ತಾನು ಅತ್ತು, ಸಿನಿಪ್ರಿಯರನ್ನು ರಂಜಿಸಿದ ಹಿರಿಯ ನಟಿ ಶ್ರುತಿಗೆ ಜನ್ಮದಿನದ ಸಂಭ್ರಮ
Sep 18, 2023 09:21 AM IST
48ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟಿ ಶ್ರುತಿ
ನನಗೆ ಅಳಿಸುವುದು ಮಾತ್ರವಲ್ಲ, ನಗಿಸುವುದೂ ಗೊತ್ತು ಎಂದು ಶ್ರುತಿ 'ರಾಮ ಶಾಮ ಭಾಮ' ಚಿತ್ರದ ಮೂಲಕ ಪ್ರೂವ್ ಮಾಡಿದರು. ಆ ಚಿತ್ರದಲ್ಲಿ ಆಕೆಯ ಉತ್ತರ ಕರ್ನಾಟಕದ ಭಾಷೆ, ಬಾಡಿ ಲಾಂಗ್ವೇಜ್ ನೋಡಿ ಸಿನಿಪ್ರಿಯರು ನಕ್ಕು ನಲಿದಾಡಿದರು.
ಕನ್ನಡ ಸಿನಿಪ್ರಿಯರಿಂದ ಅಳುಮುಂಜಿ ಎಂದೇ ಕರೆಸಿಕೊಳ್ಳುವ ಹಿರಿಯ ನಟಿ ಶ್ರುತಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶ್ರುತಿ ಅವರಿಗೆ ಅಭಿಮಾನಿಗಳು, ಸಿನಿಗಣ್ಯರು ಬರ್ತ್‌ಡೇ ಶುಭ ಹಾರೈಸುತ್ತಿದ್ಧಾರೆ. ನೂರು ಕಾಲ ನಗುತ್ತಾ ಬಾಳಿ ಎಂದು ಹಾರೈಸುತ್ತಿದ್ದಾರೆ.
ಮಲಯಾಳಂ ಚಿತ್ರದ ಮೂಲಕ ಸಿನಿಜರ್ನಿ ಆರಂಭ
ಶ್ರುತಿ ಮೊದಲ ಹೆಸರು ಗಿರಿಜಾ. ಹುಟ್ಟಿದ್ದು 18 ಸೆಪ್ಟೆಂಬರ್1975 ರಲ್ಲಿ. ತಂದೆ ಕೃಷ್ಣ, ತಾಯಂದಿರು ರಾಧಾ-ರುಕ್ಮಿಣಿ. ಮನೆಯಲ್ಲಿ ತಂದೆ ತಾಯಂದಿರು ರಂಗಭೂಮಿಯಲ್ಲಿ ಇದ್ದಿದ್ದರಿಂದ ಶ್ರುತಿಗೆ ಸಹಜವಾಗಿ ನಾಟಕ, ಸಿನಿಮಾ ನಂಟು ಬೆಳೆಯಿತು. 1989ರಲ್ಲಿ ಮಲಯಾಳಂ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡುವ ಮೂಲಕ ಸಿನಿಪಯಣ ಆರಂಭಿಸಿದರು. ನಂತರ 'ನಂಬಿದ್ರೆ ನಂಬಿ ಬಿಟ್ರೆ ಬಿಡಿ' ಸಿನಿಮಾ ಮೂಲಕ ಪ್ರಿಯದರ್ಶಿನಿಯಾಗಿ ಕನ್ನಡ ಸಿನಿಮಾಗೆ ಬಂದರು. ಈ ಸಿನಿಮಾ ನಂತರ 'ಆಸೆಗೊಬ್ಬ ಮೀಸೆಗೊಬ್ಬ' ಚಿತ್ರದಲ್ಲಿ ಶಿವರಾಜ್‌ಕುಮಾರ್ ತಂಗಿ ಪಾತ್ರದಲ್ಲಿ ನಟಿಸಿದರು.
