ಬೆಂಗಳೂರಿನಲ್ಲಿ ಭರ್ಜರಿ ರೇವ್ ಪಾರ್ಟಿ; ತೆಲುಗಿನ ಖ್ಯಾತ ನಟ ನಟಿಯರು ಭಾಗಿ, ನಾನು ಫಾರ್ಮ್ ಹೌಸ್‌ನಲ್ಲಿದ್ದೇನೆ ಅಂದ್ರು ನಟಿ ಹೇಮಾ
May 20, 2024 03:10 PM IST
ಬೆಂಗಳೂರಿನಲ್ಲಿ ಭರ್ಜರಿ ರೇವ್ ಪಾರ್ಟಿ; ತೆಲುಗಿನ ಖ್ಯಾತ ನಟ ನಟಿಯರು ಭಾಗಿ
- Bengaluru Rave Party: ರೇವ್ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ಪಾರ್ಟಿಯಲ್ಲಿ ತೆಲುಗಿನ ಹಲವು ನಟರು, ನಟಿಯರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ರೇವ್ ಪಾರ್ಟಿಯಲ್ಲಿ ತಾನು ಭಾಗವಹಿಸಿಲ್ಲ ಎಂದು ತೆಲುಗು ನಟಿ ಹೇಮಾ ಸ್ಪಷ್ಟಪಡಿಸಿದ್ದಾರೆ. (ವರದಿ: ಎಚ್. ಮಾರುತಿ)
ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಹತ್ತಿರದ ಸಿಂಗೇನ ಅಗ್ರಹಾರದ ಜಿ ಆರ್ ಫಾರ್ಮ್ ಹೌಸ್ ನಲ್ಲಿ ತಡ ರಾತ್ರಿವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ{ಸಿಸಿಬಿ} ಮಾದಕ ದ್ರವ್ಯ ನಿಗ್ರಹ ದಳ ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಫಾರ್ಮ್ ಹೌಸ್ ಕಾಂಕರ್ಡ್ ಕಂಪನಿ ಮಾಲೀಕರದ್ದು ಎಂದು ತಿಳಿದು ಬಂದಿದೆ. ಅವರಿಗೆ ಸೇರಿದ ಈ ತೋಟದ ಮನೆಯಲ್ಲಿ ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ ಹೆಸರಿನಲ್ಲಿ ದಿನಾಂಕ ಮೇ 18 ರ ಸಂಜೆ 5 ಗಂಟೆಯಿಂದ ಮೇ 19 ರ ಮುಂಜಾನೆ 6 ಗಂಟೆಯವರೆಗೆ ಈ ಪಾರ್ಟಿ ಆಯೋಜನೆಗೊಂಡಿತ್ತು.
ಈ ಪಾರ್ಟಿ ಮೇಲೆ ಮುಂಜಾನೆ 3 ಗಂಟೆಯ ವೇಳೆಗೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ರೇವ್ ಪಾಟ್ರಿ ಮೇಲೆ ದಾಳಿ ನಡೆಸಿದ್ದಾರೆ. ಆಂಧ್ರಪ್ರದೇಶದ ಖ್ಯಾತ ಉದ್ಯಮಿ ವಾಸು ಅವರ ಹುಟ್ಟು ಹಬ್ಬದ ಅಂಗವಾಗಿ ಈ ಪಾರ್ಟಿ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ದಾಳಿ ನಡೆದ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಮತ್ತು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿನಿಮಾ ನಟ-ನಟಿಯರು ಭಾಗಿ
ಈ ಪಾರ್ಟಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇವರಲ್ಲಿ 70 ಪುರುಷರು ಮತ್ತು 30 ಯುವತಿಯರು ಭಾಗಿಯಾಗಿದ್ದರು. ಉದ್ಯಮಿಗಳು, ವಿಶೇಷವಾಗಿ ತೆಲುಗಿನ ಖ್ಯಾತ ಚಲನ ಚಿತ್ರ ನಟ ನಟಿಯರು ಡಿಜೆಗಳು ಮತ್ತು ಮಾಡೆಲ್ ಗಳು ಭಾಗಿಯಾದ್ದರು ಎಂದು ಮೂಲಗಳೂ ತಿಳಿಸಿವೆ. ಖ್ಯಾತ ಡಿಜೆಗಳಾದ ರಬ್ಜ್, ಕೆವೀ, ಬ್ಲಡಿ ಮಸ್ಕಾರಾ ಅವರ ತಂಡಗಳು ಭಾಗವಹಿಸಿದ್ದವು.
ದಾಳಿ ಸಂದರ್ಭದಲ್ಲಿ ಆರೋಪಿಗಳಿಂದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೋನ್, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್ ಮತ್ತು 2 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಕಾನೂನುಬಾಹಿರವಾಗಿ ರೇವ್ ಪಾರ್ಟಿ ನಡೆಸುತ್ತಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಅನೇಕ ಮಂದಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.
ಈ ರೇವ್ ಪಾರ್ಟಿಗೆ ಆಗಮಿಸುವ ಗಣ್ಯ ಅತಿಥಿಗಳನ್ನು ಕರೆ ತರಲು ಹೈದರಾಬಾದ್‌ನಿಂದ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು. ವಿಮಾನ ನಿಲ್ದಾಣದಿಂದ ಪಾರ್ಟಿ ನಡೆಯುವ ಸ್ಥಳಕ್ಕೆ ಅವರನ್ನು ಕರೆ ತರಲು ಐಷಾರಾಮಿ ಕಾರುಗಳ ವ್ಯವಸ್ಥೆ ಮಾಡಲಾಗಿತ್ತು. ಈ ಪಾರ್ಟಿಗೆ ಸುಮಾರು 50 ಲಕ್ಷ ರೂ. ವಚ್ಚ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪಾರ್ಟಿ ನಡೆಯುವ ಸ್ಥಳದಲ್ಲಿದ್ದ ಬೆಂಜ್ ಕಾರಿನಲ್ಲಿ ಆಂಧ್ರ ಪ್ರದೇಶದ ಶಾಸಕ ಕಾಕಣಿ ಗೋವರ್ಧನ ರೆಡ್ಡಿ ಅವರ ಪಾಸ್ ಪತ್ತೆಯಾಗಿದೆ.
ನಾನು ಫಾರ್ಮ್ ಹೌಸ್‌ನಲ್ಲಿದ್ದೇನೆ ಅಂದ್ರು ನಟಿ ಹೇಮಾ
ಈ ಮಧ್ಯೆ ತೆಲುಗು ನಟಿ ಹೇಮಾ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ರೆಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಹೇಮಾ ಅವರು ಸ್ಪಷ್ಟನೆ ನೀಡಿ ನಾನು ನನ್ನ ಹೈದರಾಬಾದ್‌ನ ಫಾರ್ಮ್ ಹೌಸ್ ನಲ್ಲಿದ್ದೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಮತ್ತು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ಅವರೂ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು