ಸಂದರ್ಶನ: ಬಿಗ್‌ಬಾಸ್‌ನಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಟಾಪ್ 3ಗೆ ಹೋಗಲು ನಾನೇ ಕಾರಣ ಎಂದ ವಿನಯ್ ಗೌಡ
Jan 30, 2024 05:15 PM IST
ಕಾರ್ತಿಕ್, ಸಂಗೀತಾ, ಪ್ರತಾಪ್ ಟಾಪ್ 3ಗೆ ಹೋಗಲು ನಾನೇ ಕಾರಣ ಎಂದ ವಿನಯ್ ಗೌಡ
- Bigg Boss Kannada 10 Vinay Gowda Interview: ಬಿಗ್‌ಬಾಸ್‌ನಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಟಾಪ್ 3ಗೆ ಹೋಗಲು ನಾನೇ ಕಾರಣ ಎಂದ ಸಂದರ್ಶನದಲ್ಲಿ ವಿನಯ್ ಗೌಡ ಹೇಳಿದ್ದಾರೆ. ಇದೇ ಸಮಯದಲ್ಲಿ ಉಳಿದ ಆಟಗಾರರ ಬಗ್ಗೆಯೂ ಹರಹರ ಮಹಾದೇವ ಸೀರಿಯಲ್ ನಟ ವಿನಯ್ ಮಾತನಾಡಿದ್ದಾರೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ ಹೊರಬಂದಿದ್ದಾರೆ. ಬಿಬಿಕೆ 10ರ ವಿನ್ನರ್ ಆಗಿ ಕಾರ್ತಿಕ್ ಗೌಡ, ಮೊದಲ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್, ಎರಡನೇ ರನ್ನರ್‌ಅಪ್ ಆಗಿ ಸಂಗೀತಾ ಶೃಂಗೇರಿ ಹೊರಹೊಮ್ಮಿದ್ದರು. ಇದೀಗ ಮೂರನೇ ರನ್ನರ್‌ಅಪ್ ಆಗಿರುವ ವಿನಯ್ ಗೌಡ ತನ್ನ ಬಿಗ್‌ಬಾಸ್ ಜರ್ನಿ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿನಯ್ ಗೌಡ ಅವರು ಸ್ಟ್ರಾಂಗ್ ಸ್ಪರ್ಧಿಯೆಂದು ಆರಂಭದಿಂದಲೇ ಗುರುತಿಸಿಕೊಂಡಿದ್ದರು. ಈಗಾಗಲೇ ವಿನಯ್ ಗೌಡ ಸಂದರ್ಶನದ ಮೊದಲ ಭಾಗವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರಕಟಿಸಿದೆ. (ಓದಿ: ವಿನಯ್ ಗೌಡ ಸಂದರ್ಶನ ಭಾಗ 1).
ಕಾರ್ತಿಕ್ ಮಹೇಶ್ ಜತೆ ಹತ್ತು ವರ್ಷದ ಪರಿಚಯ
“ಮನೆಯೊಳಗಿನ ಸ್ಪರ್ಧಿಗಳಲ್ಲಿ ಕಾರ್ತಿಕ್ ಒಂದ್ಹತ್ ವರ್ಷಗಳಿಂದ ನನಗೆ ಪರಿಚಯ. ಸಂಗೀತಾ ಏಳು ವರ್ಷಗಳಿಂದ ಪರಿಚಯ, ಯಾಕೆಂದರೆ ಇಬ್ಬರೂ ಒಂದು ಧಾರಾವಾಹಿಯಲ್ಲಿ ಕೆಲಸ ಮಾಡಿದ್ವಿ” ಎಂದು ವಿನಯ್ ಗೌಡ ಹೇಳಿದ್ದಾರೆ.
“ನನಗೆ ಕಾರ್ತಿಕ್‌ಗೆ ಅಂಥ ರೈವಲರಿ ಏನಿಲ್ಲ. ಟಾಸ್ಕ್ ಅಂತ ಬಂದಾಗ, ಗೇಮ್ ಅಂತ ಬಂದಾಗ ಮಾತಿಗೆ ಮಾತುಬಂದೇ ಬರ್ತವೆ. ಹಾಗಾಗಿ ಭಿನ್ನಾಭಿಪ್ರಾಯ ಬರುತ್ತಿದ್ದವು. ಆದರೆ ಬೇಗ ಪರಸ್ಪರ ಮಾತಾಡ್ಕೊಂಡು ಸರಿ ಹೋಗ್ತಿದ್ವಿ. ಈಗಲೂ ನಾನು ಕಾರ್ತಿಕ್ ಒಳ್ಳೆ ಫ್ರೆಂಡ್ಸ್ ಆಗೇ ಇರ್ತೀವಿ” ಎಂದು ವಿನಯ್ ಗೌಡ ಹೇಳಿದ್ದಾರೆ.