ಶ್ರುತಿ ಸಿನಿಮಾದಲ್ಲಿ ಲೀಡ್ ರೋಲ್
1990ರಲ್ಲಿ ದ್ವಾರಕೀಶ್ ನಿರ್ಮಿಸಿದ, ನಿರ್ದೇಶನ ಮಾಡಿದ 'ಶ್ರುತಿ' ಚಿತ್ರದ ಮೂಲಕ ಗಿರಿಜಾ ಶ್ರುತಿ ಆದರು. ಆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಶ್ರುತಿ ನಟನೆ, ಮುದ್ದು ಮುಖ ಸಿನಿಪ್ರಿಯರನ್ನು ಸೆಳೆಯಿತು. ಅಲ್ಲಿಂದ ಶ್ರುತಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಕನ್ನಡದ ಜೊತೆಗೆ ತಮಿಳು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ಶ್ರುತಿ ನಟಿಸಿದರು. ಒಂದು ಸಮಯದಲ್ಲಿ ಶ್ರುತಿ ಸೆಂಟಿಮೆಂಟ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದರು. ಆದ್ದರಿಂದ ಸಿನಿಪ್ರಿಯರು ಅವರಿಗೆ ಅಳುಮುಂಜಿ ಶ್ರುತಿ ಎಂದೇ ಹೆಸರು ಕೊಟ್ಟರು.
ನಗಿಸಲೂ ಗೊತ್ತು
ನನಗೆ ಅಳಿಸುವುದು ಮಾತ್ರವಲ್ಲ, ನಗಿಸುವುದೂ ಗೊತ್ತು ಎಂದು ಶ್ರುತಿ 'ರಾಮ ಶಾಮ ಭಾಮ' ಚಿತ್ರದ ಮೂಲಕ ಪ್ರೂವ್ ಮಾಡಿದರು. ಆ ಚಿತ್ರದಲ್ಲಿ ಆಕೆಯ ಉತ್ತರ ಕರ್ನಾಟಕದ ಭಾಷೆ, ಬಾಡಿ ಲಾಂಗ್ವೇಜ್ ನೋಡಿ ಸಿನಿಪ್ರಿಯರು ನಕ್ಕು ನಲಿದಾಡಿದರು. ನಂತರ 'ಕಲ್ಪನ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶ್ರುತಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದರು. ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಶ್ರುತಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲ್ಮ್‌ಫೇರ್ ಸೇರಿ ಅನೇಕ ಪ್ರಶಸ್ತಿಗಳು ಒಲಿದು ಬಂದಿವೆ.
ವೈವಾಹಿಕ ಜೀವನದಲ್ಲಿ ಸೋಲು
ವೃತ್ತಿ ಜೀವನದಲ್ಲಿ ಯಶಸ್ಸು ಕಂಡರೂ ಶ್ರುತಿ ವೈವಾಹಿಕ ಜೀವನದಲ್ಲಿ ಸೋಲುಂಡರು. ನಿರ್ದೇಶಕ, ನಟ ಮಹೇಂದರ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದ ಶ್ರುತಿ 2009ರಲ್ಲಿ ಪತಿಗೆ ಡಿವೋರ್ಸ್ ನೀಡಿದರು. ನಂತರ ಚಕ್ರವರ್ತಿ ಚಂದ್ರಚೂಡ್ ಅವರನ್ನು ಮದುವೆ ಆದರು. ಆದರೆ ಚಂದ್ರಚೂಡ್, ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಶ್ರುತಿ ಅವರನ್ನು ಮದುವೆ ಆಗಿದ್ದರಿಂದ ನ್ಯಾಯಾಲಯ ಈ ಮದುವೆಯನ್ನು ಅಸಿಂಧು ಮಾಡಿತ್ತು. ಶ್ರುತಿ ಮಹೇಂದರ್ ದಂಪತಿಗೆ ಗೌರಿ ಎಂಬ ಹೆಣ್ಣು ಮಗಳಿದ್ದಾರೆ.
ಶ್ರುತಿ ಅಭಿನಯದ 13, ತತ್ಸಮ ತದ್ಭವ ಸಿನಿಮಾ ಕಳೆದ ವಾರ ರಿಲೀಸ್ ಆಗಿವೆ.