logo
ಕನ್ನಡ ಸುದ್ದಿ  /  ಮನರಂಜನೆ  /  Shrimanta Movie Poster Released: ಸೋನುಸೂದ್‌ ಈಗ ರೈತ...'ಶ್ರೀಮಂತ' ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆ ಬಿಡುಗಡೆ

Shrimanta Movie Poster released: ಸೋನುಸೂದ್‌ ಈಗ ರೈತ...'ಶ್ರೀಮಂತ' ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆ ಬಿಡುಗಡೆ

HT Kannada Desk HT Kannada

Sep 29, 2022 02:17 PM IST

google News

'ಶ್ರೀಮಂತ' ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆ ಬಿಡುಗಡೆ

    • ಚಿತ್ರದಲ್ಲಿ ಸೋನುಸೂದ್‌ಗೆ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟ್ವರ್ಧನ್ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಸೋನುಸೂದ್‌ ನೊಗ ಹೊತ್ತ ರೈತನ ಪಾತ್ರದಲ್ಲಿ ನಟಿಸಿದ್ದಾರೆ.
'ಶ್ರೀಮಂತ' ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆ ಬಿಡುಗಡೆ
'ಶ್ರೀಮಂತ' ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆ ಬಿಡುಗಡೆ

ರಿಯಲ್‌ ಹೀರೋ ಸೋನು ಸೂದ್‌ ಅವರನ್ನು ನಾವು ವಿಭಿನ್ನ ಪಾತ್ರಗಳಲ್ಲಿ ನೋಡಿದ್ದೇವೆ. ಅದರಲ್ಲಿ ಅವರು ಬಹುತೇಕ ಅಭಿನಯಿಸಿರುವುದು ವಿಲನ್‌ ಪಾತ್ರಗಳಲ್ಲಿ. ಆದರೆ ಇದೇ ಮೊದಲ ಬಾರಿಗೆ ಸೋನುಸೂದ್‌ ನೊಗ ಹೊತ್ತ ರೈತನ ಪಾತ್ರದಲ್ಲಿ ನಟಿಸಿದ್ದಾರೆ. ಇಂದು ಈ ಚಿತ್ರದ ಪೋಸ್ಟರ್‌ ಹಾಗೂ ರೈತ ಗೀತೆ ಕೂಡಾ ಬಿಡುಗಡೆ ಆಗಿದೆ.

ಪ್ರಪಂಚ ಎಷ್ಟೇ ಮುಂದುವರೆದರೂ ನಮ್ಮ ಪ್ರಾಣ ಉಳಿಸುವುದು ರೈತ ಬೆಳೆಯುವ ಬೆಳೆ. ಇಂಥಹ ಕಥಾಹಂದರವನ್ನು ಒಳಗೊಂಡಿರುವ ರೈತನ ಕುರಿತಾದ ಬದುಕು, ಬವಣೆಗಳೊಂದಿಗೆ, ಹಳ್ಳಿಯ ಸೊಗಡು, ಗ್ರಾಮೀಣ ಕಲೆಗಳು, ಸ್ನೇಹ, ಪ್ರೀತಿ, ಬಾಂಧವ್ಯ ಹೀಗೆ ಎಲ್ಲಾ ಅಂಶಗಳನ್ನು ಬೆಸೆದುಕೊಂಡು ತೆರೆಮೇಲೆ ಬರಲು ಸಿದ್ಧವಾಗುತ್ತಿದೆ 'ಶ್ರೀಮಂತ' ಸಿನಿಮಾ.

