ರಾಜ್‌ಕುಮಾರ್‌ಗೂ ಚಟ ಚಪಲಗಳಿದ್ದವು! ಬಹಿರಂಗವಾಗಿ ತೋರಿಸದೇ ಕದ್ದುಮುಚ್ಚಿ ಆ ಚಟಗಳನ್ನು ಮಾಡ್ತಿದ್ರು; ಮುಖ್ಯಮಂತ್ರಿ ಚಂದ್ರು
Jul 11, 2024 09:49 AM IST
ರಾಜ್‌ಕುಮಾರ್‌ಗೂ ಚಟ ಚಪಲಗಳಿದ್ದವು! ಬಹಿರಂಗವಾಗಿ ತೋರಿಸದೇ ಕದ್ದುಮುಚ್ಚಿ ಆ ಚಟಗಳನ್ನು ಮಾಡ್ತಿದ್ರು; ಮುಖ್ಯಮಂತ್ರಿ ಚಂದ್ರು
- ಒಬ್ಬ ಮನುಷ್ಯ ಅಂದರೆ ವೀಕ್‌ನೆಸ್‌ಗಳು ಇರುವುದು ಸರ್ವೇ ಸಾಮಾನ್ಯ. ದೇವರಲ್ಲ. ಆಗೇನಾದ್ರೂ ಇದ್ದರೆ ಆತ ದೇವರಾಗಿ ಬಿಡುತ್ತಾನೆ. ಅದೇ ರೀತಿ ರಾಜ್‌ಕುಮಾರ್ ಸಹ ಚಿಕ್ಕ ವಯಸ್ಸಿನಿಂದ ಕಷ್ಟದಿಂದ ಬಂದವರು. ಹಸಿವಿನಿಂದ ಬಂದವರು, ಅವರಿಗೂ ಚಟ ಚಪಲಗಳಿದ್ದವು" ಎಂದು ಅಣ್ಣಾವ್ರ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ.
Mukhyamantri chandru about Rajkumar: ಡಾ. ರಾಜ್‌ಕುಮಾರ್ ಕರುನಾಡಿನ ದೇವಮಾನವ ಎಂದೇ ಅವರ ಅಭಿಮಾನಿಗಳು ಸಂಬೋಧಿಸುತ್ತಾರೆ. ತೆರೆಮೇಲೆ ಮತ್ತು ತೆರೆಹಿಂದೆ ಆ ರೀತಿಯಲ್ಲಿಯೇ ಶುಭ್ರ ಬಿಳಿಯಂತೆ ಬದುಕು ಬಾಳಿದವರು ಅವರು. ಆಗಿನ ಕಾಲದಲ್ಲಿಯೇ ತಮ್ಮ ಸರಿಸಮಾನ ನಟರ ನಡುವೆಯೇ ಹೆಚ್ಚು ಖ್ಯಾತಿ ಪಡೆದವರು ಇದೇ ರಾಜ್‌ಕುಮಾರ್. ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜ್‌ಕುಮಾರ್ ಈ ಮೂವರೂ ನಟನೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತ ನಟರು. ಆದರೆ, ಈ ಮೂವರ ಪೈಕಿ ಅಣ್ಣಾವ್ರು ಮಾತ್ರ ತುಂಬ ಭಿನ್ನ. ಏಕೆ ಎಂಬುದನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅಣ್ಣಾವ್ರ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತು..
