Bigg boss Kannada Season 11 ಶೋಗೆ ಹೋಗುವ ವಿಚಾರಕ್ಕೆ ಕೊನೆಗೂ ಪ್ರತಿಕ್ರಿಯಿಸಿದ ಯೂಟ್ಯೂಬರ್ ಡಾ. ಬ್ರೋ
Aug 24, 2024 03:09 PM IST
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಅಕ್ಟೋಬರ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಸಂಭವನೀಯರ ಪಟ್ಟಿಯಲ್ಲಿ ಯೂಟ್ಯೂಬರ್ ಡಾ ಬ್ರೋ ಅವರ ಹೆಸರೂ ಇದೆ. ಆ ಬಗ್ಗೆ ಸ್ವತಃ ಡಾ ಬ್ರೋ ಪ್ರತಿಕ್ರಿಯಿಸಿದ್ದಾರೆ.
- ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಅಕ್ಟೋಬರ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಸಂಭವನೀಯರ ಪಟ್ಟಿಯಲ್ಲಿ ಯೂಟ್ಯೂಬರ್ ಡಾ ಬ್ರೋ ಅವರ ಹೆಸರೂ ಇದೆ. ಆ ಬಗ್ಗೆ ಸ್ವತಃ ಡಾ ಬ್ರೋ ಮೊದಲ ಸಲ ಲೈವ್ ಬಂದು ಪ್ರತಿಕ್ರಿಯಿಸಿದ್ದಾರೆ.
Bigg boss Kannada Season 11: ಡಾಕ್ಟರ್ ಬ್ರೋ.. ಈ ಹೆಸರು ಕರುನಾಡಿನ ಮಂದಿಗೆ ಚಿರಪರಿಚಿತ. ನಮಸ್ಕಾರ ದೇವ್ರು ಎನ್ನುತ್ತಲೇ ವಿದೇಶ ಪರ್ಯಟನೆ ಮಾಡುವ ಈ ಯುವಕ, ಚಿಕ್ಕ ವಯಸ್ಸಿನಲ್ಲಿಯೇ ಯಾರೂ ಮಾಡದ ಸಾಹಸ, ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಈ ಹುಡುಗ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್. ಜೀರೋ ಹೇಟರ್ಸ್ ಎಂದೇ ಕರೆಸಿಕೊಳ್ಳುವ ಗಗನ್ ಶ್ರೀನಿವಾಸ್, ನೋಡುಗರಿಗೆ ಕುಳಿತಲ್ಲಿಯೇ ದೇಶ, ವಿದೇಶದ ವಿಶೇಷತೆಗಳನ್ನು ತಮ್ಮ ಕ್ಯಾಮರಾ ಕಣ್ಣುಗಳಿಂದ ಮುಂದಿಡುತ್ತ ಬಂದಿದ್ದಾರೆ. ಇದೀಗ ಇದೇ ಡಾ. ಬ್ರೋ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಬಿಗ್ ಬಾಸ್ ವಿಚಾರಕ್ಕೆ!
ಹೌದು, ಕಳೆದ ವರ್ಷದ ಮಾರ್ಚ್ ವೇಳೆ ಇದೇ ಡಾಕ್ಟರ್ ಬ್ರೋ ಅವರ ಬಗ್ಗೆ ಹೊಸ ಗಾಸಿಪ್ ಹರಿದಾಡಿತ್ತು. ವೀಕೆಂಡ್ ವಿಥ್ ರಮೇಶ್ ಶೋಗೆ ಡಾ. ಬ್ರೋ ಅವರನ್ನು ಕರೆಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲಾಗಿತ್ತು. ಆ ಟ್ರೆಂಡ್‌ಗೆ ಸ್ವತಃ ಜೀ ಕನ್ನಡದ ಗಮನಕ್ಕೂ ಬಂದಿತ್ತು. ಸ್ವತಃ ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಡಾ. ಬ್ರೋ ಅವರನ್ನು ವೀಕೆಂಡ್ ವಿಥ್ ರಮೇಶ್ ಶೋ ಕರೆಸಬೇಕೇ ಬೇಡವೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
ವೀಕೆಂಡ್ ವಿಥ್ ರಮೇಶ್ ಶೋ ವೇಳೆಯೂ ಹೀಗೆ ಆಗಿತ್ತು..
