logo
ಕನ್ನಡ ಸುದ್ದಿ  /  ಮನರಂಜನೆ  /  Shiva Veda Pre Release Event: 'ಶಿವ ವೇದ' ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟ ಶಿವರಾಜ್‌ಕುಮಾರ್‌

Shiva Veda Pre Release Event: 'ಶಿವ ವೇದ' ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟ ಶಿವರಾಜ್‌ಕುಮಾರ್‌

HT Kannada Desk HT Kannada

Feb 08, 2023 12:18 PM IST

google News

ಪುನೀತ್‌ ನೆನೆದು ಭಾವುಕರಾದ ಶಿವರಾಜ್‌ಕುಮಾರ್‌

    • ಅಪ್ಪು ನೆನೆದು ಅಳಬಾರದು ಎಂದು ಸಾಕಷ್ಟು ಬಾರಿ ಅಂದುಕೊಳ್ಳುತ್ತೇನೆ. ಆದರೆ ಆ ಮಗುವಿನ ಮುಖ ನೋಡುತ್ತಿದ್ದಂತೆ ನನಗೆ ದು:ಖವಾಗುತ್ತದೆ. ಅಪ್ಪು ಹುಟ್ಟಿದಾಗ ನನಗೆ 13 ವರ್ಷ ವಯಸ್ಸು. ಅಪ್ಪು ನನಗೆ ಮಗು ಇದ್ದಂತೆ. ಆದರೆ ನನಗಿಂತ ಮುಂಚೆ ಅವನು ಹೋಗಿದ್ದು ನನಗೆ ನೋವಾಗುತ್ತಿದೆ.
ಪುನೀತ್‌ ನೆನೆದು ಭಾವುಕರಾದ ಶಿವರಾಜ್‌ಕುಮಾರ್‌
ಪುನೀತ್‌ ನೆನೆದು ಭಾವುಕರಾದ ಶಿವರಾಜ್‌ಕುಮಾರ್‌ (PC: Jai Balayya Facebook)

ಕಳೆದ ವರ್ಷ ಡಿಸೆಂಬರ್‌ 23 ರಂದು ತೆರೆ ಕಂಡ ಶಿವರಾಜ್‌ಕುಮಾರ್‌ ಹಾಗೂ ಎ. ಹರ್ಷ ಕಾಂಬಿನೇಶನ್‌ನಲ್ಲಿ ತಯಾರಾದ 'ವೇದ' ಸಿನಿಮಾ ಸಿನಿಪ್ರಿಯರ ಮನಸ್ಸು ಗೆದ್ದಿದೆ. ಈ ಸಿನಿಮಾ ಇದೀಗ 'ಶಿವ ವೇದ' ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ಈ ವಾರ ತೆರೆ ಕಾಣುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರೀಲೀಸ್‌ ಕಾರ್ಯಕ್ರಮ ನಡೆಯಿತು.

'ಶಿವವೇದ' ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌, ಗೀತಾ, ನಿರ್ದೇಶಕ ಎ. ಹರ್ಷ, ನಾಯಕಿ ಗಾನವಿ ಲಕ್ಷ್ಮಣ್‌, ಅದಿತಿ ಅರುಣ್‌ ಹಾಗೂ ಇನ್ನಿತರರು ಹಾಜರಿದ್ದರು. ಹೈದರಾಬಾದ್‌ನ ದಾಸಪಲ್ಲ ಹೋಟೆಲ್‌ನಲ್ಲಿ ಸೋಮವಾರ ಸಂಜೆ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ಕೂಡಾ ಹಾಜರಿದ್ದರು. ನಂದಮುರಿ ಹಾಗೂ ಡಾ. ರಾಜ್‌ಕುಮಾರ್‌ ಕುಟುಂಬದ ಸದಸ್ಯರು ಮೊದಲಿನಿಂದಲೂ ಬಹಳ ಆತ್ಮೀಯರು. ಡಾ. ರಾಜ್‌ಕುಮಾರ್‌ ಕುಟುಂಬದ ಏನೇ ಕಾರ್ಯಕ್ರಮಗಳಿದ್ದರೂ ಅಲ್ಲಿ ಬಾಲಕೃಷ್ಣ ಹಾಜರಿರುತ್ತಾರೆ. ಹಾಗೇ ಬಾಲಕೃಷ್ಣ ಮನೆಯ ಬಹುತೇಕ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌ ಹಾಗೂ ಕುಟುಂಬ ಭಾಗವಹಿಸಿದ್ದಾರೆ. ಇದೀಗ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೂ ಬಾಲಕೃಷ್ಣ ಸಾಥ್‌ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌ ''ಇಂದು ನನಗೆ ಬಹಳ ಸಂತೋಷವಾಗುತ್ತಿದೆ. ''ಶಿವ ವೇದ'' ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ನನ್ನ ಬ್ರದರ್‌ ಬಾಲಕೃಷ್ಣ ಆಗಮಿಸಿದ್ದಾರೆ. ಬಾಲಕೃಷ್ಣ ಅವರ 100ನೇ ಸಿನಿಮಾ 'ಶಾತಕರ್ಣಿ' ಯ ಒಂದು ಹಾಡಿನಲ್ಲಿ ನಟಿಸಲು ಅವರು ನನಗೆ ಕೇಳಿದರು. ಒಂದು ಫೋನ್‌ ಕರೆಗೆ ನಾನು ಇಲ್ಲಿಗೆ ಬಂದು ಹಾಡಿನಲ್ಲಿ ನಟಿಸಿದ್ದೆ. ಆದರೆ ನನಗೆ ಒಂದು ಹಾಡು ಬೇಡ. ಇಡೀ ಒಂದು ಸಿನಿಮಾದಲ್ಲಿ ಅವರೊಂದಿಗೆ ನಟಿಸಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ. ನಮ್ಮಿಬ್ಬರ ಕುಟುಂಬ ಮೊದಲಿನಿಂದಲೇ ಬಹಳ ಆತ್ಮೀಯರಾಗಿದ್ದೇವೆ. ಪ್ರತಿ ವರ್ಷ ಅವರು ಹಿಂದೂಪುರದಲ್ಲಿ ನಡೆಯುವ ಲೇಪಾಕ್ಷಿ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮ ನನಗೆ ಬಹಳ ಇಷ್ಟ. ತಾರಕರತ್ನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನೋವಿನಲ್ಲೂ ಅವರು ನನ್ನ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ್ದಾರೆ.''

