logo
ಕನ್ನಡ ಸುದ್ದಿ  /  ಮನರಂಜನೆ  /  Prakash Rk Interview Part 2: ಜಾಲತಾಣದ ಆದಾಯದ ಬಗ್ಗೆ ಹೇಳ್ಕೊಂಡು "ನಮ್‌ ಉತ್ಸಾಹ ಕೊಲ್ಲಬ್ಯಾಡ್ರಿ..ʼ ಅಂದ್ರು ಯೂಟ್ಯೂಬರ್‌ ಪ್ರಕಾಶ್‌ R K

Prakash RK Interview Part 2: ಜಾಲತಾಣದ ಆದಾಯದ ಬಗ್ಗೆ ಹೇಳ್ಕೊಂಡು "ನಮ್‌ ಉತ್ಸಾಹ ಕೊಲ್ಲಬ್ಯಾಡ್ರಿ..ʼ ಅಂದ್ರು ಯೂಟ್ಯೂಬರ್‌ ಪ್ರಕಾಶ್‌ R K

Sep 08, 2022 02:36 PM IST

google News

ಜಾಲತಾಣದ ಆದಾಯದ ಬಗ್ಗೆ ಹೇಳ್ಕೊಂಡು "ನಮ್‌ ಉತ್ಸಾಹ ಕೊಲ್ಲಬ್ಯಾಡ್ರಿ..ʼ ಅಂದ್ರು ಯೂಟ್ಯೂಬರ್‌ ಪ್ರಕಾಶ್‌ ಆರ್‌ಕೆ..

    • ಸೋಷಿಯಲ್‌ ಮೀಡಿಯಾದಲ್ಲಿ ಕೇವಲ ರೀಲ್ಸ್‌ ಮಾಡುವುದಷ್ಟೇ ಅಲ್ಲ, ಸೋಷಿಯಲ್‌ ವರ್ಕ್‌ ಸಹ ಪ್ರಕಾಶ್‌ ಆರ್‌ ಕೆ ಮತ್ತವರ ತಂಡದಿಂದ ನಡೆಯುತ್ತಿದೆ. ಗಾನಯೋಗಿ ಸಂಘ ಕಟ್ಟಿಕೊಂಡು ಸರ್ಕಾರಿ ಶಾಲೆ, ಪುರಾತನ ಕೆರೆಗಳ ಜೀರ್ಣೋದ್ಧಾರ ಸೇರಿ ಹತ್ತು ಹಲವು ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಜಾಲತಾಣದ ಆದಾಯದ ಬಗ್ಗೆ ಹೇಳ್ಕೊಂಡು "ನಮ್‌ ಉತ್ಸಾಹ ಕೊಲ್ಲಬ್ಯಾಡ್ರಿ..ʼ ಅಂದ್ರು ಯೂಟ್ಯೂಬರ್‌ ಪ್ರಕಾಶ್‌ ಆರ್‌ಕೆ..
ಜಾಲತಾಣದ ಆದಾಯದ ಬಗ್ಗೆ ಹೇಳ್ಕೊಂಡು "ನಮ್‌ ಉತ್ಸಾಹ ಕೊಲ್ಲಬ್ಯಾಡ್ರಿ..ʼ ಅಂದ್ರು ಯೂಟ್ಯೂಬರ್‌ ಪ್ರಕಾಶ್‌ ಆರ್‌ಕೆ.. (Instagram/ Prakash R K)

ನಮಸ್ಕಾರ್‌ ದೊಡ್‌ ಮಂದಿಗೆ...

ಯೂಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌.. ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕಿರು ಕಂಟೆಂಟ್‌ ಮತ್ತು ಸಮಾಜ ಸೇವೆಯ ಮೂಲಕವೇ ಜನಪ್ರಿಯರಾದವರು ಪ್ರಕಾಶ್‌ ಆರ್‌ಕೆ ( Prakash R K ). ಮೂಲ ಗದಗದ ಈ ಪ್ರತಿಭೆ, ಸದ್ಯ ವಿಜಯಪುರದಲ್ಲಿ ಇಡೀ ಕುಟುಂಬದ ಜತೆ ನೆಲೆಸಿದ್ದಾರೆ. ವೃತ್ತಿಯಲ್ಲಿ ಸಾವಜಿ ಖಾನಾವಳಿ (ಮಾಂಸಾಹಾರ) ನಡೆಸುತ್ತಿದ್ದಾರೆ. ರೀಲ್ಸ್‌, ಕಿರು ಕಂಟೆಂಟ್‌ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್‌ ಸಹ ಹೊಂದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಕೇವಲ ರೀಲ್ಸ್‌ ಮಾಡುವುದಷ್ಟೇ ಅಲ್ಲ, ಸೋಷಿಯಲ್‌ ವರ್ಕ್‌ ಸಹ ಇವರ ತಂಡದಿಂದ ನಡೆಯುತ್ತಿದೆ. ಗಾನಯೋಗಿ ಸಂಘ ಕಟ್ಟಿಕೊಂಡು ಸರ್ಕಾರಿ ಶಾಲೆ, ಪುರಾತನ ಕೆರೆಗಳ ಜೀರ್ಣೋದ್ಧಾರ ಸೇರಿ ಹತ್ತು ಹಲವು ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅಚ್ಚರಿ ಏನೆಂದರೆ, 15 ಜನರ ತಂಡವೇ ತಾವೇ ಹಣ ಹೊಂದಿಸಿಕೊಂಡು ಈ ಕೆಲಸ ಮಾಡುತ್ತಿದ್ದಾರೆ. Hindustan Times Kannada ದ ಜತೆಗೆ ತಮ್ಮ ಕಿರು ಸೇವೆಯ ಬಗ್ಗೆ ಪ್ರಕಾಶ್‌ ಆರ್‌ಕೆ ಹಂಚಿಕೊಂಡ ವಿವರ ಇಲ್ಲಿದೆ..

ಗಾನಯೋಗಿ ಸಂಘದಿಂದ ಸಮಾಜಮುಖಿ ಕೆಲಸ...

ಈ ವಿಡಿಯೋ ಹೆಂಗ್‌ ಮಾಡ್ಕೋಂತ ಬಂದ್ನೋ.. ಹಂಗ ಸಮಾಜಕ್ಕ ಏನಾದ್ರೂ ಮಾಡಬೇಕ ಅನ್ಕೊಂಡಿದ್ದೆ. ಬಾಯಿ ಮಾತಿಂದ ಹೇಳೋದ್ ಬ್ಯಾಡ.. ಅದನ್ನ ಈವರೆಗೂ ಎಲ್ಲಿಯೂ ಹೇಳಕೊಂತಲೂ ಬಂದಿಲ್ಲ. ಹಂಗ್‌ ಮಾಡ್ರಿ, ಹಿಂಗ್‌ ಮಾಡ್ರಿ ಅಂತ ಗೈಡ್‌ ಮಾಡೋ ಮುಂಚೆ ನಾವ್ ಮಾಡೋದ್‌ ಭಾಳ್‌ ಚೋಲೋ.. ಅದು ಅಂದುಕೊಂಡಂಗೆ ನಡ್ಯಾತೇತಿ. ಮೊದಲಿಂದಲೂ ಸಮಾಜಕ್ಕ ಏನಾದರೂ ಒಂದ್‌ ಕೆಲಸ ಮಾಡಬೇಕು ಅನ್ನೋ ಪ್ಲಾನ್‌ ಬಂದಾಗ, ನನ್ನ ಗ್ರೂಪ್‌ಗೆ ಈ ವಿಚಾರ ಹೇಳಿಕೊಂಡ್ಯಾ. ಎಲ್ಲಾರ್ಗೂ ಕಾನ್ಸೆಪ್ಟ್‌ ಇಷ್ಟಾಆಯ್ತು. ಆ ಕೆಲಸಕ್ಕೆ ಗಾನಯೋಗಿ ಸಂಘ ಎಂಬ ಹೆಸರೂ ಕೊಟ್ವಿ. ನಾವೆಲ್ಲರೂ ಗದಗ ಪುಟ್ಟರಾಜ ಗವಾಯಿ ಅಜ್ಜಾರ ಭಕ್ತರು. ಅವರ ಹೆಸರಲ್ಲಿ ಈ ಸಣ್ಣ ಕೆಲಸ ಶುರುಮಾಡಿದ್ವಿ. ಈಗ ಈ ಸಂಘ ಕಟ್ಟಿ ಸುಮಾರು ಐದು ವರ್ಷ ಆಯ್ತು..

