ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠೆ ನಿಮಿತ್ತ ಜಾನಕಿ ರಾಮ ಆಲ್ಬಂ ಹಾಡು ಅನಾವರಣ
Jan 21, 2024 05:44 PM IST
ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಿಮಿತ್ತ ಜಾನಕಿ ರಾಮ ಆಲ್ಬಂ ಹಾಡು ಅನಾವರಣ
- ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾದರೆ, ಇತ್ತ ಜಾನಕಿ ರಾಮ ಹೆಸರಿನ ಆಲ್ಬಂ ಹಾಡನ್ನು ಹೊರ ತಂದಿದೆ ಸಿರಿ ಮ್ಯೂಸಿಕ್.
Janaki Rama Album Song: ಇನ್ನೇನು ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಠಗೆ ಕ್ಷಣಗಣನೆ ಆರಂಭವಾಗಿದೆ. ಅಂದರೆ, ಜನವರಿ 22 ಕೋಟ್ಯಂತರ ಭಾರತೀಯರ ಕನಸು ನನಸಾಗುವ ದಿನ. ಅಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಸುಸಂದರ್ಭದಲ್ಲಿ ಸಿರಿ ಮ್ಯೂಸಿಕ್ ಅರ್ಪಿಸುವ ಹಾಗೂ ನಟಿ ರೂಪಿಕಾ ಅವರ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಸಾರಥ್ಯದಲ್ಲಿ ಮೂಡಿಬಂದಿರುವ ಜಾನಕಿ ರಾಮ ಆಲ್ಬಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು.
ಹಾಡಿನ ಹಿಂದಿನ ರುವಾರಿ ರೂಪಿಕಾ ಮಾತನಾಡಿ, ನಮ್ಮ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋಸ್‌ನ ಎಲ್ಲರ ಸಹಕಾರದಿಂದ ಈ ಹಾಡು ಮೂಡಿಬಂದಿದೆ. ನಮ್ಮ ಕನಸಿಗೆ ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ ಆಸರೆಯಾದರು. ಬೆಂಗಳೂರು ಸ್ಟುಡಿಯೋಸ್‌ನಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ನಲ್ಲಿ ಈ ಹಾಡನ್ನು ಚಿತ್ರಿಸಲಾಗಿದೆ. ಅನಿರುದ್ದ್ ಜತ್ಕರ್, ನಿರಂಜನ್ ದೇಶಪಾಂಡೆ ಈ ಹಾಡಿನಲ್ಲಿ ಅಭಿನಯಿಸಿ ನಮ್ಮ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಅದ್ವೈತ್ ಶೆಟ್ಟಿ ನಿರ್ದೇಶಿಸಿರುವ ಈ ಹಾಡನ್ನು ಮನೋಜ್ ಸೌಗಂಧ್ ಬರೆದಿದ್ದಾರೆ. ನೀತು ನಿನಾದ್ ತಾವೇ ಹಾಡಿ, ಸಂಗೀತವನ್ನೂ ನೀಡಿದ್ದಾರೆ. ನಾನು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಲಿಖಿತ್ ಆಚಾರ್ ಅವರ ಜೊತೆಗೂಡಿ ನೃತ್ಯ ನಿರ್ದೇಶನ ಕೂಡ ಮಾಡಿದ್ದೇನೆ ಎಂದರು ನಟಿ ರೂಪಿಕಾ.
ಸಿರಿ ಮ್ಯೂಸಿನ್‌ನ ಸುರೇಶ್ ಚಿಕ್ಕಣ್ಣ ಮಾತನಾಡಿ, ಜಾನಕಿರಾಮ ಆಲ್ಬಂ ಸಾಂಗ್ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಎಲ್ಲರ ಸಹಕಾರದಿಂದ ಹತ್ತು ದಿನಗಳಲ್ಲಿ ಮುಗಿಯುವ ಚಿತ್ರೀಕರಣ ಒಂದೇ ದಿನದಲ್ಲಿ ಮುಗಿದಿದೆ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಇಂತಹ ಅದ್ಭುತ ಗೀತೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಸಮಾರಂಭಕ್ಕೆ ಆಗಮಿಸಿದ ಗಣ್ಯರಿಗೆ ಸುರೇಶ್ ಚಿಕ್ಕಣ್ಣ ಧನ್ಯವಾದ ಹೇಳಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ನಟಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ಅನೇಕ ಗಣ್ಯರು ಸೇರಿ ಅದ್ದೂರಿಯಾಗಿ ಮೂಡಿಬಂದಿರುವ ಜಾನಕಿ ರಾಮ ಆಲ್ಭಂ ಸಾಂಗ್ ಬಿಡುಗಡೆ ಮಾಡಿದರು. ಹಾಡನ್ನು ವೀಕ್ಷಿಸಿದ ಎಲ್ಲಾ ಗಣ್ಯರು ಮಾತನಾಡಿ, ಈ ಹಾಡನ್ನು ನೋಡಿದಾಗ ಮೈ ರೋಮಾಂಚನವಾಯಿತು. ಇಂದು ಇಲ್ಲೇ ರಾಮನ ಪ್ರತಿಷ್ಠಾ ವೈಭವ ನೋಡಿದ ಹಾಗಾಯಿತು"ಇಂತಹ ಅದ್ಭುತ ಗೀತೆಯನ್ನು ಹೊರತಂದಿರುವ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಹಾಗೂ ರೂಪಿಕಾ ಅವರಿಗೆ ಧನ್ಯವಾದ ಎಂದರು.
ಸಂಗೀತ ನಿರ್ದೇಶಕ ನೀತು ನಿನಾದ್, ನಿರ್ದೇಶಕ ಅದ್ವೈತ ಶೆಟ್ಟಿ, ನಟ ನಿರಂಜನ್ ದೇಶಪಾಂಡೆ ಜಾನಕಿರಾಮ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಸುರಪುರದ ಶಾಸಕ ರಾಜುಗೌಡ, ಡಿಎಸ್ ಮ್ಯಾಕ್ಸ್‌ನ ಎಂ. ಡಿ. ದಯಾನಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ. ಹರೀಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಪೊಲೀಸ್ ಅಧಿಕಾರಿ ಶಂಕರ್ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.