logo
ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದ ಗುಂಟೂರು ಖಾರಂ; ಅಪ್ಪನ ನೆನೆದು ಭಾವುಕರಾದ ಪ್ರಿನ್ಸ್‌ ಮಹೇಶ್‌ ಬಾಬು

ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದ ಗುಂಟೂರು ಖಾರಂ; ಅಪ್ಪನ ನೆನೆದು ಭಾವುಕರಾದ ಪ್ರಿನ್ಸ್‌ ಮಹೇಶ್‌ ಬಾಬು

Praveen Chandra B HT Kannada

Jan 15, 2024 05:22 PM IST

google News

ಗುಂಟೂರು ಖಾರಂ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

    • Guntur Kaaram box office collection day 3: ಮೊದಲ ದಿನ 41.3 ಕೋಟಿ ರೂಪಾಯಿ ಗಳಿಕೆ ಮಾಡಿದ ಮಹೇಶ್‌ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾ ಮೂರನೇ ದಿನ 14.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನೊಂದೆಡೆ ತೇಜ ಸಜ್ಜ ನಟನೆಯ ಹನುಮಾನ್‌ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ.
ಗುಂಟೂರು ಖಾರಂ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
ಗುಂಟೂರು ಖಾರಂ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಗುಂಟೂರು ಖಾರಂ ಸಿನಿಮಾ ಮೂರನೇ ದಿನ ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷರಶಃ ಮುಗ್ಗರಿಸಿದೆ. ಮೊದಲ ದಿನ 41 ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಮಹೇಶ್‌ ಬಾಬು ನಟನೆಯ ಸಿನಿಮಾ ವಾರಾಂತ್ಯದಲ್ಲಿ ಭರ್ಜರಿ ಫಸಲು ತೆಗೆಯಬೇಕಿತ್ತು. ಆದರೆ, ಮೊದಲ ದಿನ ಸಿನಿಮಾ ನೋಡಿದವರು ಗುಂಟೂರು ಖಾರಂ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಿನ್ಸ್‌ ಸಿನಿಮಾ ನೋಡಬೇಕೆಂದು ಕಾದುಕುಳಿತವರೆಲ್ಲ "ಚೆನ್ನಾಗಿಲ್ಲಂತೆ, ಹನುಮಾನ್‌ ನೋಡೋಣ ಬಿಡು" ಎಂದು ತಮ್ಮ ನಿರ್ಧಾರ ಬದಲಾಯಿಸಿಕೊಂಡರು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಗುಂಟೂರು ಖಾರಂ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಿಧಾನಗತಿ ಗಳಿಕೆಗೆ ಮುನ್ನುಡಿ ಬರೆದಿದೆ.

ಗುಂಟೂರು ಖಾರಂ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಮಹೇಶ್‌ ಬಾಬು ಮತ್ತು ಶ್ರೀಲೀಲಾ ನಟನೆಯ ಗುಂಟೂರು ಖಾರಂ ಸಿನಿಮಾ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತ್ತು. ಭಾರತದಲ್ಲಿ ಮೊದಲ ದಿನ 41.3 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಗುಂಟೂರು ಖಾರಂ ಗಳಿಕೆಯಲ್ಲಿ ಶೇಕಡ 67.19 ರಷ್ಟು ಕುಸಿತ ಕಂಡಿತ್ತು. ಶನಿವಾರ 13.55 ಕೋಟಿ ರೂಪಾಯಿ ಗಳಿಸಿತ್ತು. ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಮೂರನೇ ದಿನ 14.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಗುಂಟೂರು ಖಾರಂ ಒಟ್ಟಾರೆ ಗಳಿಕೆ 69.1 ಕೋಟಿ ರೂಪಾಯಿಗೆ ತಲುಪಿದೆ. ಆದರೆ, ಇನ್ನೊಂದೆಡೆ ಹನುಮಾನ್‌ ಸಿನಿಮಾವು ಮೊದಲ ದಿನಕ್ಕೆ ಹೋಲಿಸಿದರೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗುತ್ತಿದೆ.

ಅಪ್ಪನ ನೆನೆದು ಭಾವುಕರಾದ ಪ್ರಿನ್ಸ್‌ ಮಹೇಶ್‌ ಬಾಬು

ಇತ್ತೀಚೆಗೆ ಗುಂಟೂರು ಖಾರಂ ಸಿನಿಮಾ ಬಿಡುಗಡೆಗೆ ಮುನ್ನ ಮಹೇಶ್‌ ಬಾಬು ಅವರು ತಮ್ಮ ಅಭಿಮಾನಿಗಳ ಮುಂದೆ ಭಾವುಕರಾಗಿದ್ದರು. "ನಿಮ್ಮಿಂದ ನನಗೆ ದೊರಕಿರುವ ಪ್ರೀತಿಯ ಮುಂದೆ ಯಾವುದೂ ಲೆಕ್ಕಕ್ಕಿಲ್ಲ. ವರ್ಷದಿಂದ ವರ್ಷಕ್ಕೆ ನನ್ನ ಕಡೆಗೆ ನಿಮ್ಮ ಪ್ರೀತಿ ಹೆಚ್ಚುತ್ತಲೇ ಸಾಗಿದೆ. ಇದಕ್ಕೆ ಪ್ರತಿಕ್ರಿಯಿಸಲು ನನ್ನಲ್ಲಿ ಪದಗಳಲ್ಲಿಲ್ಲ" ಎಂದು ಅವರು ಹೇಳಿದ್ದರು.

ಈ ಸಂದರ್ಭದಲ್ಲಿ ಮಹೇಶ್‌ ಬಾಬು ತಮ್ಮ ತಂದೆಯನ್ನೂ ನೆನಪಿಸಿಕೊಂಡು ಭಾವುಕರಾಗಿದ್ದರು. ತಂದೆ ಕೃಷ್ಣ ಅವರನ್ನು ನೆನಪಿಸಿಕೊಂಡು ಹೀಗೆ ಹೇಳಿದ್ದರು. "ನನ್ನ ತಂದೆಯ ಸಿನಿಮಾಗಳು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸೂಪರ್‌ಹಿಟ್‌ ಆಗುತ್ತಿತ್ತು. ಅಪ್ಪ ಈ ವರ್ಷ ಇಲ್ಲಿ ಇಲ್ಲ ಎನ್ನುವುದು ಬೇಸರ ತಂದಿದೆ. ಪ್ರತಿವರ್ಷ ಅವರ ಕರೆಗಾಗಿ ಕಾಯುತ್ತಿದ್ದೆ. ನನ್ನ ಸಿನಿಮಾದ ಕುರಿತು ಅವರ ನೈಜ ವಿಮರ್ಶೆಗಾಗಿ ಕಾಯುತ್ತಿದ್ದೆ. ಆದರೆ, ಅವರು ಈಗ ಇಲ್ಲ. ಹೀಗಾಗಿ, ಅವರ ಪ್ರೀತಿಯನ್ನು ನಾನು ನಿಮ್ಮಲ್ಲಿ (ಅಭಿಮಾನಿಗಳು) ಕಾಣುತ್ತಿದ್ದೇನೆ" ಎಂದು ಮಹೇಶ್‌ ಬಾಬು ಹೇಳಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