ಬಿಗ್ ಬಾಸ್ಗೆ ಹೋಗುವಾಗಲೇ ನನಗೆ ಆ ಕಾಯಿಲೆ ಇದೆ ಅಂತ ಗೊತ್ತಾಯ್ತು! ಕುಸಿದು ಬಿದ್ದೆ, ಶಾಕ್ ಆಯ್ತು; ತುಕಾಲಿ ಸಂತು
Feb 14, 2024 06:22 AM IST
ಬಿಗ್ ಬಾಸ್ಗೆ ಹೋಗುವಾಗಲೇ ನನಗೆ ಆ ಕಾಯಿಲೆ ಇದೆ ಅಂತ ಗೊತ್ತಾಯ್ತು! ಕುಸಿದು ಬಿದ್ದೆ, ಶಾಕ್ ಆಯ್ತು; ತುಕಾಲಿ ಸಂತು
- ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತುಕಾಲಿ ಸಂತೋಷ್, ಮನೆಯಲ್ಲಿದ್ದಷ್ಟು ದಿನ ಮನೆಮಂದಿಯನ್ನು ತಮ್ಮ ಕಾಮಿಡಿ ಮೂಲಕವೇ ನಗಿಸಿದ್ದಾರೆ. ಇದೇ ಕಾಮಿಡಿಯನ್ಗೆ ಈ ಒಂದು ಕಾಯಿಲೆ ಇದೆ ಅಂತ ಗೊತ್ತೇ ಇರಲಿಲ್ಲ. ಆ ಕಾಯಿಲೆ ಯಾವುದು? ಆ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.
Tukali santhosh: ಬಿಗ್ಬಾಸ್ ಸೀಸನ್ 10ರ ಫಿನಾಲೆ ಸ್ಪರ್ಧಿ, ತುಕಾಲಿ ಸಂತೋಷ್ ಬಿಗ್ ಮನೆಯಲ್ಲಿದ್ದಷ್ಟು ಹೊತ್ತು ಎಲ್ಲರನ್ನು ನಕ್ಕು ನಗಿಸಿದ್ದಾರೆ. ತಮ್ಮ ಕಾಮಿಡಿ ಮ್ಯಾನರೀಸಂನಿಂದಲೇ ತಮಾಷೆ ಮಾಡಿದ್ದಾರೆ. ಆದರೆ, ಹೀಗಿರುವ ಇದೇ ತುಕಾಲಿ ಸಂತೋಷ್ಗೆ ಸಕ್ಕರೆ ಕಾಯಿಲೆ ಇದೆ. ಬಿಗ್ ಬಾಸ್ ಮನೆಗೆ ಹೋಗುವವರೆಗೂ ತನಗೆ ಇಂಥದ್ದೊಂದು ಕಾಯಿಲೆ ಇದೆ ಅಂತ ಅವರಿಗೆ ಗೊತ್ತೇ ಇರಲಿಲ್ಲ. ಅದರ ಯಾವ ಲಕ್ಷಣಗಳೂ ಅವರಿಗೆ ಕಂಡಿರಲಿಲ್ಲ. ಡಾಕ್ಟರ್ ಹೇಳಿದ ಬಳಿಕ ಕುಸಿದು ಬಿದ್ದ ಭಾವ ಅವರನ್ನು ಕಾಡಿತ್ತು. ಅವರೇ ಶಾಕ್ಗೆ ಒಳಗಾದರು.
ಬಿಗ್ಬಾಸ್ಗೆ ಎಂಟ್ರಿಯಾಗುವ ಪ್ರತಿಯೊಬ್ಬ ಸ್ಪರ್ಧಿಗೂ ಆರೋಗ್ಯ ತಪಾಸಣೆ ಮಾಡಿ, ಅವರ ಹೆಲ್ತ್ ಕಂಡಿಷನ್ ಹೇಗಿದೆ ಎಂದು ಪರೀಕ್ಷೆ ಮಾಡಿ, ಬಂದ ವರದಿಯನ್ನು ಗಮನಿಸಿದ ಬಳಿಕವೇ ಇವರು ಬಿಗ್ ಬಾಸ್ ಪ್ರವೇಶಕ್ಕೆ ಅರ್ಹ ಎಂದಾಗ ಮಾತ್ರ ಒಳ ಬಿಡುತ್ತಾರೆ. ಅದೇ ರೀತಿ ತುಕಾಲಿ ಸಂತೋಷ್ ಅವರಿಗೂ ಹೆಲ್ತ್ ಚೆಕ್ಅಪ್ ಮಾಡಲಾಗಿತ್ತು. ಆ ಪರೀಕ್ಷೆಯಲ್ಲಿ ಅವರಿಗೆ ಶುಗರ್ ಇರುವುದು ಗೊತ್ತಾಗಿತ್ತು. ಈ ಬಗ್ಗೆ ನ್ಯಾಶನಲ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ತುಕಾಲಿ.