''ವೇದ ಸಿನಿಮಾ ಈಗಾಗಲೇ ಕನ್ನಡದಲ್ಲಿ ಬಿಡುಗಡೆ ಆಗಿ ಹಿಟ್‌ ಆಗಿದೆ. ಇದೀಗ ತೆಲುಗಿನಲ್ಲಿ ಫೆಬ್ರವರಿ 9 ರಂದು ರಿಲೀಸ್‌ ಆಗ್ತಿದೆ. ಎಲ್ಲರೂ ಸಿನಿಮಾ ನೋಡಿ, ಸಿನಿಮಾ ನಿಮ್ಮೆಲ್ಲರಿಗೂ ಇಷ್ಟವಾಗಲಿದೆ. ಏಕೆಂದರೆ ಚಿತ್ರದಲ್ಲಿ ಮನರಂಜನೆ ಇದೆ, ಒಂದೊಳ್ಳೆ ಸಂದೇಶ ಇದೆ. ಚಿತ್ರ ನೋಡಿದ ನಂತರ ಇದರಲ್ಲಿ ಬರುವ ಪಾತ್ರಗಳು ನಿಮ್ಮ ಮನೆಯಲ್ಲೂ ಇರಬೇಕು ಎಂದು ನೀವೆಲ್ಲಾ ಬಯಸುತ್ತೀರಿ. ಈ ಬಾರಿ ಸಿನಿಮಾ ತೆಲುಗಿನಲ್ಲಿ ತಡವಾಗಿ ರಿಲೀಸ್‌ ಆಗುತ್ತಿದೆ. ಆದರೆ ಮುಂದಿನ ಬಾರಿ ಒಟ್ಟಿಗೆ ಎಲ್ಲಾ ಭಾಷೆಗಳಲ್ಲೂ ತೆರೆ ಕಾಣುತ್ತಿದೆ. ಇಷ್ಟು ಪ್ರೀತಿಯಿಂದ ನಮ್ಮ ಕಾರ್ಯಕ್ರಮಕ್ಕೆ ಬಂದಿರುವ ನಿಮ್ಮೆಲ್ಲರಿಗೂ ಧನ್ಯವಾದ'' ಎಂದು ಶಿವರಾಜ್‌ಕುಮಾರ್‌ ತೆಲುಗು ಸಿನಿಪ್ರಿಯರಿಗೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ವಿಡಿಯೋ ತುಣುಕನ್ನು ನೋಡಿ ಶಿವಣ್ಣ ಭಾವುಕರಾದರು. ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಅಪ್ಪು ನೆನೆದು ಅಳಬಾರದು ಎಂದು ಸಾಕಷ್ಟು ಬಾರಿ ಅಂದುಕೊಳ್ಳುತ್ತೇನೆ. ಆದರೆ ಆ ಮಗುವಿನ ಮುಖ ನೋಡುತ್ತಿದ್ದಂತೆ ನನಗೆ ದು:ಖವಾಗುತ್ತದೆ. ಅಪ್ಪು ಹುಟ್ಟಿದಾಗ ನನಗೆ 13 ವರ್ಷ ವಯಸ್ಸು. ಅಪ್ಪು ನನಗೆ ಮಗು ಇದ್ದಂತೆ. ಆದರೆ ನನಗಿಂತ ಮುಂಚೆ ಅವನು ಹೋಗಿದ್ದು ನನಗೆ ನೋವಾಗುತ್ತಿದೆ. ಆದರೆ ಅಪ್ಪು ಕೊನೆವರೆಗೂ ನಮ್ಮ ಉಸಿರಿನಲ್ಲಿ ಶಾಶ್ವತವಾಗಿ ಇರುತ್ತಾನೆ'' ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