logo
ಕನ್ನಡ ಸುದ್ದಿ  /  ಮನರಂಜನೆ  /  ಬೃಂದಾವನ ಸೀರಿಯಲ್‌: ಅಮ್ಮನ ಅನಾರೋಗ್ಯ ನೆಪದಲ್ಲಿ ಪುಷ್ಪಾ ಮೇಲೆ ರೇಗುವ ಆಕಾಶ್‌, ಪೂಜೆ ದಿನ ಆದ್ರೂ ಒಂದಾಗುತ್ತಾ ಸುಧಾಮೂರ್ತಿ ಕುಟುಂಬ?

ಬೃಂದಾವನ ಸೀರಿಯಲ್‌: ಅಮ್ಮನ ಅನಾರೋಗ್ಯ ನೆಪದಲ್ಲಿ ಪುಷ್ಪಾ ಮೇಲೆ ರೇಗುವ ಆಕಾಶ್‌, ಪೂಜೆ ದಿನ ಆದ್ರೂ ಒಂದಾಗುತ್ತಾ ಸುಧಾಮೂರ್ತಿ ಕುಟುಂಬ?

Reshma HT Kannada

Feb 06, 2024 02:23 PM IST

google News

ವೃಂದಾವನ ಕನ್ನಡ ಧಾರಾವಾಹಿ ಫೆ. 5 ರ ಸಂಚಿಕೆ

    • Brindavana Kannada Serial Today Episode Feb 5: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಆಕಾಶ್‌ ಸ್ನೇಹಿತ ಚಿಕ್ಕೋಡಿ ಸಹನಾಳಿಂದ ಆಕಾಶ್‌ನನ್ನು ದೂರ ಮಾಡಲೇಬೇಕು ಎಂಬ ಪಣ ತೊಡುತ್ತಾನೆ. ಇತ್ತ ತಾಯಿಯ ಅನಾರೋಗ್ಯದ ನೆಪದಲ್ಲಿ ಪುಷ್ಪಾಳ ಮೇಲೆ ರೇಗುವ ಆಕಾಶ್‌, ಮನೆಯಲ್ಲಿ ನಡೆಯುವ ಪೂಜೆಗೆ ಎಲ್ಲರನ್ನೂ ಸೇರಿಸುತ್ತೇನೆ ಎಂದು ತಾಯಿಗೆ ಭರವಸೆ ನೀಡುತ್ತಾನೆ. 
ವೃಂದಾವನ ಕನ್ನಡ ಧಾರಾವಾಹಿ ಫೆ. 5 ರ ಸಂಚಿಕೆ
ವೃಂದಾವನ ಕನ್ನಡ ಧಾರಾವಾಹಿ ಫೆ. 5 ರ ಸಂಚಿಕೆ

ಬೃಂದಾವನ ಧಾರಾವಾಹಿಯ ಹಿಂದಿನ ಸಂಚಿಕೆಗಳಲ್ಲಿ ಆಕಾಶ್‌-ಸಹನಾ ಒಡನಾಟ, ಆಕಾಶ್‌ ವರ್ತನೆಗೆ ಚಿಕ್ಕೋಡಿಯ ಬೇಸರ, ಮನೆಯಲ್ಲಿ ಪದೇ ಪದೇ ತನ್ನ ಗುಣಗಳಿಂದ ಎಲ್ಲರ ಮನಸ್ಸು ಗೆಲ್ಲುತ್ತಿರುವ ಪುಷ್ಪಾ ಇದೀಗ ಮಕ್ಕಳಿಗೆ ಅಭಿನಯ ಹೇಳಿ ಕೊಡುವ ಮೂಲಕ ಮತ್ತೆ ಮನಸ್ಸು ಗೆದ್ದಿದ್ದಾಳೆ. ಆದರೆ ಆಕಾಶ್‌ ಮಾತ್ರ ಪುಷ್ಪಾಳ ಮೇಲೆ ಪದೇ ಪದೇ ಕಿಡಿ ಕಾರುತ್ತಿರುತ್ತಾನೆ. ಅಲ್ಲದೇ ಪುಷ್ಪಾ ಮೇಲೆ ರೇಗಲು ಒಂದು ಅವಕಾಶ ಸಿಕ್ಕರೆ ಸಾಕು ಎಂದು ಕಾಯುತ್ತಿರುತ್ತಾನೆ. ಸೋಮವಾರದ ಎಪಿಸೋಡ್‌ನಲ್ಲಿ ಏನೇನಾಯ್ತು ನೋಡಿ.

ಫೆ. 5ರ ಎಪಿಸೋಡ್‌

ಸೋಮವಾರದ (ಫೆ.5) ಎಪಿಸೋಡ್‌ನಲ್ಲಿ ಆಕಾಶ್‌ ಅಕ್ಕನ ಮಗಳು ವಿಂಧ್ಯಾ ಹೊಟ್ಟೆ ನೋವಿನಿಂದ ನರಳುತ್ತಿದ್ದಾಗ, ಪುಷ್ಪಾ ಆಕೆಗೆ ಹಳ್ಳಿ ಮದ್ದು ನೀಡಿ ಆಕೆಯ ನೋವನ್ನು ಗುಣಪಡಿಸುತ್ತಾಳೆ. ಆ ಮೂಲಕ ಮನೆಯವರೆಲ್ಲರ ಮೆಚ್ಚುಗೆ ಗಳಿಸುತ್ತಾಳೆ. ಆದರೆ ಮೊದಲಿನಿಂದಲೂ ಪುಷ್ಪಾ ಮೇಲೆ ಕೆಂಡ ಕಾರುತ್ತಿದ್ದ ಆಕಾಶ್‌ ಮಾವನಿಗೆ ಇದು ನುಂಗಲಾರದ ತುತ್ತಾಗಿರುತ್ತದೆ. ಅಲ್ಲದೆ ಪುಷ್ಪಾ ಮೇಲೆ ಸೇಡು ತೀರಿಸಿಯೇ ತೀರಿಸಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿರುತ್ತಾರೆ.

ಪುಷ್ಪಾ ಒಳಿತು ಬಯಸುವ ಚಿಕ್ಕೋಡಿ: ಆಕಾಶ್‌ನ ಪ್ರಾಣ ಸ್ನೇಹಿತ ಚಿಕ್ಕೋಡಿ. ಆದರೆ ಸಹನಾ ಕಾರಣದಿಂದ ತನ್ನ ಪ್ರಾಣ ಸ್ನೇಹಿತನನ್ನು ದೂರ ಮಾಡುತ್ತಿದ್ದಾನೆ ಆಕಾಶ್‌. ಈ ನಡುವೆ ಬಾಬಿಗೆ (ಪುಷ್ಪಾ) ಮೋಸ ಆಗಬಾರದು, ಆಕಾಶ್‌ ಹಾಗೂ ಸಹನಾ ಪ್ರೀತಿಯಲ್ಲಿ ಬೀಳಬಾರದು ಎಂದು ಚಿಕ್ಕೋಡಿ ಸಾಕಷ್ಟು ಪ್ರಯತ್ನ ಮಾಡುತ್ತಿರುತ್ತಾನೆ. ಆಕಾಶ್‌ನ ಇನ್ನೊಬ್ಬ ಸ್ನೇಹಿತ ಸುನಾಮಿ ಆಕಾಶ್‌ಗೆ ಮದುವೆಯಾಗಿದೆ ಎಂಬ ವಿಚಾರ ತಿಳಿಯದೇ ಸಹನಾ ಜೊತೆ ಆಕಾಶ್‌ಗೆ ಸಲುಗೆ ಬೆಳೆಯುವಂತೆ ಮಾಡುತ್ತಿರುತ್ತಾನೆ. ಅವನಿಗೆ ಚಿಕ್ಕೋಡಿ ಆಕಾಶ್‌ ವಿಷಯದಲ್ಲಿ ಹೀಗೆ ಮಾಡ್ಬೇಡ, ಅವನ ಮನೆಯಲ್ಲಿ ಲವ್‌ ಮ್ಯಾರೇಜ್‌ಗೆಲ್ಲಾ ಒಪ್ಪೊಲ್ಲಾ ಎಂದು ವಾರ್ನಿಂಗ್‌ ಮಾಡುತ್ತಾನೆ. ಜೊತೆಗೆ ಪುಷ್ಪಾ-ಆಕಾಶ್‌ ಒಂದಾಗುವಂತೆ ನಾನೇ ಏನಾದ್ರೂ ಮಾಡ್ತೀನಿ ಎಂದು ಶಪಥ ಮಾಡುತ್ತಾನೆ ಚಿಕ್ಕೋಡಿ.

ಹಣದ ವ್ಯಾಮೋಹಿ ಅತ್ತಿಗೆಗೆ ದುಡ್ಡು ಕೊಡ್ತಾಳಾ ಪುಷ್ಪಾ: ಮದುವೆಯ ಸಮಯದಲ್ಲಿ ತನ್ನ ಗಂಡ ಹಾಗೂ ನಾದಿನಿಗೆ ತಿಳಿಯದಂತೆ ಹಣ ಪಡೆದು ಮದುವೆ ಮಾಡಿಸಿದ್ದ ಪುಷ್ಪಾ ಅತ್ತಿಗೆ ತಾನು ಪಡೆದ ಮೂಟೆ ಮೂಟೆ ಹಣವನ್ನು ಕಳೆದುಕೊಂಡಿರುತ್ತಾಳೆ. ಇದೀಗ ಮತ್ತೆ ಹಣದ ಆಸೆಗೆ ಪುಷ್ಪಾಳ ಬಳಿ ಹೋಗಿ ಕಣ್ಣಿರಿಡುವ ನಾಟಕ ಮಾಡಲು ಮೈಸೂರಿಗೆ ಹೊರಟಿರುತ್ತಾಳೆ. ಅದಕ್ಕೆ ಸ್ನೇಹಿತೆಯ ಬಳಿ ಒಂದಿಷ್ಟು ಹಣ ಪಡೆದು ಹೊರಡುತ್ತಾಳೆ.

ತಾಯಿಯ ತಲೆನೋವಿನ ನೆಪದಲ್ಲಿ ಪುಷ್ಪಾ ಮೇಲೆ ಹಾರಾಟ: ಕಾಲೇಜಿನಿಂದ ಮನೆಗೆ ಬಂದ ಆಕಾಶ್‌ಗೆ ತನ್ನ ತಾಯಿ ತಲೆನೋವಿನಿಂದ ಒದ್ದಾಡುತ್ತಿರುವುದು ಕಂಡು ಪುಷ್ಪಾ ಮೇಲೆ ಕೋಪ ಬರುತ್ತೆ. ತಾಯಿ ನೋವಿನಲ್ಲಿ ಇದ್ರೂ ಪುಷ್ಪಾ ಕೇರ್‌ ಮಾಡುತ್ತಿಲ್ಲ ಎಂದು ಕೋಪದಿಂದ ಆಕಾಶ್‌ ಪುಷ್ಪಾಳನ್ನು ಕಿರುಚಾಡಿ ಕರೆಯುತ್ತಾನೆ. ಮನೆಯವರೆಲ್ಲಾ ಬಂದು ಏನಾಯ್ತು ಎಂದು ಕೇಳಿದ್ರೆ ʼಅಮ್ಮನಿಗೆ ಅಷ್ಟೊಂದು ಆರಾಮಿಲ್ಲ, ಆದ್ರೂ ಈ ಮನೆಯಲ್ಲಿ ಯಾರೂ ಅವರನ್ನು ನೋಡಿಕೊಳ್ಳುತ್ತಿಲ್ಲ. ಈ ಮನೆಯ ಮುದ್ದಿನ ಸೊಸೆಗೆ ಅಮ್ಮನ ಚಿಂತೆಯೇ ಇಲ್ಲʼ ಎಂದೆಲ್ಲಾ ಬೈದು ರೇಗುತ್ತಾನೆ. ಅದಕ್ಕೆ ಅಜ್ಜಿ ಸುಧಾಮೂರ್ತಿಯಿಂದ ಹಿಡಿದು ಎಲ್ಲರೂ ಆಕಾಶ್‌ಗೆ ಬೈಯುತ್ತಾರೆ, ಅಲ್ಲದೆ ʼನಿನ್ನ ಅಮ್ಮ ತಲೆನೋವು ಇರುವ ವಿಚಾರ ನಮಗೆ ಹೇಳದೆ ಹೇಗೆ ಗೊತ್ತಾಗುತ್ತೆ, ಪುಷ್ಪಾಳಿಗೂ ಈ ವಿಚಾರ ಗೊತ್ತಿಲ್ಲʼ ಎಂದು ಪುಷ್ಪಾ ಪರವಾಗಿಯೇ ಮಾತನಾಡುತ್ತಾರೆ. ನಂತರ ದೇವರ ಪೂಜೆಗೆ ಹೂ ಕೀಳಲು ಹೋಗಿ ಮರಳಿ ಬಂದ ಪುಷ್ಪಾಳ ಮೇಲೆ ಆಕಾಶ್‌ ಮತ್ತೆ ರೇಗುತ್ತಾನೆ. ಆಗ ಅವನ ತಾಯಿ ಅವನನ್ನು ಬೈದು ರೂಮಿಗೆ ಕರೆದುಕೊಂಡು ಹೋಗಿ ತನ್ನ ತಲೆನೋವಿಗೆ ಕಾರಣ ತಿಳಿಸುತ್ತಾಳೆ.

