ಅನಿರುದ್ದ್ ಜತ್ಕರ್ ನಟನೆಯ ಸೂರ್ಯವಂಶ ಧಾರಾವಾಹಿಯ ಸ್ಟೋರಿ ಬಹಿರಂಗ; ಸುರಭಿ ಪಾತ್ರದಲ್ಲಿ ನಟಿಸುವ ನಾಯಕಿ ಯಾರು? ಕಥೆ, ಪಾತ್ರವರ್ಗದ ವಿವರ
Mar 07, 2024 11:47 AM IST
ಅನಿರುದ್ದ್ ಜಟ್ಕರ್ ನಟನೆಯ ಸೂರ್ಯವಂಶ ಧಾರಾವಾಹಿಯ ಕಥೆ ಮತ್ತು ತಾರಾಗಣ
- Suryavamsha Kannada Serial: ಉದಯ ಟಿವಿಯಲ್ಲಿ ಅನಿರುದ್ದ್ ಜತ್ಕರ್ ನಟನೆಯ ಸೂರ್ಯವಂಶ ಧಾರಾವಾಹಿ ಇದೇ ಮಾರ್ಚ್ 11ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈ ಸೀರಿಯಲ್ ಕಥೆಯೇನು? ಯಾರೆಲ್ಲ ಪಾತ್ರದಾರಿಗಳು ಇದ್ದಾರೆ ಇತ್ಯಾದಿ ವಿವರ ಇದೀಗ ಲಭ್ಯವಾಗಿದೆ. ಡಾ. ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಸಿನಿಮಾದ ಮುಂದುವರೆದ ಭಾಗದಂತೆ ಈ ಧಾರಾವಾಹಿ ಇರಲಿದೆ.
ಬೆಂಗಳೂರು: ಹೊಸ ಧಾರಾವಾಹಿ ಆರಂಭವೆಂದರೆ ಕಿರುತೆರೆ ಪ್ರೇಕ್ಷಕರಿಗೆ ಏನೋ ಖುಷಿ. ಈಗಾಗಲೇ ಜೊತೆಜೊತೆಯಲ್ಲಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸು ಕದ್ದಿರುವ ಅನಿರುದ್ಧ್ ಜತ್ಕರ್ ನಟನೆಯ ಹೊಸ ಧಾರಾವಾಹಿ ಆರಂಭವಾಗುತ್ತಿರುವ ಸಂಗತಿ ಈಗಾಗಲೇ ಬಹುತೇಕರಿಗೆ ತಿಳಿದಿದೆ. ಈ ಸೀರಿಯಲ್ ಸ್ಟೋರಿ ಏನು? ಸೂರ್ಯವಂಶ ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಡಾ.ವಿಷ್ಣುವರ್ಧನ್ ಅಭಿನಯದ ’ಸೂರ್ಯವಂಶ’ ಚಿತ್ರವು ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಧಾರಾವಾಹಿಯೊಂದು ’ಉದಯ ವಾಹಿನಿ’ಯಲ್ಲಿ ವೀಕ್ಷಕರಿಗೆ ತೋರಿಸಲು ಸಿದ್ದವಾಗಿದೆ. ತನ್ವಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಪಕ ಎಲ್.ಪದ್ಮನಾಭ ಬಂಡವಾಳ ಹೂಡುವುದರ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಹರಿಸಂತು ಪ್ರಧಾನ ನಿರ್ದೇಶಕರಾಗಿದ್ದು, ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ.
ಸೂರ್ಯವಂಶ ಸೀರಿಯಲ್ ಕಥೆಯೇನು?
ಬಹುನಿರೀಕ್ಷಿತ ಹೊಸ ಧಾರಾವಾಹಿ ʼಸೂರ್ಯವಂಶʼ ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ʼಸೂರ್ಯವಂಶʼ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ವಂಶದ ಕುಡಿಯದೇ ಚಿಂತೆ. ಯಾಕೆಂದರೆ ಇಪ್ಪತ್ತು ವರ್ಷಗಳ ಹಿಂದೆ ಮೊಮ್ಮಗ ಸೂರ್ಯವರ್ಧನ ಕಾಣೆಯಾಗಿದ್ದಾನೆ. ಆದರೆ ಆತ ಬರುವ ಸಾಧ್ಯತೆ ಇಲ್ಲ ಎನ್ನುವುದು ಕುಟುಂಬದ ಉಳಿದ ಸದಸ್ಯರ ನಂಬಿಕೆ. ಬಂದೇ ಬರುತ್ತಾನೆ ಎಂದು ನಂಬಿರುವ ಸತ್ಯಮೂರ್ತಿಯ ಸಮಾಧಾನಕ್ಕೆ ಕುಟುಂಬದ ವಕೀಲರು ಒಬ್ಬ ಸೂಕ್ತ ವ್ಯಕ್ತಿಯ ತಲಾಶ್ ಮಾಡುತ್ತಾರೆ. ಒಂದು ಆಕಸ್ಮಿಕ ಸಂದರ್ಭದಲ್ಲಿ ಒಬ್ಬ ಆಕರ್ಷಕ ಹುಡುಗ ಸಿಕ್ಕೇಬಿಡುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವ ಒಂದೇ ಕಾರಣಕ್ಕೆ ಆತ ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವನೇ ಕಥಾನಾಯಕ ಕರ್ಣ.
