Prakash R K Interview: ಸಾವಜಿ ಖಾನಾವಳಿಯಿಂದ.. ಸೋಷಿಯಲ್ ಮೀಡಿಯಾ ಸ್ಟಾರ್‌ವರೆಗೆ... ಗುಮ್ಮಟನಗರಿಯ ಪ್ರಕಾಶ್ ಆರ್.ಕೆ ಸಂದರ್ಶನ
Sep 05, 2022 04:58 PM IST
ಸಾವಜಿ ಖಾನಾವಳಿಯಿಂದ.. ಸೋಷಿಯಲ್ ಮೀಡಿಯಾ ಸ್ಟಾರ್‌ವರೆಗೂ... ಗುಮ್ಮಟನಗರಿಯ ಪ್ರಕಾಶ್ ಆರ್.ಕೆ ಸಂದರ್ಶನ
- ಜವಾರಿ ಭಾಷೆಯ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದವರು ಪ್ರಕಾಶ್ ಆರ್‌ಕೆ ( Prakash R K ). ಪ್ರಕಾಶ್ ಬಗ್ಗೆ ನಿಮಗೆ ಗೊತ್ತಿರದ ಕೆಲ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಅದನ್ನು ಸ್ವತಃ ಪ್ರಕಾಶ್ Hindustan Times Kannada ದ ಜತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಜವಾರಿ ಭಾಷೆಯ ಸೊಗಡಿನ ಧಾಟಿಯಲ್ಲಿಯೇ ಆ ಮಾತುಕತೆ ನಿಮ್ಮ ಮುಂದಿದೆ.
ನಮಸ್ಕಾರ್ ದೊಡ್ ಮಂದಿಗೆ...
ಹೀಗೆ ಜವಾರಿ ಭಾಷೆಯ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದವರು ಪ್ರಕಾಶ್ ಆರ್‌ಕೆ ( Prakash R K ). ಮೂಲ ಗದಗದ ಈ ಪ್ರತಿಭೆ, ಸದ್ಯ ವಿಜಯಪುರದಲ್ಲಿ ಇಡೀ ಕುಟುಂಬದ ಜತೆ ನೆಲೆಸಿದ್ದಾರೆ. ವೃತ್ತಿಯಲ್ಲಿ ಸಾವಜಿ ಖಾನಾವಳಿ (ಮಾಂಸಾಹಾರ) ನಡೆಸುತ್ತಿದ್ದಾರೆ. ರೀಲ್ಸ್, ಕಿರು ಕಂಟೆಂಟ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಸಹ ಹೊಂದಿದ್ದಾರೆ. ಇದೀಗ ಈ ಪ್ರಕಾಶ್ ಬಗ್ಗೆ ನಿಮಗೆ ಗೊತ್ತಿರದ ಕೆಲ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಅದನ್ನು ಸ್ವತಃ ಅವರೇ Hindustan Times Kannada ದ ಜತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಜವಾರಿ ಭಾಷೆಯ ಸೊಗಡಿನ ಧಾಟಿಯಲ್ಲಿಯೇ ಆ ಮಾತುಕತೆ ನಿಮ್ಮ ಮುಂದಿದೆ.
ಸಾಲಿ ಭಾಳ್ ಕಲತಿಲ್ರಿ.. ಸಾವಜಿ ಖಾನಾವಳಿ ನಡಸ್ತೇವ್ರಿ..
