Kamal Haasan: ಡಿಎಂಕೆ ಮೈತ್ರಿಕೂಟದಿಂದ 2024 ಲೋಕಸಭೆ ಚುನಾವಣೆಯಲ್ಲಿ ಕೊಯಂಬತ್ತೂರಿನಿಂದ ಕಮಲ್ ಹಾಸನ್ ಸ್ಪರ್ಧೆ ಸಾಧ್ಯತೆ
Jul 25, 2023 01:08 PM IST
ಬಹುಭಾಷಾ ನಟ , ಮಕ್ಳಳ್ ನೀದಿ ಮೈಯಂ ಸಂಸ್ಥಾಪಕ ಅಧ್ಯಕ್ಷ ಕಮಲ್ ಹಾಸನ್
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಯಂಬತೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಎಂಕೆ ಪಕ್ಷದ ಪದಾಧಿಕಾರಿಗಳೇ ನಟ ಕಮಲ್ ಹಾಸನ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಹುಭಾಷಾ ನಟ , ಮಕ್ಳಳ್ ನೀದಿ ಮೈಯಂ ಸಂಸ್ಥಾಪಕ ಅಧ್ಯಕ್ಷ ಕಮಲ್ ಹಾಸನ್ ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಕೊಯಂಬತ್ತೂರು ಲೋಕಸಭೆ ಕ್ಷೇತ್ರದ ಮೂಲಕ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಡಿಎಂಕೈ ಮೈತ್ರಿಕೂಟದೊಂದಿಗೆ ಕೈ ಜೋಡಿಸಿರುವ ಕಮಲ ಹಾಸನ್ 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ಸೋಲು ಕಂಡಿದ್ದರು. ಆದರೂ ಪಕ್ಷ ಸಂಘಟನೆಗೆ ಕಮಲ್ ಹಾಸನ್ ಪಡುತ್ತಿರುವ ಶ್ರಮಕ್ಕಾಗಿ ಡಿಎಂಕೆ ಕೊಯಂಬತ್ತೂರು ಕ್ಷೇತ್ರವನ್ನು ಕಮಲ್ ಹಾಸನ್‌ಗೆ ಬಿಟ್ಟುಕೊಡುತ್ತಿರುವುದಾಗಿ ಮೂಲಗಳು ತಿಳಿಸಿವೆ. ಭಾನುವಾರ ಕಮಲ್ ಹಾಸನ್ ಕೊಯಂಬತ್ತೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಪಕ್ಷದ ರಾಜ್ಯ ಮಟ್ಟದ ಪ್ರಚಾರ ಅಭಿಯಾನವನ್ನು ಉದ್ಘಾಟಿಸಿದ್ದಾರೆ.
ಅಭಿಯಾನ ಉದ್ಘಾಟನೆ ನಂತರ ಮಾತನಾಡಿದ ಅವರು, ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಎಂಎನ್‌ಎಂ ಮುಖಂಡರು ಹಾಗೂ ಕಾರ್ಯಕರ್ತರು ಎದುರಿಸುತ್ತಿರುವ ತೊಂದರೆಗಳನ್ನು ಕುರಿತು ವಾರ್ಡ್ ಮತ್ತು ಪಂಚಾಯತ್ ಮಟ್ಟದಲ್ಲಿ ಜನರನ್ನು ಭೇಟಿ ಮಾಡಲು ಯೋಚಿಸುತ್ತಿದ್ದೇವೆ ಎಂದರು. ಒಟ್ಟಿನಲ್ಲಿ ಕಮಲ್ ಹಾಸನ್ ಅವರನ್ನು ಗೆಲ್ಲಿಸಲೇಬೇಕೆಂದು ಪಕ್ಷದ ಕಾರ್ಯಕರ್ತರು ಪಣ ತೊಟ್ಟಿರುವಂತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಯಂಬತೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಎಂಕೆ ಪಕ್ಷದ ಪದಾಧಿಕಾರಿಗಳೇ ನಟ ಕಮಲ್ ಹಾಸನ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಕಮಲ್ ಹಾಸನ್ ಮಹಿಳಾ ಬಸ್ ಚಾಲಕಿಯೊಬ್ಬರಿಗೆ ಕಾರು ನೀಡುವ ಮೂಲಕ ಸುದ್ದಿಯಲ್ಲಿದ್ದರು. ಡಿಎಂಕೆ ನಾಯಕಿ ಕನಿಮೋಳಿ ಬಸ್‌ನಲ್ಲಿ ಪ್ರಯಾಣಿಸಿದ ನಂತರ ಬಸ್ ಚಾಲಕಿ ಹಾಗೂ ಕಂಡಕ್ಟರ್ ನಡುವೆ ಜಗಳ ಆಗಿ ಬಸ್ ಚಾಲಕಿ ಶರ್ಮಿಳಾ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಆ ಯುವತಿಯನ್ನು ತಮ್ಮ ನಿವಾಸಕ್ಕೆ ಕರೆದಿಕೊಂಡಿದ್ದ ಕಮಲ್ ಹಾಸನ್, ಆಕೆಗೆ ಒಂದು ಕಾರನ್ನು ಉಡುಗೊರೆಯನ್ನಾಗಿ ನೀಡಿ ಇನ್ಮುಂದೆ ಸ್ವತಂತ್ರ್ಯವಾಗಿ ಕೆಲಸ ಮಾಡುವಂತೆ ಶುಭ ಹಾರೈಸಿದ್ದರು. ಬಸ್ ಚಾಲಕಿ ಶರ್ಮಿಳಾ ಕೊಯಂಬತ್ತೂರಿಗೆ ಸೇರಿದವರಾಗಿದ್ದು ಇದು ಆ ಕ್ಷೇತ್ರದಲ್ಲಿ ಕಮಲ್ ಹಾಸನ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುವಂತೆ ಮಾಡಿದೆ.