"ನಿಮ್ಮ ಮನೆಯಲ್ಲಿ ನಿಮ್ಮ ತಾಯಿ, ಅಜ್ಜಿಗೆ ಡಾ. ಬ್ರೋ ಗೊತ್ತಾ? ದೂರದರ್ಶನ ಎಂಬುದು ಒಂದು ಬೇರೆಯದೇ ಲೋಕ. ಟ್ರೆಂಡಿಂಗ್ ಟ್ರೋಲಿಂಗ್ ಎಂಬುದು ಸಣ್ಣ ಪ್ರಪಂಚ. ಗ್ರಾಮೀಣ ಭಾಗದಲ್ಲಿ ಟಿವಿ ದೊಡ್ಡ ಸಾಗರ, ಅದಕ್ಕೂ ಇದಕ್ಕೂ ಹೋಲಿಕೆ ಅಸಾಧ್ಯ. ಆದರೆ, ನಾವಿದನ್ನೂ ಕನ್ಸಿಡರ್ ಮಾಡಿಲ್ಲ ಅಂತಲ್ಲ. ಮುಂದಿನ ದಿನಗಳಲ್ಲಿ ಇದು ಸಾಧ್ಯವಾದರೂ ಆಗಬಹುದು" ಎಂದು ಹೇಳಿದ್ದರು ಜೀ ಕನ್ನಡದ ಹೆಡ್ ರಾಘವೇಂದ್ರ ಹುಣಸೂರು. ಇದೀಗ ಡಾ. ಬ್ರೋ ಬಿಗ್‌ಬಾಸ್‌ಗೆ ಬರಬೇಕು ಎಂದೂ ಅವರ ಫ್ಯಾನ್ಸ್ ಬಯಸುತ್ತಿದ್ದಾರೆ. ಇದಕ್ಕೆ ಸ್ವತಃ ಡಾ. ಬ್ರೋ ಉತ್ತರಿಸಿದ್ದಾರೆ.
ಅಕ್ಟೋಬರ್‌ನಲ್ಲಿ BBK11 ಶುರು
ಹೌದು, ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಅಕ್ಟೋಬರ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಸೀಸನ್ 11ರ ಪ್ರೋಮೋ ಶೂಟಿಂಗ್ ಸಹ ಮುಗಿದಿದೆ ಎಂದೂ ಹೇಳಲಾಗುತ್ತಿದೆ. ಇದರ ಜತೆಗೆ ಕೆಲವೊಂದಿಷ್ಟು ಸೆಲೆಬ್ರಿಟಿಗಳು ಈ ಶೋಗೆ ಹೋಗ್ತಾರೆ ಎಂಬ ಗಾಸಿಪ್ ಸಹ ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿದೆ. ಸಂಭವನೀಯರ ಪಟ್ಟಿಯೂ ಹರಿದಾಡುತ್ತಿದೆ. ಆ ಪಟ್ಟಿಯಲ್ಲಿ ಡಾ. ಬ್ರೋ ಅವರ ಹೆಸರನ್ನೂ ಸೇರಿಸಲಾಗಿತ್ತು. ಹಾಗೆ ಸದ್ದು ಮಾಡಿದ ವದಂತಿ ಬಗ್ಗೆ ಡಾ. ಬ್ರೋ ಮೊದಲ ಸಲ ಲೈವ್‌ಗೆ ಬಂದು, ತಮ್ಮ ದೇವ್ರುಗಳ ಜತೆಗೆ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ.
ಬಿಗ್‌ಬಾಸ್‌ಗೆ ಹೋಗುವ ವಿಚಾರಕ್ಕೆ ಬ್ರೋ ಸ್ಪಷ್ಟನೆ
ಮೊದಲ ಸಲ ಲೈವ್‌ಗೆ ಬಂದ ಡಾಕ್ಟರ್ ಬ್ರೋ, ಲೈವ್ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಹೇಳಿಕೊಂಡಿದ್ದಾರೆ. ಸಾಕಷ್ಟು ಪ್ರಶ್ನೆಗಳು ಅವರಿಗೆ ಎದುರಾಗಿವೆ. ಆ ಪೈಕಿ "ಈ ಸಲದ ಬಿಗ್‌ಬಾಸ್‌ಗೆ ನೀವೂ ಹೋಗ್ತಿರಾ?" ಎಂಬ ಪ್ರಶ್ನೆ ಕೇಳಿ ಬಂದಿದೆ. ಅದಕ್ಕೆ ಉತ್ತರಿಸಿದ ಡಾ. ಬ್ರೋ, "ಮೂರು ತಿಂಗಳು ಒಂದು ಮನೆಯಲ್ಲಿ ಇರುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಆಗುತ್ತೆ. ಅದೇ ಮೂರು ತಿಂಗಳಲ್ಲಿ ಐದು ದೇಶ ನೋಡಬಹುದು. ಅದೇ ಕಷ್ಟ ಆಗುತ್ತೆ" ಎಂದಿದ್ದಾರೆ. ಈ ಮೂಲಕ ತಮಗೆ ಬಿಗ್‌ಬಾಸ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸದ್ಯ ಸಿರಿಯಾ ದೇಶದ ಸುತ್ತಾಟದ ವಿಡಿಯೋವನ್ನು ಅಪ್‌ಲೋಡ್ ಮಾಡುವ ಬಗ್ಗೆ ಹೇಳಿದ ಬ್ರೋ, ಮುಂದೆ ವಿಯೇಟ್ನಾಂಗೆ ಹೋಗುವ ಬಗ್ಗೆ ಮಾಹಿತಿ ನೀಡಿದ್ದಾರೆ.