ಈ ಕೆಲಸಕ್ಕ ಯಾವುದೇ ಗಣ್ಯರಿಂದ ಒಂದೇ ಒಂದು ರೂಪಾಯಿ ಇಸ್ಕೊಂಡಿಲ್ಲ..

"ಈ ಸಂಘದ ಹೆಸರಿನಲ್ಲಿ ನಾವು ಇಲ್ಲಿಯವರೆಗೂ ಪುರಾತನ ಭಾವಿ, ಕನ್ನಡ ಶಾಲೆ, ಬಿಜಾಪುರದ ಐತಿಹಾಸಿಕ ಕೆರೆಗಳು, ಸಿಟಿ ಬಸ್‌ಸ್ಟಾಪ್‌.. ಹೀಗೆ ಎಲ್ಲ ಥರದ ಕೆಲಸ ಮಾಡಕೊಂತ ಬಂದೆವಿ. ಇದಕ್ಕೆ ಅಂತ ನಾವು ರಾಜಕೀಯ ವ್ಯಕ್ತಿಗಳು, ರಾಜಕೀಯ ಹೊರತುಪಡಿಸಿ ಯಾವುದೇ ವ್ಯಕ್ತಿಗಳಿಂದ ಒಂದೇ ಒಂದು ರೂಪಾಯಿ ಫಂಡ್‌ ಇಸ್ಕೊಂಡಿಲ್ಲ. ನಮ್‌ ಕೈಯಿಂದ ನಾವ ರೊಕ್ಕ ಹಾಕಿ ಈ ಕೆಲಸ ಮಾಡಾಕತ್ತೇವಿ. ವರ್ಷಕ್ಕೆ ಏನಿಲ್ಲ ಅಂದರೂ 6 ಲಕ್ಷ ಖರ್ಷು ಆಗ್ತೇತಿ. ಅದೆಲ್ಲವನ್ನೂ ನಾವೇ ಹೊಂದಸ್ತೇವಿ"

ನಾವ್ಯಾರೂ ಶ್ರೀಮಂತರಿಲ್ರಿ..

"ನಮ್ಮ ಗ್ರೂಪ್‌ನಲ್ಲಿ ಯಾರೂ ಶ್ರೀಮಂತರಿಲ್ರಿ.. ಒಬ್ಬವ ಆಟೋ ಹೊಡದ್ರ, ಇನ್ನೋಬ್ಬವ ಸ್ಕೂಲ್‌ ವ್ಯಾನ್‌ ಡ್ರೈವರ್‌ ಅದಾನ.. ಇನ್ನೊಬ್ಬವ ಪೇಂಟರ್‌, ನಾನು ಹೊಟೇಲ್‌ ಕೆಲಸ ಮಾಡತೇನಿ.. ನಮ್ಮ ಕೈಯಿಂದ ಎಷ್ಟು ನೀಗುತ್ತೋ ಅಷ್ಟು ಈ ಕೆಲಸ ಮಾಡಕೊಂತ ಹೊಂಟೇವಿ. ಎಲ್ಲಿ ಕೆಲಸ ಮಾಡಬಹುದು ಅನ್ನೋದನ್ನ ಮೊದಲು ನೋಡ್ತೇವಿ. ಆ ಸ್ಥಳಕ್ಕೆ ಭೇಟಿ ಕೊಡ್ತೇವಿ. ಅಲ್ಲಿ ಅದರ ಪರಿಸ್ಥಿತಿ ನೋಡಿ ಎಷ್ಟು ಹಣ ಖರ್ಚಾಗಬಹುದು? ಎಷ್ಟು ದಿನ ಬೇಕಾಗಬಹುದು? ಆಮೇಲೆ ನಾವ್ ನಾವೇ ಹಣವನ್ನು ಜಮಾ ಮಾಡ್ತೇವಿ. ಅದಕ್ಕೆ ಟೈಮ್‌ ಹಿಡಿತೇತಿ. ಒಂದ ತಿಂಗಳ ಆಗಬಹುದು, ದಿಡ್‌ ತಿಂಗಳೂ ಹಿಡಿಬಹುದು.. ನಮ್ಮದು 15 ಜನರ ಟೀಮ್‌. ನಾನ್‌ ಒಂದ್‌ 10 ಸಾವಿರ ದುಡದೇನಿ ಅಂದ್ರ, ಅದ್ರಾಗ 2 ಸಾವಿರ ಈ ಕೆಲಸಕ್ಕ ತೆಗೆದ ಇಡತೇನಿ. ಎಲ್ಲರೂ ಹಿಂಗ ಮಾಡ್ತೇವಿ. ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಶಾಲೆಯ ಮೇಲಿನ ಪೂರ್ತಿ ಸ್ಲ್ಯಾಬ್‌ ಬಿದ್ದರೂ ಅದನ್ನು ನಮ್ಮ ತಂಡವೇ ನಿಂತು ನಿರ್ಮಾಣ ಮಾಡಬೇಕು.. ಆ ಮಟ್ಟಿಗೆ ಎಲ್ಲರೂ ಬೆಳಿಬೇಕು ಅನ್ನೋ ಪ್ಲಾನ್‌ ಇದೆ.. ‌