ಗೋಲ್ಡನ್ ರೈನ್ ಮೂವೀಸ್ ಬ್ಯಾನರ್‌ ಅಡಿಯಲ್ಲಿ ಜಿ .ನಾರಾಯಣಪ್ಪ ವಿ. ಸಂಜಯ್ ಬಾಬು ಹಾಗೂ ಹಾಸನ್ ರಮೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಹಾಸನ ರಮೇಶ್‌ ವಹಿಸಿಕೊಂಡಿದ್ದಾರೆ. ಗುರುವಾರ, ಈ ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆಯ ಲಿರಿಕಲ್ ವೀಡಿಯೋ ಸಾಂಗ್‌ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ. ಹಂಸಲೇಖ ಹಾಗೂ ಯುವ ರೈತ ಮುಖಂಡರಾದ ಸಂತೋಷ್ ಹಾಗೂ ಚಿರಂತ್ ಆಗಮಿಸಿ ಪೋಸ್ಟರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ರೈತನ ಕುರಿತಾದ 'ಮಳೆ ಮುನಿದರೆ ಸಂತ.. ಜನಪದ ಸಂತ.. ಜನಪದ ಸಂತ... ಎಂಬ ಹಾಡನ್ನು ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ.

ನಂತರ ಮಾತನಾಡಿದ ಹಂಸಲೇಖ, ಇದು ಎಂದೂ ಮರೆಯಲಾಗದ ದಿನವಾಗಿದೆ, ಇಡೀ ಸಭಾಂಗಣಕ್ಕೆ ದೊಡ್ಡ ಕಳೆ ಬಂದಂತೆ ಕಾಣುತ್ತಿದೆ. ಇಲ್ಲಿಗೆ ಬರುತ್ತಿದ್ದಂತೆ ನಾನು ನನ್ನ ದೇವರು ಎಸ್‌ಪಿಬಿಗೆ ಕೈಮುಗಿದೆ. ಹಾಗೆ ಅಪ್ಪುಗೂ ಕೈಮುಗಿದೆ. ಅಪ್ಪು ವಯಸ್ಸಿನಲ್ಲಿ ಚಿಕ್ಕವರಾದರೂ ಸಾಧನೆ ಅಪಾರ. ಅಪ್ಪು ಇಲ್ಲದ ಜಾಗ ಇಲ್ಲವೇ ಇಲ್ಲ. ಯಾವುದೇ ಶುಭ ಸಮಾರಂಭ ಅಥವಾ ಯಾವುದೇ ಕಾರ್ಯ ಎಲ್ಲೇ ಹೋದರೂ ಅಪ್ಪು ಫೋಟೋ ಇಲ್ಲದ ಜಾಗವಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಇಂಥ ಮಹಾನ್ ಸಾಧನೆ ಮಾಡಿ ಎಲ್ಲರ ಮನಸ್ಸಿನ ಭಗವಂತನಾಗಿದ್ದಾನೆ ಅಪ್ಪು ಎಂದು ಗುಣಗಾನ ಮಾಡಿದರು.

ಎಸ್‌ಪಿಬಿ ಬಗ್ಗೆ ಕೂಡಾ ಮಾತನಾಡಿದ ಹಂಸಲೇಖ, ಅವರು ಬಹುತೇಕ ಎಲ್ಲಾ ಭಾಷೆಗಳಲ್ಲೂ ಹಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸಿದ ನನ್ನ ದೇವರು ಹಾಡಿದ ಕೊನೆಯ ಹಾಡು ಈ ರೈತ ಗೀತೆ. ನನ್ನ ಜೀವನದ ಮರೆಯಲಾಗದ ಹಾಡು ಇದಾಗಲಿದೆ. 50 ವರ್ಷಗಳಲ್ಲಿ ಎಸ್‌ಪಿಬಿ ಎಲ್ಲಾ ಭಾಷೆಯಲ್ಲಿ ಹಾಡಿದ್ದಾರೆ ಎಂದರು.

ಚಿತ್ರದಲ್ಲಿ ಸೋನುಸೂದ್‌ಗೆ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟ್ವರ್ಧನ್ ನಟಿಸಿದ್ದಾರೆ. ಉಳಿದಂತೆ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸುರಾಜ್ ಹಾಸನ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ನೀಡಿದ್ದು, ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ, ವಿಜಯ್ ಪ್ರಕಾಶ್, ನವೀನ್ ಸಜ್ಜು, ಅಜಯ್ ವಾರಿಯರ್, ರಘು, ಅಂಕಿತಾ ಕುಂಡು, ಅಮ್ರಪಾಲಿ ಮುಂತಾದವರು ಹಾಡಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