Yuva Movie: ಚಿತ್ರರಂಗದಲ್ಲಿ ಯುವ ರಾಜ್‌ಕುಮಾರ್ ಓಡುವ ಕುದುರೆಯಾಗಲೆಂದು ಆ ಸೀನ್ ಶೂಟ್ ಮಾಡಿದ್ರಂತೆ ನಿರ್ದೇಶಕ ಸಂತೋಷ್ ಆನಂದ್‌ರಾಮ್
Mar 25, 2024 11:00 AM IST
ಯುವ ಸಿನಿಮಾ ಮಾರ್ಚ್ 29ರಂದು ಬಿಡುಗಡೆ
- ಯುವ ರಾಜ್‌ಕುಮಾರ್ ನಟನೆಯ ಯುವ ಸಿನಿಮಾ ಮಾರ್ಚ್ 29ರಂದು ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಯುವ ರಾಜ್‌ಕುಮಾರ್ ಓಡುವ ಕುದುರೆಯಂತೆ ಯಶಸ್ಸು ಕಾಣಬೇಕೆಂದು ಮೊದಲ ಸೀನ್‌ನಲ್ಲಿ ಯುವ ಓಡುವ ಸನ್ನಿವೇಶ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಸ್ಯಾಂಡಲ್‌ವುಡ್‌ಗೆ ರಾಜ್ ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಯುವ ಸಿನಿಮಾದ ಮೂಲಕ ಪ್ರವೇಶಿಸುತ್ತಿದ್ದಾರೆ. ಯುವ ರಾಜ್‌ಕುಮಾರ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಓಡುವ ಕುದುರೆಯಾಲೆಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ "ಯುವ" ಸಿನಿಮಾದ ಆರಂಭದಲ್ಲಿಯೇ ಓಡುವ ದೃಶ್ಯವನ್ನು ಇಟ್ಟಿದ್ದಾರಂತೆ. "ಯುವ ಅವರು ಓಡುವ ಸನ್ನಿವೇಶವನ್ನು ಚಿತ್ರದ ಮೊದಲ ಸನ್ನಿವೇಶವಾಗಿ ಚಿತ್ರಿಸಿಕೊಳ್ಳಲಾಗಿದೆ. ಕಾರಣ, ಯುವ ಅವರು ಯಾವಾಗಲೂ ಚಿತ್ರರಂಗದಲ್ಲಿ ಓಡುವ ಕುದುರೆಯಾಗಿರಲಿ" ಎಂದು ಸಂತೋಷ್ ಆನಂದ್ರಾಮ್ ಹೇಳಿದ್ದಾರೆ.
ಮಾರ್ಚ್ 29ರಂದು ಯುವ ಸಿನಿಮಾ ರಿಲೀಸ್
ಕನ್ನಡದಲ್ಲಿ ರಾಜಕುಮಾರ, ಕೆಜಿಎಫ್, " ಕಾಂತಾರ" ದಂತಹ ಜನಪ್ರಿಯ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ನೀಡಿದೆ. ಇದೀಗ ಯುವ ರಾಜ್‌ಕುಮಾರ್ ನಟನೆಯ ಯುವ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡುತ್ತಿದೆ. ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ "ಯುವ" ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವು ಹೊಸಪೇಟೆಯಲ್ಲಿ ಅದ್ದೂರಿಯಾಗಿ ನಡೆದಿದೆ. ಯುವ ರಾಜಕುಮಾರ್ ಯುವ ಸಿನಿಮಾದ ಮೂಲಕ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸಂತೋಷ್ ಆನಂದರಾಮ್ ಯುವ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಅಶ್ಚಿನಿ ಪುನೀತ್ ರಾಜ್‌ಕುಮಾರ್ ಕಾರಣ
