ಮಗು ದತ್ತು ಪ್ರಕರಣ: ಸೋನು ಶ್ರೀನಿವಾಸ್ ಗೌಡರ ಕಾರಿಗೆ ಗ್ರಾಮಸ್ಥರ ಮುತ್ತಿಗೆ, ಸಂಕಷ್ಟದಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್
Mar 24, 2024 04:32 PM IST
ಮಗು ದತ್ತು ಪ್ರಕರಣ: ಸೋನು ಶ್ರೀನಿವಾಸ್ ಗೌಡರ ಕಾರಿಗೆ ಗ್ರಾಮಸ್ಥರ ಮುತ್ತಿಗೆ
- Sonu Srinivas Gowda: ಅಕ್ರಮವಾಗಿ ಮಗುವನ್ನು ದತ್ತು ತೆಗೆದುಕೊಂಡು ಪೊಲೀಸರ ಕಸ್ಟಡಿಯಲ್ಲಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡರ ಕಾರಿನ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದಾರೆ. ಬಾಲಕಿಯ ಗ್ರಾಮದಲ್ಲಿ ಸ್ಥಳ ಮಹಜರು ನಡೆಸಲು ಕರೆದುಕೊಂಡು ಬಂದ ಸಮಯದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮಗುವನ್ನು ಅಕ್ರಮವಾಗಿ ದತ್ತು ಪಡೆದು ಆ ವಿಚಾರವನ್ನು ರೀಲ್ಸ್‌ನಲ್ಲಿ ಹಂಚಿಕೊಂಡಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಈಗ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರು ನಡೆಸಲು ಕರೆದುಕೊಂಡು ಬಂದ ವೇಳೆ ಗ್ರಾಮಸ್ಥರು ಕೋಪದಿಂದ ಶ್ರೀನಿವಾಸಗೌಡರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಾರಿಗೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ ಎಂದೂ ವರದಿಯಾಗಿದೆ.
ಬಾಲಕಿಯ ಮನೆ, ಬಾಲಕಿ ಓಡಾಡಿದ ಸ್ಥಳಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸ್ಥಳ ಮಹಜರು ಮಾಡಲು ಸೋನು ಗೌಡರನ್ನು ಪೊಲೀಸರು ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಸೋನು ಕಾರಿಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಸೋನು ತಪ್ಪಿಸಿಕೊಂಡರೂ ಗ್ರಾಮಸ್ಥರು ಸಾಧ್ಯವಿರುವಷ್ಟು ದೂರ ಕಾರನ್ನು ಬೆನ್ನಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಅವರು ಬಾಲಕಿಯನ್ನು ದತ್ತು ಪಡೆದಿರುವ ವಿಚಾರದ ಕುರಿತು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ನ್ಯಾಯಾಲಯದಿಂದ ಕಸ್ಟಡಿಗೆ ಪಡೆದಿರುವ ಪೊಲೀಸರು ಬಾಲಕಿಯ ಪೋಷಕರನ್ನೂ ವಿಚಾರಣೆ ನಡೆಸಲಿದ್ದಾರೆ. ಬಾಲಕಿಯ ಪೊಲೀಸರಿಗೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ. ಬಾಲಕಿಯ ಬಡ ಪೋಷಕರಿಗೆ ಆಗಿರುವ ತೊಂದರೆಯೂ ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
"ಮಗುವನ್ನು ನಾವು ದತ್ತು ನೀಡಿಲ್ಲ. ನಮಗೆ ಯಾವುದೇ ಹಣವನ್ನೂ ನೀಡಲಾಗಿಲ್ಲ. ಮಗಳನ್ನು ಚೆನ್ನಾಗಿ ಓದಿಸ್ತಿನಿ, ಚೆನ್ನಾಗಿ ಸಾಕ್ತೇನೆ ಎಂದು ಕರೆದುಕೊಂಡು ಹೋಗಿದ್ದಾರೆ" ಎಂದು ಬಾಲಕಿಯ ಚಿಕ್ಕಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಏನಿದು ಪ್ರಕರಣ?
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರು ಎಂಟು ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದಿರುವುದಾಗಿ ರೀಲ್ಸ್ ಮಾಡಿದ್ದರು. ಈಕೆ ಮಗುವನ್ನು ಕಾನೂನುಬಾಹಿರವಾಗಿ ದತ್ತು ತೆಗೆದುಕೊಂಡಿದ್ದಾರೆ ಎಂದು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಜೆಜೆ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದರು. ಮಕ್ಕಳ ಕಲ್ಯಾಣ ಇಲಾಖೆಯೂ ಈಕೆಯ ವಿರುದ್ಧ ದೂರು ದಾಖಲಿಸಿತ್ತು.
ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದಿರುವುದು, ದತ್ತು ಪಡೆದಿರುವ ಮಗುವನ್ನು ಪ್ರಚಾರಕ್ಕೆ ಬಳಸಿರುವುದು, ದತ್ತು ಪಡೆಯಲು ಸೂಕ್ತ ನಿಯಮ ಅನುಸರಿಸದೆ ಇರುವುದು ಇತ್ಯಾದಿ ಹಲವು ಆರೋಪಗಳು ಸೋನು ಗೌಡರ ಮೇಲಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅವಿವಾಹಿತರು ಮಕ್ಕಳನ್ನು ದತ್ತು ಪಡೆದುಕೊಳ್ಳಬಹುದೇ?
ಅವಿವಾಹಿತ ಪುರುಷ ಅಥವಾ ಮಹಿಳೆ ಮಗುವನ್ನು ದತ್ತು ಪಡೆದುಕೊಳ್ಳಲು ಭಾರತದ ಕಾನೂನಿನಲ್ಲಿ ಅವಕಾಶವಿದೆ. ಮಗು ಮತ್ತು ದತ್ತು ಪಡೆಯುವವರ ನಡುವೆ 21 ವರ್ಷದ ಅಂತರ ಸೇರಿದಂತೆ ಹಲವು ನಿಯಮಗಳು ಇವೆ. ಇದೇ ರೀತಿ ದತ್ತು ಪಡೆಯುವ ಅವಿವಾಹಿತ ಪುರುಷ ಅಥವಾ ಮಹಿಳೆಯ ವಯಸ್ಸು 30 ವರ್ಷದ ಮೇಲಿರಬೇಕು. ಮಕ್ಕಳನ್ನು ದತ್ತು ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿವರವಾದ ಮಾಹಿತಿ ಪಡೆಯಲು ಹಿಂದೂಸ್ತಾನ್ ಟೈಮ್ಸ್ ಕನ್ನಡ ಬರೆದಿರುವ ವಿವರವಾದ ಲೇಖನ "ಕರ್ನಾಟಕದಲ್ಲಿ ದತ್ತು ಸ್ವೀಕಾರ ಪ್ರಕ್ರಿಯೆ ಹೇಗಿದೆ, ನಟಿ ಸೋನು ಶ್ರೀನಿವಾಸಗೌಡ ಎಡವಿದ್ದು ಎಲ್ಲಿ" ಓದಬಹುದು.