Vinay Rajkumar: ಮಗನ ಚಿತ್ರಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಗ್ರಾಮಾಯಣಕ್ಕೆ ಮುಹೂರ್ತ
Jun 09, 2023 06:12 PM IST
ಮಗನ ಚಿತ್ರಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಗ್ರಾಮಾಯಣಕ್ಕೆ ಮುಹೂರ್ತ
- ಡಾ ರಾಜ್ ಮೊಮ್ಮಗ ವಿನಯ್ ರಾಜ್‌ಕುಮಾರ್ ಅವರ ಗ್ರಾಮಾಯಣ ಸಿನಿಮಾದ ಮುಹೂರ್ತ ನೆರವೇರಿದೆ. ಪುನೀತ್ ಅವರ ಪತ್ನಿ ಅಶ್ವಿನಿ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
Vinay Rajkumar: ಕಳೆದ ಕೆಲ ವರ್ಷಗಳ ಹಿಂದೆಯೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿದ್ದ ಗ್ರಾಮಾಯಣ (Gramayana) ಸಿನಿಮಾ ಇದೀಗ ಅಧಿಕೃತವಾಗಿ ಲಾಂಚ್ ಆಗಿದೆ. ವಿನಯ್ ರಾಜ್‌ಕುಮಾರ್ (Vinay Rajkumar) ಪಕ್ಕಾ ಮಾಸ್ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಮತ್ತೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ದೇವನೂರು ಚಂದ್ರು (Devanuru chandru) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಜಿ. ಮನೋಹರನ್ ಮತ್ತು ಕೆ. ಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಲೀಲಾವತಿ ಪುತ್ರ ವಿನೋದ್ ರಾಜ್ ಬಳಿ ಇವೆ ಹಲವು ಕಾರ್‌ಗಳು; ಅದಕ್ಕಾಗಿಯೇ ನಿರ್ಮಿಸಲಾಗಿದೆ ಬೃಹತ್ ಶೆಡ್
ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಗ್ರಾಮಾಯಣ ಸಿನಿಮಾಕ್ಕೆ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರೆ, ಮಗನ ಸಿನಿಮಾಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ದುನಿಯಾ ವಿಜಯ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ಆರ್ ಚಂದ್ರು, ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಗ್ರಾಮಾಯಣ ಇದು ಗ್ರಾಮದಲ್ಲೇ ನಡೆಯುವ ಕಥೆ. ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೆ ಈ ಕಥೆಗೆ ಇವರೆ ಸೂಕ್ತ ನಾಯಕ ಅಂದುಕೊಂಡೆ. ಅವರು ಕಥೆ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದೇವೆ ಎಂದು ನಿರ್ದೇಶನರು ಸಿನಿಮಾ ಬಗ್ಗೆ ಹೇಳಿದರು.
ಇದನ್ನೂ ಓದಿ: ಸದ್ದಿಲ್ಲದೆ ನಟಿಯನ್ನು ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿ ಸಂಜು ಬಸಯ್ಯ; ಈ ಜೋಡಿಯದ್ದು ಏಳೆಂಟು ವರ್ಷಗಳ ಪ್ರೀತಿ!
ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ನಿರೂಪಕಿ ಅಪರ್ಣ, ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ ಗ್ರಾಮಾಯಣ. ನಾನು ಈವರೆಗೂ ಮಾಡಿರದ ಪಾತ್ರವಿದು. ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಿರ್ಮಾಪಕರಿಗೆ ನನ್ನ ಧನ್ಯವಾದಗಳು ಎಂದರು ವಿನಯ್ ರಾಜಕುಮಾರ್. ಯೂಐ ಚಿತ್ರದ ಸೆಟ್ ನಲ್ಲಿ ಗ್ರಾಮಾಯಣ ಚಿತ್ರದ ಟೀಸರ್ ನೋಡಿದೆ. ಟೀಸರ್‌ಗೆ ತುಂಬಾ ಪಾಸಿಟಿವ್ ಕಾಮೆಂಟ್ಸ್‌ಗಳು ಬಂದಿದ್ದವು. ಇಂತಹ ಒಳ್ಳೆಯ ಚಿತ್ರ ನಿಲ್ಲಬಾರದು ಎಂದು ಲಹರಿ ಫಿಲಂಸ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದೇನೆ ಎಂಬುದು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮಾತು.