ಆಕ್ಸಿಡೆಂಟ್ ಮಾಡಿದ್ದು ಶ್ರಾವಣಿ, ಲಾಕಪ್ ಸೇರಿದ್ದು ಸುಬ್ಬು, ಶ್ರೀವಲ್ಲಿ ಪ್ಲಾನ್ ಏನು?: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
May 29, 2024 08:49 AM IST
ಆಕ್ಸಿಡೆಂಟ್ ಮಾಡಿದ್ದು ಶ್ರಾವಣಿ, ಲಾಕಪ್ ಸೇರಿದ್ದು ಸುಬ್ಬು, ಶ್ರೀವಲ್ಲಿ ಪ್ಲಾನ್ ಏನು?
- Shravani Subramanya Kannada Serial Today Episode May 28th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಶ್ರಾವಣಿ ಮಾಡಿದ ಆಕ್ಸಿಡೆಂಟ್ ಹೊಣೆ ಹೊತ್ತ ಸುಬ್ಬು ಜೈಲು ಸೇರುತ್ತಾನೆ. ಸುಬ್ಬುವನ್ನು ಜೈಲಿನಿಂದ ಬಿಡಿಸಲು ಶ್ರಾವಣಿ-ಶ್ರೀವಲ್ಲಿ ಮಾಸ್ಟರ್ ಪ್ಲಾನ್ ಮಾಡುತ್ತಾರೆ. ಬಾಲ ಸುಟ್ಟ ಬೆಕ್ಕಿನಂತಾಗುತ್ತದೆ ಮದನ್ ಪರಿಸ್ಥಿತಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಮೇ 28) ಸಂಚಿಕೆಯಲ್ಲಿ ಸುಬ್ಬು ಜೊತೆ ಮಾತನಾಡುತ್ತಾ ಕಾರು ಓಡಿಸಿಕೊಂಡು ಬರುತ್ತಿದ್ದ ಶ್ರಾವಣಿಯ ಕಾರಿಗೆ ಸಡನ್ ಆಗಿ ವ್ಯಕ್ತಿಯೊಬ್ಬ ಅಡ್ಡ ಬರುತ್ತಾನೆ. ಬ್ರೇಕ್ ಹಾಕಬೇಕು ಅನ್ನುವಷ್ಟರಲ್ಲಿ ಕಾರು ಅವನಿಗೆ ತಾಕಿರುತ್ತದೆ. ಕೂಡಲೇ ಅಲ್ಲಿ ಜನ ಸೇರುತ್ತಾರೆ. ಆದರೆ ಅವರೆಲ್ಲರೂ ಮದನ್ (ಶ್ರಾವಣಿಯ ಅತ್ತೆ ಮಗ) ಮೊದಲೇ ಫಿಕ್ಸ್ ಮಾಡಿರುವ ಜನರಾಗಿರುತ್ತಾರೆ. ಆದರೆ ಇದ್ಯಾವುದು ಅರಿಯದ ಶ್ರಾವಣಿ ಭಯದಿಂದ ಥರಗುಟ್ಟಿ ಬಿಡುತ್ತಾಳೆ. ಆ ಹೊತ್ತಿಗೆ ಸರಿಯಾಗಿ ಮದನ್ ಕಡೆಯವನೇ ಆದ ಪೊಲೀಸ್ ಕೂಡ ಅಲ್ಲಿಗೆ ಬರುತ್ತಾರೆ. ಅವರೆಲ್ಲರೂ ಸೇರಿಕೊಂಡು ಹೈಡ್ರಾಮ ಮಾಡುತ್ತಾರೆ. ಮಾತ್ರವಲ್ಲ ಶ್ರಾವಣಿಯನ್ನ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಲು ಸಿದ್ದರಾಗುತ್ತಾರೆ.