ತುಕಾಲಿ ಸಂತು ಹೇಳುವುದೇನು?
“ನಾನು ದಡ್ಡ. ಒಳಗಡೆ ಹೋದಮೇಲೆಯೇ ನನಗೆ ಗೊತ್ತಾಯ್ತು ನನಗೆ ಶುಗರ್ ಇದೆ ಅಂತ. ಡಾಕ್ಟರ್ ಸರ್ಟಿಫಿಕೇಟ್ ಕೊಟ್ಟ ತಕ್ಷಣ ಒಂದು ಕ್ಷಣ ಕುಸಿದು ಬಿದ್ದೆ. ಬಿಗ್ ಬಾಸ್ಗೆ ಹೋಗೋದು ಹೇಗೆ? ಈ ಲೆವೆಲ್ಗೆ ಶುಗರ್ ಇದೆ ಅಂತ. ನನಗೆ ಶಾಕ್. ದೇವ್ರಾಣೆಗೂ ನನಗೆ ಅದರ ಲಕ್ಷಣಗಳಿರಲಿಲ್ಲ. ಆಮೇಲೆ ಡಾಕ್ಟರ್ ಹೇಳಿದ್ರು, ಶುಗರ್ ಮನುಷ್ಯನಿಗೆ ಇದ್ದೇ ಇರುತ್ತೆ. ಸ್ವಲ್ಪ ರೈಸ್ ಆಗಿದೆ. ಮೆಡಿಸಿನ್ ಬರೆದು ಕೊಡ್ತಿನಿ. ಹುಷಾರಾಗ್ತಿರಿ ಅಂದ್ರು. ದೈರ್ಯವಾಗಿ ಹೋದೆ” ಎಂದಿದ್ದಾರೆ.
ಬಿಗ್ ಬಾಸ್ ಒಂದು ದೊಡ್ಡ ಆಸ್ಪತ್ರೆ!
“ಮನುಷ್ಯನಿಗೆ ಎಂಥ ಕಾಯಿಲೆ ಕಸಾಲೆ ಇದ್ರೂ ಬಿಗ್ ಬಾಸ್ಗೆ ಹೋಗಿ ಹುಷಾರ್ ಮಾಡಿಕೊಂಡು ಬರಬಹುದು. ಬಿಗ್ ಬಾಸ್ ಒಂದು ದೊಡ್ಡ ಆಸ್ಪತ್ರೆ ಇದ್ದಂಗೆ. ಹೆಲ್ತ್ ಬಗ್ಗೆ ಎಷ್ಟು ಕೇರ್ ಮಾಡ್ತಾರೆ ಗೊತ್ತಾ? ನನ್ನ ಹೆಂಡತಿನೂ ಟೈಮ್ಗೆ ಸರಿಯಾಗಿ ಮಾತ್ರೆ ತರಲ್ಲ. ಬಿಗ್ಬಾಸ್ನಲ್ಲಿ ಇನ್ ಟೈಮ್ಗೆ ಮಾತ್ರೆಗಳು ಬರುತ್ತಿದ್ವು. ನನಗೆ ತಲೆ ತಿರುಗುತ್ತಿದೆ. ಆಗ್ತಾಯಿಲ್ಲ. ನನಗೆ ಕುಡಿಯೋಕೆ ಹಾಲು ಕಳಿಸಿಕೊಡಿ ಅಂದ್ರೆ, 4 ಲೀಟರ್ ಹಾಲು ಬರ್ತಿತ್ತು. ಆರೋಗ್ಯದ ಬಗ್ಗೆ ಅತೀ ಕಾಳಜಿ. ಸಣ್ಣ ಪುಟ್ಟ ಸಮಸ್ಯೆಯಾದ್ರೂ ಟ್ರೀಟ್ಮೆಂಟ್ ಕೊಡಿತಿದ್ರು” ಎಂದಿದ್ದಾರೆ.
