Yuva: ‘ಅಪ್ಪು ಮಗನಾಗಿ ನಿನ್ನನ್ನು ನಾಡಿನ ಜನರ ಮಡಿಲಿಗೆ ಹಾಕುತ್ತಿದ್ದೇನೆ’; ಪುತ್ರನ ಬಗ್ಗೆ ರಾಘಣ್ಣನ ಮಾತು, ಹೊಸಪೇಟೆಯಲ್ಲಿ ‘ಯುವ’ ಸ್ತುತಿ
Mar 24, 2024 10:02 AM IST
Yuva: ‘ಅಪ್ಪು ಮಗನಾಗಿ ನಿನ್ನನ್ನು ನಾಡಿನ ಜನರ ಮಡಿಲಿಗೆ ಹಾಕುತ್ತಿದ್ದೇನೆ’; ಪುತ್ರನ ಬಗ್ಗೆ ರಾಘಣ್ಣನ ಮಾತು, ಹೊಸಪೇಟೆಯಲ್ಲಿ ‘ಯುವ’ ಸ್ತುತಿ
- ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಭದ್ರಕೋಟೆ ಎಂದೇ ಬಿಂಬಿತವಾದ ಹೊಸಪೇಟೆಯಲ್ಲಿ ಯುವ ರಾಜ್‌ಕುಮಾರ್ ನಟನೆಯ ಯುವ ಸಿನಿಮಾದ ಬಿಡುಗಡೆ ಪೂರ್ವ ಅದ್ಧೂರಿ ಕಾರ್ಯಕ್ರಮ ನೆರವೇರಿದೆ. ಇದೇ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಅಪ್ಪುವನ್ನು ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.
Yuva Hospet Pre Release Event: ಡಾ. ರಾಜ್ ಕುಟುಂಬಕ್ಕೂ ಹೊಸಪೇಟೆಗೂ ಅವಿನಾಭಾವ ನಂಟು. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರ ಉಕ್ಕಿನ ಕೋಟೆ ಎಂದೇ ಫೇಮಸ್. ಆ ಮಟ್ಟದ ಅಭಿಮಾನಿ ಬಳಗ ಅಲ್ಲಿದೆ. ಇದೀಗ ಅದೇ ಕೋಟೆಯಲ್ಲಿ ಯುವ ಸ್ತುತಿ ಮೊಳಗಿದೆ. ಅಂದರೆ, ಯುವ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಚೊಚ್ಚಿಲ ‘ಯುವ’ ಚಿತ್ರದ ಬಿಡುಗಡೆ ಪೂರ್ವ ಅದ್ಧೂರಿ ಕಾರ್ಯಕ್ರಮ ಹೊಸಪೇಟೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಬೃಹತ್ ವೇದಿಕೆ ಮೇಲೆ, ಕಲರ್‌ಫುಲ್ ಇವೆಂಟ್ ನಡೆದಿದೆ. ಯುವನ ನೆಪದಲ್ಲಿ ಅಪ್ಪುನ ಸ್ಮರಣೆಯೂ ಆಗಿದೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಯುವ ಸಿನಿಮಾ ಮಾ. 29ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಬಹುತಾರಾಗಣದ ಚಿತ್ರದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ರಾಜ್ ಕುಟುಂಬದ ಬಹುತೇಕರು ಭಾಗವಹಿಸಿದ್ದು, ವಿಶೇಷವಾಗಿತ್ತು. ಅದರಲ್ಲೂ ರಾಘವೇಂದ್ರ ರಾಜ್‌ಕುಮಾರ್, ಪುತ್ರನ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು. ಯುವ ನನ್ನ ಮಗನಲ್ಲ, ಅಪ್ಪುನ ಮಗ. ಅಪ್ಪು ಮಗನಾಗಿ ನಿಮ್ಮ ಮಡಿಲಿಗೆ ಅವನನ್ನು ಹಾಕುತ್ತಿದ್ದೇನೆ ಎಂದರು.
ಇಲ್ಲೆಲ್ಲೋ ಕೂತಿದ್ದಾನೆ ನನ್ನ ಅಪ್ಪು..