ಕರ್ಣ ʼಸೂರ್ಯವಂಶʼಕ್ಕೆ ಕಾಲಿಟ್ಟ ನಂತರ ಮುಂದಿನ ದಾರಿ ಸವಾಲುಗಳಿಂದ ತುಂಬಿರುತ್ತದೆ. ಮನೆಯೊಳಗೂ ಹೊರಗೂ ವಿರೋಧಿಗಳಿದ್ದಾರೆ. ಅದೇ ಊರಿನಲ್ಲಿ ಸೂರ್ಯವಂಶದ ಬದ್ಧಶತ್ರು ಕಾಳಿಂಗನ ಕುಟುಂಬವಿದೆ. ಅವನ ಆಟಾಟೋಪ ಮಿತಿಮೀರಿರುತ್ತದೆ. ಅವನನ್ನು ಬಗ್ಗುಬಡಿಯುವುದು ಕರ್ಣನಿಂದ ಮಾತ್ರ ಸಾಧ್ಯ ಅಂತ ಊರ ಜನ ನಂಬಿದ್ದಾರೆ. ಈ ನಡುವೆ ಕಥಾನಾಯಕಿ ಸುರಭಿಯ ಆಗಮನವಾಗುತ್ತದೆ. ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಎಲ್ಲ ಸವಾಲುಗಳನ್ನು ಸೂರ್ಯನಾಗಿ ನಟಿಸುತ್ತ ಕರ್ಣ ಹೇಗೆ ಎದುರಿಸುತ್ತಾನೆ ? ಕರ್ಣನೇ ʻಸೂರ್ಯವಂಶʼದ ಕುಡಿ ಸೂರ್ಯವರ್ಧನ ಎನ್ನುವ ವಿಷಯ ಹೇಗೆ, ಯಾರಿಂದ, ಯಾವಾಗ ಬಹಿರಂಗವಾಗುತ್ತದೆ ? ಇವೆಲ್ಲ ಮುಂದಿರುವ ರೋಚಕ ತಿರುವುಗಳು.
ಸೂರ್ಯವಂಶ ಧಾರಾವಾಹಿ ಪಾತ್ರವರ್ಗ
ಕಥಾನಾಯಕ ಸೂರ್ಯವರ್ಧನ/ಕರ್ಣನ ಪಾತ್ರದಲ್ಲಿ ಜನಪ್ರಿಯ ನಟ ಅನಿರುದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಸುರಭಿ ಪಾತ್ರದಲ್ಲಿ ಅಶ್ವಿನಿ, ತಾತ ಸತ್ಯಮೂರ್ತಿ ಪಾತ್ರದಲ್ಲಿ ಸುಂದರರಾಜ್, ಖಳನಟ ಕಾಳಿಂಗನ ಪಾತ್ರದಲ್ಲಿ ದಿ.ಉದಯಕುಮಾರ್‌ರ ಪುತ್ರ ವಿಕ್ರಂ ಉದಯಕುಮಾರ್ ನಟಿಸುತ್ತಿದ್ದಾರೆ. ಉಳಿದಂತೆ ರವಿ ಭಟ್, ಸುಂದರಶ್ರೀ, ಲೋಕೇಶ್ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರ ದೊಡ್ಡ ತಾರಾಗಣವಿದೆ. ಹರಿಸಂತು ಪ್ರಧಾನ ನಿರ್ದೇಶನದ ʻಸೂರ್ಯವಂಶʼ ತನ್ವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ಸಂಚಿಕೆ ನಿರ್ದೇಶನ: ಪ್ರಕಾಶ್ ಮುಚ್ಚಳಗುಡ್ಡ, ಛಾಯಾಗ್ರಹಣ: ಶಿವರಾಜು ಎಂ.ಆರ್ ಅವರದು. ಸೂರ್ಯವಂಶ ಧಾರಾವಾಹಿ ಇದೇ ಮಾರ್ಚ್ 11ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.