ಬೃಂದಾವನ ಸೀರಿಯಲ್: ಗಿರಿಜಾಳನ್ನು ನೋಡಿ ಹೆಚ್ಚಾಯ್ತು ಆಕಾಶ್ ಕೋಪ, ಬೃಂದಾವನದ ಮೇಲೆ ಬೀಸಿದ ಕೆಸರು ಪುಷ್ಪಾ ಬಾಳನ್ನೇ ರಾಡಿ ಮಾಡುತ್ತಾ?
Feb 13, 2024 09:00 AM IST
ಬೃಂದಾವನ ಸೀರಿಯಲ್: ಬೃಂದಾವನದ ಮೇಲೆ ಬೀಸಿದ ಕೆಸರು ಪುಷ್ಪಾ ಬಾಳನ್ನೇ ರಾಡಿ ಮಾಡುತ್ತಾ?
- Brindavana Kannada Serial Today Episode Feb 12: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಆಕಾಶ್ ಮನೆಯಲ್ಲಿ ಪೂಜೆ ನಡೆಯುತ್ತಿರುತ್ತದೆ. ಪೂಜೆಗೆ ಬೃಂದಾವನದ ಮೇಲೆ ಕೆಸರು ಸಿಡಿಸಿ ಒಳ ಬರುತ್ತಾಳೆ ಗಿರಿಜಾ. ಆಕಾಶ-ಪುಷ್ಪಾ ಸಂಬಂಧದ ಬಗ್ಗೆ ಮನೆಯವರ ತಲೆಗೆ ಹುಳ ಬಿಡುತ್ತಾರೆ ಸತ್ಯಮೂರ್ತಿ.
ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.12) ಸಂಚಿಕೆಯಲ್ಲಿ ಸುಧಾಮೂರ್ತಿಗಳ ಮನೆಯಲ್ಲಿ ಪೂಜೆ ಆರಂಭವಾಗಿರುತ್ತದೆ. ಮನೆಯವರೆಲ್ಲರೂ ಆಕಾಶ್-ಪುಷ್ಪಾ ಪೂಜೆಗೆ ಕುಳಿತುಕೊಳ್ಳಲಿ ಎಂದು ಬಯಸುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ನಾನು ಪೂಜೆಗೆ ಕುಳಿತುಕೊಳ್ಳಲ್ಲ ಎಂದು ಹೇಳುವ ಮೂಲಕ ಶಾಕ್ ನೀಡುತ್ತಾನೆ ಆಕಾಶ್. ಕೊನೆಗೆ ನಾನು-ಪುಷ್ಪಾ ಬದಲು ಈ ಮನೆಯ ಹಿರಿಯರಾದ ಅಜ್ಜಿ-ತಾತ ಪೂಜೆಗೆ ಕುಳಿತುಕೊಳ್ಳಲಿ, ಅವರು ಪೂಜೆಗೆ ಕುಳಿತರೆ ಎಲ್ಲರಿಗೂ ಶ್ರೇಯಸ್ಸು ಎನ್ನುತ್ತಾರೆ. ಇದರಿಂದ ಎಲ್ಲರಿಗೂ ಖುಷಿ ಹಾಗೂ ಸಾಮಾಧಾನ ಸಿಗುತ್ತದೆ. ಕೊನೆಗೆ ಸುಧಾಮೂರ್ತಿ ಹಾಗೂ ಅವರ ಗಂಡ ಸೇರಿ ಪೂಜೆಗೆ ಕುಳಿತುಕೊಳ್ಳುತ್ತಾರೆ. ಮನೆಯಲ್ಲಿ ಪೂಜೆ ಸಾಂಗವಾಗಿ ನಡೆಯುವ ಹೊತ್ತಿಗೆ ಎಂಟ್ರಿ ಕೊಡುತ್ತಾಳೆ ಗಿರಿಜಾ.
ಬೃಂದಾವನಕ್ಕೆ ಬಂದ ಗಿರಿಜಾ
ಆಟೊ ಸಿಗದೇ ಪರದಾಡುವ ಗಿರಿಜಾಗೆ ಕೊನೆಗೂ ಬೃಂದಾವನಕ್ಕೆ ತೆರಳಲು ಒಂದು ಆಟೊ ಸಿಗುತ್ತದೆ. ಆಟೊ ಹಿಡಿದು ಬರುವ ಆಕೆ, ಬರುವಾಗಲೇ ಬೃಂದಾವನ ಬೋರ್ಡ್ ಮೇಲೆ ಕೆಸರು ಸಿಡಿಸುತ್ತಾಳೆ, ಅಂದರೆ ಆಟೊದಿಂದ ಕೆಸರು ನೇರವಾಗಿ ಬೋರ್ಡ್ ಮೇಲೆ ಸಿಡಿಯುತ್ತದೆ. ಮನೆಯೊಳಗೆ ಬರುವ ಆಕೆಗೆ ಮನೆಯಲ್ಲಿ ಪೂಜೆ ನಡೆಯುತ್ತಿರುವುದು ತಿಳಿಯುತ್ತದೆ. ತಮ್ಮ ಮನೆಗೆ ಅನಿರೀಕ್ಷಿತ ಅತಿಥಿಯಂತೆ ಬಂದ ಗಿರಿಜಾಳನ್ನು ನೋಡಿ ಆಕಾಶ್ ಮನೆಯವರೆಲ್ಲರ ಮುಖಭಾವ ಬದಲಾಗುತ್ತದೆ. ಎಲ್ಲರ ಮುಖದಲ್ಲೂ ಅಸಮಾಧಾನ ಎದ್ದು ಕಾಣುತ್ತದೆ. ಆದರೆ ಪೂಜೆ ಸಮಯದಲ್ಲಿ ತೋರ್ಪಡಿಸಿಕೊಳ್ಳದೇ ಪುಷ್ಪಾಳ ಬಳಿ ಆಕೆಯನ್ನು ಕರೆಯುವಂತೆ ಹೇಳುತ್ತಾರೆ. ತುಂಬಾ ದಿನಗಳ ನಂತರ ಮನೆಗೆ ಬಂದ ಅತ್ತಿಗೆಯನ್ನು ನೋಡಿ ಪುಷ್ಪಾ ಸಂತಸಪಟ್ಟರೆ ಆಕಾಶ್ ಕೋಪದಲ್ಲಿ ಕುದಿಯುತ್ತಿರುತ್ತಾನೆ.