"ನನ್ನ ಪೂರ್ತಿ ಹೆಸರು ಪ್ರಕಾಶ್ ರಮೇಶ್ ಕಲಬುರ್ಗಿ. ನಮ್ದು ಮೂಲ ಗದಗ.. ಈಗ ಇರೋದು ಬಿಜಾಪುರದಾಗ (ವಿಜಯಪುರ). ಗದಗ ಬಿಟ್ ಬಂದ ಬಿಜಾಪುರದಾಗ ಶಿಫ್ಟ್ ಆಗಿ 25 ವರ್ಷ ಆತು. ನಾವೇನೂ ಹುಟ್ಟ ಶ್ರೀಮಂತ್ರ ಅಲ್ರಿ. ಮತ್ತೊಂದ್ ಊರಿಗೆ ದುಡ್ಯಾಕ್ ಹೋಗ್ತಾರಲ್ರಿ ಹಂಗ ನಾವೂ ಬಿಜಾಪುರಕ್ಕ ಬಂದವ್ರು. ನಮ್ಮ ತಂದಿ ತಾಯಿ ಜೊತಿ ಇಲ್ಲಿಗೆ ಬಂದೇವ್ರಿ. ನಮ್ ಮೂಲ ಉದ್ಯೋಗ ಏನಂದ್ರ; ನಮ್ದ ಒಂದ್ ಖಾನಾವಳಿ ಐತ್ರಿ. ಸಾವಜಿ (ಮಾಂಸಾಹಾರಿ) ಖಾನಾವಳಿ. ಅದರೊಳಗ ನಾವ್ ಕೆಲಸ ಮಾಡತೇವಿ. ನಾನು ಸಾಲಿ ಭಾಳ್ ಏನ್ ಕಲಿತಿಲ್ರಿ. ಯಾಕಂದ್ರ, ನಮಗ ವಿದ್ಯೆ ಜಾಸ್ತಿ ತೆಲೀಗೆ ಹತ್ತಿಲ್ರಿ. ಅದನ್ನ ಬಿಟ್ಟ, ಅಂಗಡಿ ಒಳಗ ದುಡಿಯೋ ಜರೂರತ್ತು ಇತ್ತು. ಹಂಗಾಗಿ ಖಾನಾವಳಿವೊಳಗ ಕಂಟಿನ್ಯೂ ಆಯ್ತು"
ಸಣ್ಣವ ಇದ್ದಾಗಿಂದ ನಾಟಕದ ಮ್ಯಾಲೆ ಹುಚ್ಚು.
"ಈ ವಿಡಿಯೋ ಯಾವಾಗ ಇಂಟ್ರೆಸ್ಟ್ ಬಂತ್ ಅಂದ್ರ, ಸಣ್ಣವ ಇದ್ದಾಗಿಂದ ಈ ನಾಟಕ, ಅದೂ ಇದು ಮಾಡೋ ಇಂಟ್ರೆಸ್ಟ್ ಇತ್ತು. ಬುದ್ದಿ ಬಂದಮ್ಯಾಲ ಅದರಾಗ ಮುಂದುವರಿದೆ. ಬಿಜಾಪುರದಾಗ, ಸಿಟಿವೊಳಗ, ಹಳ್ಳಿ ಸುತ್ತಮುತ್ತ.. ಹವ್ಯಾಸಿ ಕಲಾವಿದನಾಗಿ ಸುಮಾರು 30ರಿಂದ 35 ನಾಟಕಗಳಲ್ಲಿ ಅಭಿನಯಿಸಿದ್ದೇನೆ. ನಮಗೆ ಸರಿಯಾದ ಶಿಕ್ಷಕರು ಇಲ್ಲ, ಗುರುಗೋಳ ಇಲ್ಲ. ಈಗೀಗ ಎಲ್ಲರೂ ಸಿನಿಮಾಕ್ಕ ಹೊಂಟಾರ. ನಮಗ ನಾಟಕ ಇಂಟ್ರೆಸ್ಟ್. ನಮ್ದ ಆದ ಗ್ರೂಪ್ ಇತ್ತು. ನಗ ಕಲಿಸೋ ಗುರುಗಳೂ ಇಲ್ಲ. ವೇದಿಕೆ ಇಲ್ಲ. ರಂಗಮಂದಿರ ಇಲ್ಲ. ಅದರಿಂದ ಅವಕಾಶ ಇಲ್ಲದಂಗ ಆಯ್ತು. ಆವತ್ತಿನಿಂದ ನಾನ್ ಈ ಸೋಷಿಯಲ ಮೀಡಿಯಾ ಕಡೆ ಬಂದೆ"
ವಿಡಿಯೋ ನೋಡಿ ಬೆನ್ನು ತಟ್ಟಾಕತ್ತಾರ..
