logo
ಕನ್ನಡ ಸುದ್ದಿ  /  ಮನರಂಜನೆ  /  ಬೃಂದಾವನ ಸೀರಿಯಲ್‌: ಹಣದ ದುರಾಸೆಯಿಂದ ಪಟ್ಟಣಕ್ಕೆ ಬಂದ್ಲು ಗಿರಿಜಾ, ಆಕಾಶ್‌ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗಿ ಕಣ್ಣಿರಿಟ್ಟ ಪುಷ್ಪಾ

ಬೃಂದಾವನ ಸೀರಿಯಲ್‌: ಹಣದ ದುರಾಸೆಯಿಂದ ಪಟ್ಟಣಕ್ಕೆ ಬಂದ್ಲು ಗಿರಿಜಾ, ಆಕಾಶ್‌ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗಿ ಕಣ್ಣಿರಿಟ್ಟ ಪುಷ್ಪಾ

Reshma HT Kannada

Feb 07, 2024 08:30 AM IST

google News

ವೃಂದಾವನ ಕನ್ನಡ ಧಾರಾವಾಹಿ ಫೆ. 6 ರ ಸಂಚಿಕೆ

    • Brindavana Kannada Serial Today Episode Feb 6: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಪೂಜೆಯ ದಿನ ಮನೆಯವರೆಲ್ಲರನ್ನೂ ಮನೆಯಲ್ಲೇ ಇರಿಸುವ ಪ್ರಯತ್ನದಲ್ಲಿ ಆಕಾಶ್‌ ಯಶಸ್ಸು ಕಾಣುತ್ತಾನೆ. ಇತ್ತ ಪುಷ್ಪಾ ಬಳಿ ಹಣ ಕೀಳುವ ಯೋಚನೆಯಿಂದ ಅತ್ತಿಗೆ ಗಿರಿಜಾ ಪಟ್ಟಣಕ್ಕೆ ಹೊರಡುತ್ತಾಳೆ. ಪುಷ್ಪಾ ಬಳಿ ಆಕಾಶ್‌ ಕೇಳಿದ ಪ್ರಶ್ನೆಗೆ ಆಕೆ ಕಣ್ಣೀರಿಡುತ್ತಾಳೆ.  
ವೃಂದಾವನ ಕನ್ನಡ ಧಾರಾವಾಹಿ ಫೆ. 6 ರ ಸಂಚಿಕೆ
ವೃಂದಾವನ ಕನ್ನಡ ಧಾರಾವಾಹಿ ಫೆ. 6 ರ ಸಂಚಿಕೆ

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.5) ಸಂಚಿಕೆಯಲ್ಲಿ ಆಕಾಶ್‌ ಸ್ನೇಹಿತ ಚಿಕ್ಕೋಡಿ ಪುಷ್ಪಾ ಒಳಿತಿಗಾಗಿ ಆಕಾಶ್‌-ಸಹನಾ ಒಂದಾಗದಂತೆ ಮಾಡುತ್ತೇನೆ ಎಂದು ಪಣ ತೊಟ್ಟರೆ, ಇತ್ತ ಪುಷ್ಪಾಳ ಅತ್ತಿಗೆ ಗಿರಿಜಾ ಹಣದ ದುರಾಸೆಯಿಂದ ನಾದಿನಿಯ ಬಳಿ ದುಡ್ಡು ಕೀಳಲು ಅವಳ ಮನೆಗೆ ಬರುವ ಯೋಚನೆ ಮಾಡಿ ಹೊರಟು ನಿಲ್ಲುತ್ತಾಳೆ. ಆಕಾಶ್‌ ತಾಯಿ ದಾಕ್ಷಾಯಿಣಿ ತಲೆನೋವಿನಿಂದ ಬಳಲುತ್ತಿದ್ದು, ಅದಕ್ಕೆ ಕಾರಣ ಏನು ಎಂದು ತಿಳಿಯದೇ ಆಕಾಶ್‌ ಪುಷ್ಪಾಳ ಮೇಲೆ ರೇಗುತ್ತಾನೆ. ಕೊನೆಗೆ ದಾಕ್ಷಾಯಿಣಿ ತನ್ನ ತಲೆನೋವಿಗೆ ಕಾರಣವನ್ನು ಆಕಾಶ್‌ ಬಳಿ ಹೇಳುತ್ತಾಳೆ, ಅಲ್ಲದೆ ನಾಳೆ ನಡೆಯುವ ಪೂಜೆಯಲ್ಲಿ ಮನೆಯವರೆಲ್ಲರೂ ಭಾಗವಹಿಸಬೇಕು, ಅದಕ್ಕೆ ಎಲ್ಲರೂ ಮನೆಯಲ್ಲೇ ಇರುವಂತೆ ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪಿದ ಆಕಾಶ್‌ ಆ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ.

ಫೆ. 6ರ ಎಪಿಸೋಡ್‌

ಮಂಗಳವಾರದ (ಫೆ.6) ಎಪಿಸೋಡ್‌ನಲ್ಲಿ ಆಕಾಶ್‌ ಮನೆಯವರೆಲ್ಲರ ಬಳಿ ನಾಳೆ ಎಲ್ಲರೂ ಮನೆಯಲ್ಲೇ ಇರಬೇಕು, ಹಾಗಂತ ಪ್ರಾಮಿಸ್‌ ಮಾಡಬೇಕು ಎಂದು ಕೇಳಿಕೊಳ್ಳುತ್ತಾನೆ. ಆದರೆ ವಿಷಯ ಏನು, ಯಾಕೆ ಮನೆಯಲ್ಲಿ ಇರಬೇಕು ಎಂಬುದನ್ನು ಹೇಳುವುದಿಲ್ಲ. ಎಲ್ಲರೂ ಅಜ್ಜಿಯ ಕೈ ಮುಟ್ಟಿ ಪ್ರಾಮಿಸ್‌ ಮಾಡಿದ ನಂತರ ವಿಷಯ ಏನು ಎಂದು ಹೇಳುತ್ತೇನೆ ಎಂದು ಹಟ ಮಾಡುತ್ತಾನೆ. ಆಗ ಮನೆಯವರೆಲ್ಲರೂ ಏನು ವಿಷ್ಯಾ ಇರಬಹುದು ಎಂದು ಗಾಬರಿಯಾಗಿ ಅವರವರ ಅನಿಸಿಕೆಗಳನ್ನು ಹೇಳುತ್ತಾರೆ. ಮನೆಯ ಹೆಂಗಸರು ನಾವು ಪ್ರಾಮಿಸ್‌ ಮಾಡುವ ಅಗತ್ಯವಿಲ್ಲ, ನಾವು ಮನೆ ಬಿಟ್ಟು ಎಲ್ಲೂ ಹೋಗೋದಿಲ್ಲ, ಈಗ ಆಣೆ ಮಾಡಬೇಕಿರುವುದು ಗಂಡಸರು ಮಾತ್ರ ಎನ್ನುತ್ತಾರೆ. ವಿಷಯ ಏನು ಎಂದು ತಿಳಿಯದೇ ಯಾರು ಮೊದಲು ಪ್ರಾಮಿಸ್‌ ಮಾಡಬೇಕು ಎಂಬ ಚರ್ಚೆ ನಡೆದಾಗ ಪುಷ್ಪಾಳೇ ಮೊದಲು ಪ್ರಾಮಿಸ್‌ ಮಾಡಲಿ ಎಂಬ ಅಭಿಪ್ರಾಯ ಬರುತ್ತದೆ.

ಮೊದಲು ತಾನು ಪ್ರಾಮಿಸ್‌ ಮಾಡಲು ಒಪ್ಪದ ಪುಷ್ಪಾ ನಂತರ ಅಜ್ಜನ ಮಾತಿನಂತೆ ಪ್ರಾಮಿಸ್‌ ಮಾಡುತ್ತಾಳೆ. ನಂತರ ಮನೆಯವರೆಲ್ಲರೂ ಒಂದಾಗಿ ಅಜ್ಜಮ್ಮನ ಕೈ ಮುಟ್ಟಿ, ಎಲ್ಲರೂ ಮನೆಯಲ್ಲೇ ಇರುತ್ತೇವೆ ಎಂದು ಪ್ರಾಮಿಸ್‌ ಮಾಡುತ್ತಾರೆ. ಮನೆಯವರೆಲ್ಲರೂ ಒಂದಾಗಿ ತನ್ನ ಕೈ ಮೇಲೆ ಆಣೆ ಮಾಡಿದ್ದು ನೋಡಿದ ಸುಧಾಮೂರ್ತಿ ಅವರ ಕಣ್ತುಂಬಿ ಬರುತ್ತದೆ.

