ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ದೃಷ್ಟಿ ಕಳೆದುಕೊಂಡ್ರ ಕನ್ನಡದ ಕರೋಡ್‌ಪತಿ ನಟಿ; ಕಾರ್ನಿಯಾಗೆ ಹಾನಿ, ಲೆನ್ಸ್ ಬಳಸುವವರಿಗೆ ಎಚ್ಚರಿಕೆ
Jul 22, 2024 10:59 AM IST
ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ದೃಷ್ಟಿ ಕಳೆದುಕೊಂಡ್ರ ಕನ್ನಡದ ಕರೋಡ್‌ಪತಿ ನಟಿ
- Jasmin Bhasin: ಕನ್ನಡದ ಕರೋಡ್‌ಪತಿ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ, ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಜಾಸ್ಮಿನ್ ಭಾಸಿನ್ ಅವರ ಒಂದು ಕಣ್ಣಿನ ದೃಷ್ಟಿಗೆ ಕಾಂಟ್ಯಾಕ್ಟ್ ಲೆನ್ಸ್‌ನಿಂದ ಹಾನಿಯಾಗಿದೆ. ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿಗೆ ಹಾಕಿಕೊಳ್ಳುವ ಮೊದಲು ಈ ಮುಂದಿನ ಅಂಶಗಳನ್ನು ಗಮನಿಸಿ.
ಬೆಂಗಳೂರು: ಬಾಹ್ಯ ಕನ್ನಡಕ ಧರಿಸುವ ಬದಲು ಈಗ ಬಹುತೇಕರು ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಾರೆ. ಇದೇ ಸಂದರ್ಭದಲ್ಲಿ ಸಿನಿಮಾ ನಟಿಯರು ತಮ್ಮ ಕಣ್ಣಿನ ಬಣ್ಣವನ್ನು ಆಕರ್ಷಕವಾಗಿಸಲು ಫ್ಯಾಷನ್ ಆಗಿಯೂ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಾರೆ. ಆದರೆ, ಈ ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು. ಇಲ್ಲವಾದರೆ, ಕಣ್ಣಿನ ಕಾರ್ನಿಯಾಕ್ಕೆ ಹಾನಿ ಉಂಟಾಗಬಹುದು. ಇದೇ ರೀತಿಯ ಘಟನೆಯೊಂದು ವರದಿಯಾಗಿದ್ದು, ಕನ್ನಡದ ಕರೋಡ್‌ಪತಿ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ, ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಜಾಸ್ಮಿನ್ ಭಾಸಿನ್ ಅವರ ಒಂದು ಕಣ್ಣಿನ ದೃಷ್ಟಿಗೆ ಹಾನಿಯಾಗಿದೆ.
ಜನಪ್ರಿಯ ಕಿರುತೆರೆ ನಟಿ ಜಾಸ್ಮಿನ್ ಭಾಸಿನ್ (Jasmin Bhasin) ಈ ಕುರಿತು ಬಾಂಬೇ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್‌ನಿಂದ ಉಂಟಾದ ತೊಂದರೆಯಿಂದ ಈಕೆಯ ಕಾರ್ನಿಯಲ್‌ಗೆ ಡ್ಯಾಮೇಜ್ ಆಗಿದೆ. ಇದರಿಂದ ಇವರ ದೃಷ್ಟಿಗೆ ತೀವ್ರವಾದ ಹಾನಿಯಾಗಿದೆ. ಈ ಸುದ್ದಿ ವೈರಲ್ ಆದ ಬಳಿಕ ಈಕೆ ಪ್ರತಿಕ್ರಿಯೆ ನೀಡಿದ್ದಾರೆ.
"ಜುಲೈ 17ರಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಯಲ್ಲಿ ಇದ್ದೆ. ತಪ್ಪು ಎಲ್ಲಿ ಆಯ್ತು ಎಂದು ಸರಿಯಾಗಿ ನೆನಪಾಗ್ತ ಇಲ್ಲ. ಅಂದು ನಾನು ಕಾಂಟ್ಯಾಕ್ಟ್ ಲೆನ್ಸ್ ಧರಿಸಿದ ಬಳಿಕ ಕಣ್ಣಲ್ಲಿ ಕಿರಿಕಿರಿಯಾಗತೊಡಗಿತು. ನೋವು ಹೆಚ್ಚಾಗುತ್ತ ಹೋಯಿತು. ತಕ್ಷಣ ವೈದ್ಯರನ್ನು ನಾನು ಭೇಟಿಯಾಗಬೇಕಿತ್ತು. ಆದರೆ, ಕೆಲಸದ ಕಮಿಟ್‌ಮೆಂಟ್‌ನಿಂದಾಗಿ ಕಾರ್ಯಕ್ರಮ ಮುಗಿದ ಬಳಿಕ ಡಾಕ್ಟರ್ ಬಳಿಗೆ ಹೋಗಲು ನಿರ್ಧರಿಸಿದೆ ಕಾರ್ಯಕ್ರಮದಲ್ಲಿ ಸನ್ ಗ್ಲಾಸ್ ಬಳಸಿದೆ. ಈ ಸಂದರ್ಭದ ತೊಂದರೆಯಿಂದ ಪಾರುಮಾಡಲು ಇವೆಂಟ್ ಟೀಮ್ ಸಹಾಯ ಮಾಡಿತು. ಸ್ವಲ್ಪ ಹೊತ್ತಿನ ಬಳಿಕ ನನಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅಂದು ರಾತ್ರಿ ನಾನು ಕಣ್ಣಿನ ತಜ್ಞರನ್ನು ಭೇಟಿಯಾದೆ. ಪರೀಕ್ಷೆ ಮಾಡಿದ ಅವರು ನನ್ನ ಕಾರ್ನಿಯಾಕ್ಕೆ ಹಾನಿಯಾಗಿದೆ ಎಂದು ಬ್ಯಾಂಡೇಜ್ ಹಾಕಿದ್ದಾರೆ" ಎಂದು ಬಾಂಬೇ ಟೈಮ್ಸ್‌ಗೆ ನಟಿ ಜಾಸ್ಮಿನ್ ಭಾಸಿನ್ ಮಾಹಿತಿ ನೀಡಿದ್ದಾರೆ.
"ನನಗೆ ಸಾಕಷ್ಟು ನೋವಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಚೇತರಿಸಿಕೊಳ್ಳುವುದಾಗಿ ವೈದ್ಯರು ಹೇಳಿದ್ದಾರೆ. ಅಲ್ಲಿಯವರೆಗೆ ನಾನು ಕಣ್ಣನ್ನು ಹೆಚ್ಚು ಕಾಳಜಿ ವಹಿಸಬೇಕಿದೆ. ತುಂಬಾ ನೋವಿದೆ. ಸರಿಯಾಗಿ ನಿದ್ದೆ ಮಾಡಲು ಬಿಡದಷ್ಟು ನೋವಿದೆ" ಎಂದು ಅವರು ಹೇಳಿದ್ದಾರೆ. "ನಾನು ನನ್ನ ಕಮಿಟ್‌ಮೆಂಟ್ ಮುಂದೂಡುವಂತೆ ಇಲ್ಲ. ಕೆಲವೇ ದಿನಗಳಲ್ಲಿ ನಾನು ಚೇತರಿಸಿಕೊಂಡು ಕೆಲಸಕ್ಕೆ ಮರಳುವ ನಿರೀಕ್ಷೆಯಲ್ಲಿದ್ದೇನೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಯಾವುದೇ ಟಿವಿ ಶೋಗಳಲ್ಲಿ ಜಾಸ್ಮಿನ್ ಕಾಣಿಸಿಲ್ಲ. ಅಲಿ ಗೋನಿ ಜತೆಗಿನ ಸಂಬಂಧದ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇವರಿಬ್ಬರು ಮದುವೆಯಾಗುವ ಆಲೋಚನೆಯಲ್ಲೂ ಇದ್ದಾರೆ. ಇವರಿಬ್ಬರೂ ತಮ್ಮ ಕೆಲಸಗಳಲ್ಲಿ ಬಿಝಿ ಇದ್ದಾರೆ. ಅಂದಹಾಗೆ, ಜಾಸ್ಮಿನ್ ಕನ್ನಡದಲ್ಲಿ ಕೋಮಲ್ ಜತೆ ಕರೋಡ್‌ಪತಿ ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನಲ್ಲಿ ವನಂ, ಜಿಲ್ ಜಂಗ್ ಜಂಕ್, ಮಲಯಾಳಂನಲ್ಲಿ ಬಿವೇರ್ ಆಫ್ ಡಾಕ್ಸ್, ತೆಲುಗಿನಲ್ಲಿ ದಿಲ್ಲಂಡು, ವೇಟಾ, ಲೇಡಿಸ್ ಆಂಡ್ ಜಂಟಲ್‌ಮ್ಯಾನ್, ಪಂಜಾಬಿಯಲ್ಲಿ ಹನಿಮೂನ್, ವಾರ್ನಿಂಗ್ಸ್ 2ನಲ್ಲಿ ನಟಿಸಿದ್ದಾರೆ. ಕ್ಯಾರಿ ಆನ್ ಜಟ್ಟಿಯೇ ಇವರ ಮುಂಬರುವ ಪಂಜಾಬಿ ಚಿತ್ರವಾಗಿದೆ.
