ಪುನೀತ್ ರಾಜ್‌ಕುಮಾರ್ ಮೊದಲ ಕೋವಿಡ್ ಲಸಿಕೆ ಪಡೆದದ್ದು ಯಾವಾಗ? ಅಪ್ಪು ಸಾವಿಗೂ ಮೊದಲ ಲಸಿಕೆಗೂ ಇಷ್ಟು ತಿಂಗಳ ಅಂತರ
May 03, 2024 01:56 PM IST
ಪುನೀತ್ ರಾಜ್‌ಕುಮಾರ್ ಮೊದಲ ಕೋವಿಡ್ ಲಸಿಕೆ ಪಡೆಯುತ್ತಿರುವುದು
- ಕೋವಿಶೀಲ್ಡ್ ಅಡ್ಡಪರಿಣಾಮಗಳ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಸಾವಿಗೂ ಕೋವಿಶೀಲ್ಡ್ ಕಾರಣವಾಗಿರಬಹುದೇ? ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಬೆಂಗಳೂರು: ಕೋವಿಶೀಲ್ಡ್ ಕೊರೊನಾ ಲಸಿಕೆಯ ಅಡ್ಡಪರಿಣಾಮಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಅಸ್ಟ್ರಾಜೆನೆಕಾ ತನ್ನ ಕೋವಿಡ್ -19 ಲಸಿಕೆಯಾಗಿರುವ ಎಝೆಡ್ ಲಸಿಕೆಯು ಟಿಟಿಎಸ್ ಎಂಬ ಅಡ್ಡಪರಿಣಾಮಕ್ಕೆ ಕಾರಣವಾಗಬಹುದು ಎಂದು ಒಪ್ಪಿಕೊಂಡ ಬಳಿಕ ಸೆಲೆಬ್ರಿಟಿಗಳ ಅಕಾಲಿಕ ಸಾವಿಗೂ ಕೋವಿಡ್ ಲಸಿಕೆಗೂ ಸೋಷಿಯಲ್ ಮೀಡಿಯಾದಲ್ಲಿ ಹೋಲಿಕೆ ಮಾಡಿ ಚರ್ಚೆ ನಡೆಯುತ್ತಿದೆ. ಹೃದಯಾಘಾತದಿಂದ ಮೃತಪಟ್ಟು ಕನ್ನಡಿಗರಿಗೆ ಆಘಾತವುಂಟು ಮಾಡಿದ್ದ ಪುನೀತ್ ರಾಜ್‌ಕುಮಾರ್ ಸಾವಿಗೂ ಕೋವಿಶೀಲ್ಡ್ ಲಸಿಕೆ ಕಾರಣವೆಂದು ಫ್ಯಾನ್ಸ್‌ಗಳು ಚರ್ಚಿಸುತ್ತಿದ್ದಾರೆ.
ಪುನೀತ್ ಮೊದಲ ಲಸಿಕೆ ಪಡೆದ ದಿನಾಂಕ
ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಕೊರೊನಾ ಲಸಿಕೆ ಪಡೆದ ಕುರಿತು ಅಪ್‌ಡೇಟ್ ನೀಡಿದ್ದರು. "ಇಂದು ನಾನು ಮೊದಲ ವ್ಯಾಕ್ಸಿನೇಷನ್ ಡೋಸ್ ಪಡೆದಿರುವೆ. ನೀವು 45 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ ತಪ್ಪದೇ ಲಸಿಕೆ ಪಡೆಯಿರಿ" ಎಂದು ಪೋಸ್ಟ್ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಏಪ್ರಿಲ್ 7, 2021ರಲ್ಲಿ ಈ ಕುರಿತು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ಪೋಸ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಬೃಂದಾವನ ಎಂಬ ಟ್ವಿಟ್ಟರ್ ಖಾತೆದಾರರೊಬ್ಬರು "ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ ಸರ್, ಅದು 45 ವರ್ಷ ಮೇಲ್ಪಟ್ಟವರಿಗೆ ಒಳ್ಳೆಯದಲ್ಲ" ಎಂದು ಕಾಮೆಂಟ್ ಮಾಡಿದ್ದರು.