ಮಗನ ಚೊಚ್ಚಿಲ ಸಿನಿಮಾ ಬಗ್ಗೆ ಮಾತನಾಡಿದ ರಾಘಣ್ಣ, "ಇಲ್ಲೆಲ್ಲೋ ಅಪ್ಪು ಕೂತಿದ್ದಾನೆ. ಕೂತು ಈ ಕಾರ್ಯಕ್ರಮ ನೋಡುತ್ತಿದ್ದಾನೆ ಅನ್ಸುತ್ತೆ. ಅವ್ನು ಹುಟ್ಟಿದ್ದು ಹೊಸಪೇಟೆಯಲ್ಲಿ, ಬೆಳೆದಿದ್ದು ಚಿತ್ರರಂಗದಲ್ಲಿ ಅನ್ಸುತ್ತೆ. ಹೊಟೇಲ್‌ನಿಂದ ಹೊರಡುವಾಗ ಹೆಂಡ್ತಿ ಹೇಳಿದ್ಲು, ನನಗೆ ಮಗನ ಸಿನಿಮಾ ಫಂಕ್ಷನ್‌ಗೆ ಹೋಗ್ತಿದಿನಿ ಅಂತ ಅನಸ್ತಾನೇ ಇಲ್ಲ ರೀ. ಅಪ್ಪು ಫಕ್ಷನ್‌ಗೆ ಹೋಗ್ತಿದಿನಿ ಅಂತ ಅನಿಸ್ತಿದೆ ಅಂತ ಅಂದ್ಲು. ನನಗೆ ಈಗಲೂ ಹಾಗೇ ಅನಿಸ್ತಿದೆ. ಅವನು (ಪುನೀತ್ ರಾಜ್‌ಕುಮಾರ್) ಏನು ಮಾಡಿಬಿಟ್ಟು ಹೋಗಿದ್ದಾನೆ ನೋಡಿ?"
ಅವನೇ ಎಲ್ಲ ಜವಾಬ್ದಾರಿ ಹೊತ್ತ
"ಅವನು ಹೋಗೋಕೂ ಒಂದು ವಾರ ಮುಂಚೆ, ನನ್ನ ಬಳಿ ಬಂದು, ರಾಘಣ್ಣ ನಿಮಗೊಂದು ನೋವಿರುತ್ತೆ. ಶಿವಣ್ಣನನ್ನು ಅಮ್ಮ ವಜ್ರೇಶ್ವರಿ ಕಂಬೈನ್ಸ್‌ನಿಂದ ಪರಿಚಯಿಸಿದ್ರು. ನೀವು ಪರಿಚಯಗೊಂಡ್ರಿ. ನಾನೂ ಅದೇ ಬ್ಯಾನರ್‌ನಿಂದ ಬಂದೆ. ವಿನಯ್‌ನೂ ಬಂದ. ಗುರೂಗೆ ನೀವು ಮಾಡಬೇಡಿ ರಾಘಣ್ಣ, ನಿಮ್ಮ ಕೈಲಿ ತಡ್ಕೊಳ್ಳೊಕೆ ಆಗಲ್ಲ. ಒಳ್ಳೆ ಪ್ರೊಡಕ್ಷನ್ ಇದ್ರೆ ನಾನೇ ಹೇಳ್ತಿನಿ ಅಂದು, ಹೊಂಬಾಳೆ ಫಿಲಂಸ್ ಹತ್ರ ಮಾಡ್ಸಿ. ನೀವು ಹಾಯಾಗಿ ಚೇರ್ ಮೇಲೆ ಕೂತ್ಕೊಂಡು ಸಿನಿಮಾನ ಎಂಜಾಯ್ ಮಾಡಿ. ನೀವು ಆ ಜವಾಬ್ದಾರಿ ತಗೋಬೇಡಿ ರಾಘಣ್ಣ ಎಂದು ಹೇಳಿ ಹೋಗಿದ್ದ. ಈಗ ಅದೇ ಸಂಸ್ಥೆಯಿಂದಲೇ ಯುವ ನಿಮ್ಮ ಬಳಿ ಬರುತ್ತಿದ್ದಾನೆ.
ಅಪ್ಪು ಮಗನಾಗಿ ಯುವನನ್ನು ಪರಿಚಯಿಸ್ತಿದ್ದೇನೆ..