ಕಾಂಟ್ಯಾಕ್ಟ್ ಲೆನ್ಸ್ ಬಳಸುವವರಿಗೆ ಎಚ್ಚರಿಕೆ
ಕಣ್ಣು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಕಣ್ಣಿಗೆ ಆಗುವ ಹಾನಿಯಿಂದ ದೃಷ್ಟಿ ಕಳೆದುಕೊಳ್ಳಬೇಕಾಗಬಹುದು. ಕಾಂಟ್ಯಾಕ್ಟ್ ಲೆನ್ಸ್ ಈಗ ಹಲವು ರೀತಿಯಿಂದ ಪ್ರಯೋಜನಕಾರಿ. ಆದರೆ, ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಎನ್ನುತ್ತಾರೆ ನೇತ್ರ ತಜ್ಞರು. ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿಗೆ ಹಾಕಿಕೊಳ್ಳುವ ಮೊದಲು ಈ ಮುಂದಿನ ಅಂಶಗಳನ್ನು ಗಮನಿಸಿ.
- -ಕೈ ತೊಳೆಯಿರಿ. ಕೈ ಒಣಗಿಸಿ. ಬಳಿಕ ಕಾಂಟ್ಯಾಕ್ಟ್ ಲೆನ್ಸ್ ಮುಟ್ಟಿ.
- ಫ್ರೆಶ್ ಕಾಂಟ್ಯಾಕ್ಟ್ ಲೆನ್ಸ್ ಸೊಲ್ಯುಷನ್ಸ್ ಬಳಸಿ. ಹೊಸ ಸೊಲ್ಯುಷನ್ ಅನ್ನು ಹಳೆಯ ಸೊಲ್ಯುಷನ್‌ಗೆ ಮಿಕ್ಸ್ ಮಾಡಬೇಡಿ. ನೀರಿನಲ್ಲಿ ಲೆನ್ಸ್‌ಗಳನ್ನು ತೊಳೆಯಬೇಡಿ. ಈ ರೀತಿ ಮಾಡಿದರೆ Acanthamoeba keratitis ಎಂಬ ಅಪರೂಪದ ನೋವು ಹೊಂದಿರುವ ಸೋಂಕು ಕಣ್ಣಿಗೆ ಉಂಟಾಗಬಹುದು.
- ಕಾಂಟ್ಯಾಕ್ಟ್ ಲೆನ್ಸ್ ಇಡುವ ಕೇಸ್ ಅನ್ನೂ ನಿಯಮಿತವಾಗಿ ಬದಲಾಯಿಸಿ. ಕಾಂಟ್ಯಾಕ್ಟ್ ಲೆನ್ಸ್ ಕೇಸ್ (ಬಾಕ್ಸ್)ನೊಳಗೆ ಬ್ಯಾಕ್ಟೀರಿಯಾ ಅಥವಾ ಇತರೆ ಮೈಕ್ರೊ ಜೀವಿಗಳು ಬೆಳೆಯಬಹುದು. ಮೂರು ತಿಂಗಳಿಗೊಮ್ಮೆ ಕಾಂಟ್ಯಾಕ್ಟ್ ಲೆನ್ಸ್ ಕೇಸ್ ಬದಲಾಯಿಸುತ್ತ ಇರಿ.
- ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ನಿದ್ದೆ ಮಾಡಬೇಡಿ.
- ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಸ್ನಾನ ಮಾಡುವುದು, ಈಜುವುದನ್ನು ಮಾಡಬೇಡಿ.
- ಕಾಂಟ್ಯಾಕ್ಟ್ ಲೆನ್ಸ್‌ಗಾಗಿಯೇ ಇರುವ ರಿವೆಟ್ಟಿಂಗ್ ಡ್ರಾಪ್ಸ್ ಬಳಸಿ, ಸಾಮಾನ್ಯ ಐ ಡ್ರಾಪ್‌ಗಳನ್ನು ಬಳಸಬೇಡಿ.
- -ವರ್ಷಕ್ಕೊಮ್ಮೆ ನಿಮ್ಮ ಕಣ್ಣನ್ನು ನೇತ್ರತಜ್ಞರಿಗೆ ತೋರಿಸಿ.
- -ಕಣ್ಣಿಗೆ ಸೋಂಕು ತಗುಲಿರುವ ಸಂದರ್ಭದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಧರಿಸಬೇಡಿ.
- ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ಕಣ್ಣಿಗೆ ಕಿರಿಕಿರಿ, ನೋವು ಆಗುತ್ತಿದ್ದರೆ ತಕ್ಷಣ ನೇತ್ರತಜ್ಞರನ್ನು ಸಂಪರ್ಕಿಸಿ.