ಇದನ್ನೂ ಓದಿ: ಕೊನೆಗೂ ತುಕಾಲಿಯ ಆ ಒಂದು ಕನಸು ನನಸಾಗಲೇ ಇಲ್ಲ
ಹೆಲ್ತ್ ಇನ್ಶೂರೆನ್ಸ್ ನಂದೂ ಇಲ್ಲ, ಹೆಂಡತಿದೂ ಇಲ್ಲ
ಇನ್ನು ಆರೋಗ್ಯ ವಿಮೆ ಬಗ್ಗೆಯೂ ತುಕಾಲಿ ಸಂತೋಷ್ಗೆ ಅರಿವಾಗಿದೆ. ಈ ಬಗ್ಗೆಯೂ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ನನಗೆ ಮತ್ತು ನನ್ನ ಹೆಂಡತಿಗೆ ಇಬ್ಬರಿಗೂ ಹೆಲ್ತ್ ಇನ್ಶೂರನ್ಸ್ ಮಾಡಿಸಿಲ್ಲ. ಶುಗರ್ ಬಿಟ್ಟು ಬೇರೆ ಕಾಯಿಲೆ ಬಂದಿದ್ದರೆ ಹೇಗೆ? ಇದೀಗ ಮೊದಲು ಇಬ್ಬರೂ ಒಂದೊಂದು ಇನ್ಶೂರನ್ಸ್ ಮಾಡಿಸಬೇಕಿದೆ. ಮೊದಲು ಆ ಕೆಲಸ ಮಾಡ್ತಿನಿ ಎಂದಿದ್ದಾರೆ ತುಕಾಲಿ ಸಂತೋಷ್.
ಮಾತಿನಲ್ಲೇ ಮನೆಯ ಕಟ್ಟುವ ಮಲ್ಲ!
ತುಕಾಲಿ ಸಂತೋಷ್ ಅವರು ಮೈಕಟ್ಟಿನಲ್ಲಂತೂ ‘ಮಲ್ಲ’ನಲ್ಲ. ಆದರೆ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೆಯೇ ಮಾತಲ್ಲೇ ಮಹಡಿಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲವು ದಿನಗಳಲ್ಲಿಯೇ ಮನೆಮಂದಿಗೆಲ್ಲ ಪರಿಚಯವಾಗಿತ್ತು. ‘ನನ್ನ ತಾಯಿ ಗರ್ಭಿಣಿಯಾಗಿದ್ದಾಗ, ನಿನ್ನ ಹೊಟ್ಟೆಯಲ್ಲಿ ಮಹಾತ್ಮ ಹುಟ್ತಾನೆ ಅಂತ ಹೇಳಿದ್ರಂತೆ ದೊಡ್ಡವರೊಬ್ಬರು. ನಾನು ಹುಟ್ಟುವಾಗ ಗುಡುಗು ಸಿಡಿಲು ಎಲ್ಲ ಇತ್ತು. ಮಳೆ ಬರ್ತಿತ್ತು. ಆಗ ನಾನು ಹುಟ್ಟಿದೆ…’ ಎಂದು ತಮ್ಮ ಜನ್ಮವೃತ್ತಾಂತವನ್ನು ಅರುಹುತ್ತ ಹೋದ ಹಾಗೆ ಮನೆಯವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಅವರು ಕಾಗೆ ಹಾರಿಸುತ್ತಿದ್ದಾರೆ ಎಂದು ಗೊತ್ತಿದ್ದೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಬಿಗ್ಬಾಸ್ ಮನೆಯ ಸದಸ್ಯರು ಕಾದು ಕೂತಿರುತ್ತಿದ್ದದ್ದು ಸುಳ್ಳಲ್ಲ.