"ಆ ಕಾಲದಲ್ಲಿ ನಮ್ಮ ಕಣ್ಣ ಮುಂದಿನ ಒಂದಷ್ಟು ಉದಾಹರಣೆಗಳಿದ್ದವು. ಆವಾಗ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜ್‌ಕುಮಾರ್ ಇದ್ದರು. ಈ ಮೂವರೂ ಸರಿಸಾಟಿಯಾಗುವಂಥ ನಟರು. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸುವ ಕಲಾವಿದರು. ಆದರೆ, ಎಲ್ಲೋ ಒಂದು ಕಡೆ ರಾಜ್‌ಕುಮಾರ್ ಅವರನ್ನು ಹೊರತುಪಡಿಸಿ ಇನ್ನುಳಿದವರು ಬೇಗ ಬೇಗ ಕಳೆದು ಹೋದರು. ಆ ಕಾಲಘಟ್ಟದಲ್ಲಿ ಅವರ ಸರಿ ಸಮಾನ ನಾಯಕ ನಟರೆಲ್ಲರೂ ಕಳೆದು ಹೋದರು. ರಾಜ್‌ಕುಮಾರ್ ಯಾಕೆ ಉಳಿದುಕೊಂಡರು ಎಂದು ನಾನು ಅವಲೋಕಿಸಿದಾಗ ಅಲ್ಲಿ ಸಾಕಷ್ಟು ಅಂಶಗಳು ಸಿಕ್ಕವು."
"ಅಭಿನಯ ಮಾಡಲೇಬೇಕು. ಬರೀ ಅದೃಷ್ಟದ ಮೇಲೆ ಯಾವುದೂ ನಿಲ್ಲುವುದಿಲ್ಲ. ಡಾ. ರಾಜ್‌ಕುಮಾರ್ ಅಭಿನಯವನ್ನು ಅಷ್ಟೇ ಚೆನ್ನಾಗಿಯೇ ಮಾಡಿದರು. ನಡವಳಿಕೆಯನ್ನೂ ಹಾಗೇ ಉಳಿಸಿಕೊಂಡರು. ಹಾಗಾದರೆ ಉದಯ್ ಕುಮಾರ್, ಕಲ್ಯಾಣ್ ಕುಮಾರ್ ನಡವಳಿಕೆ ಸರಿ ಇರಲಿಲ್ವಾ ಎಂದಲ್ಲ. ಅವರೂ ಒಳ್ಳೆಯವರೇ. ನಡವಳಿಕೆ ಎಂದರೆ, ಸೌಜನ್ಯ, ಸಜ್ಜನಿಕೆ, ಜನ ನಂಬುತ್ತಾ ಹೋದಂತೆ ಅವರಿಗಾಗಿ ಬದುಕಬೇಕಾದ ಪರಿಸ್ಥಿತಿ ಬರುತ್ತದೆ. ಅದನ್ನು ಉಳಿಸಿಕೊಂಡವ್ರು ಅಣ್ಣಾವ್ರು."
ಎಲ್ಲರಂತಲ್ಲ ರಾಜ್‌ಕುಮಾರ್ ಏಕೆಂದರೆ..
"ಆದರೆ, ಕಲ್ಯಾಣಕುಮಾರ್ ಹಾಗೇ ಬದುಕಲಿಲ್ಲ. ಚಟ ಚಪಲಗಳನ್ನು ಸಾರ್ವತ್ರಿಕವಾಗಿ ಇಟ್ಟುಕೊಂಡಿದ್ದರು. ಧಿಮಾಕು, ಶೋಕಿ ಇದೆಲ್ಲವನ್ನು ತೋರಿಸಲು ಶುರು ಮಾಡಿದ್ರು. ರಾಜ್‌ಕುಮಾರ್ ಕೊಡುತ್ತಿದ್ದ ಗೌರವ ಹೇಗಿರುತ್ತಿತ್ತು, ಇವ್ರು ಕೊಡುವ ಗೌರವ ಹೇಗಿರುತ್ತಿತ್ತು ಎಲ್ಲವೂ ಕಾಣುತ್ತಿತ್ತು. ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಸಿಗರೇಟ್ ಸೇದುತ್ತ ಮಾತನಾಡುತ್ತಿದ್ದರು. ಆ ಸಿಗರೇಟ್ ಆರಿಸಿ ಮಾತನಾಡಿದರೆ ಅದು ಎದುರಿನವರಿಗೆ ಇನ್ನೂ ದೊಡ್ಡ ಗೌರವ. ಆದರೆ, ಎಲ್ಲವೂ ಬದಲಾಗುತ್ತ ಹೋಯಿತು. ಆದರೆ, ರಾಜ್‌ಕುಮಾರ್ ಮಾತ್ರ ತಮ್ಮದೇ ಆದ ಒಂದು ಟ್ರೆಂಡ್ ಸೆಟ್ ಮಾಡಿದರು."