ಅಪ್ಪು ಹೋಗೋಕೂ ಮುಂಚೆ ಒಬ್ಬ ತಂದೆಯಾಗಿ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಮಾಡಿಯೇ ಹೋಗಿದ್ದಾನೆ. ಈಗ ನಾನು ಖುರ್ಚಿ ಮೇಲೆ ಕೂತು ಎಂಜಾಯ್ ಮಾಡ್ತಿದ್ದೇನೆ. ಸಿನಿಮಾ ಹೇಗೆ ಮಾಡಬೇಕು? ಅದನ್ನು ರಿಲೀಸ್ ಮಾಡೋದ್ಹೇಗೆ? ಆ ಯಾವ ಟೆನ್ಷನ್ ನನಗಿಲ್ಲ. ಇಂಥ ಸಂಸ್ಥೆಯನ್ನು ನನ್ನ ತಮ್ಮನೇ ಹುಡುಕಿ ಕೊಟ್ಟಿದ್ದಾನೆ. ಇವತ್ತು ನಾನು ಅವನನ್ನು(ಯುವ) ನನ್ನ ಮಗನಾಗಿ ನಿಮಗೆ ಪರಿಚಯಿಸ್ತಿಲ್ಲ. ಅಪ್ಪು ಮಗನಾಗಿ ಯುವನನ್ನು ಪರಿಚಯಿಸ್ತಿದ್ದೇನೆ. ಅಪ್ಪು ಹೋದಮೇಲೆ, ಅಶ್ವಿನಿ ಆ ಕೆಲಸ ಮುಂದುವರಿಸಿದ್ದಾರೆ. ಅವನು ನನ್ನ ಮಗನೇ ಎನ್ನುತ್ತಾರೆ" ಎಂದಿದ್ದಾರೆ ರಾಘಣ್ಣ.
ಅಪ್ಪುನಲ್ಲಿನ ಈ ಗುಣಗಳು ಅವನಿಗೂ ಬರಲಿ...
"ಎಲ್ಲರೂ ಕೇಳ್ತಿದ್ದಾರೆ, ನಿಮ್ಮ ಮಗ ನಿಮ್ಮ ತಮ್ಮನ್ನ ಜಾಗ ತಗೋತಾರಂತೆ, ಅದು ಮಾರುಕಟ್ಟೆಯಲ್ಲಿ ಮಾರೋದಲ್ಲ. ಅದನ್ನ ಪಡ್ಕೋಬೇಕು. ಅಪ್ಪು 45 ವರ್ಷ ಚಿತ್ರರಂಗದಲ್ಲಿದ್ದಾನೆ. ನನ್ನ ಮಗನಿಗೆ ನಾನು ಹೇಳುವುದಿಷ್ಟೇ. ಅವ್ನು ಒಳ್ಳೆಯ ಡಾನ್ಸರ್ ಆಗದಿದ್ದರೂ ಪರವಾಗಿಲ್ಲ, ಒಳ್ಳೇ ಫೈಟ್ ಮಾಡದಿದ್ದರೂ ನಡಿಯುತ್ತೆ. ಆದರೆ, ನನ್ನ ತಮ್ಮನಲ್ಲಿ ಒಂದಷ್ಟು ಗುಣ ಇದ್ವು, ಎಷ್ಟೇ ಮೇಲೆ ಏರಿದರೂ ತಗ್ಗಿ ಬಗ್ಗೆ ನಡೀಬೇಕು. ಸರಳತೆಯಿಂದ ಇರಬೇಕು. ಕೊನೇ ವರೆಗೂ ಅಭಿಮಾನಿಗಳನ್ನು ದೇವರಾಗಿ ನೋಡಬೇಕು. ಸುತ್ತಮುತ್ತಲಿನ ಜನರನ್ನು ಬೆಳೆಸಬೇಕು. ಇವಿಷ್ಟು ಗುಣಗಳು ಯುವನಲ್ಲಿ ಕಂಡರೆ ಎಲ್ಲವೂ ಅವನ ಹಿಂದೆ ಬರುತ್ತೆ. ನನಗೆ ಅಷ್ಟೇ ಸಾಕು. ಅವನು ನನ್ನ ಮಗ ಅಲ್ಲ ನನ್ನ ತಮ್ಮನ ಮಗ ಅಂತ ಹೇಳೋಕೆ ತುಂಬ ಇಷ್ಟ ಆಗುತ್ತೆ" ಎಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.