ಎಲ್ರೂ ಹುಡುಗೀರನ್ನ ಇಂಪ್ರೆಸ್ ಮಾಡ್ತಿದ್ರೆ, ನಾವು ಚಿಕ್ಕಪ್ಪನ್ನ ಇಂಪ್ರೆಸ್ ಮಾಡ್ತಿದ್ವಿ; ಪುನೀತ್ ಬಗ್ಗೆ ವಿನಯ್ ರಾಜ್ಕುಮಾರ್
Feb 04, 2024 02:45 PM IST
ಎಲ್ರೂ ಹುಡುಗೀರನ್ನ ಇಂಪ್ರೆಸ್ ಮಾಡ್ತಿದ್ರೆ, ನಾವು ಚಿಕ್ಕಪ್ಪನ್ನ ಇಂಪ್ರೆಸ್ ಮಾಡ್ತಿದ್ವಿ; ಪುನೀತ್ ಬಗ್ಗೆ ವಿನಯ್ ರಾಜ್ಕುಮಾರ್
- Vinay Rajkumar recalls interesting incidents about Appu: ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಮತ್ತು ತಾತ ರಾಜ್ಕುಮಾರ್ ಬಗ್ಗೆ ವಿನಯ್ ರಾಜ್ಕುಮಾರ್ ಒಂದಷ್ಟು ವಿಚಾರಗಳನ್ನು ನೆನಪು ಮಾಡಿಕೊಂಡಿದ್ದಾರೆ. ಬಾಲ್ಯದಲ್ಲಿ ತಾತನೊಂದಿಗೆ ಕಳೆದ ಸಮಯ ಮತ್ತು ಚಿಕ್ಕಪ್ಪನ ನೋಡಿ ಕಲಿತಿದ್ದೇನು ಎಂಬ ಬಗ್ಗೆಯೂ ವಿನಯ್ ಹೇಳಿಕೊಂಡಿದ್ದಾರೆ.
Vinay Rajkumar on Puneeth Rajkumar: ಕನ್ನಡ ಚಿತ್ರೋದ್ಯಮ ಕಂಡ ಮೇರು ನಟ ಡಾ. ರಾಜ್ಕುಮಾರ್ ಮತ್ತು ಅವರ ಪುತ್ರ ಪುನೀತ್ ರಾಜ್ಕುಮಾರ್ ಬಗ್ಗೆ ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ತಾತನ ಜತೆ ಕಳೆದ ದಿನಗಳನ್ನು ಮೆಲುಕು ಹಾಕುತ್ತ, ಬೆಳೆಯುವ ಹಂತದಲ್ಲಿ ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಅವರನ್ನು ನೋಡಿ ಕಲಿತ ವಿಚಾರಗಳ ಬಗ್ಗೆಯೂ ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಪ್ರಸಾರವಾದ ಜೋಡಿ ನಂಬರ್ 1 ಗ್ರ್ಯಾಂಡ್ ಫಿನಾಲೆಯಲ್ಲಿ ಹೇಳಿಕೊಂಡಿದ್ದಾರೆ ವಿನಯ್ ರಾಜ್ಕುಮಾರ್.
ನಿರೂಪಿಕಿ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ಒಂದೊಂದೆ ಪ್ರಶ್ನೆಗಳನ್ನು ಕೇಳುತ್ತ ಹೋದಂತೆ, ಅದಕ್ಕೆ ಅಷ್ಟೇ ಕುತೂಹಲದ ಉತ್ತರ ನೀಡಿದರು ವಿನಯ್ ರಾಜ್ಕುಮಾರ್. ಮೊದಲಿಗೆ ತಾತ ಡಾ. ರಾಜ್ಕುಮಾರ್ ಅವರ ಬಗ್ಗೆ ಎಲ್ಲೂ ಹೇಳದ, ಯಾರಿಗೂ ಗೊತ್ತಿಲ್ಲದ ಸ್ವಾರಸ್ಯಕರ ವಿಚಾರ ಹೇಳಿ ಎಂದಾಗ, "ಪ್ರತಿ ಭಾನುವಾರ ನಾನು ಮತ್ತು ನನ್ನ ತಮ್ಮ ಗುರು ಇಬ್ಬರೂ ಸೇರಿ ಅವರಿಗೆ ಅಡುಗೆ ಮಾಡಿ ಕೊಡ್ತಿದ್ವಿ. ಹಾಫ್ ಬಾಯ್ಲ್ಡ್, ಸಾಸ್ಗಳು ಅವರಿಗೆ ಇಷ್ಟ ಆಗುತ್ತಿದ್ವು. ಗಾರ್ಡನ್ನಲ್ಲಿ ಕೂತು ಎಲ್ಲರಿಗೂ ಮಾಡಿಕೊಟ್ಟಿದ್ವಿ" ಎಂದು ಹಳೇ ನೆನಪನ್ನು ಬಿಚ್ಚಿಟ್ಟಿದ್ದಾರೆ.
ಇಷ್ಟದ ಹೀರೋ ನಮ್ಮ ತಾತ..
