ಹುಲಿ ಉಗುರು ಪ್ರಕರಣದ ಬಳಿಕ ವರ್ತೂರು ಸಂತೋಷ್‌ಗೆ ಮುಳುವಾಯ್ತಾ ಹಳ್ಳಿಕಾರ್ ತಳಿ? ಕೇಸ್ ದಾಖಲು
Jun 26, 2024 04:20 PM IST
ಹುಲಿ ಉಗುರು ಪ್ರಕರಣದ ಬಳಿಕ ವರ್ತೂರು ಸಂತೋಷ್‌ಗೆ ಮುಳುವಾಯ್ತಾ ಹಳ್ಳಿಕಾರ್ ತಳಿ? ಕೇಸ್ ದಾಖಲು
- ಬಿಗ್ ಬಾಸ್ ಕನ್ನಡ ಸೀಸನ್ 10ರ ವರ್ತೂರು ಸಂತೋಷ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿದ್ದ ಇದೇ ಹಳ್ಳಿಕಾರ್ ಒಡೆಯನ ವಿರುದ್ಧ ಇದೀಗ ಮತ್ತೊಂದು ದೂರು ಕೇಳಿಬಂದಿದೆ.
Varthur Santhosh: ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಕೊನೇವರೆಗೂ ಬಿಗ್ ಮನೆಯಲ್ಲಿ ಉಳಿದು ನಾಡಿನ ಜನರ ಮನಗೆದ್ದಿದ್ದರು ಹಳ್ಳಿಕಾರ್ ಒಡೆಯ ಎಂದೇ ಫೇಮಸ್ ಆಗಿದ್ದ ವರ್ತೂರು ಸಂತೋಷ್. ಇದೇ ಬಿಗ್‌ಬಾಸ್‌ನಲ್ಲಿದ್ದಾಗಲೇ ಹುಲಿ ಉಗುರು ಧರಿಸಿದ್ದಾರೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯಂದ ವಿಚಾರಣೆಗೆ ಒಳಗಾಗಿ ಜೈಲು ಸೇರಿ ಬಿಡುಗಡೆಯಾಗಿ ಹೊರಬಂದಿದ್ದರು. ಹಾಗೆ ಹೊರಬಂದ ಬಳಿಕ ಮತ್ತೆ ಬಿಗ್‌ಬಾಸ್ ಮನೆ ಪ್ರವೇಶಿಸಿ ಯಾರೂ ಮಾಡಿರದ ದಾಖಲೆಯೊಂದನ್ನು ಬರೆದಿದ್ದರು ವರ್ತೂರು ಸಂತೋಷ್. ಅದಾದ ಬಳಿಕ ಅಂತಿಮ ಹಂತದಲ್ಲಿ ನಾಲ್ಕನೇ ರನ್ನರ್ ಅಪ್ ಆಗಿಯೂ ಹೊರಹೊಮ್ಮಿದ್ದರು. ಇದೀಗ ಇದೇ ವರ್ತೂರ್ ಸಂತೋಷ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹುಲಿ ಉಗುರು ಬಳಿಕ ಮತ್ತೊಂದು ಕೇಸ್
ಹಳ್ಳಿಕಾರ್ ತಳಿಯ ರಕ್ಷಣೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಆ ತಳಿಯಿಂದಲೇ ಗುರುತಿಸಿಕೊಂಡಿರುವ ವರ್ತೂರು ಸಂತೋಷ್ ವಿರುದ್ಧ ದೂರು ದಾಖಲಾಗಿದೆ. ಇನ್ನೇನು ಹಳ್ಳಿಕಾರ್ ರೇಸ್ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಅವರ ವಿರುದ್ಧ ದೂರು ದಾಖಲಾಗಿದೆ. ಅಷ್ಟಕ್ಕೂ ವರ್ತೂರು ಸಂತೋಷ್ ವಿರುದ್ಧ ದಾಖಲಾದ ದೂರು ಯಾವುದು? ದೂರು ದಾಖಲಿಸಿದವರು ಯಾರು? ಯಾವ ಕಾರಣಕ್ಕೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ವರ್ತೂರು ಸಂತೋಷ್. ಇಲ್ಲಿದೆ ಮಾಹಿತಿ.
ಏನಿದು ಪ್ರಕರಣ?
ಪ್ರಾಣಿಗಳನ್ನು ಸಾಗಾಣಿಕೆ ಮಾಡುವಲ್ಲಿ ವರ್ತೂರು ಸಂತೋಷ್ ಮತ್ತವರ ತಂಡ ನಿಯಮ ಉಲ್ಲಂಘಿಸಿದ ಆರೋಪ ಇದೀಗ ಕೇಳಿಬಂದಿದೆ. ಅಸುರಕ್ಷಿತ ರೀತಿಯಿಂದ ಪ್ರಾಣಿಗಳನ್ನು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವವರು ವರ್ತೂರು ಸಂತೋಷ್ ವಿರುದ್ಧ ವರ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಳ್ಳಿಕಾರ್ ರೇಸ್ ನಡೆಸಲು ಒಂದೇ ವಾಹನದಲ್ಲಿ 9ಕ್ಕೂ ಅಧಿಕ ಹಳ್ಳಿಕಾರ್ ಹೋರಿಗಳನ್ನು ಸಾಗಾಣಿಕೆ ಮಾಡಿದ ಆರೋಪ ಕೇಳಿಬಂದಿದೆ. ಆ ಟ್ರಕ್‌ನಲ್ಲಿ ಇನ್ನೂ ಕೆಲವು ವಸ್ತುಗಳಿದ್ದವೂ ಎಂದೂ ತಿಳಿದು ಬಂದಿದೆ.
ಸಂಕಷ್ಟ ತಂದ ಹೋರಿ ಸಾಗಾಟ
ವರ್ತೂರು ಸಂತೋಷ್ ಈ ಹಂತಕ್ಕೆ ಬಂದಿದ್ದೇ ಅವರ ಪ್ರಾಣಿ ಪ್ರೀತಿಯಿಂದ. ಮನೆಯಲ್ಲಿಯೇ ವಿಶಾಲವಾದ ಕೊಟ್ಟಿಗೆ ಹೊಂದಿರುವ ವರ್ತೂರು ಅಲ್ಲಿ ಸಾಕಷ್ಟ ಬಗೆ ಬಗೆ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ರೇಸ್‌ಗೆಂದೇ ಹೋರಿಗಳನ್ನು ತಯಾರಿ ಮಾಡುತ್ತಾರೆ. ಬೆಂಗಳೂರು ಸುತ್ತಮುತ್ತಲಿನ ರೇಸ್‌ಗಳಲ್ಲಿಯೂ ವರ್ತೂರು ಸಂತೋಷ್ ಭಾಗವಹಿಸುತ್ತಾರೆ. ಸ್ವತಃ ಅವರೇ ರೇಸ್‌ಗಳನ್ನೂ ಆಯೋಜಿಸಿದ್ದಾರೆ. ಇದೀಗ ಇದೇ ಹೋರಿಗಳನ್ನು ನಿಯಮ ಬಾಹಿರವಾಗಿ ಸಾಗಾಣೆ ಮಾಡಿದ ಹಿನ್ನೆಲೆಯಲ್ಲಿ ದೂರು ನೀಡಿದ್ದು, ಒಂದು ವೇಳೆ ಇದು ಸಾಬೀತಾದರೆ, ಮತ್ತೊಂದು ಸಂಕಷ್ಟಕ್ಕೆ ಸಿಲುಕಲಿದ್ದಾರೆ ವರ್ತೂರು ಸಂತೋಷ್.