ಸಿನಿಮಾ ಗಿನಿಮಾ ನಮಗ ಒಗ್ಗೋದಿಲ್ರಿ..

"ಸಿನಿಮಾ ವಿಚಾರದಾಗ ನಾನ್ ಸ್ವಲ್ಪ ಹಿಂದ ಅದೇನಿ. ಯಾಕಂದ್ರ ನಮಗ ಸಿನಿಮಾ ಮಾಡೋ ಆಸಕ್ತಿ ಇಲ್ವೇ ಇಲ್ಲ.. ಆ ಕ್ಯಾಪ್ಯಾಸಿಟಿಯೂ ನಮಗಿಲ್ಲ. ನಮ್ಮ ಕ್ಯಾಪ್ಯಾಸಿಟಿಗೆ ಒಂದು ಕಿರುಚಿತ್ರ ಮಾಡಬಹುದು. ನಮ್ಮ ಲೋಕಲ್‌ ಟೆಕ್ನಿಷಿಯನ್ಸ್‌, ಇಲ್ಲಿಯ ಇಕ್ವಿಪ್‌ಮೆಂಟ್‌ ಬಳಸಿಕೊಂಡು ಶಾರ್ಟ್‌ ಸಿನಿಮಾ ಮಾಡಬಹುದು. ಈಗಾಗಲೇ ನಮ್ಮ ಕಿರುಚಿತ್ರ ದಕ್ಷಿಣ ಕರ್ನಾಟಕ ಭಾಗಕ್ಕೂ ರೀಚ್‌ ಆಗಿವೆ. ನಮ್ಮ ಕಡೆಯಲ್ಲಿ ಹೇಳಲಾರದ ಒಂದಷ್ಟು ಸೂಕ್ಷ್ಮ ವಿಚಾರ ಅದಾವು. ಅದನ್ನ ಕಿರುಚಿತ್ರದ ಮೂಲಕ ಮಾಡೋ ಪ್ಲಾನ್‌ ಐತಿ"

ನಮ್‌ ಉತ್ಸಾಹ ಕೊಲ್ಲಬ್ಯಾಡ್ರಿ..