ರಾಜ್ಕುಮಾರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಜತೆಗಿನ ವಿನಯ್ ಫೋಟೋ ಮೂಡಿತು. ಇದನ್ನು ನೋಡಿದ ವಿನಯ್, ಚಿಕ್ಕಪ್ಪ ಮತ್ತು ತಾತನ್ನ ತುಂಬ ಮಿಸ್ ಮಾಡ್ಕೋತಿನಿ. ಈ ಥರದ ಭಾಗ್ಯ ಲೈಫ್ನಲ್ಲಿ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ ಎಂದರು. ಬಳಿಕ ನಿಮ್ಮಿಷ್ಟದ ಹೀರೋ ಹೀರೋಯಿನ್ ಯಾರೆಂದು ಕೇಳಿದರು. ಅದಕ್ಕೆ ಉತ್ತರಿಸಿದ ವಿನಯ್, ತಾತ ಮತ್ತು ಚಿಕ್ಕಪ್ಪ ಎಂದರು. ಲಕ್ಷ್ಮೀ ಅಮ್ಮ ನನ್ನ ಆಲ್ ಟೈಮ್ ಫೇವರೀಟ್. ಈಗ ರಮ್ಯಾ ನನಗಿಷ್ಟ ಎಂದರು.
ಚಿಕ್ಕನ ಜಾಕಿ ಸಿನಿಮಾ ರಿಮೇಕ್ ಮಾಡೋ ಆಸೆ
ಹೊಟೇಲ್ಗೆ ಹೋದ ಮೇಲೆ ಮೊದಲು ಆರ್ಡರ್ ಮಾಡುವ ಖಾದ್ಯ ಯಾವುದು ಎಂದಾಗ ಮಟನ್ ಬಿರಿಯಾನಿ ಎಂದಿದ್ದಾರೆ. ಅದಾದ ಬಳಿಕ ಪುನೀತ್ ಅವರ ಯಾವ ಒಂದು ಸಿನಿಮಾ ರಿಮೇಕ್ ಮಾಡಲು ಬಯಸುತ್ತೀರಿ? ಅದಕ್ಕೆ ಉತ್ತರಿಸಿದ ವಿನಯ್, ನನಗೆ ಜಾಕಿ ಸಿನಿಮಾ ತುಂಬ ಇಷ್ಟ. ಯಾವತ್ತಾದ್ರೂ ಮಾಡಬೇಕು ಅನಿಸಿದರೆ, ಜಾಕಿ ಮಾಡಬೇಕು. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಯಾವ ಸಿನಿಮಾ ರಿಮೇಕ್ ಮಾಡ್ತಿರಿ ಎಂದಾಗ, ಥಟ್ ಅಂತ ಬಂದ ಮೊದಲ ಉತ್ತರ ಓಂ. ಓಂ ಸಿನಿಮಾದ ಕೊನೆಗೆ ಬರುವ ಸೀನ್ನಲ್ಲಿ ನಾನು ಮತ್ತು ಗುರು ನಟಿಸಿದ್ದೇವೆ ಎಂದೂ ವಿನಯ್ ಹೇಳಿಕೊಂಡರು.
ಚಿಕ್ಕಪ್ಪನ ಬಗ್ಗೆ ಏನು ಹೇಳ್ತೀರಾ?
ಇನ್ನು ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಬಗ್ಗೆಯೂ ವಿನಯ್ ರಾಜ್ಕುಮಾರ್ ಹೇಳಿಕೊಂಡರು."ನಂಗೆ ಮತ್ತು ಚಿಕ್ಕಪ್ಪನಿಗೆ 14 ವರ್ಷದ ಏಜ್ ಡಿಫರೆನ್ಸ್. ಚಿಕ್ಕಂದಿನಿಂದಲೇ ನಮ್ಮಿಬ್ಬರ ರಿಲೇಷನ್ಶಿಪ್ ತುಂಬ ಚೆನ್ನಾಗಿತ್ತು. ಚಿಕ್ಕವಯಸ್ಸಿನಿಂದಲೇ ಚಿಕ್ಕಪ್ಪ ನನಗೆ ಸ್ಪೂರ್ತಿ. ನಾನು ಯಾವ ಥರ ಬಟ್ಟೆ ಹಾಕಬೇಕು, ಏನು ಮ್ಯೂಸಿಕ್ ಕೇಳಬೇಕು, ಮ್ಯಾನರಿಸಂ ಹೇಗಿರಬೇಕು? ಯಾವ ಥರದ ಊಟ ಇಷ್ಟ? ಎಲ್ಲವೂ ಅವರಿಂದ ಬಂದಿದ್ದು.
ಆಗೆಲ್ಲ ನಮಗೆ ಹುಡುಗಿನ ಇಂಪ್ರೆಸ್ ಮಾಡಬೇಕು, ಟೀಚರ್ನ ಇಂಪ್ರೆಸ್ ಮಾಡಬೇಕು ಎಂಬುದು ತಲೆಯಲ್ಲಿ ಇರುತ್ತಿರಲಿಲ್ಲ. ಏನೇ ಒಳ್ಳೆಯ ಬಟ್ಟೆ ಹಾಕಿದ್ರೂ ಚಿಕ್ಕಪ್ಪನಿಗೆ ಇಷ್ಟ ಆಗಬೇಕು. ಅವರನ್ನು ಮೊದಲು ಇಂಪ್ರೆಸ್ ಮಾಡಬೇಕು ಅದೇ ನಮ್ಮ ದೊಡ್ಡ ಕೆಲಸ. ಸದ್ಯ ನಾವೇನು ಜೀವಿಸುತ್ತಿದ್ದೇವೋ ಅದಕ್ಕೆ ಅವರ ಕೊಡುಗೆ ಹೆಚ್ಚಿದೆ" ಎಂದಿದ್ದಾರೆ ವಿನಯ್ ರಾಜ್ಕುಮಾರ್.