ಮನೆಯಲ್ಲಿ ಪೂಜೆಗೆ ಎಲ್ಲರನ್ನೂ ಸೇರಿಸುವ ಜವಾಬ್ದಾರಿ: ಪುಷ್ಪಾಳ ತಾಯಿ ದೇವಸ್ಥಾನದಲ್ಲಿ ಗುರುಗಳನ್ನು ಭೇಟಿ ಮಾಡಿದಾಗ ಮನೆಯಲ್ಲಿ ಗಣಹೋಮ, ನವಗ್ರಹ ಶಾಂತಿ ಮಾಡಿಸಿ ಎಂದು ಹೇಳಿರುತ್ತಾರೆ. ಜೊತೆಗೆ ಪೂಜೆ ನಡೆಯುವಾಗ ಮನೆಯ ಸರ್ವ ಸದಸ್ಯರೂ ಭಾಗವಹಿಸಬೇಕು ಎಂದು ಅವರು ಹೇಳಿರುತ್ತಾರೆ. ಆದರೆ ಸುಧಾಮೂರ್ತಿ ಕುಟುಂಬದಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವುದೇ ದೊಡ್ಡ ತಲೆನೋವಿನ ಕೆಲಸವಾಗಿರುತ್ತದೆ. ಇದನ್ನು ಯೋಚಿಸಿಯೇ ಆಕಾಶ್‌ ತಾಯಿಗೆ ತಲೆನೋವು ಬಂದಿರುತ್ತದೆ. ಇದನ್ನು ಮಗನ ಬಳಿ ಹೇಳಿದಾಗ, ಆಕಾಶ್‌ ಮನೆಯವರೆಲ್ಲರನ್ನೂ ಪೂಜೆಗೆ ಒಂದು ಮಾಡುವ ಜವಾಬ್ದಾರಿ ನನ್ನದು, ನಾಳಿನ ಪೂಜೆಯಲ್ಲಿ ಎಲ್ಲರೂ ಇರುವಂತೆ ಮಾಡುತ್ತೇನೆ ಎನ್ನುತ್ತಾನೆ. ಆಕಾಶ್‌ ತಾಯಿಗೆ ಕೊಟ್ಟ ಮಾತು ಉಳಿಸುತ್ತಾನಾ? ಈ ಕಡೆ ಸಹನಾ ಪ್ರೀತಿಯಲ್ಲಿ ಆಕಾಶ್‌ ಬೀಳುವುದನ್ನು ತಡೆಯಲು ಚಿಕ್ಕೋಡಿ ಏನು ಮಾಡುತ್ತಾನೆ. ಈ ಎಲ್ಲವನ್ನೂ ನಾಳಿನ ಸಂಚಿಕೆಯಲ್ಲಿ ನಿರೀಕ್ಷಿಸಿ.

ವೃಂದಾವನ ಧಾರಾವಾಹಿಯ ಕಿರು ಪರಿಚಯ

ಕೂಡು ಕುಟುಂಬದ ಕಥೆಯಳ್ಳ ವೃಂದಾವನ ಧಾರಾವಾಹಿ ಸದ್ಯ ಕರ್ನಾಟಕದ ಜನಮನ ಗೆದ್ದಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿಯು ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ.

ಪುಟ್ಟಗೌರಿ ಮದುವೆ, ಮಂಗಳಗೌರಿ, ನಾಗಕನ್ನಿಕೆ, ನಾಗಿಣಿ 2, ಕನ್ನಡತಿ, ಗೀತಾದಂತಹ ಪ್ರಸಿದ್ಧ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ಕೆ.ಎಸ್‌. ರಾಮ್‌ಜಿ ವೃಂದಾವನ ಧಾರಾವಾಹಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಬೃಂದಾವನ ಧಾರಾವಾಹಿಯ ನಾಯಕ ಆಕಾಶ್‌ ಪಾತ್ರದಲ್ಲಿ ವರುಣ್‌ ಆರಾಧ್ಯ ನಟಿಸುತ್ತಿದ್ದರೆ, ನಾಯಕಿ ಪುಷ್ಪಾ ಪಾತ್ರದಲ್ಲಿ ಅಮೂಲ್ಯ ಭಾರದ್ವಜ್‌ ನಟಿಸುತ್ತಿದ್ದಾರೆ. ಕನ್ನಡತಿಯ ಅಮ್ಮಮ್ಮ ಖ್ಯಾತಿಯ ಚಿತ್ಕಲಾ ಬಿರಾದಾರ್‌ ಆಕಾಶ್‌ ಅಜ್ಜಿ ಸುಧಾಮೂರ್ತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿ 36 ಮಂದಿಯ ಕೂಡು ಕುಟುಂಬದ ಕಥಾಹಂದರ ಹೊಂದಿದೆ. ಸಂದೀಪ್‌ ಅಶೋಕ್‌, ವೀಣಾ ಸುಂದರ್‌, ಸುಂದರ್‌ ವೀಣಾ, ರಾಜೇಶ್‌ ಎಸ್‌. ರಾವ್‌, ಅನು ಪಲ್ಲವಿ ಗೌಡ, ಮಾನಸ ಗುರುಸ್ವಾಮಿ, ಯೋಗಿತಾ ಕುಂಬಾರ್‌, ವೈಷ್ಟವಿ ಗೌಡ ಸೇರಿದಂತೆ ಪ್ರಮುಖರು ನಟಿಸುತ್ತಿದ್ದಾರೆ.

ಹಳ್ಳಿ ಹುಡುಗಿ ಪುಷ್ಪಾ ವಿದೇಶದಲ್ಲಿ ಓದುತ್ತಿದ್ದ ಆಕಾಶ್‌ನನ್ನು ಮದುವೆಯಾಗಿ ಸುಧಾಮೂರ್ತಿಯ ಕೂಡು ಕುಟುಂಬಕ್ಕೆ ಮುದ್ದಿನ ಸೊಸೆಯಾಗಿ ಬರುತ್ತಾಳೆ. ಆದರೆ ಆಕೆ ಆಕಾಶ್‌ಗೆ ಮುದ್ದಿನ ಮಡದಿಯಾಗಿರುವುದಿಲ್ಲ, ಅದಕ್ಕೆ ಕಾರಣ ಸಹನಾ. ಮದುವೆಗೂ ಮೊದಲು ಪುಷ್ಪಾ ಬದಲು ಸಹನಾ ಫೋಟೊ ನೋಡಿದ್ದ ಆಕಾಶ್‌ ಅವಳನ್ನೇ ಪ್ರೀತಿಸಲು ಆರಂಭಿಸುತ್ತಾನೆ. ಮದುವೆಯಾದ ಮೇಲೆ ಭಾರತಕ್ಕೆ ಬಂದು ಇಲ್ಲಿಯೇ ಕಾಲೇಜು ಸೇರುವ ಆಕಾಶ್‌ ತನ್ನ ಕಾಲೇಜಿನಲ್ಲಿ ಸಹನಾಳನ್ನು ನೋಡಿ, ಅವಳ ಹಿಂದೆ ಬೀಳುತ್ತಾನೆ. ಆದರೆ ಮನೆಯಲ್ಲಿ ಪುಷ್ಪಾ ತನ್ನ ಮುಗ್ಧ ಗುಣಗಳಿಂದ ಎಲ್ಲರ ಮನ ಗೆದ್ದಿರುತ್ತಾಳೆ. ಇತ್ತ ಮನೆಯವರ ಖುಷಿಯಾಗಿ ಇಷ್ಟವಿಲ್ಲದ ಮಡದಿಯೊಂದಿಗೆ ಬದುಕು, ಅತ್ತ ಕಾಲೇಜಿನಲ್ಲಿ ಸಹನಾಗಾಗಿ ಚಡಪಡಿಕೆ ಹೀಗೆ ಆಕಾಶ್‌ ಜೀವನ ಸಾಗುತ್ತಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