೇ ನಾವು ಎಚ್ಚೆತ್ತು ನಿಲ್ಲಬೇಕಿದೆ. ಕರ್ನಾಟಕವನ್ನು ಪಾಕಿಸ್ತಾನ, ಶ್ರೀಲಂಕಾ ಅಂದುಕೊಂಡಿದ್ದಾರೆ ಈ ದ್ರಾವಿಡ ಪಕ್ಷದವರು. ಒಂದು ರೀತಿ ಕಾವೇರಿ ವಿಷಯದಲ್ಲಿ ಯುದ್ಧಕ್ಕೆ ನಿಂತಂತೆ ಆಡ್ತಾರೆ. ಮಾತುಕತೆಯಲ್ಲಿ ಅವರು ಬಗೆಹರಿಸುವುದಿಲ್ಲ.ಅವರು ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಹೋಗಿ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮಲ್ಲಿ ಹಾಗೆ ಒಗ್ಗಟ್ಟು ಪ್ರದರ್ಶಿಸಿದ್ದು ಕಡಿಮೆ" ಎಂದು ಹೇಳಿಕೊಂಡಿದ್ದಾರೆ ಅನಂತ್ ನಾಗ್.
"ಕರ್ನಾಟಕದಲ್ಲಿಯೇ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ನಾವು ಬಿಡುವ ನೀರು ಅವರಿಗೆ ಕುಡಿಯಲು ಅಲ್ಲ, ಅಲ್ಲಿನ ಕೈಗಾರಿಕೆಗಳಿಗೆ ಮತ್ತು ಕೃಷಿಗೆ. ನಮಗಿಲ್ಲಿ ಅದು ಕುಡಿಯುವ ನೀರು. ನನಗನಿಸಿದ ಮಟ್ಟಿಗೆ 60 ವರ್ಷಗಳಲ್ಲಿ 45ನೇ ಬಾರಿ ಇರಬೇಕು. ಈ ತಮಿಳುನಾಡು ರಾಜ್ಯದ ಡಿಎಂಕೆ ಪಕ್ಷದವರು ಹೀಗೆ ಕ್ಯಾತೆ ತೆಗೆಯುತ್ತಿರುವುದು. ಇದಕ್ಕಾಗಿ ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿದೆ. ಶಾಸಕರು, ಸಂಸದರು ಇದರ ಜತೆ ನಿಲ್ಲಬೇಕು. ಸಿಎಂ ಸಿದ್ದರಾಮಯ್ಯ ಇದನ್ನು ಸೂಕ್ತವಾಗಿ ಪ್ರತಿನಿಧಿಸಬೇಕು. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕ, ಪೂರ್ವ ಕರ್ನಾಟಕದಿಂದ ಪಶ್ಚಿಮ ಕರ್ನಾಟಕ ಈ ಚಳವಳಿಗೆ ಧುಮುಕಬೇಕು. ಮುಂದಿನ 48 ಗಂಟೆಗಳಲ್ಲಿ ಇದಕ್ಕೊಂದು ಅಂತ್ಯ ಹಾಡಲೇಬೇಕು ಎಂದಿದ್ದಾರೆ" ಎಂದು ಮನವಿ ಮಾಡಿದ್ದಾರೆ.