logo
ಕನ್ನಡ ಸುದ್ದಿ  /  ಮನರಂಜನೆ  /  Ipc Replaced By Bns: ಜುಲೈ 1ರಿಂದ ಹೊಸ ಕಾನೂನು ಜಾರಿಗೆ ಬಂದರೆ ನಟ ದರ್ಶನ್‌ ಮೇಲೆ 302 ಬದಲು ಸೆಕ್ಷನ್‌ 101ರಡಿ ಕೇಸ್‌ ದಾಖಲು

IPC replaced by BNS: ಜುಲೈ 1ರಿಂದ ಹೊಸ ಕಾನೂನು ಜಾರಿಗೆ ಬಂದರೆ ನಟ ದರ್ಶನ್‌ ಮೇಲೆ 302 ಬದಲು ಸೆಕ್ಷನ್‌ 101ರಡಿ ಕೇಸ್‌ ದಾಖಲು

Praveen Chandra B HT Kannada

Jun 20, 2024 09:14 PM IST

google News

IPC replaced by BNS:ಜುಲೈ 1ರಿಂದ ಹೊಸ ಕಾನೂನು ಜಾರಿಗೆ ಬಂದರೆ ನಟ ದರ್ಶನ್‌ ಮೇಲೆ ಪರಿಣಾಮ

    • IPC replaced by BNS: ಜುಲೈ 1ರಿಂದ ಈಗಿನ ಐಪಿಸಿ (ಭಾರತೀಯ ದಂಡ ಸಂಹಿತೆ ) ಬದಲು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಜಾರಿಯಾದರೆ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಮೇಲೆ ಯಾವ ಪರಿಣಾಮ ಬೀರಬಹುದು?. ಕನ್ನಡ ನಟ ದರ್ಶನ್‌ (Darshan Thoogudeepa) ಮೇಲೆ 302 ಬದಲು ಸೆಕ್ಷನ್‌ 101ರಡಿ ಚಾರ್ಜ್‌ಶೀಟ್‌ ಸಲ್ಲಿಸಬೇಕಾಗಬಹುದು.
IPC replaced by BNS:ಜುಲೈ 1ರಿಂದ ಹೊಸ ಕಾನೂನು ಜಾರಿಗೆ ಬಂದರೆ ನಟ ದರ್ಶನ್‌ ಮೇಲೆ ಪರಿಣಾಮ
IPC replaced by BNS:ಜುಲೈ 1ರಿಂದ ಹೊಸ ಕಾನೂನು ಜಾರಿಗೆ ಬಂದರೆ ನಟ ದರ್ಶನ್‌ ಮೇಲೆ ಪರಿಣಾಮ

ಬೆಂಗಳೂರು: ಜುಲೈ 1ರಿಂದ ಭಾರತದಲ್ಲಿ ಈಗಿನ ಐಪಿಸಿ (ಭಾರತೀಯ ದಂಡ ಸಂಹಿತೆ ) ಬದಲು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಮತ್ತು ಭಾರತಿಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ) ಜಾರಿಗೆ ಬರುವ ಸೂಚನೆಯಿದೆ. ಈ ಹೊಸ ಬಿಎನ್‌ಎಸ್‌ ಜಾರಿಗೆ ಬಂದರೆ ಕನ್ನಡ ನಟ ದರ್ಶನ್‌ ಮೇಲಿನ ಪ್ರಕರಣದಲ್ಲೂ ಸೆಕ್ಷನ್‌ ಬದಲಾಯಿಸಬೇಕಾಗುತ್ತದೆ. ಈ ರೀತಿಯಾದರೆ ಪೊಲೀಸರು ಹೊಸ ಸೆಕ್ಷನ್‌ ಹಾಕಿ ಮತ್ತೆ ಚಾರ್ಜ್‌ ಶೀಟ್‌ ಸಲ್ಲಿಸಬೇಕಾಗಬಹುದು.

ದರ್ಶನ್‌ ಮೇಲೆ ಯಾವೆಲ್ಲ ಸೆಕ್ಷನ್‌ ಹಾಕಲಾಗಿದೆ?

ಚಿತ್ರದುರ್ಗದ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಇತರ ಆರೋಪಿಗಳ ವಿರುದ್ಧ ಭಾರತದ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ದೂರು ದಾಖಲಿಸಲಾಗಿದೆ. ಸೆಕ್ಷನ್‌ 302 (ಕೊಲೆ), ಸೆಕ್ಷನ್‌ 201 (ಸಾಕ್ಷ್ಯ ನಾಶ, ಸುಳ್ಳು ಮಾಹಿತಿ ನೀಡುವುದು), ಸೆಕ್ಷನ್‌ 120ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್‌ 364 (ಅಪಹರಣ), ಸೆಕ್ಷನ್‌ 355 (ಕ್ರಿಮಿನಲ್‌ ಪಡೆ ಬಳಸಿ ಅಪರಾಧ), ಸೆಕ್ಷನ್‌ 384 (ಸುಲಿಗೆ), ಸೆಕ್ಷನ್‌ 184 (ಕಾನೂನುಬಾಹಿರ ಸಭೆ), 147 (ಗಲಭೆ), ಮತ್ತು ಸೆಕ್ಷನ್‌ 148 ಮತ್ತು 149 (ಮಾರಣಾಂತಿಕ ಆಯುಧ ಬಳಸಿ ದಾಳಿ ಇತ್ಯಾದಿ) ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳಡಿ ಕೇಸ್‌ ದಾಖಲಿಸಲಾಗಿದೆ.

ಹೊಸ ಕಾನೂನಿನ ಸೆಕ್ಷನ್‌ಗಳು ಯಾವುವು?

ಹೊಸ ಕಾನೂನು ಜಾರಿಯಾದರೆ ದರ್ಶನ್‌ ಮತ್ತು ಇತರೆ ಆರೋಪಿಗಳ ಮೇಲೆ ಹೊಸ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿ ಚಾರ್ಜ್‌ಶೀಟ್‌ ಸಲ್ಲಿಸಬೇಕಾಗಬಹುದು. ಐಪಿಸಿ ಸೆಕ್ಷನ್‌ನಲ್ಲಿ 302 ಮರ್ಡರ್‌ ಕೇಸ್‌ಗೆ ಇರುವ ಕೋಡ್‌ ಆಗಿದೆ. ಹೊಸ ಸೆಕ್ಷನ್‌ನಲ್ಲಿ 302 ಬದಲು ಕೊಲೆ ಪ್ರಕರಣಕ್ಕೆ 101 ಸೆಕ್ಷನ್‌ನಡಿ ಕೇಸ್‌ ದಾಖಲಿಸಬೇಕಿರುತ್ತದೆ. ಹೊಸ ಕಾನೂನು ಪ್ರಕಾರ ಸೆಕ್ಷನ್‌ 302 ಎಂದರೆ ಸ್ನ್ಯಾಚಿಂಗ್‌ ಅಥವಾ ಸುಲಿಗೆ/ ಕಸಿದುಕೊಳ್ಳುವಿಕೆ ಆಗಲಿದೆ. ಹೊಸ ಕಾನೂನಿನಡಿ ಅಪಹರಣ ಪ್ರಕರಣವು ಸೆಕ್ಷನ್‌ 138 ಆಗಲಿದೆ. ಹೀಗೆ ಈ ಹಿಂದೆ ದಾಖಲಿಸಿದ ಎಲ್ಲಾ ಐಪಿಸಿ ಸೆಕ್ಷನ್‌ಗಳ ಬದಲು ಹೊಸ ಬಿಎನ್‌ಎಸ್‌ ಸೆಕ್ಷನ್‌ನಡಿ ಚಾರ್ಜ್‌ಶೀಟ್‌ ಸಲ್ಲಿಸಬೇಕಾಗಬಹುದು.

ಐಪಿಸಿ ಬದಲು ಬಿಎನ್‌ಎಸ್‌: ಬದಲಾವಣೆಗಳೇನು?

ಕೊಲೆಗೆ ಈ ಹಿಂದೆ ಸೆಕ್ಷನ್‌ 302, ಹೊಸ ಸೆಕ್ಷನ್‌ನಡಿ 101, ಮೋಸಕ್ಕೆ ಐಪಿಸಿ 420 ಇದೆ. ಬಿಎನ್‌ಎಸ್‌ನಲ್ಲಿ ಸೆಕ್ಷನ್‌ 318 ಇರಲಿದೆ. ಕಾನೂನು ಬಾಹಿರವಾಗಿ ಗುಂಪು ಸೇರುವುದಕ್ಕೆ ಈ ಹಿಂದೆ ಸೆಕ್ಷನ್‌ 141-144 ಇತ್ತು. ಹೊಸ ಕಾನೂನಿನಲ್ಲಿ ಇದಕ್ಕೆ ಸೆಕ್ಷನ್‌ 187-189 (5) ಇರಲಿದೆ. ಅತ್ಯಾಚಾರಕ್ಕೆ ಐಪಿಎಸ್‌ನಲ್ಲಿ 375 ಇತ್ತು. ಹೊಸ ಕಾನೂನಿನ ಪ್ರಕಾರ ಸೆಕ್ಷನ್‌ 63 ಇರಲಿದೆ. ಗ್ಯಾಂಗ್‌ ರೇಪ್‌ಗೆ ಐಪಿಸಿಯಲ್ಲಿ 376ಡಿ ಸೆಕ್ಷನ್‌ ಇತ್ತು. ಹೊಸ ಕಾನೂನಿನಲ್ಲಿ ಇದಕ್ಕೆ ಸೆಕ್ಷನ್‌ 70 ಇರಲಿದೆ. ಹೀಗೆ ಸಾಕಷ್ಟು ಸೆಕ್ಷನ್‌ಗಳು ಹೊಸ ಕೋಡ್‌ಗೆ ಬದಲಾಗಲಿವೆ.

ಹಳೆಯ ಕಾಲದ ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ಒಟ್ಟು 511 ಸೆಕ್ಷನ್‌ಗಳಿವೆ. ಆದರೆ, ಭಾರತೀಯ ನ್ಯಾಯ ಸಂಹಿತೆ ಅಥವಾ ಬಿಎನ್‌ಎಸ್‌ನಲ್ಲಿ 354 ಸೆಕ್ಷನ್‌ಗಳು ಇರಲಿವೆ. ಇದೇ ಸಮಯದಲ್ಲಿ ಕ್ರಿಮಿನಲ್‌ ಪ್ರೊಸಿಜರ್‌ ಕೋಡ್‌ (ಸಿಆರ್‌ಪಿಸಿ)ಯಲ್ಲಿ 484 ಸೆಕ್ಷನ್‌ಗಳಿವೆ, ಆದರೆ, ಇದಕ್ಕೆ ಬದಲಾಗಿ ಬರುವ ಬಿಎನ್‌ಎಸ್‌ಎಸ್‌ನಲ್ಲಿ 531 ಸೆಕ್ಷನ್‌ಗಳು ಇರಲಿವೆ. ಇಂಡಿಯನ್‌ ಎವಿಡೆನ್ಸ್‌ ಆಕ್ಟ್‌ನಲ್ಲಿ 166 ಸೆಕ್ಷನ್‌ಗಳಿವೆ, ಇದರ ಬದಲು ಬರುವ ಹೊಸ ಬಿಎಸ್‌ಎನಲ್ಲಿ 170 ಸೆಕ್ಷನ್‌ಗಳು ಇರಲಿವೆ.

ದರ್ಶನ್‌ ಕೇಸ್‌ ಮೇಲೆ ಪರಿಣಾಮ

ಹೊಸ ಕಾನೂನನ್ನು ಜುಲೈ 1ರಿಂದ ಜಾರಿಗೆ ತರಲು ಸಿದ್ಧತೆ ನಡೆದಿದೆ. ಇದೇ ಸಮಯದಲ್ಲಿ ಭಾರತದಲ್ಲಿ ಈಗ ವಿಚಾರಣೆಯಲ್ಲಿರುವ ಅತ್ಯಂತ ಪ್ರಮುಖ ಕೇಸ್‌ ಆಗಿರುವ ದರ್ಶನ್‌ ಪ್ರಕರಣದ ಮೇಲೂ ಈ ಹೊಸ ಕಾನೂನು ಪರಿಣಾಮ ಬೀರಲಿದೆ. ಹೊಸ ಕಾನೂನಿನಲ್ಲಿ ಗುಂಪು ಗಲಭೆ ಇತ್ಯಾದಿಗಳಿಗೆ ಕಠಿಣ ಶಿಕ್ಷೆಗಳಿವೆ. ದರ್ಶನ್‌ ಮತ್ತು ಗ್ಯಾಂಗ್‌ ಮೇಲೆ ಇಂತಹ ಪ್ರಕರಣಗಳು ಇದ್ದರೆ ಹೊಸ ಕಾನೂನಿನಡಿ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಅಲ್ಲಗೆಳೆಯುವಂತೆ ಇಲ್ಲ. ಸದ್ಯ ದರ್ಶನ್‌ ಮತ್ತು ಆರೋಪಿಗಳ ವಿರುದ್ಧ ಪೊಲೀಸರು ಬಲವಾದ ಸಾಕ್ಷಿ ಸಂಗ್ರಹ, ಕಾನೂನು ಕ್ರಮಗಳಲ್ಲಿ ತೊಡಗಿದ್ದಾರೆ. ಪೊಲೀಸರು ನೀಡುವ ಸಾಕ್ಷ್ಯ ಮತ್ತು ಇತರೆ ಅಂಶಗಳ ಆಧಾರದ ಮೇಲೆ ಕೋರ್ಟ್‌ ಯಾವ ತೀರ್ಪು ನೀಡಲಿದೆ? ದರ್ಶನ್‌ ಮತ್ತು ಇತರೆ ಆರೋಪಿಗಳನ್ನು ಹೊಸ ಸೆಕ್ಷನ್‌ನಡಿ ವಿಚಾರಣೆ ನಡೆಸಲಾಗುವುದೇ? ಹಳೆಯ ಐಪಿಸಿಯಲ್ಲಿಯೇ ವಿಚಾರಣೆ ಮುಂದುವರೆಯುವುದೇ? ಇತ್ಯಾದಿ ಅಂಶಗಳ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