ಜೈಲು ಸೇರುವ ಸುಬ್ಬು
ಇನ್ನೇನು ಶ್ರಾವಣಿ ಜೀಪ್ ಹತ್ತಬೇಕು ಎನ್ನುವಾಗ ಆ ಸ್ಥಳದಲ್ಲಿ ಪ್ರತ್ಯಕ್ಷವಾಗುವ ಸುಬ್ಬು ಪೊಲೀಸರ ಬಳಿ ʼಆಕ್ಸಿಡೆಂಟ್ ಮಾಡಿದ್ದು ನಾನು, ಇಷ್ಟೊತ್ತು ಕಾರ್‌ನಲ್ಲಿ ಅಡಗಿ ಕೂತಿದ್ದೆ, ಮೇಡಂ ನನಗೆ ಅವಿತುಕೊಳ್ಳಲು ಹೇಳಿದ್ರುʼ ಎಂದು ಕಥೆ ಕಟ್ಟಿ ತಾನೇ ಆಕ್ಸಿಡೆಂಟ್ ಮಾಡಿದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಾನೆ. ಶ್ರಾವಣಿ ತಡೆಯಲು ಪ್ರಯತ್ನಪಟ್ಟರೂ ಕೂಡ ಸುಬ್ಬು ಅದಕ್ಕೆ ಅವಕಾಶ ಕೊಡುವುದಿಲ್ಲ. ಪೊಲೀಸರು ಸುಬ್ಬುವನ್ನ ಕರೆದಕೊಂಡು ಹೋಗಿ ಲಾಕಪ್‌ಗೆ ಹಾಕುತ್ತಾರೆ. ದಿಕ್ಕೇ ತೋಚದಂತಾದ ಶ್ರಾವಣಿ ನೇರವಾಗಿ ಪೊಲೀಸ್ ಸ್ಟೇಷನ್‌ಗೆ ಹೋಗುತ್ತಾಳೆ. ಲಾಕಪ್‌ನಲ್ಲಿ ಸುಬ್ಬುವನ್ನ ನೋಡಿ ಶ್ರಾವಣಿಯ ದುಃಖದ ಕಟ್ಟೆ ಒಡೆಯುತ್ತದೆ. ಆ ಹೊತ್ತಿನಲ್ಲೂ ಸುಬ್ಬು ಶ್ರಾವಣಿ ಪರವಾಗಿಯೇ ಯೋಚಿಸುತ್ತಾನೆ. ʼನೀವ್ಯಾಕೆ ಇಲ್ಲಿಗೆ ಬಂದ್ರಿ ಮೇಡಂ, ಇದು ನೀವೆಲ್ಲ ಬರುವ ಜಾಗವಲ್ಲʼ ಎಂದು ಅಕ್ಷೇಪ ಮಾಡುತ್ತಾನೆ. ಆಗ ಶ್ರಾವಣಿ ʼಆಕ್ಸಿಡೆಂಟ್ ಮಾಡಿದ್ದು ನಾನು, ನೀನ್ಯಾಕೆ ನಿನ್ನ ತಲೆ ಮೇಲೆ ಹಾಕಿಕೊಂಡೆʼ ಎಂದು ಪ್ರಶ್ನೆ ಮಾಡಿದಾಗ ʼನಾನಿರೋವರೆಗೂ ನಿಮಗೆ ಏನೂ ಆಗೋಕೆ ಬಿಡೊಲ್ಲ ಮೇಡಂʼ ಎಂದು ಭರವಸೆಯ ಮಾತುಗಳನ್ನ ಹೇಳುತ್ತಾನೆ ಸುಬ್ಬು. ಆಗ ಶ್ರಾವಣಿ ʼನಾನು ಈಗಲೇ ಅಪ್ಪಂಗೆ ಕಾಲ್ ಮಾಡ್ತೀನಿ, ಅವರಿಗೆ ನೀನು ಅರೆಸ್ಟ್ ಆಗಿರುವ ವಿಚಾರ ಹೇಳ್ತೀನಿʼ ಎಂದು ಫೋನ್ ತೆಗೆಯುತ್ತಾಳೆ. ಆಗ ಸುಬ್ಬು ʼಮೇಡಂ, ನೀವು ಸಾಹೇಬ್ರಿಗೆ ಏನೂ ಹೇಳಿಬೇಡಿ, ಈಗಷ್ಟೇ ಅವರಿಗೆ ಹತ್ರ ಆಗ್ತಾ ಇದೀರಾ, ಅಲ್ದೆ ಅವರು ಬಂದ್ರೆ ಮಿಡಿಯಾ ಅದು ಇದು ಅಂತ ದೊಡ್ಡ ಸುದ್ದಿಯಾಗುತ್ತೆ, ಅವ್ರಿಗೆ ಕಾಲ್ ಮಾಡಿದ್ರೆ ನನ್ ಮೇಲೆ ಆಣೆʼ ಎಂದು ಶ್ರಾವಣಿಯ ಕೈಕಟ್ಟಿ ಹಾಕುತ್ತಾನೆ.
