Sathish Ninasam: ಸುಮ್ಮನೆ ಭಾಷಣ ಮಾಡಿದ್ರೆ ಎಲ್ರೂ ಎದ್ದು ಹೋಗ್ತಾರೆ... ಮಂಡ್ಯ ಚುನಾವಣಾ ಜಾಗೃತಿ ಸಭೆಯಲ್ಲಿ ಸತೀಶ್ ನಗೆಚಟಾಕಿ
Apr 13, 2023 08:28 PM IST
ಮಂಡ್ಯ ಚುನಾವಣಾ ಜಾಗೃತಿ ಸಭೆಯಲ್ಲಿ ನೀನಾಸಂ ಸತೀಶ್
- ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರಾಗಿರುವುದರಿಂದ ನಾವು ಮಾತನಾಡಿದರೆ ಮಕ್ಕಳು ಕೇಳುತ್ತಾರೆ. ಎಲ್ಲಾ ರೀತಿಯೂ ಇರಬೇಕು. ಸುಮ್ಮನೆ ಕುಳಿತುಕೊಂಡು ಅರ್ಧ ಗಂಟೆ ಭಾಷಣ ಕೇಳಿ ಎಂದರೆ ಮಕ್ಕಳು ಕೇಳುತ್ತಾರಾ? ಎಲ್ಲರೂ ಎದ್ದು ಹೋಗುತ್ತಾರೆ.
ವಿಧಾನಸಭೆ ಚುನಾವಣೆಗೆ ಸಕಲ ತಯಾರಿ ನಡೆದಿದೆ. ಇಂದು (ಏ.13) ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 10 ರಂದು ರಾಜ್ಯದಲ್ಲಿ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ನಡುವೆ ರಾಜಕೀಯ ನಾಯಕರು ತಮ್ಮ ಪಕ್ಷಗಳ ಪ್ರಚಾರಕ್ಕೆ ಸ್ಟಾರ್ ನಟರನ್ನು ಕರೆ ತರುವ ಕಸರತ್ತು ಮುಂದುವರೆಸಿದ್ದಾರೆ. ಆದರೆ ಕೆಲವು ನಟರು ನಿರ್ದಿಷ್ಟ ಪಕ್ಷಗಳ ಬಗ್ಗೆ ಪ್ರಚಾರ ಮಾಡದೆ, ಜನರಲ್ಲಿ ಚುನಾವಣೆ, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಸ್ಯಾಂಡಲ್‌ವುಡ್ ನಟ, 'ಅಯೋಗ್ಯ' ಸಿನಿಮಾ ಖ್ಯಾತಿಯ ನೀನಾಸಂ ಸತೀಶ್ ಮಂಡ್ಯ ಚುನಾವಣಾ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ಇಂದು (ಏ.13) ಮಂಡ್ಯದಲ್ಲಿ ಚುನಾವಣಾ ಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದ ಸತೀಶ್ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ಮಂಡ್ಯ ವಿವಿ ಆವರಣದಲ್ಲಿರುವ ಶಾರದಾ ಮಂದಿರದಲ್ಲಿ ಆಯೋಜಿಸಿದ್ದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ ಕಾರ್ಯಕ್ರಮದಲ್ಲಿ ಸತೀಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ''ಎಲ್ಲರೂ ತಪ್ಪದೆ ಓಟು ಹಾಕಿ, ಜನಪ್ರತಿನಿಧಿಗಳನ್ನು ಪ್ರಶ್ನಿಸಲು ನಮಗೆ ಹಕ್ಕು ಬೇಕು. ಹಕ್ಕು ಬೇಕೆಂದರೆ ನಾವು ತಪ್ಪದೆ ಮತ ಚಲಾಯಿಸಬೇಕು, ಯಾವುದೇ ಆಮಿಷಗಳಿಗೆ ಬಲಿ ಆಗಬೇಡಿ. ನಿಮ್ಮ ಊರಿಗಾಗಲೀ, ಮನೆಗಾಗಲೀ ಸರ್ಕಾರ ನೀಡುವ ಸವಲತ್ತು ಬೇಕೆಂದರೆ ಓಟು ಹಾಕಿ. ಕಳೆದ ಬಾರಿ ಲೋಕಸಭಾ ಚುನಾವಣೆ, ಮತದಾನದಲ್ಲಿ ಮಂಡ್ಯ ಎರಡನೇ ಸ್ಥಾನದಲ್ಲಿತ್ತು. ಈ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಸ್ಥಾನಕ್ಕೆ ಬರಲಿ ಎಂಬುದು ನನ್ನ ಆಸೆ''.
''ಚುನಾವಣೆ ಜಾಗೃತಿ ಕಾರ್ಯಕ್ರಮದಲ್ಲಿ ನಿಮ್ಮ ಸಿನಿಮಾ ಪ್ರಮೋಷನ್ ಮಾಡುವುದು ಎಷ್ಟು ಸರಿ? ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್, ''ನಾನು ಪ್ರಮೋಷನ್ ಮಾಡಿಲ್ಲ, ನನ್ನ ಸಾಕಷ್ಟು ಅಭಿಮಾನಿಗಳು ಇಲ್ಲಿ ಬಂದಿದ್ದರು. ನಿಮ್ಮ ಮುಂದಿನ ಸಿನಿಮಾಗಳು ಯಾವುದು ಎಂದು ಅವರು ಕೇಳಿದ್ದಕ್ಕೆ ನಾನು ಉತ್ತರಿಸಿದೆ ಅಷ್ಟೇ. ಆದರೆ ಚುನಾವಣೆ ಪ್ರಚಾರ ವೇಳೆ ಸಿನಿಮಾ ಪ್ರಮೋಷನ್ ಮಾಡಬಾರದು ಎಂದು ನಿಯಮ ಇಲ್ಲ. ಸಿನಿಮಾಗೂ ಮತದಾನಕ್ಕೂ ಸಂಬಂಧವಿಲ್ಲ. ನಾನು ಸಿನಿಮಾ ಹಾಡು ಹಾಡಬಹುದು, ಡ್ಯಾನ್ಸ್ ಮಾಡಬಹುದು.''
‘’ ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರಾಗಿರುವುದರಿಂದ ನಾವು ಮಾತನಾಡಿದರೆ ಮಕ್ಕಳು ಕೇಳುತ್ತಾರೆ. ಎಲ್ಲಾ ರೀತಿಯೂ ಇರಬೇಕು. ಸುಮ್ಮನೆ ಕುಳಿತುಕೊಂಡು ಅರ್ಧ ಗಂಟೆ ಭಾಷಣ ಕೇಳಿ ಎಂದರೆ ಮಕ್ಕಳು ಕೇಳುತ್ತಾರಾ? ಎಲ್ಲರೂ ಎದ್ದು ಹೋಗುತ್ತಾರೆ, ಆಗ ನಾವು ನೀವು ಇಬ್ಬರೇ ಇಲ್ಲಿ ಇರ್ತೀವಿ. ಆದ್ದರಿಂದ ಅವರಿಗೆ ಅವರ ರೀತಿಯಲ್ಲೇ ಹೇಳಬೇಕು'' ಎಂದು ಸತೀಶ್ ನೀನಾಸಂ ತಮ್ಮದೇ ಧಾಟಿಯಲ್ಲಿ ಉತ್ತರಿಸಿದರು.