ಮೊದಲ ಬಾರಿಗೆ ತಾಯಿ ಊರಿಗೆ ಕಾಲಿಟ್ಟ ಶ್ರಾವಣಿ, ಸಾಲಿಗ್ರಾಮದಲ್ಲಿ ಬಯಲಾಗುತ್ತಿದೆ ವಿಜಯಾಂಬಿಕಾ ಬದುಕಿನ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ
Sep 07, 2024 08:37 AM IST
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಸೆಪ್ಟೆಂಬರ್ 6ರ ಸಂಚಿಕೆ
- Shravani Subramanya Kannada Serial Today Episode September 6th: ಪಂಕ್ಚರ್ ರಿಪೇರಿ ಮಾಡಿಸಿಕೊಂಡು ಹೊರಟ್ರು ಶ್ರಾವಣಿ–ಸುಬ್ರಹ್ಮಣ್ಯ. ಸಾಲಿಗ್ರಾಮದ ರಂಗಣ್ಣನ ಟೀ ಅಂಗಡಿಯಲ್ಲಿ ವಿಜಯಾಂಬಿಕಾ ಬದುಕಿನ ಮೊದಲ ಸತ್ಯ ಬಯಲು. ತಾಯಿಗೆ ಊರಿಗೆ ಕಾಲಿಟ್ಟ ಶ್ರಾವಣಿ ಕಣ್ಣಲ್ಲಿ ನೀರು. ವೀರೇಂದ್ರ ಕುಟುಂಬಕ್ಕೆ ಸಾಲಿಗ್ರಾಮದಲ್ಲಿ ಅದ್ಧೂರಿ ಸ್ವಾಗತ.
Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಸೆಪ್ಟೆಂಬರ್ 5ರ) ಸಂಚಿಕೆಯಲ್ಲಿ ದಾರಿಯುದ್ದಕ್ಕೂ ಜಗಳ ಮಾಡುತ್ತಲೇ ಪಂಕ್ಚರ್ ಶಾಪ್ ಹುಡುಕಿ, ಕಾರಿನ ಟೈರ್‌ಗೆ ಪಂಕ್ಷರ್ ಹಾಕಿಸಿಕೊಂಡು ಕಾರಿನ ಬಳಿಗೆ ಮರುಳುತ್ತಾರೆ ಶ್ರಾವಣಿ–ಸುಬ್ರಹ್ಮಣ್ಯ ಹಾಗೂ ಕಾಂತಮ್ಮ. ಡ್ರೈವರ್ ಕಾರಿನ ಟೈರ್ ಬದಲಿಸುವಾಗ ಸುಬ್ಬು ಬಳಿ ಫ್ಲೇಮ್ಸ್ ಆಡಿಸಿ ಶ್ರೀವಲ್ಲಿ–ಸುಬ್ರಹ್ಮಣ್ಯಗೆ ಲವ್ ಎಂದು ಬಂದಿದ್ದನ್ನು ನೋಡಿ ಮತ್ತಷ್ಟು ಕೋಪಗೊಳ್ಳುತ್ತಾಳೆ ಶ್ರಾವಣಿ, ಆದರೆ ಕಾಂತಮ್ಮನ ಲೆಕ್ಕಾಚಾರವೇ ಬೇರೆ ಇರುತ್ತದೆ. ಶ್ರಾವಣಿಗೂ ಸುಬ್ಬುಗೂ ಮದುವೆ ಆದರೆ ಹೇಗೆ ಎಂಬುದೇ ಆಕೆಯ ತಲೆಯಲ್ಲಿ ಇರುತ್ತದೆ.
ರಂಗಣ್ಣ ಟೀ ಅಂಗಡಿಯಲ್ಲಿ ವೀರೇಂದ್ರ ಕುಟುಂಬ
ಅಂತೂ ಜಗಳವಾಡಿಕೊಂಡೇ ಸಾಲಿಗ್ರಾಮದ ಹಾದಿಯಲ್ಲಿ ಸಾಗುತ್ತಾರೆ ಶ್ರಾವಣಿ–ಸುಬ್ರಹ್ಮಣ್ಯ. ಮುಂದೆ ಹೋಗಿದ್ದ ವೀರೇಂದ್ರ ಹಾಗೂ ಸುರೇಂದ್ರ ದಾರಿಯಲ್ಲಿ ಸಾಲಿಗ್ರಾಮದ ರಂಗಣ್ಣ ಎನ್ನುವವರ ಟೀ ಅಂಗಡಿ ಮುಂದೆ ಕಾರು ನಿಲ್ಲಿಸಿ ಸುಬ್ಬು ಹಾಗೂ ಶ್ರಾವಣಿ, ಕಾಂತಮ್ಮ ಬರುವುದಕ್ಕಾಗಿ ಎದುರು ನೋಡುತ್ತಾರೆ, ಇನ್ನೇನು ಎಲ್ಲಿದ್ದಾರೆ ಎಂದು ತಿಳಿಯಲು ಕಾಲ್ ಮಾಡಬೇಕು ಎಂದುಕೊಳ್ಳುವ ಹೊತ್ತಿಗೆ ಕಾರ್ ರಂಗಣ್ಣನ ಟೀ ಅಂಗಡಿ ಮುಂದೆ ನಿಲ್ಲುತ್ತದೆ. ಎಲ್ಲರೂ ಹೋಗಿ ಟೀ ಕುಡಿಯಲು ಟೀ ಅಂಗಡಿ ಒಳಗೆ ಹೋಗುತ್ತಾರೆ. ವಿಜಯಾಂಬಿಕಾ ಮಾತ್ರ ಹಿಂದೆ ಅಡಗಿ ನಿಂತಿರುತ್ತಾಳೆ.
ವಿಜಯಾಂಬಿಕಾ ಹಳೆ ಜೀವನ ನೆನಪಿಸಿದ ರಂಗಣ್ಣ
ರಂಗಣ್ಣನ ಅಂಗಡಿಗೆ ಬರುವ ವೀರೇಂದ್ರ ವಿನಯದಿಂದ ಪರಿಚಯ ಸಿಕ್ತಾ ರಂಗಣ್ಣ ಎಂದು ಕೇಳುತ್ತಾರೆ. ಆರಂಭದಲ್ಲಿ ಗುರುತು ಹಿಡಿಯದ ಅವರು ನಂತರ ಎಲ್ಲರನ್ನೂ ಗುರುತು ಹಿಡಿದು ಮಾತನಾಡಿಸುತ್ತಾರೆ. ಸುರೇಂದ್ರನ ಬಗ್ಗೆ, ಸುರೇಂದ್ರ ಮದುವೆ ಬಗ್ಗೆ ಎಲ್ಲಾ ವಿಚಾರಿಸುತ್ತಾರೆ. ಪದ್ಮನಾಭ ಅವರನ್ನೂ ಗುರುತು ಹಿಡಿದು ಮಾತನಾಡಿಸುತ್ತಾರೆ ರಂಗಣ್ಣ, ಅಲ್ಲೇ ಹಿಂದೆ ನಿಂತಿದ್ದ ವಿಜಯಾಂಬಿಕಾಳನ್ನು ನೋಡಿ ‘ನೀನು ವಿಜಯಾ ಅಲ್ವೇ, ಅದ್ಯಾಕೆ ಹಿಂದೆ ನಿಂತಿದ್ದೀಯಾ, ದುಡ್ಡು ಕಾಸು ಬಂತು ಅಂತ ಅಹಂಕಾರನಾ, ನೀನು ಸಂಜೆ ಹೊತ್ತಿಗೆ ನಮ್ಮ ಅಂಗಡಿಗೆ ಬಂದು ಹಾಲು ಹಾಕ್ತಾ ಇದ್ದಿದ್ದು ನೆನಪು ಹೋಯ್ತಾ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಎಲ್ಲರಿಗೂ ವಿಜಯಾಂಬಿಕಾ ಬದುಕಿನ ಹಿಂದೆ ಹೀಗೂ ಇತ್ತ ಎಂದು ಆಶ್ವರ್ಯವಾಗುತ್ತದೆ. ಕಾಂತಮ್ಮ ಅಂತೂ ಮೇಡಂಮ್ಮೋರೆ ಹಾಲು ಹಾಕ್ತಾ ಇದ್ರಾ ಅಂತ ಛೇಡಿಸಿಯೇ ಬಿಡುತ್ತಾಳೆ. ವಿಜಯಾಂಬಿಕಾ ಅಸಹನೆಯಲ್ಲಿ ಕುದಿಯುತ್ತಾಳೆ. ಆಗ ರಂಗಣ್ಣನ ದೃಷ್ಟಿ ಶ್ರಾವಣಿ ಮೇಲೆ ಹರಿಯುತ್ತದೆ. ಈ ಹುಡುಗಿ ಎಂದು ಕೇಳುತ್ತಾರೆ. ಆಗ ಪದ್ಮನಾಭ ‘ಇವರು ಶ್ರಾವಣಿಯಮ್ಮ, ನಂದಿನ ಅಮ್ಮವರ ಮಗಳು‘ ಎಂದು ಶ್ರಾವಣಿಯನ್ನು ರಂಗಣ್ಣನಿಗೆ ಪರಿಚಯ ಮಾಡಿಕೊಡುತ್ತಾನೆ. ಶ್ರಾವಣಿಯನ್ನ ನೋಡಿ ರಂಗಣ್ಣನ ಕಣ್ಣು ತುಂಬಿ ಬರುತ್ತದೆ. ನೂರು ಕಾಲ ಚೆನ್ನಾಗಿರಿ ಎಂದು ಶ್ರಾವಣಿಯನ್ನು ಮನಸಾರೆ ಹಾರೈಸುತ್ತಾನೆ. ಅಲ್ಲದೇ ನೀವೆಲ್ಲರೂ ಇದ್ದೀರಾ, ಆದರೆ ಅವನೊಬ್ಬ ಇಲ್ಲ. ನಾನು ಕೊನೆಯ ಬಾರಿ ಅವನನ್ನು ನೋಡಿದಾಗ ವಿಜಯಾ ಜೊತೆ ಮಾತನಾಡುತ್ತಿದ್ದ ಎಂದು ಹೇಳುತ್ತಾರೆ. ಅವನು ಎಂದು ಹೇಳಿದ್ದು ಕೇಳಿ ವೀರೇಂದ್ರ ಮುಖ ಸಪ್ಪಗಾದರೆ, ವಿಜಯಾಂಬಿಕಾ ಇನ್ನೆಲ್ಲಿ ತನ್ನ ಸತ್ಯ ಬಯಲಾಗುತ್ತೋ ಅಂತ ವೀರು ಹೊರಡೋಣ ಎಂದು ಗಡಿಬಿಡಿ ಮಾಡುತ್ತಾಳೆ. ಸುಬ್ಬು–ಶ್ರಾವಣಿಗೆ ಎಲ್ಲವೂ ವಿಚಿತ್ರವಾಗಿ ಕಾಣುತ್ತದೆ. ರಂಗಣ್ಣನಿಗೆ ಹೇಳಿ, ಚಹಾದ ಹಣ ಕೊಟ್ಟು ಎಲ್ಲರೂ ಅಲ್ಲಿಂದ ಹೊರಡುತ್ತಾರೆ.
ಸಾಲಿಗ್ರಾಮದ ದ್ವಾರದಲ್ಲಿ ವೀರೇಂದ್ರ ಕುಟುಂಬ
ಸಾಲಿಗ್ರಾಮಕ್ಕೆ ವೀರೇಂದ್ರ ಹಾಗೂ ಶ್ರಾವಣಿ ಬರುವ ಬಗ್ಗೆ ಅಲ್ಲಿನ ಜನರೆಲ್ಲಾ ಉತ್ಸುಕರಾಗಿರುತ್ತಾರೆ. ಸಾಲಿಗ್ರಾಮದ ದ್ವಾರದಲ್ಲೇ ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಾಕಿರುತ್ತಾರೆ. ಎಲ್ಲರೂ ಮಾಲೆ ಹಿಡಿದು ಸ್ವಾಗತ ಮಾಡಲು ನಿಂತಿರುತ್ತಾರೆ. ಅಂತೂ ಸಾಲಿಗ್ರಾಮಕ್ಕೆ ಬಂದು ತಲುಪುತ್ತದೆ ವೀರೇಂದ್ರ ಕುಟುಂಬ. ವೀರೇಂದ್ರ ಕಾರಿನಿಂದ ಇಳಿದಾಗ ಎಲ್ಲರೂ ಜೈಕಾರ ಹಾಕುತ್ತಾರೆ. ಶ್ರಾವಣಿ ಮೊದಲ ಬಾರಿಗೆ ಅಮ್ಮನ ಊರಿಗೆ ಕಾಲಿಟ್ಟ ಖುಷಿಯಲ್ಲಿ ಕಣ್ಣೀರಾಗುತ್ತಾಳೆ. ಪದ್ಮನಾಭ ಸಾಲಿಗ್ರಾಮದ ದ್ವಾರಕ್ಕೆ ಕೈಮುಗಿದು ನಿಲ್ಲುತ್ತಾರೆ. ವಿಜಯಾಂಬಿಕಾ ಮಾತ್ರ ಭಯದಲ್ಲಿ ಹಿಂದೆ ಅಡಗಿ ನಿಲ್ಲುತ್ತಾಳೆ. ಇಲ್ಲದ ಭಯ ಅವಳನ್ನು ಆವರಿಸಿ ಇರುತ್ತದೆ. ಸುಬ್ಬುಗೆ ಪದ್ಮನಾಭರನ್ನು ನೋಡಿ ಆಶ್ಚರ್ಯ ಆಗುತ್ತದೆ. ತನ್ನಪ್ಪ ಯಾಕೆ ಹೀಗೆ ಸಾಲಿಗ್ರಾಮದ ಬಗ್ಗೆ ಇಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದಾರೆ ಎಂದು ತಿಳಿಯದೇ ಯೋಚನೆಯಲ್ಲಿ ಮುಳುಗುತ್ತಾನೆ.
ವಿಜಯಾಂಬಿಕಾ ಸಾಲಿಗ್ರಾಮದ ಬಗ್ಗೆ ಯಾಕಿಷ್ಟು ಭಯ, ಪದ್ಮನಾಭ ಅವರಿಗೆ ಸಾಲಿಗ್ರಾಮದ ಬಗ್ಗೆ ಅಷ್ಟೊಂದು ಗೌರವ ಏಕೆ, ಸಾಲಿಗ್ರಾಮದಲ್ಲಿ ಶ್ರಾವಣಿ ಅಜ್ಜಿ ಶ್ರಾವಣಿಯನ್ನು ಹೇಗೆ ಸ್ವಾಗತಿಸಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.