ಸ್ನೇಹಿತೆಯ ಹಣವನ್ನೂ ಬಿಡದ ಗಿರಿಜಾ

ಇತ್ತ ಪುಷ್ಪಾ ಬಳಿ ತನ್ನ ಗೋಳು ಹೇಳಿಕೊಂಡು ಹೇಗಾದರೂ ಹಣ ತರಬೇಕು ಎಂದು ಸ್ನೇಹಿತೆಯ ಬಳಿ ಸಾಲ ಪಡೆದು ಪಟ್ಟಣಕ್ಕೆ ಹೊರಟ ಗಿರಿಜಾಗೆ ಸ್ನೇಹಿತೆಯಿಂದ ಕಾಲ್‌ ಬರುತ್ತದೆ. ಅವಳ ಸ್ನೇಹಿತೆ ತನ್ನ ಮನೆಯಲ್ಲಿ ಇಟ್ಟ ದುಡ್ಡು ಇಲ್ಲ ಎಂದು ಗಾಬರಿಯಲ್ಲಿ ಹೇಳಿಕೊಂಡಾಗ, ಗಿರಿಜಾ ಅವಳ ಬಳಿ ʼನೀನು ಗಾಬರಿಯಾಗಬೇಡ, ನಿನ್ನ ಮನೆಯಲ್ಲಿ ಇದ್ದ 60 ಸಾವಿರ ರೂಪಾಯಿ ನಾನೇ ತೆಗೆದುಕೊಂಡೆ, ನಿನ್ನ ಬಳಿ ಇರುವುದು ನನ್ನ ಹಣವೇ ಅಲ್ವಾ? ಎಂದು ಪ್ರಶ್ನೆ ಮಾಡುತ್ತಾಳೆ. ಜೊತೆಗೆ ಧಿಮಾಕಿನಿಂದ ಮಾತನಾಡಿ ಕಾಲ್‌ ಕಟ್‌ ಮಾಡುತ್ತಾಳೆ.

ಪುಷ್ಪಾಳನ್ನು ಪ್ರಶ್ನಿಸುವ ಆಕಾಶ್‌

ಮನೆಯವರೆಲ್ಲರನ್ನೂ ಪೂಜೆಯ ದಿನ ಮನೆಯಲ್ಲೇ ಇರಿಸಿಲು ಆಕಾಶ್‌ ಮಾಡಿದ ಪ್ಲಾನ್‌ ಬಗ್ಗೆ ಸಂತಸ ವ್ಯಕ್ತ ಪಡಿಸುವ ಪುಷ್ಪಾ ಅವನನ್ನು ಮನಸಾರೆ ಹೊಗಳುತ್ತಾಳೆ. ʼನೀವು ತುಂಬಾ ಬುದ್ಧಿವಂತರು, ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ರೆʼ ಎಂದು ಸರ್ಟಿಫಿಕೇಟ್‌ ನೀಡುತ್ತಾಳೆ. ಆದರೆ ಆಕಾಶ್‌ ಮಾತ್ರ ಪುಷ್ಪಾಳ ಮೇಲೆ ಅಮ್ಮನ ಅನಾರೋಗ್ಯದ ವಿಚಾರ ತೆಗೆದು ಪುನಃ ರೇಗುತ್ತಾನೆ. ರೂಮ್‌ ಒಳಗೆ ಹೋದಾಗ ಆಕಾಶ್‌ ಪುಷ್ಪಾಳ ಬಳಿ ʼನೀವು ನಾನು ಕೇಳಿದ ಪ್ರಶ್ನೆಗಳಿಗೆ ಯಾವುದೇ ಸುಳ್ಳು ಹೇಳದೇ ಉತ್ತರ ನೀಡಬೇಕುʼ ಎನ್ನುತ್ತಾನೆ. ಅದಕ್ಕೆ ಪುಷ್ಪಾ ʼನಾನು ನಿಮ್ಮ ಬಳಿ ಎಂದಿಗೂ ಸುಳ್ಳು ಹೇಳುವುದಿಲ್ಲ, ಅದೇನು ಹೇಳಿʼ ಎನ್ನುತ್ತಾರೆ. ಆಗ ಆಕಾಶ್‌ ನೇರವಾಗಿ ಪುಷ್ಪಾಳ ಬಳಿ ʼನೀವು ನನ್ನನ್ನು ಮದುವೆಯಾಗಲು ಎಷ್ಟು ಹಣ ಪಡೆದಿದ್ದೀರಿʼ ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆ ಕೇಳಿ ಪುಷ್ಪಾ ದಂಗಾಗುತ್ತಾಳೆ. ಆಕಾಶ್‌ ಮನೆಯಲ್ಲಿ ಪೂಜೆ ಯಾವುದೇ ವಿಘ್ನವಿಲ್ಲದೇ ನಡೆಯುತ್ತದೆಯೇ, ಪುಷ್ಪಾಳ ಅತ್ತಿಗೆ ದುರಾಸೆಗೆ ಕೊನೆಯಂದು, ಆಕಾಶ್‌ ಪ್ರಶ್ನೆಗೆ ಪುಷ್ಪಾಳ ಪ್ರತಿಕ್ರಿಯೆ ಏನಿರಬಹುದು? ಎಂಬುದನ್ನು ನಾಳಿನ ಸಂಚಿಕೆಯಲ್ಲಿ ನೋಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