ಆದ್ರೆ ಏನೂ ಮಾಡಕ್ಕಾಗಲ್ಲ, ನಾನಿರೋದೇ ಹೀಗೆ!
"ನೂರಕ್ಕೂ ಹೆಚ್ಚು ದಿನಗಳ ಕಾಲ ಆಕ್ಟಿಂಗ್ ಮಾಡೋದಕ್ಕೆ ಆಗುವುದಿಲ್ಲ. ನೂರಕ್ಕೂ ಹೆಚ್ಚು ದಿನ ಆಕ್ಟ್ ಮಾಡಿದ್ರೂ ಆ ಆಕ್ಟಿಂಗ್‌ನ ಲೈಫ್‌ಲಾಂಗ್ ಹಾಗೇ ಮಾಡಿಕೊಂಡು ಹೋಗಬೇಕು. ಇಷ್ಟರಲ್ಲೇ ಆ ಆಕ್ಟಿಂಗ್ ಮುಗಿಯತ್ತೆ. ಯಾರು ಯಾರು ಮನೆಯೊಳಗೆ ಫೇಕ್ ಆಗಿದ್ರು ಎಂದು ನಿಮಗೆ ಗೊತ್ತಾಗತ್ತೆ. ಯಾಕೆಂದರೆ ಜೀವನಪರ್ಯಂತ ಆಕ್ಟಿಂಗ್ ಮಾಡಿಕೊಂಡು ಹೋಗೋದಕ್ಕೆ ಸಾಧ್ಯವಿಲ್ಲ. ಮನಸಾರೆ ಎಲ್ಲರಿಗೂ ಬೆಸ್ಟ್ ವಿಶಸ್ ಹೇಳ್ತೀನಿ. ಆಕ್ಟಿಂಗ್ ಕಂಟಿನ್ಯೂ ಮಾಡಿ ಲೈಫ್‌ನಲ್ಲಿ ಚೆನ್ನಾಗಿರಿ. ನಾನು ಎಲ್ಲಿಗೂ ಫೇಕ್ ಆಗಿಲ್ಲ. ಯಾರಿಗೆ ಎಷ್ಟು ಬೇಜಾರಾದ್ರೂ ಪರವಾಗಿಲ್ಲ. ಯಾರು ಎಷ್ಟೇ ಅಹಂಕಾರ ಎಂದು ಹೇಳಿದರೂ ಪರವಾಗಿಲ್ಲ. ಯಾರು ಎಷ್ಟೇ ವಿಲನ್ ಅಂದ್ರೂ ಪರವಾಗಿಲ್ಲ… ನಾನದನ್ನು ಒಪ್ಕೋತೀನಿ. ನಾನು ವಿಲನ್ನೇ!" ಎಂದು ಅವರು ಹೇಳಿದ್ದಾರೆ.
ಕಾರ್ತಿಕ್, ಸಂಗೀತಾ, ಪ್ರತಾಪ್ ಟಾಪ್ 3ಗೆ ಹೋಗಲು ನಾನೇ ಕಾರಣ
"ಮನೆಯೊಳಗೆ ಜೆನ್ಯೂನ್ ಆಗಿ ಆಡಿದ್ದು, ನಮ್ರತಾ, ಪವಿ… ಮೈಕಲ್ ಜಂಟಲ್‌ಮನ್. ಸಿರಿ, ವರ್ತೂರು ಸಂತೋಷ್ ಹೀಗೆ ಬೆರಳೆಣಿಕೆಯಷ್ಟು ಜನರು ಮಾತ್ರವೇ ಜೆನ್ಯೂನ್ ಆಗಿದ್ರು. ಕಾರ್ತಿಕ್, ಸಂಗಿತಾ, ಮತ್ತು ಪ್ರತಾಪ್ ಟಾಪ್ 3ಗೆ ಹೋಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ನನಗೇ ಸಲ್ಲಬೇಕು. ಆ ಮೂವರೂ ನನ್ನ ಜೊತೆಗೆ ಜಗಳ ಮಾಡಿಕೊಂಡೇ, ಫೈಟ್ ಮಾಡಿಕೊಂಡೇ ಅಲ್ಲಿಗೆ ತಲುಪಿರುವುದು. ನನಗೆ ಕಾರ್ತೀಕ್ ಗೆಲ್ಲಬೇಕು ಅಂತಲೇ ಆಸೆ ಇತ್ತು" ಎಂದರು.
"ಜಿಯೊಸಿನಿಮಾ ಫನ್ ಫ್ರೈಡೆ ಬಂತು ಅಂದ್ರೇ ಕುತೂಹಲ ನಮಗೆ. ಜಗಳ ಎಲ್ಲ ಮಾಡದೆ ಮಜಾ ಮಾಡೋಕೆ ಸಿಗತ್ತೆ ಅಂತ. ಮೊದಲ ವಾರದ ಮ್ಯೂಸಿಕಲ್ ಪಾಟ್ ಗೇಮ್ ನನಗೆ ತುಂಬ ಇಷ್ಟವಾಗಿತ್ತು. ಲಾಸ್ಟ್‌ನಲ್ಲಿ ಬಾಲ್‌ನ ಆ ಕಡೆ ಈ ಕಡೆ ತಳ್ಳುವ ಟಾಸ್ಕ್ ಚೆನ್ನಾಗಿತ್ತು. ಎಲ್ಲ ಫ್ರೈಡೇಗಳೂ ಸಖತ್ತಾಗಿದ್ದವು. ಅದಕ್ಕಾಗಿ ಕಾಯುತ್ತಿದ್ದೆವ ನಾವು. ಯಾರಿಗೆ ಏನು ಅನಿಸಿತೋ ನನಗೆ ಗೊತ್ತಿಲ್ಲ. ನಾನು ನನ್ನ ಮನಸ್ಸಿಗೆ ಮತ್ತು ನನ್ನ ಫ್ಯಾಮಿಲಿಗೆ ನಿಷ್ಠನಾಗಿದ್ದೆ. ಅಷ್ಟೇ ಸಾಕು. ಬಿಗ್‌ಬಾಸ್ ಮನೆಯಲ್ಲಿ ನನ್ನ ಫೆವರೇಟ್ ಮೊಮೆಂಟ್ ಅಂದರೆ ಕ್ಯಾಪ್ಟನ್ ಆಗಿದ್ದು. ಹಾಗೆಯೇ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಇನ್ನೊಂದು ಅವಿಸ್ಮರಣೀಯ ಗಳಿಗೆ. ಯಾಕೆಂದರೆ ನೂರಕ್ಕೂ ಹೆಚ್ಚು ದಿನಗಳ ಕಾಲ ಕಾದು ಕಾದು, ಇನ್ನು ಸಿಗುವುದಿಲ್ಲ ಎಂಬ ಹಂತದಲ್ಲಿ ಸಿಕ್ಕಿದ ಚಪ್ಪಾಳೆ ಅದು. ಅದರಲ್ಲಿಯೂ ಅವರು ಹೇಳಿದ ಒಂದಿಷ್ಟು ಮಾತುಗಳು ಆಳಕ್ಕೆ ನಾಟಿತು" ಎಂದು ಅವರು ಹೇಳಿದ್ದಾರೆ.
"ಬಿಗ್‌ಬಾಸ್‌ಗೆ ತುಂಬ ತುಂಬ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ. ಎಲ್ಲೋ ಇದ್ದಿದ್ದ ನನ್ನನ್ನು ಕರೆದುಕೊಂಡು ಬಂದು, ಇಷ್ಟುದೊಡ್ಡ ವೇದಿಕೆ ಕೊಟ್ಟಿದೆ. ಇಷ್ಟು ದಿನ ನನ್ನನ್ನು ಮಹದೇವ, ಶಿವ ಎಂದು ನನ್ನ ಪಾತ್ರಗಳ ಮೂಲಕ ಗುರುತು ಹಿಡಿಯುತ್ತಿದ್ದರು. ಈಗ ಹೊರಗೆ ಬಂದಾಗ ಜನರು ನನ್ನನ್ನು ವಿನಯ್ ಎಂದು ಗುರ್ತು ಹಿಡಿಯುತ್ತಾರೆ. ಆ ವಿಷಯಕ್ಕೆ ನಾನು ಬಿಗ್‌ಬಾಸ್‌ಗೆ ಕೃತಜ್ಞನಾಗಿರುತ್ತೇನೆ. ಥ್ಯಾಂಕ್ಯೂ ಬಿಗ್‌ಬಾಸ್… ಐ ಲವ್ ಯೂ!" ಎಂದು ವಿನಯ್ ಗೌಡ ಅವರು ಹೇಳಿದ್ದಾರೆ.