Soundarya Death Anniversary: ಸೌಂದರ್ಯ ಜಾತಕದಲ್ಲಿತ್ತು ಸಾವಿನ ಮುನ್ಸೂಚನೆ: ನಿರ್ದೇಶಕರೊಬ್ಬರಿಗೆ ಮಗಳ ಭವಿಷ್ಯ ಹೇಳಿದ್ರಂತೆ ಸತ್ಯನಾರಾಯಣ!
Apr 18, 2023 10:24 AM IST
ಬಹುಭಾಷಾ ನಟಿ ಸೌಂದರ್ಯ
- ನೀವು ಇಂದು, ನಾಳಿನ ಅಗ್ರನಟಿಗೆ ಚೆಕ್ ಕೊಡಲು ಹೊರಟಿದ್ದೀರ ಎಂದರು. ಆ ಮಾತು ಕೇಳಿ ನನಗೆ ಒಂದು ಕ್ಷಣ ಗೊಂದಲ ಆಯ್ತು. ಖಂಡಿತ ನಾನು ಪರಿಚಯಿಸುವ ನಟಿ ದೊಡ್ಡ ಸ್ಥಾನಕ್ಕೆ ಬೆಳೆಯಬೇಕೆಂದು ನಾನು ಬಯಸುತ್ತೇನೆ ಎಂದೆ.
ಸೌಂದರ್ಯ, ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲಿ ಅಗ್ರನಟಿಯಾಗಿ ಹೆಸರು ಮಾಡಿದ ಚೆಲುವೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದ ಟಾಪ್ ಹೀರೋಯಿನ್ ಎನಿಸಿಕೊಂಡು ನಾಯಕರಷ್ಟೇ ಸರಿ ಸಮಾನರಾಗಿ ಸಂಭಾವನೆ ಪಡೆಯುತ್ತಿದ್ದ ಸೌಂದರ್ಯ ಇಂದು ನಮ್ಮೊಂದಿಗೆ ಇಲ್ಲ. ಏಪ್ರಿಲ್ 17ಕ್ಕೆ ಈ ತಾರೆ ಮರೆಯಾಗಿ 19 ವರ್ಷಗಳು ತುಂಬಿದೆ.
ಕೆ.ಎಸ್. ಸೌಮ್ಯ, ಚಿತ್ರರಂಗಕ್ಕೆ ಬಂದ ನಂತರ ಸೌಂದರ್ಯ ಎಂದೇ ಹೆಸರಾದರು. ತಂದೆ ಕೆ. ಸತ್ಯನಾರಾಯಣ ಚಿತ್ರರಂಗದಲ್ಲಿ ಬರಹಗಾರನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. 1992 ರಲ್ಲಿ ತೆರೆ ಕಂಡ 'ಗಂಧರ್ವ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸೌಂದರ್ಯ, 'ಮನವರಾಲಿ ಪೆಳ್ಳಿ' ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಗಳಲ್ಲಿ ಕೂಡಾ ನಟಿಸಿದರು. ಅಂದಿನ ಕಾಲದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಸೌಂದರ್ಯ ನಟಿಸಿದ್ದರು.
ಸೌಂದರ್ಯ ನಟಿಸಿದ ಪ್ರತಿ ಸಿನಿಮಾದಲ್ಲೂ ಅವರ ನಟನೆ ಅತ್ಯದ್ಭುತ. ಆದರೆ 'ಆಪ್ತಮಿತ್ರ' ಚಿತ್ರದ ಸೌಂದರ್ಯ ನಟನೆಯನ್ನು ಇಂದಿಗೂ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಆದರೆ ಆ ಚಿತ್ರದ ನಂತರ ಅವರು ನಮ್ಮೆಲ್ಲರನ್ನೂ ಬಿಟ್ಟು ಅಗಲಿದ್ದು ನಿಜಕ್ಕೂ ಆಘಾತಕಾರಿ. ಅವರು ನಿಧನರಾದಾಗ ವಯಸ್ಸು ಕೇವಲ 31. ನಂತರ ಅವರು ಎಲೆಕ್ಷನ್ ಕ್ಯಾಂಪೇನ್ನಲ್ಲಿ ಬ್ಯುಸಿ ಆದರು. 2004 ಏಪ್ರಿಲ್ 17 ರಂದು ಕರೀಂನಗರ್ಗೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಾಗಿ ಅಣ್ಣ ಅಮರ್‌ನಾಥ್ ಅವರೊಂದಿಗೆ ತೆರಳುವಾಗ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ನಿಧನರಾದರು. ತಂಗಿಯೊಂದಿಗೆ ಅಮರ್‌ನಾಥ್ ಕೂಡಾ ಸಾವನ್ನಪ್ಪಿದರು. ಕಳೆದ ವರ್ಷ ತೆಲುಗು ನಿರ್ದೇಶಕ ತ್ರಿಪುರನೇನಿ ಚಿಟ್ಟಿಬಾಬು. ಲಿಯೋ ಎಂಟರ್ಟೈನ್ಮೆಂಟ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸೌಂದರ್ಯ ಬಗ್ಗೆ ಆಡಿದ ಮಾತುಗಳು ವೈರಲ್ ಆಗುತ್ತಿದೆ. ಸೌಂದರ್ಯ 19ನೇ ಪುಣ್ಯಸ್ಮರಣೆಯಂದು ಕೂಡಾ ಈ ವಿಚಾರ ಮುನ್ನೆಲೆಗೆ ಬಂದಿದೆ.
''ನಾನು 'ರೈತುಭಾರತಂ' ಸಿನಿಮಾ ಮಾಡುವಾಗ ಮೂವರು ನಾಯಕರಿಗೆ ಇಬ್ಬರು ನಾಯಕಿಯರು ಫಿಕ್ಸ್ ಆಗಿದ್ದರು. ಮತ್ತೊಬ್ಬ ನಾಯಕನಿಗೆ ರೋಜಾ ಅವರನ್ನು ನಾಯಕಿಯಾಗಿ ಕರೆ ತರಬೇಕು ಎಂದು ಫಿಕ್ಸ್ ಆಗಿದ್ದೆ. ಆದರೆ ನಾನಿನ್ನೂ ಆಕೆಯೊಂದಿಗೆ ಮಾತನಾಡಿರಲಿಲ್ಲ. ಅಷ್ಟರಲ್ಲೇ ನನಗೆ ಬೆಂಗಳೂರಿನ ಆಪ್ತರೊಬ್ಬರಿಂದ ಕರೆ ಬಂತು. ನಿಮ್ಮ ಚಿತ್ರಕ್ಕೆ ಚೆನ್ನಾಗಿ ಹೊಂದುವ ನಟಿ ಸಿಕ್ಕಿದ್ದಾರೆ. ಒಮ್ಮೆ ಬೆಂಗಳೂರಿಗೆ ಬನ್ನಿ ಎಂದರು. ನಾನು ಕೂಡಲೇ ಅಲ್ಲಿಗೆ ಹೋದೆ. ಹೇಳಿ ಹೋದರೆ ಮೇಕಪ್ ಮಾಡಿಕೊಳ್ಳಬಹುದು, ನಾನು ಆ ಹುಡುಗಿಯನ್ನು ನ್ಯಾಚುರಲ್ ಲುಕ್‌ನಲ್ಲಿ ನೋಡಬೇಕಿತ್ತು ಆದ್ದರಿಂದ ಬೆಳಗ್ಗೆ 6 ಗಂಟೆಗೆ ಅವರ ಮನೆಗೆ ಹೋದೆ. ಸೌಂದರ್ಯ ಅವರನ್ನು ನೋಡುತ್ತಿದ್ದಂತೆ ನನ್ನ ಸಿನಿಮಾಗೆ ಇವರೇ ನಾಯಕಿ ಎಂದು ನಿರ್ಧರಿಸಿದೆ. ಆಗ ರೋಜಾ ಕೂಡಾ ಮರೆತುಹೋದರು. ನಂತರ ಅವರ ತಂದೆಯನ್ನು ಹೋಟೆಲ್ ರೂಮ್‌ಗೆ ಬರ ಹೇಳಿ ಅಲ್ಲಿಂದ ಹೊರಟೆ. ಆ ಚಿತ್ರಕ್ಕೆ ಸೌಂದರ್ಯಗೆ 25 ಸಾವಿರ ರೂಪಾಯಿ ಸಂಭಾವನೆ ನಿಗದಿ ಮಾಡಿ ಅಡ್ವಾನ್ಸ್ ಆಗಿ 5ಸಾವಿರ ಚೆಕ್ ರೆಡಿ ಮಾಡಿದೆ. ಸೌಂದರ್ಯ ತಂದೆಗೆ ಅದನ್ನು ನೀಡಲು ಹೋದಾಗ ಅವರು ಒಂದು ಮಾತು ಹೇಳಿದರು.''