ಇವರ ಕಾಮೆಂಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮ ಮಾತನ್ನು ಅಂದು ಅವರು ಕೇಳುತ್ತಿದ್ದರೆ, ಅವರಿಂದು ಬದುಕಿ ಇರುತ್ತಿದ್ದರು" "ಸಹೋದರ ಸರಿಯಾಗಿ ಹೇಳಿದ್ದಾರೆ" "ನೀವು ಹೇಳಿದ್ದಂತೆ ಆಗಿದೆ" ಎಂದೆಲ್ಲ ಅಪ್ಪು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವ ಲಸಿಕೆ ಪಡೆದಿದ್ದರು ಎಂಬ ಮಾಹಿತಿ ಇಲ್ಲ.
ಅಪ್ಪು ನಿಧನಕ್ಕೂ ಮೊದಲ ಲಸಿಕೆ ಪಡೆದ ದಿನಕ್ಕೂ ಅಂತರ
ಪುನೀತ್ ರಾಜ್‌ಕುಮಾರ್ ಏಪ್ರಿಲ್ 7, 2021ರಂದು ಮೊದಲ ಲಸಿಕೆ ಪಡೆದಿದ್ದರು. ಅದೇ ವರ್ಷ ಅಕ್ಟೋಬರ್ 29ರಂದು ನಿಧನರಾಗಿದ್ದರು. ಮೊದಲ ಲಸಿಕೆ ಪಡೆದ ಏಳು ತಿಂಗಳಲ್ಲಿ ಹೃದಯಘಾತದಿಂದ ಮೃತಪಟ್ಟರು. ಎರಡನೇ ಲಸಿಕೆ ಯಾವಾಗ ಪಡೆದರು ಎಂಬ ಮಾಹಿತಿ ಲಭ್ಯವಿಲ್ಲ. ಅಪ್ಪು ನಿಧನರಾದ ಸಮಯದಲ್ಲಿಯೂ ಸಾಕಷ್ಟು ಜನರು ಇದು ಕೊರೊನಾ ಲಸಿಕೆ ಅಡ್ಡಪರಿಣಾಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕೊರೊನಾ ಲಸಿಕೆ ಬಗ್ಗೆ ಅಸ್ಟ್ರಾಜೆನೆಕಾ ಕೋರ್ಟ್‌ಗೆ ಮಾಹಿತಿ ನೀಡಿದ ಬಳಿಕ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಪುನೀತ್ ರಾಜ್‌ಕುಮಾರ್ ಮಾತ್ರವಲ್ಲದೆ ಇನ್ನಷ್ಟು ಸೆಲೆಬ್ರಿಟಿಗಳ ಸಾವಿನೊಂದಿಗೂ ಕೊರೊನಾ ಲಸಿಕೆಯನ್ನು ಥಳಕು ಹಾಕಿ ಚರ್ಚಿಸುತ್ತಿದ್ದಾರೆ. ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಕೂಡ ಸೆಪ್ಟೆಂಬರ್ 2, 2021ರಂದು ಮೃತಪಟ್ಟಿದ್ದರು. ಅವರೂ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಮೃತಪಡಲು ಕೊರೊನಾ ಲಸಿಕೆಯೇ ಕಾರಣ ಎಂದು ಆ ಸಮಯದಲ್ಲಿ ಚರ್ಚೆಯಾಗಿತ್ತು. ರಾಜು ಶ್ರೀವಾಸ್ತವ ಮೃತಪಡಲು ಕೂಡ ಕೊರೊನಾ ಲಸಿಕೆಯೇ ಕಾರಣ ಎಂದು ಚರ್ಚೆಯಾಗಿತ್ತು. ಬಾಲಿವುಡ್ ಗಾಯಕ ಕೆಕೆ ಮೃತಪಡಲು ಕೂಡ ಕೊರೊನಾ ಲಸಿಕೆಯೇ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು.