Reality Show: ನಾವು ಬಿಗ್‌ಬಾಸ್ ನೋಡೋದಿಲ್ಲ; ಬಿಗ್‌ಬಾಸ್ ರಿಯಾಲಿಟಿ ಶೋ ಇಷ್ಟಪಡದೆ ಇರುವವರು ಹೇಳುವ 6 ಆಸಕ್ತಿದಾಯಕ ಕಾರಣಗಳಿವು
Nov 03, 2023 01:16 PM IST
ಬಿಗ್‌ಬಾಸ್ ಇಷ್ಟಪಡದೆ ಇರುವವರು ಹೇಳುವ 6 ಕಾರಣಗಳು
- Bigg Boss Latest News and Debate: ಜನರಿಗೆ ಬಿಗ್‌ಬಾಸ್ ಇಷ್ಟನಾ, ಎಲ್ಲರೂ ಬಿಗ್‌ಬಾಸ್ ಕನ್ನಡ, ಬಿಗ್‌ಬಾಸ್ ಹಿಂದಿಯನ್ನು ನೋಡುತ್ತಾರ? ಈ ಶೋ ಕುರಿತು ಸಾಕಷ್ಟು ಜನರಲ್ಲಿ ತಕರಾರು ಇದೆ. ಈ ಶೋದಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ, ಖಿನ್ನತೆ ಇತ್ಯಾದಿಗಳು ಉಂಟಾಗುತ್ತದೆ ಎನ್ನುವವರೂ ಇದ್ದಾರೆ.
ಬೆಂಗಳೂರು: ಭಾರತದಲ್ಲಿ ಈಗ ಬಿಗ್‌ಬಾಸ್ ರಿಯಾಲಿಟಿ ಶೋಗಳ ಋತು. ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್ ಸೀಸನ್ 10 ನಡೆಯುತ್ತಿದ್ದು, ಪ್ರತಿನಿತ್ಯ ಏನಾಯಿತು ಎಂದು ಸಾಕಷ್ಟು ಜನರು ಕುತೂಹಲದಿಂದ ಕಾಯುತ್ತ ಇರುತ್ತಾರೆ. ಇದೇ ಸಮಯದಲ್ಲಿ ಬಿಗ್‌ಬಾಸ್ ಸೀಸನ್ 16 ಶೋ ಹಿಂದಿಯಲ್ಲಿ ಆರಂಭವಾಗಿದೆ. ತೆಲುಗು ಮತ್ತು ತಮಿಳು ಭಾಷೆಯಲ್ಲೂ ಬಿಗ್‌ಬಾಸ್ ನಡೆಯುತ್ತಿದೆ. ಕನ್ನಡ ವೀಕ್ಷಕರು ಬಿಗ್‌ಬಾಸ್ ಕನ್ನಡ ಸೀಸನ್ 10 ಇಷ್ಟಪಟ್ಟು ನೋಡಬಹುದು. ಹಿಂದಿ ವೀಕ್ಷಕರು ಬಿಗ್‌ಬಾಸ್ ಸೀಸನ್ 16ರಲ್ಲಿ ಇಂದೆನಾಗುತ್ತದೆ ಎಂದು ಕಾಯುತ್ತಿರಬಹುದು. ಇದೇ ಸಮಯದಲ್ಲಿ ಕೆಲವರು ಬಿಗ್‌ಬಾಸ್ ಎಂದರೆ ಕೆಕ್ಕರಿಸಿ ನೋಡುತ್ತಾರೆ. ಕೆಲವರಿಗೆ ಬಿಗ್‌ಬಾಸ್ ಇಷ್ಟವಾಗದೆ ಇರಲು ಹಲವು ಕಾರಣಗಳಿವೆ.
ಬಿಗ್‌ಬಾಸ್ ಅಂದ್ರೆ ಹಿಂಸೆ (Violence)
ಬಿಗ್‌ಬಾಸ್‌ನಲ್ಲಿ ಮನರಂಜನೆ ಹೆಸರಿನಲ್ಲಿ ಕ್ರೌರ್ಯ, ಹೊಡೆದಾಟ, ಜಗಳ ಇರುತ್ತದೆ. ಒಬ್ಬರನ್ನೊಬ್ಬರು ಕೆಟ್ಟಪದಗಳಿಂದ ನಿಂದಿಸುತ್ತಾರೆ. ಇದನ್ನು ನೋಡಲು ಕೆಲವರು ಇಷ್ಟಪಡುವುದಿಲ್ಲ. ಈಗಾಗಲೇ ಹಿಂದಿ ಮತ್ತು ಕನ್ನಡ ಬಿಗ್‌ಬಾಸ್‌ನಲ್ಲಿ ಇಂತಹ ನಿಂದನೆ, ಜಗಳ ಶುರುವಾಗಿದೆ.
ದುರ್ವರ್ತನೆಯ ಶೋ (Toxic behavior)
ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳ ವರ್ತನೆ ಕೆಲವೊಮ್ಮೆ ಕೆಟ್ಟದ್ದಾಗಿರುತ್ತದೆ. ಇದು ಟಾಕ್ಸಿಕ್ ವರ್ತನೆಗೆ ಪ್ರೋತ್ಸಾಹ ನೀಡುತ್ತದೆ. ನಕರಾತ್ಮಕ ವರ್ತನೆಗೆ ಪ್ರೋತ್ಸಾಹ ನೀಡುತ್ತದೆ ಎಂಬ ಅಭಿಪ್ರಾಯವಿದೆ. ಇಂತಹ ಶೋ ನೋಡಿ ನಮ್ಮ ಮನಸ್ಸನ್ನು ಏಕೆ ಹಾಳು ಮಾಡಿಕೊಳ್ಳಬೇಕು. ಮನೆಮಂದಿಯೆಲ್ಲ ಒಟ್ಟಾಗಿ ಕೂತು ನೋಡುವಾಗ ಇದು ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಕೆಲವರು ಜನರ ಅಭಿಪ್ರಾಯ.
ನಾವು ಮೆಂಟಲ್ ಆಗ್ರಿವಿ ಅಷ್ಟೇ (Mental health)
ಮಾನಸಿಕ ಆರೋಗ್ಯ: ಈ ರಿಯಾಲಿಟಿ ಶೋ ನೋಡುಗರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನಕಾರಾತ್ಮಕ ವರ್ತನೆ ಹೆಚ್ಚಿಸಬಹುದು. ಖಿನ್ನತೆ ಹೆಚ್ಚಿಸಬಹುದು. ಸ್ಪರ್ಧಿಗಳ ವರ್ತನೆಯು ನೋಡುಗರ ಮೇಲೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯವಿದೆ.
ಪೂರ್ವನಿರ್ಧರಿತ (Scripted)
ಬಿಗ್‌ಬಾಸ್ ಸ್ಪರ್ಧೆಯು ಸಂಪೂರ್ಣವಾಗಿ ಸ್ಕ್ರಿಪ್ಟ್ ಅಲ್ಲ. ಆದರೆ, ಪ್ರತಿವಾರ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಸುಳ್ಳಲ್ಲ. ಕೆಲವು ಜನರಿಗೆ ಬಿಗ್‌ಬಾಸ್ ಎನ್ನುವುದು ಸ್ಕ್ರಿಪ್ಟೆಡ್ ಎಂಬ ಅಭಿಪ್ರಾಯವಿದೆ. ಹೀಗಾಗಿ, ಈ ಶೋ ಅವರು ಇಷ್ಟಪಡೋದಿಲ್ವಂತೆ. ಬಿಗ್‌ಬಾಸ್ ಕನ್ನಡ ಆರಂಭಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್‌ಗೂ ಈ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು "ಮನೆಯೊಳಗೆ ಇರುವವರಿಗೆ ಹೀಗೆ ಮಾಡಿ ಎಂದು ಹೇಳುವುದು ಹೇಗೆ. ಒಬ್ಬರು ಏನಾದರೂ ಹೇಳಿದಾಗ ಅದಕ್ಕೆ ಅವರ ಮುಂದಿರುವವರು ಅವರೇ ಪ್ರತಿಕ್ರಿಯೆ ನೀಡಬೇಕು. ನಾವು ಹೇಳಿಕೊಡಲು ಸಾಧ್ಯವೇ" ಎನ್ನುವ ಅರ್ಥದಲ್ಲಿ ವಿವರಿಸಿದ್ದರು.
ಇದು ರಿಯಾಲಿಟಿ ಶೋನೇ ಅಲ್ಲ (Not a reality show)
ಇದು ರಿಯಾಲಿಟಿ ಶೋನೇ ಅಲ್ಲ. ಇದು ಸ್ಪರ್ಧಿಗಳ ನಡುವೆ ಆಕ್ರಮಣಕಾರಿ ವರ್ತನೆಗೆ ಸಹಾಯ ನೀಡುವ ಒಂದು ಕಾರ್ಯಕ್ರಮ ಎಂಬ ಅಭಿಪ್ರಾಯವಿದೆ. ಇದು ನಿಮ್ಮ ಸಮಯ ವ್ಯರ್ಥ ಮಾಡುತ್ತದೆ. ಆ ಸಮಯದಲ್ಲಿ ಇನ್ಯಾವುದಾದರೂ ಒಳ್ಳೆಯ ಕಾರ್ಯಕ್ರಮ ಅಥವಾ ಸಿನಿಮಾ ನೋಡಿ, ಅಥವಾ ಮನೆಮಂದಿಯ ಜತೆಗೆ ಉತ್ತಮವಾಗಿ ಕಾಲ ಕಳೆಯಿರಿ ಎಂಬ ಅಭಿಪ್ರಾಯ ನೀಡುವವರೂ ಇದ್ದಾರೆ.
ಅಸಹ್ಯ ಮಾರ್ರೆ (Too vulgar)
ಬಿಗ್‌ಬಾಸ್ ಎನ್ನುವುದು ಅಸಹ್ಯ. ಕುಟುಂಬದ ಜತೆ ಕೂತು ನೋಡುವುದು ಕಷ್ಟ ಎನ್ನುವವರೂ ಇದ್ದಾರೆ. ಬಿಗ್‌ಬಾಸ್‌ನೊಳಗಿನ ಪ್ರೇಮಕಥೆಗಳು, ಕೆಲವೊಂದು ವರ್ತನೆಗಳು ಕೆಲವರು ಇಷ್ಟಪಡುವುದಿಲ್ಲ. ಥೂ, ತುಂಬಾ ವಲ್ಗರ್, ನಾವಂತೂ ನೋಡೋಲ್ಲಪ್ಪ ಎಂದು ಹೇಳುತ್ತಾ ಇರುತ್ತಾರೆ.
ಅದೊಂದು ಮೂರ್ಖರ ಶೋ. ದುಡ್ಡು ಪಡೆದು ತಮ್ಮ ಮರ್ಯಾದೆ ತಾವೇ ಕಳೆದುಕೊಳ್ಳುವ ಶೋ. ಅನೇಕ ಸೆಲೆಬ್ರಿಟಿಗಳು ಅಭಿಮಾನಿಗಳನ್ನು ಕಳೆದುಕೊಳ್ಳುವ ಶೋ. ಅದನ್ನು ವೀಕ್ಷಿಸಿ ಕಲಿಯಲು ಏನೋ ಇಲ್ಲದೆ ಸಮಯ ಹಾಳುಮಾಡಿಕೊಳ್ಳುವ ಶೋ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
ಬಿಗ್‌ಬಾಸ್ ಶೋ ಅನ್ನು ನೋಡದೆ ಇರುವುದು ಅವರವರ ವೈಯಕ್ತಿಕ ವಿಚಾರ. ಕೆಲವರು ನೋಡೋಲ್ಲ ಅಂದುಕೊಂಡು ನೋಡುತ್ತಾರೆ. ಇನ್ನು ಕೆಲವರು ಪ್ರಮೋ ಮಾತ್ರ ನೋಡ್ತಾರೆ. ಕೆಲವರು ಪ್ರತಿದಿನ ಬಿಗ್‌ಬಾಸ್ ನೋಡದೆ ವಾರಾಂತ್ಯದ ಶೋ ಮಾತ್ರ ನೋಡ್ತಾರೆ. ಸಾಕಷ್ಟು ಕನ್ನಡಿಗರು ವಾರದ ಕಥೆ ಕಿಚ್ಚನ ಜತೆ ಮಾತ್ರ ನೋಡ್ತಾರೆ. ಇದೇ ರೀತಿ ಸಲ್ಮಾನ್ ಖಾನ್ ಅವರ ಪಂಚಾಯಿತಿಯನ್ನು ಮಾತ್ರ ನೋಡುವವರು ಇದ್ದಾರೆ. ಅಂದಹಾಗೆ ನೀವು ಬಿಗ್‌ಬಾಸ್ ನೋಡ್ತಿರಾ, ಇಲ್ವ?