ಆರುವ ದೀಪ
ಪೂಜೆಯೆಲ್ಲ ಸಾಂಗವಾಗಿ ಮುಗಿದು ಪುಷ್ಪಾ ದೇವರ ಆರತಿಯನ್ನು ನೀಡುತ್ತಾ ಬರುತ್ತಾಳೆ. ಆದರೆ ಅತ್ತಿಗೆಗೆ ಆರತಿ ಕೊಡಲು ಹೋದಾಕ್ಷಣ ಆರತಿ ನಂದಿ ಹೋಗುತ್ತದೆ. ಇದರಿಂದ ಪುಷ್ಪಾ ಸೇರಿ ಮನೆಯವರೆಲ್ಲರೂ ಗಾಬರಿಗೊಳ್ಳುತ್ತಾರೆ. ಆದರೆ ಗಿರಿಜಾ ʼಪುಷ್ಪಾ ಗಾಳಿ ಅಲ್ವಾ, ಅದಕ್ಕೆ ಆರತಿ ನಂದಿ ಹೋಯ್ತು, ನೀನೇನು ಚಿಂತೆ ಮಾಡ್ಬೇಡʼ ಅಂತ ಬಣ್ಣದ ಮಾತನಾಡುತ್ತಾಳೆ. ಆದರೆ ಪುಷ್ಪಾ ʼಇಲ್ಲ ಅತ್ತಿಗೆ ಆರತಿ ಆರಿ ಹೋದರೆ ಅಪಶಕುನʼ ಅಂತ ಭಯದಲ್ಲಿ ಹೇಳುತ್ತಾರೆ.
ಮನೆಯವರ ತಲೆಯಲ್ಲಿ ಹುಳ ಬಿಡುವ ಸತ್ಯಮೂರ್ತಿ
ಈ ನಡುವೆ ಬಂದವರೆಲ್ಲಾ ಊಟ ಮಾಡುತ್ತಿರಬೇಕಾದ್ರೆ ಸತ್ಯಮೂರ್ತಿ ಹಾಗೂ ಮನೆಯ ಗಂಡಸರೆಲ್ಲಾ ಒಂದೆಡೆ ಸೇರಿರುತ್ತಾರೆ. ಆಗ ಸತ್ಯಮೂರ್ತಿ ಪೂಜೆ ಸಮಯದಲ್ಲಿ ನೀವೆಲ್ಲಾ ಒಂದು ಪ್ರಮುಖವಾದ ವಿಚಾರ ಗಮನಿಸಿದ್ರಾ? ಎಂದು ಪ್ರಶ್ನಿಸುತ್ತಾರೆ. ಅಲ್ಲದೇ ಪೂಜೆ ಸಮಯದಲ್ಲಿ ಆಕಾಶ್ ತುಂಬಾ ಸಿಟ್ಟಿನಲ್ಲಿದ್ದ, ಪುಷ್ಪಾ ಆಕಾಶ್ ನಡುವೆ ಏನೂ ಸರಿಯಿಲ್ಲ ಎಂದು ಮನೆಯವರ ತಲೆಯಲ್ಲಿ ಹುಳ ಬಿಡುತ್ತಾನೆ.
ಆಕಾಶ್ ಮನೆಯವರನ್ನೆಲ್ಲಾ ಮಾತಿನಲ್ಲೇ ಮೋಡಿ ಮಾಡುವ ಪುಷ್ಪಾ ತನ್ನ ಕಾರ್ಯಸಾಧನೆಗೆ ಪುಷ್ಪಾಳನ್ನು ದಾಳವಾಗಿಸಿಕೊಳ್ಳಲು ಸಮಯಕ್ಕಾಗಿ ಹೊಂಚು ಹಾಕುತ್ತಿರುತ್ತಾಳೆ. ಕೊನೆಗೂ ಪುಷ್ಪಾ ಒಂಟಿಯಾಗಿ ಸಿಕ್ಕಿದ್ದಾಳೆ, ಗಿರಿಜಾಳ ಮೋಸದ ಬಲೆಗೆ ಬೀಳ್ತಾಳ ಪುಷ್ಪಾ? ನಾಳಿನ ಸಂಚಿಕೆಯಲ್ಲಿ ನಿರೀಕ್ಷಿಸಿ.