ಹಸಿವಿನಿಂದಲೇ ಬಂದವರು..
"ಒಬ್ಬ ಮನುಷ್ಯ ಅಂದರೆ ವೀಕ್‌ನೆಸ್‌ಗಳು ಇರುವುದು ಸರ್ವೇ ಸಾಮಾನ್ಯ. ದೇವರಲ್ಲ. ಆಗೇನಾದ್ರೂ ಇದ್ದರೆ ಆತ ದೇವರಾಗಿ ಬಿಡುತ್ತಾನೆ. ಅದೇ ರೀತಿ ರಾಜ್‌ಕುಮಾರ್ ಸಹ ಚಿಕ್ಕ ವಯಸ್ಸಿನಿಂದ ಕಷ್ಟದಿಂದ ಬಂದವರು. ಹಸಿವಿನಿಂದ ಬಂದವರು, ಅವರಿಗೂ ಊಟದ ವಿಚಾರದಲ್ಲೂ ಚಟ ಚಪಲಗಳಿದ್ದವು. ಮಾಂಸಾಹಾರ ಪ್ರಿಯರು. ಆದರೆ, ದೇವರ ಸಿನಿಮಾಗಳನ್ನು ಮಾಡಿದ ಬಳಿಕ, ಪೌರಾಣಿಕ ಸಿನಿಮಾಗಳಲ್ಲಿ ನಟಿಸಿದ ಬಳಿಕ, ಐತಿಹಾಸಿಕ ಸಿನಿಮಾ ಮಾಡಿದ ನಂತರ ಎಲ್ಲರ ಕಣ್ಣಿಗೆ ದೇವರಾಗಿ ಕಾಣಿಸಲು ಶುರು ಮಾಡಿದ್ರು. ಅಂದ್ರೆ ಆ ಸ್ಟೈಲ್‌ನಲ್ಲಿ ಕಂಡರು. ಆಗ ಅವರು ನಡೆದುಕೊಂಡ ರೀತಿಯೇ ಬೇರೆ."
ಯಾರಿಗೂ ಆ ಚಟ ತೋರಿಸುತ್ತಿರಲಿಲ್ಲ..
"ಯಾರಿಗೂ ಗೊತ್ತಾಗದಂತೆ ಕದ್ದು ಚಟ ಮಾಡಲು ಶುರು ಮಾಡಿದ್ರು. ಅಂದರೆ ತಮ್ಮ ಚಟವನ್ನು ಎಲ್ಲಿಯೂ ಬಿಡಲಿಲ್ಲ. ಆವತ್ತು ಅವರು ನಾನ್ಯಾಕೆ ಕದ್ದು ಚಟ ಮಾಡಬೇಕು, ಜನಕ್ಕೆ ಯಾಕೆ ಯಾಮಾರಿಸಬೇಕು? ಅನಿಸಿದ್ದೂ ಉಂಟು. ಲಕ್ಷಾಂತರ ಜನ ಮೆಚ್ಚೋವಾಗ, ನನ್ನ ಈ ಒಂದು ಚಟವನ್ನು ಅವರಿಗಾಗಿ ಬಲಿ ಕೊಡೋಕೆ ಆಗಲ್ವಾ ಎಂದು ಹೇಳಿ, ಎಲ್ಲವನ್ನೂ ಬಿಡ್ತಾ ಹೋದ್ರು. ಯೋಗದ ಮೊರೆ ಹೋದ್ರು. ಜನ ಮೆಚ್ಚುವ ಕಾರ್ಯಗಳಿಂದ ಶುರುಮಾಡಿಕೊಂಡ್ರು. ಡ್ರೆಸ್ ಕೋಡ್ ಮಾಡಿಕೊಂಡ್ರು. ಅದೇ ಬ್ರಾಂಡ್ ಆಗ್ತಾ ಬಂತು. ಮಗುವಲ್ಲಿ ಮಗುವಾಗ್ತಾ ಬಂದ್ರು." ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.