ಶ್ರಾವಣಿ ಮೇಲೆ ಕೆಂಡ ಕಾರುವ ಶ್ರೀವಲ್ಲಿ
ಅಷ್ಟೊತ್ತಿಗೆ ಸರಿಯಾಗಿ ಅಲ್ಲಿಗೆ ಬರುವ ಶ್ರೀವಲ್ಲಿ ಸುಬ್ಬುವನ್ನು ಲಾಕಪ್‌ನಲ್ಲಿ ನೋಡಿ ರಂಪ ಮಾಡುತ್ತಾಳೆ. ಆದ್ರೆ ಪೊಲೀಸರು ಅವಳನ್ನ ಹೊರಗೆ ಕಳಿಸುತ್ತಾರೆ. ಸ್ಟೇಷನ್ ಹೊರಗೆ ಶ್ರಾವಣಿಗೆ ಸರಿಯಾಗಿ ಬಯ್ಯುತ್ತಿರುತ್ತಾಳೆ ಶ್ರೀವಲ್ಲಿ. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಸುಬ್ಬು ತಂದೆ ಹಾಗೂ ತಂಗಿ ವರ (ವರಲಕ್ಷ್ಮೀ) ಬರುತ್ತಾರೆ. ವರಳನ್ನು ನೋಡಿದ ಶ್ರಾವಣಿ ಓಡಿ ಹೋಗಿ ಅವಳನ್ನ ತಬ್ಬಿಕೊಂಡು ತಾನು ಆಕ್ಸಿಡೆಂಟ್ ಮಾಡಿದ್ದು ಸುಬ್ಬು ಅದನ್ನ ತನ್ನ ಮೇಲೆ ಹಾಕೊಂಡಿದ್ದು ಎಲ್ಲವನ್ನೂ ಹೇಳಿಕೊಂಡು ಅಳುತ್ತಾಳೆ. ಶ್ರಾವಣಿ ಆಕ್ಸಿಡೆಂಟ್ ಮಾಡಿದ್ದು ಎಂದು ತಿಳಿದ ಶ್ರೀವಲ್ಲಿ ಇನ್ನಷ್ಟು ರೇಗಾಡುತ್ತಾಳೆ. ಅವಳನ್ನು ಸಮಾಧಾನ ಮಾಡುವ ಸುಬ್ಬು ತಂದೆ ತಮ್ಮ ಪರಿಚಯದ ಪೊಲೀಸ್ ಒಬ್ಬರಿಗೆ ಮಾತನಾಡುತ್ತಾರೆ. ಆದರೆ ಸುಬ್ಬು ಅರೆಸ್ಟ್ ಆಗಿರುವ ಸ್ಟೇಷನ್ ಎಸ್‌ಐ ಕಿರಿಕ್ ಮನುಷ್ಯ, ಹಾಗಾಗಿ ನೀವು ನೇರವಾಗಿ ಆಸ್ಪತ್ರೆಯಲ್ಲಿರುವ ಆಕ್ಸಿಡೆಂಟ್ ಆದ ವ್ಯಕ್ತಿಯನ್ನು ಭೇಟಿ ಮಾಡಿ ಅವರಿಗೆ ಸ್ವಲ್ಪ ಸಹಾಯ ಮಾಡಿ ಕೇಸ್ ಹಾಕದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಇದನ್ನೇ ಶ್ರಾವಣಿ ಶ್ರೀವಲ್ಲಿ ಬಳಿ ಬಂದು ಹೇಳ್ತಾರೆ ಸುಬ್ಬು ತಂದೆ. ಕೊಡಲೇ ಸ್ಟೇಷನ್ ಒಳಗೆ ಹೋಗುವ ಅವರು ಎಸ್‌ಐ ಬಳಿ ಆಕ್ಸಿಡೆಂಟ್ ಆಗಿರುವ ವ್ಯಕ್ತಿಯ ಬಗ್ಗೆ ವಿಚಾರಿಸುತ್ತಾರೆ. ಆರಂಭದಲ್ಲಿ ಹೇಳದ ಆತ ಕೊನೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಕೂಡಲೇ ಶ್ರೀವಲ್ಲಿ ಹಾಗೂ ಶ್ರಾವಣಿ ಸರ್ಕಾರಿ ಆಸ್ಪತ್ರೆಗೆ ಹೋಗಿ ರೋಗಿಯ ಬಗ್ಗೆ ವಿಚಾರಿಸುತ್ತಾರೆ. ಆದರೆ ಅಲ್ಲಿ ಬೆಳಿಗ್ಗೆಯಿಂದ ಯಾವ ಆಕ್ಸಿಡೆಂಟ್ ಕೇಸ್ ಕೂಡ ಬಂದಿಲ್ಲ ಎಂದಾಗ ಇವರಿಗೆ ಅನುಮಾನ ಮೂಡಲು ಆರಂಭವಾಗುತ್ತದೆ. ಕೂಡಲೇ ಶ್ರೀವಲ್ಲಿ ಒಂದು ಪ್ಲಾನ್ ಮಾಡುತ್ತಾಳೆ. ಹೆಂಗಸರನ್ನೆಲ್ಲಾ ಕರೆದುಕೊಂಡು ಪೊಲೀಸ್ ಸ್ಟೇಷನ್ ಮುಂದೆ ಪ್ರತಿಭಟನೆ ಮಾಡುತ್ತಾರೆ ಶ್ರಾವಣಿ ಹಾಗೂ ಶ್ರೀವಲ್ಲಿ. ಪರಿಸ್ಥಿತಿ ಕೈ ಮೀರುತ್ತಿದೆ ಎನ್ನಿಸಿದಾಗ ಎಸ್ಐ ನಿಧಾನಕ್ಕೆ ಆಚೆ ಹೋಗಿ ಮದನ್‌ಗೆ ಕರೆ ಮಾಡಿ, ಪ್ರತಿಭಟನೆಯ ವಿಚಾರ ಹೇಳುತ್ತಾರೆ. ಆಗ ಮದನ್ ಆಕ್ಸಿಡೆಂಟ್ ಆಗಿರುವ ವ್ಯಕ್ತಿ ಸತ್ತಿದ್ದಾನೆ ಅದಕ್ಕೆ ಆಸ್ಪತ್ರೆಯಲ್ಲಿ ಇಲ್ಲ ಎಂದು ಸುಳ್ಳು ಹೇಳು ಎನ್ನುತ್ತಾನೆ. ಅಲ್ಲದೇ ಆಕ್ಸಿಡೆಂಟ್ ನಾಟಕ ಮಾಡಿದ ವ್ಯಕ್ತಿಗೆ ಒಂದಿಷ್ಟು ದಿನ ತಲೆಮರೆಸಿಕೊಂಡಿರಲು ಹೇಳು ಎನ್ನುತ್ತಾನೆ.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಶ್ರೀವಲ್ಲಿ ಪ್ಲಾನ್
ಆದರೆ ಚಾಲಾಕಿ ಶ್ರೀವಲ್ಲಿ ಪೊಲೀಸ್ ಮಾತಾಡಿದ್ದನ್ನೆಲ್ಲಾ ಅವನಿಗೇ ಗೊತ್ತಾಗದಂತೆ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಮದನ್ ಹೇಳಿದಂತೆ ಆಕ್ಸಿಡೆಂಟ್ ಆಗಿರುವ ವ್ಯಕ್ತಿ ಸತ್ತಿದ್ದಾನೆ ಎಂದು ಪ್ರತಿಭಟನಾಕಾರರ ಮುಂದೆ ಹೇಳುವ ಪೊಲೀಸ್ ಅಲ್ಲಿದ್ದವರನ್ನೆಲ್ಲಾ ಸಾಗ ಹಾಕುತ್ತಾನೆ. ಆಗ ದಿಕ್ಕೆ ತೋಚದಂತೆ ನಿಂತಿದ್ದ ಶ್ರಾವಣಿಯ ಬಳಿ ಬರುವ ಶ್ರೀವಲ್ಲಿ ಪೊಲೀಸ್ ಫೋನ್‌ನಲ್ಲಿ ಮಾತನಾಡಿರುವ ವಿಚಾರವನ್ನು ಹೇಳುತ್ತಾಳೆ. ಆಗ ಇಬ್ಬರಿಗೂ ಇಲ್ಲೇನೋ ಮಸಲತ್ತು ನಡೆಯುತ್ತಿದೆ ಎನ್ನುವುದು ತಿಳಿಯುತ್ತದೆ. ಸುಬ್ಬವನ್ನು ಬಿಡಿಸಲು ಬೇರೆಯದ್ದೇ ಪ್ಲಾನ್ ಮಾಡಬೇಕು ಎಂದು ಶ್ರೀವಲ್ಲಿ ಶ್ರಾವಣಿ ಯೋಚಿಸುತ್ತಾರೆ.
ಸುಬ್ಬು ಬಿಡಿಸೋಕೆ ಶ್ರಾವಣಿ-ಶ್ರೀವಲ್ಲಿ ಏನು ಪ್ಲಾನ್ ಮಾಡಬಹುದು, ಸುಬ್ಬು ಬಿಡುಗಡೆ ಆಗ್ತಾನಾ, ಇನ್ಸ್‌ಪೆಕ್ಟರ್ ಹಿಂದೆ ಯಾರ ಕೈವಾಡ ಇದೆ ಎಂಬುದು ಅವರಿಗೆ ಅರ್ಥ ಆಗುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಪಾತ್ರ ಪರಿಚಯ
ಸುಬ್ಬು: ಅಮೋಘ್ ಆದಿತ್ಯ (ನಾಯಕ)
ಶ್ರಾವಣಿ: ಐಶ್ವರ್ಯಾ ಫಿರ್ಡೋಸ್ (ನಾಯಕಿ)
ಅನಂತ ಪದ್ಮನಾಭ: ಬಾಲರಾಜ್ (ಸುಬ್ಬು ತಂದೆ)
ಅಪೂರ್ವಶ್ರೀ: (ಸುಬ್ಬು ತಾಯಿ)