ಯುವ ಚಿತ್ರ ನಿರ್ಮಾಣವಾಗಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕಾರಣವೆಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ. "ಯುವ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೆ ಕಾರಣರು. ಅವರು ಅಂದು ವಿಜಯ್ ಕಿರಗಂದೂರ್ ಅವರಿಗೆ ಫೋನ್ ಮಾಡಿ ನಮ್ಮ ಗುರು(ಯುವ ರಾಜಕುಮಾರ್)" ವನ್ನು ನಿಮ್ಮ ಸಂಸ್ಥೆಯ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಬೇಕು ಎಂದಿದ್ದರು. ಅಶ್ಚಿನಿ ಪುನೀತ್ ರಾಜ್‌ಕುಮಾರ್ ಅವರ ಮಾತಿಗೆ ವಿಜಯ್ ಕಿರಗಂದೂರ್ ಒಪ್ಪಿದ್ದರು. ಇದರ ಪರಿಣಾಮವಾಗಿ ಈಗ ಯುವ ಚಿತ್ರ ರೆಡಿಯಾಗಿದೆ. ಯುವ ಅವರು ಯಾವಾಗಲೂ ಚಿತ್ರರಂಗದಲ್ಲಿ ಓಡುವ ಕುದುರೆಯಾಗಿರಲಿ ಎಂದು ಮೊದಲ ದೃಶ್ಯದಲ್ಲಿ ಯುವ ರಾಜ್‌ಕುಮಾರ್ ಓಡುವ ದೃಶ್ಯವಿದೆ. ಯುವ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ. ಮಾರ್ಚ್ 29ರಂದು ರಿಲೀಸ್ ಆಗುವ ಈ ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ. ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ, ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ, ನನ್ನ ತಂಡಕ್ಕೆ ಹಾಗೂ ವಿಶೇಷವಾಗಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಥ್ಯಾಂಕ್ ಹೇಳುವೆ" ಎಂದು ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ.
ಅದ್ಧೂರಿಯಾಗಿ ನಡೆದ ಕಾರ್ಯಕ್ರಮ
ಹೊಸಪೇಟೆಯ ಪುನೀತ್ ರಾಜಕುಮಾರ್ ಮೈದಾನದಲ್ಲಿ ಯುವ ಸಿನಿಮಾದ ಪ್ರಿರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದರಾಮ್, ನಾಯಕ ಯುವ ರಾಜಕುಮಾರ್, ಚಿತ್ರದಲ್ಲಿ ನಟಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಹಿತ, ಗಿರಿರಾಜ್, ರಾಘು ಶಿವಮೊಗ್ಗ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯುವ ರಾಜ್‌ಕುಮಾರ್ ಏನಂದ್ರು?
"ಎಲ್ಲಕ್ಕಿಂತ ಮೊದಲು ಚಿಕ್ಕಪ್ಪ ಪುನೀತ್ ರಾಜಕುಮಾರ್ ಹಾಗೂ ಚಿಕ್ಕಮ್ಮ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಏಕೆಂದರೆ ನನ್ನನ್ನು ನಾಯಕನನ್ನಾಗಿ ಮಾಡಿ ಎಂದು ಅವರಿಬ್ಬರು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಸರ್ ಗೆ ಹೇಳಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಸಿನಿಮಾದಲ್ಲಿ ನಟಿಸಲು ನಟನಗೆ ಸಾಧ್ಯವಾಗಿದೆ. ಪ್ರೊಡ್ಯುಸರ್ ವಿಜಯ್ ಕಿರಗಂದೂರ್ ಹಾಗೂ ಡೈರೆಕ್ಟರ್ ಸಂತೋಷ್ ಆನಂದರಾಮ್ ಅವರಿಗೂ ನಾನು ಚಿರ ಋಣಿ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಹಿರಿಯ ನಟರಾದ ಅಚ್ಯುತಕುಮಾರ್, ಸುಧಾರಾಣಿ ಮುಂತಾದವರಿಂದ ಸಾಕಷ್ಟು ಕಲಿತಿದ್ದೇನೆ. ನಾಯಕಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ" ಎಂದು ಯುವ ರಾಜ್ ಕುಮಾರ್ ಹೇಳಿದ್ದಾರೆ.