''ನೀವು ಇಂದು, ನಾಳಿನ ಅಗ್ರನಟಿಗೆ ಚೆಕ್ ಕೊಡಲು ಹೊರಟಿದ್ದೀರ ಎಂದರು. ಆ ಮಾತು ಕೇಳಿ ನನಗೆ ಒಂದು ಕ್ಷಣ ಗೊಂದಲ ಆಯ್ತು. ಖಂಡಿತ ನಾನು ಪರಿಚಯಿಸುವ ನಟಿ ದೊಡ್ಡ ಸ್ಥಾನಕ್ಕೆ ಬೆಳೆಯಬೇಕೆಂದು ನಾನು ಬಯಸುತ್ತೇನೆ ಎಂದೆ. ಅದಕ್ಕೆ ಉತ್ತರಿಸಿದ ಸತ್ಯನಾರಾಯಣ ಅವರು ನನ್ನ ಮಗಳು ಎಂಬ ಕಾರಣಕ್ಕೆ ಹೊಗಳುತ್ತಿಲ್ಲ. ಅವಳ ಜಾತಕವೇ ಹಾಗೇ ಇದೆ. ನನ್ನ ಮಗಳು ಮುಂದಿನ 12 ವರ್ಷಗಳ ಕಾಲ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಾಳೆ. ನಂತರ ಅವರೂ ಇಂಡಸ್ಟ್ರಿಯಲ್ಲಿ ಇರುವುದಿಲ್ಲ ಎಂದರು. 12 ವರ್ಷಗಳ ನಂತರ ಬಹುಶ: ಆಕೆ ಮದುವೆಯಾಗಿ ಚಿತ್ರರಂಗದಿಂದ ದೂರಾಗಬಹುದು ಎಂದು ನಾನು ಅಂದುಕೊಂಡೆ. ಆದರೆ ಸತ್ಯನಾರಾಯಣ ಅವರು ಹೇಳಿದ್ದು ಸೌಂದರ್ಯ ಚಿತ್ರರಂಗ ಮಾತ್ರವಲ್ಲ ಈ ಪ್ರಪಂಚವನ್ನೇ ಬಿಟ್ಟು ಹೋಗುತ್ತಾರೆ ಎಂಬುದು ಈಗ ಅರ್ಥವಾಗಿದೆ'' ಎಂದು ಚಿಟ್ಟಿಬಾಬು ಅಂದಿನ ಘಟನೆಯನ್ನು ನೆನೆದಿದ್ದಾರೆ. ಒಟ್ಟಿನಲ್ಲಿ ಸೌಂದರ್ಯ ಇಂದು ನಮ್ಮನ್ನು ಅಗಲಿದ್ದರೂ ಆಕೆ ನೆನಪು ಮಾತ್ರ ಎಂದಿಗೂ ಮರೆಯಾಗಲಾರದು.