"ಟಿಕ್‌ಟಾಕ್‌ವೊಳಗ ಇರಲಿಲ್ಲ. ನಮ್ ದೋಸ್ತಂದ ಇತ್ತು. ಅದರಾಗ ವಿಡಿಯೋ ಮಾಡಿ ಬಿಡ್ತಿದ್ದೆ. ಈಗ ಈ ವಿಡಿಯೋ ಹಾಕಾಕ ಶುರು ಮಾಡಿ ಏನಿಲ್ಲ ಅಂದ್ರೂ 10 ವರ್ಷ ಆಯ್ತು. ಆವಾಗ ಯೂಟ್ಯೂಬ್ ಮತ್ತು ಫೇಸ್‌ಬುಕ್ ಅಷ್ಟ ಇತ್ತು. ನಮಗ ಏನ್ ಕಾಮಿಡಿ ಅನಿಸ್ತಿತ್ತು, ಅದನ್ನ ಮಾಡ್ಕೊಂತ ಹೊಂಟೆ. ದಿನನಿತ್ಯ ಕಣ್ಣಿಗೆ ಕಾಣೋದನ್ನ ಗಮನಿಸ್ತಿದ್ದೆ. ನಂದಾಗಿರಬಹುದು, ನಮ್ಮ ಸ್ನೇಹಿತರದ್ದ ಆಗಿರಬಹುದು. ಅದನ್ನ ಫನ್ನಿಯಾಗಿ ಹೇಳ್ಕೊಂತ್ತ ಹೋಗಿದ್ದೆ. ಒಂದೊಂದು ನಿಮಿಷದ ಕಂಟೆಂಟ್ ಕೊಡ್ತಾ ಹೋದೆ. ಅದೇ ದಿನದಿಂದ ದಿನಕ್ಕ ಚೋಲೋ ರೆಸ್ಪಾನ್ಸ್ ಸಿಕ್ತು. ಮಂದಿ ನೋಡಿ ಚೋಲೋ ಐತಿ ಹಿಂಗ ಮಾಡು ಅಂದ್ರು. ಇದೀಗ ಅದ ಕೆಲಸ ನಡದೇತಿ"
ಯೋಗರಾಜ್ ಭಟ್ರು ನಮ್ಮ ಕಿರುಚಿತ್ರ ಮೆಚ್ಚಿದ್ರು..
"ಇದು ಚೋಲಾ ಆಗ್ತಿದ್ದಂಗ, ಮೂರು ಕಿರುಚಿತ್ರ ಮಾಡಿದೆ. ಕಥೆ, ಚಿತ್ರಕಥೆ, ನಿರ್ದೇಶನ ಎಲ್ಲ ನಂದೆ. "ಕೊನೆ ಆಸೆ" ಎಂಬ ಕಿರುಚಿತ್ರ ಮಾಡಿದ್ದೆ. ಯೋಗರಾಜ್ ಭಟ್ ಅವ್ರು ಸ್ಪರ್ಧೆ ಇಟ್ಟಿದ್ರು. ಅದರೊಳಗ ನನ್ನ ಸಿನಿಮಾ ಸೆಕೆಂಡ್ ಬಂದಿತ್ತು. "ಕಮರು" ಅನ್ನೋ ಶಾರ್ಟ್‌ಸಿನಿಮಾ ಸಹ ಮಾಡಿದ್ಯಾ. ನಮ್ಮ ಉತ್ತರ ಕರ್ನಾಟಕ ಭಾಗದಾಗ ಭಾಳಷ್ಟು ಬಾಲ್ಯ ವಿವಾಹ ಆಗ್ತಾವ್ರಿ. ಆ ಕಾನ್ಸೆಪ್ಟ್ ಮ್ಯಾಲೆ ಅದನ್ನ ಮಾಡಿದ್ಯಾ. ಅದನ್ನು ಬೆಂಗಳೂರು ಇಂಟರ್‌ನ್ಯಾಷನಲ್ ಶಾರ್ಟ್ ಫಿಲಂ ಸ್ಪರ್ಧೆವೊಳಗ ಬೆಸ್ಟ್ ಸಿನಿಮಾ ಪ್ರೈಸ್ ಸಿಕ್ಕಿತ್ತು. ಅದಾದ ಮೇಲೆ "ಕಸ" ಹೆಸರಿನ ಸ್ವಚ್ಛ ಭಾರತ ಕಾನ್ಸೆಪ್ಟ್‌ವೊಳಗ ಕಿರು ಚಿತ್ರ ಮೂಡಿದ್ದೆ. ದೂರದರ್ಶನವೊಳಗ ಪ್ರಸಾರ ಆಗಿತ್ತು. ಸನ್ಮಾನ ಸಹ ಮಾಡಿದ್ರೂ"
ಮನ್ಯಾಗ ಮೊದ್ಲೆಲ್ಲ ಬೈಯ್ತಿದ್ರು, ಈಗೀಗ ಕಮ್ಮಿ ಆಗೇತಿ..
"ಆರಂಭದ ರೆಸ್ಪಾನ್ಸ್ ಹೇಗಿತ್ತು ಅಂದ್ರ.. ಮೊದಲ ನಾವು ಸಾಲಿ ಕಲತಿಲ್ಲ. ಕೆಲಸ ಇಲ್ಲದಿದ್ದಾಗ ಸಮಾಜ ನೋಡುವ ದೃಷ್ಟಿನೇ ಬೇರೆ.. ಅವ ಫಾಲ್ತು ಮನಷ್ಯಾ.. ಅಂಗಡ್ಯಾಗೂ ಕುಂದ್ರೂದಿಲ್ಲ. ಸಂಜಿಮಟ ವಿಡಿಯೋ ಮಾಡಕೊಂತ ಅಡ್ಯಾಡತಾನ.. ಇಂಥ ಮಾತುಗಳು ಬರೋದು ಸಹಜ. ಆವಾಗ ನಮಗೂ ಆ ರೀತಿ ಅನುಭವ ಆಗೇತಿ. ಮನಸಿಗೆ ನೋವಾಯ್ತು ಅಂತ ನಾನ್ ಯಾವತ್ತೂ ಅನ್ಕೊಂಡಿಲ್ಲ. ಗಮನ ಕೊಡಾಕೂ ಹೋಗ್ತಿರಲಿಲ್ಲ. ಮನಸಿಗೆ ಖುಷಿ ಅನಿಸ್ತು ಅಷ್ಟೇ. ಇಷ್ಟ ಆದವ್ರು ಇಷ್ಟ ಅಂತ ಹೇಳ್ತಿದ್ರು. ಇಷ್ಟ ಆಗಿಲ್ಲ ಅಂದ್ರ, ಆಗಿಲ್ಲ ಎನ್ನುತ್ತಿದ್ರು. ಅದನ್ನ ನಾನೂ ತಿದ್ದಿಕೊಂಡ ಬರಾಕತ್ತೇನಿ. ಈಗಲೂ ಆ ತಿದ್ದಿಕೊಳ್ಳುವ ಕೆಲಸ ಮುಂದುವರದೇತಿ"
ಟ್ರೆಂಡ್ ನೋಡ್ಕೊಂಡು ಕಾನ್ಸೆಪ್ಟ್ ಕ್ರಿಯೇಟ್
"ಮೊದ ಮೊದಲ ಮನ್ಯಾಗ ನಾವೂ ಇದರ ಸಲುವಾಗಿ ಹೆಚ್ಚಿನ ಬೈಗಳ ತಿಂದೇವಿ. ಯಾಕಂದ್ರ ನಮ್ದ ಅಂಗಡಿ ಇರೋದ್ರಿಂದ, ಅಂಗಡ್ಯಾಗ ಕುಂದ್ರೋದ ಬಿಟ್ಟು ವಿಡಿಯೋ ಸಲುವಾಗಿ ಹೊರಗ ಹುಡುಗುರ ಜೊತಿ ಹೋಗಿಬಿಡ್ತಿದ್ದೆ. ಆದಾದ ಮೇಲೆ ಚೋಲೋ ಕಾಣಿಸ್ತು. ಖುಷಿ ಪಟ್ರು. ಇದೆಲ್ಲದರ ನಡುವ ಸದ್ಯ ಏನು ಟ್ರೆಂಡಿಂಗ್ ಇರತೇತಿ ಅದರ ಮೇಲೆ ಸಾಕಷ್ಟು ಹಾಡು ಬರೆದಿದ್ದೆ. ಮಹಾದಾಯಿ ಹೋರಾಟದ ಇರಬೋದು, ನೋಟ್ ಬ್ಯಾನ್ ಆದಾಗ, ಜೀಯೋ ಸಿಮ್ ಬಂದಾಗ.. ಅದರ ಮ್ಯಾಲೂ ಹಾಡು ಬರದಿದ್ದೆ. ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಅದಾದ ಮೇಲೆ "ಮೂಲವಾದಿ" ಆಲ್ಬಂ ಹಾಡೂ ಬರೆದಿದ್ದೆ. ಅದಕ್ಕೂ ನಾನೇ ಕಾನ್ಸೆಪ್ಟ್ ಬರೆದಿದ್ದೆ. ಫ್ರೆಂಡ್ಸ್ ಎಲ್ಲ ಸೇರಿ ಆ ಹಾಡ ಮಾಡಿದ್ವಿ"
ನಮ್ದು ಆರ್‌ಸಿಬಿದು ಬಿಡಿಸಲಾಗದ ನಂಟು..