"ನಮ್ಮ ಇಡೀ ತಂಡ ಸಾವಿರಾರು ರೂಪಾಯಿ ಖರ್ಚು ಮಾಡಿ, ಒಳ್ಳೊಳ್ಳೆ ಕೆಲಸ ಮಾಡಕೊಂತ ಬರಾಕತ್ತೇವಿ. ಆದ್ರ ನಮ್ಮ ಉತ್ಸಾಹ ಕೊಲ್ಲೂ ಕೆಲಸಾನೂ ನಡ್ಯಾಕತ್ತೇತಿ. ಅದೆಂಗಪಾ ಅಂದ್ರ, ನೋಡ್ರಿ ನಾವ್‌ ಒಂದ್‌ ಬಸ್‌ಸ್ಟ್ಯಾಂಡ್‌ ಕ್ಲೀನ್‌ ಮಾಡಿ, ಅದಕ್ಕ ಸುಣ್ಣ ಬಣ್ಣ ಬಳದು, ಕವಿಗಳು, ದೇಶಭಕ್ತರ ಭಾವಚಿತ್ರ ಬರೆದು ಬಂದ್ರ, ಜನ ಅದನ್ನ ಹಾಳ ಮಾಡಾಕ ನಿಂತಾರ. ಎಲ್ಲಿ ಬೇಕಲ್ಲಿ ಉಗಳೋದು, ಗೋಡೆ ಮ್ಯಾಲ ಅಶ್ಲೀಲವಾಗಿ ಬರಿಯೋದು ಮಾಡಾಕತ್ತಾರ. ಇದರಿಂದ ಏನ್‌ ಆಗ್ತೇತಿ ಅಂದ್ರ, ಸಾಕ್‌ ಮಾರಾಯ ಇವನೌನ್..‌ ಎಷ್ಟ ಮಾಡಿದ್ರೂ ಅಷ್ಟ ಅಲ್ಲ.. ಅಂತ ಅನಿಸಿ ಬಿಡ್ತೇತಿ.. ಹಾಗಾಗಿ ಜನ್ರಿಗೆ ನಮ್ಮ ತಂಡದ ವತಿಯಿಂದ ಬೇಡಿಕೊಳ್ಳೋದ್‌ ಏನಂದ್ರ, ನೀವಂತೂ ಮಾಡುವುದಿಲ್ಲ, ಹಂಗ ಮಾಡಿದ್ದ ಕೆಲಸವನ್ನಾದ್ರೂ ಚಂದಗ ಇಟ್ಕೋರಿ, ಹಾನಿ ಮಾಡಬ್ಯಾಡ್ರಿ ಅಂತೇನಿ..

ಸೋಷಿಯಲ್‌ ಮೀಡಿಯಾ ಗಳಿಕೆ ಎಷ್ಟು...?

ಸೋಷಿಯಲ್‌ ಮೀಡಿಯಾ ವಿಚಾರಕ್ಕೆ ಬಂದ್ರ, ಯೂಟ್ಯೂಬ್‌ ಒಳಗ ನಾಲ್ಕೂವರೆ ಲಕ್ಷ ಫಾಲೋವರ್ಸ್‌ ಅದಾರ್ರಿ, ಫೇಸ್‌ಬುಕ್‌ ಎರಡೂವರೆ ಲಕ್ಷ ಮತ್ ಇನ್‌ಸ್ಟಾಗ್ರಾಂ ಒಳಗ ಎರಡು ಲಕ್ಷ ಫಾಲೋವರ್ಸ್‌ ಅದಾರ್ರಿ.. ಇಷ್ಟೆಲ್ಲ ಮಂದಿ ಇಟ್ಕೊಂಡು ತಿಂಗಳಿಗೆ ಲಕ್ಷ ಲಕ್ಷ ದುಡೀತಿ ಅಂತ ಸಾಕಷ್ಟ ಮಂದಿ ಹೇಳ್ತಾರ್.‌ ಆದರ ವಾಸ್ತವ ಬ್ಯಾರೇನ್‌ ಐತಿ. ಒಂದು ರೋಡ್‌ ಸೈಡ್‌ ಅಂಗಡಿ ಇಟ್ರ ವ್ಯಾಪಾರ ಆಗ್ತೇತಿ ಅನ್ನೋ ಗ್ಯಾರಂಟಿ ಇರತೇತಿ.. ಸಮಾಧಾನ ಇರತೇತಿ... ಆದ್ರ ಎಲ್ಲಕ್ಕಿಂತ ಕಷ್ಟದ ಕೆಲಸ ಅಂದ್ರ ಈ ಯೂಟ್ಯೂಬ್‌ ಮತ್ತ ಸೋಷಿಯಲ್‌ ಮೀಡಿಯಾ! ಹಾಗಂತ ನನಗೇನೂ ಅದರಿಂದ ಬರಾಕತ್ತಿಲ್ಲ ಅಂತ ನಾನ್‌ ಹೇಳೂದಿಲ್ಲ. ಅದರಿಂದ ಬಂದಿದ್ದ ಅಮೌಂಟ್‌ ಅದಕ್ಕ ಹಾಕ್ತೇನಿ.. ಅಂದ್ರ ನಮ್ಮ ಈ ಸಂಘದ ಕೆಲಸಕ್ಕ ಹಾಕ್ತೇನಿ"

ಪ್ರಕಾಶ್‌ ಆರ್‌ ಕೆ ಅವರ ಸಂದರ್ಶನದ ಮೊದಲ ಭಾಗ ಇಲ್ಲಿದೆ..

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