"ಆರ್‌ಸಿಬಿ ಪಂದ್ಯಕ್ಕೂ ನಮಗೂ ಅದು ಬಿಡಿಸಲಾಗದ ಬಂಧ. ನಾಲ್ಕು ಐದು ವರ್ಷದ ಹಿಂದ ಮೊದಲ ವಿಡಿಯೋ ಮಾಡಿದ್ದೆ.. ಆವಾಗ ನಮ್ಮ ಟೀಮ್ ಸ್ಟ್ರಾಂಗ್ ಇರಲಿಲ್ಲ. ಹಂಗಾಗಿ ಟಿವಿ ಮುಂದ ಕುಂತ ದೃಷ್ಟಿ ತೆಗಿಬೇಕು ಅನ್ನೋ ಕಾನ್ಸೆಪ್ಟ್ ಬಂದಿತ್ತು. ನಮ್ ಫ್ರೆಂಡ್‌ಗೆ ಹೇಳಿದ್ದೆ. ಅವ ಮಾಡ್ಲಿಲ್ಲ. ನಾನೇ ಆ ವಿಡಿಯೋ ಮಾಡಿದ್ಯಾ. ಫುಲ್ ವೈರಲ್ ಆಯ್ತು. ಅದಾದ ಮೇಲೆ ಪ್ರತಿ ವರ್ಷ ವಿಡಿಯೋ ಮಾಡ್ತಾ ಬಂದೆ. ಹೋದ ವರ್ಷದಿಂದ ಮ್ಯಾಚ್ ರಿವ್ಯೂ ಮಾಡಾಕತ್ತೇನೆ. ನಮ್ಮ ಉತ್ತರಕರ್ನಾಟಕ ಭಾಗದಾಗ ನಮ್ಮ ಭಾಷೆವೊಳಗ ಅದನ್ನ ಮಾಡಕೊಂತ ಬಂದೇನಿ.. ಮ್ಯಾಚ್ ಮುಗದಮ್ಯಾಲೆ ರಾತ್ರಿ ಎಷ್ಟೇ ತಡವಾದ್ರೂ ನನ್ನ ರಿವ್ಯೂವ್‌ಗೆ ಕಾಯೋ ಮಂದಿ ನೋಡಿ ಭಾಳ ಖುಷಿಯಾಯ್ತು.... "
ಪಾರ್ಟ್ 2 ಸಂದರ್ಶನದಲ್ಲಿ ಏನಿರಲಿದೆ...
ಸೋಷಿಯಲ್ ಮೀಡಿಯಾದಿಂದ ಪ್ರಕಾಶ್ ಆರ್ ಕೆ ಅವರ ತಿಂಗಳ ಆದಾಯವಷ್ಟು.. ?
ಪ್ರಕಾಶ್ ಅವರ ಸಾವಜಿ ಖಾನಾವಳಿ ಕೆಲಸ ಹೇಗಿದೆ..
ಗಾನಯೋಗಿ ಸಂಘದಿಂದ 15 ಜನರ ತಂಡದ ಕೆಲಸಗಳು ಹೇಗೆ ನಡೆಯುತ್ತಿವೆ.
ಪ್ರಕಾಶ್ ಮತ್ತವರ ತಂಡದ ಮುಂದಿನ ಪ್ಲಾನ್ ಏನು?
ಪ್ರಕಾಶ್‌ಗೆ ಸಿನಿಮಾದಲ್ಲಿ ನಟಿಸುವ ಪ್ಲಾನ್ ಇದೆಯೇ? ಆ ಬಗ್ಗೆ ಅವರು ಹೇಳುವುದೇನು?
ಫೇಸ್‌ಬುಕ್, ಇನ್‌ಸ್ಟಾ, ಯೂಟ್ಯೂಬ್... ಫಾಲೋವರ್ಸ್ ಸಂಖ್ಯೆ ಎಷ್ಟು..