ಕಾಂತಾರ, ಕೆಜಿಎಫ್ ದಾಖಲೆ ಪುಡಿಗಟ್ಟಿದ ಹನುಮಾನ್; ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ಬೆಳೆದ ತೇಜ ಸಜ್ಜ ಸಿನಿಮಾ
Jan 15, 2024 04:21 PM IST
ಹನುಮಾನ್ ಸಿನಿಮಾದ ಬಾಕ್ಸ್ ಆಫೀಸ್ ವರದಿ
- HanuMan box office collection: ತೇಜ ಸಜ್ಜ ನಟನೆಯ ಸೂಪರ್‌ಹೀರೋ ಸಿನಿಮಾವು ಮೊದಲ ವಾರದಲ್ಲಿ ಭರ್ಜರಿ ಗಳಿಕೆ ಮಾಡಿದೆ. ಈಗಾಗಲೇ ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಕಾಂತಾರ, ಕೆಜಿಎಫ್ 1 ಹಿಂದಿಕ್ಕಿದ ಹನುಮಾನ್ ಇದೀಗ ಪುಷ್ಪಾ ದಿ ರೈಸ್ ಸಿನಿಮಾದ ದಾಖಲೆಯನ್ನು ಅಳಿಸಿ ಹಾಕುವ ಪ್ರಯತ್ನದಲ್ಲಿದೆ.
HanuMan box office collection: ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾವಾಗಿ ಹನುಮಾನ್ ಹೊರಹೊಮ್ಮಿದೆ. ತೇಜ ಸಜ್ಜ ನಟನೆಯ ತೆಲುಗು ಸಿನಿಮಾ ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 40.65 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಯಶ್ ನಟನೆಯ ಕೆಜಿಎಫ್: ಚಾಪ್ಟರ್ 1 ಮತ್ತು ರಿಷಬ್ ಶೆಟ್ಟಿ ನಟನೆಯ ಕಾಂತಾರದ ಮೊದಲ ವಾರಾಂತ್ಯದ ಗಳಿಕೆಗಿಂತ ಹೆಚ್ಚು. ಈ ಸಿನಿಮಾದ ಗಳಿಕೆಯು ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಗಳಿಕೆಗೆ ಹತ್ತಿರದಲ್ಲಿದೆ.
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಫೈಟರ್ ಸಿನಿಮಾ ಬಿಡುಗಡೆಗೆ ಇನ್ನೂ ಹತ್ತು ದಿನ ಬಾಕಿ ಇದೆ. ಹೀಗಾಗಿ ಮುಂದಿನ ಹತ್ತು ದಿನಗಳಲ್ಲಿ ಹನುಮಾನ್ ಬಾಕ್ಸ್ ಆಫೀಸ್ ಗಳಿಕೆಗೆ ಯಾವುದೇ ಅಡೆತಡೆ ಇರುವುದಿಲ್ಲ.
ಹನುಮಾನ್ ಬಾಕ್ಸ್ ಆಫೀಸ್ ವರದಿ
ಮೊದಲ ದಿನ ಹನುಮಾನ್ ಸಿನಿಮಾ 8 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾ ನೋಡಿದವರು ಚಿತ್ರದ ಕುರಿತು ಸಕಾರಾತ್ಮಕ ವಿಮರ್ಶೆ ಮಾಡಿದ ಬಳಿಕ ಇದರ ಜನಪ್ರಿಯತೆ ಹೆಚ್ಚಿತ್ತು. ಇದೇ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಮಹೇಶ್ ಬಾಬು ಅವರ ಗುಂಟೂರು ಖಾರಂ ಸಹ ಬಿಡುಗಡೆಯಾಗಿತ್ತು. ಭಾನುವಾರ ಹನುಮಾನ್ ಸಿನಿಮಾ 16 ಕೋಟಿ ಗಳಿಕೆ ಮಾಡಿತ್ತು. ಆದರೆ, ಹನುಮಾನ್ ಸಿನಿಮಾದ ಒಟ್ಟಾರೆ ಗಳಿಕೆ ಇನ್ನೂ ಗುಂಟೂರು ಖಾರಂನಷ್ಟು ಬಂದಿಲ್ಲ. ಗುಂಟೂರು ಖಾರಂ ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಚಿತ್ರ ಬಿಡುಗಡೆಯಾಗುವ ಮುನ್ನವೇ ಜನರು ಬಹುನಿರೀಕ್ಷೆಯಿಂದ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಸಿನಿಮಾ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಬಳಿಕ ಇದರ ಗಳಿಕೆ ಕಡಿಮೆಯಾಗಿತ್ತು.
ಸಚ್‌ನಿಲ್ಕ್ ವರದಿ ಪ್ರಕಾರ ಹನುಮಾನ್ ತೆಲುಗು ಸಿನಿಮಾವು ಇಲ್ಲಿಯವರೆಗೆ 28.21 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಿಂದಿ ಆವೃತ್ತಿಯು 12 ಕೋಟಿ ಗಳಿಕೆ ಮಾಡಿದೆ. ತಮಿಳು ಮತ್ತು ಕನ್ನಡ ಆವೃತ್ತಿಗಳು ತಲಾ 19 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಲಯಾಳಂ ಆವೃತ್ತಿಯು 6 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಕಾಂತಾರ, ಕೆಜಿಎಫ್‌ಗಿಂತಲೂ ಹೆಚ್ಚು ಗಳಿಕೆ
"ಹನುಮಾನ್ ಸಿನಿಮಾದ ಮೊದಲ ಮೂರು ದಿನದ ಗಳಿಕೆ ಕುರಿತು ಅಚ್ಚರಿಯ ಸಂಗತಿಯೊಂದು ಇದೆ. ಇದರ ಇಷ್ಟು ದಿನದ ಗಳಿಕೆಯು ಕೆಜಿಎಫ್ ಮೊದಲ ಭಾಗ ಮತ್ತು ಕಾಂತಾರದ ಮೊದಲ ಮೂರು ದಿನಗಳ ಗಳಿಕೆಯನ್ನು ಮೀರಿಸಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಹನುಮಾನ್ ಸಿನಿಮಾವು 2024ರ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾವಾಗಿದೆ" ಎಂದು ಸಿನಿಮಾ ವಹಿವಾಟು ವಿಶ್ಲೇಷಕರಾದ ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದಾರೆ. ನಾಯಕ ನಟನಾಗಿ ತೇಜ ಸಜ್ಜ ನಟಿಸಿದ್ದು, ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ.
ಹನುಮಾನ್ ಸಿನಿಮಾದ ವಿಮರ್ಶೆ
ಹನುಮಾನ್ ಸಿನಿಮಾದ ವಿಮರ್ಶೆ ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. “ಅಂಜನಾದ್ರಿ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ತನ್ನ ಸಹೋದರಿ ಅಂಜಮ್ಮ (ವರಲಕ್ಷ್ಮಿ) ಜತೆ ಜೀವನ ನಡೆಸುತ್ತಿರುವ ಮತ್ತು ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಇರುವ ವ್ಯಕ್ತಿಯೇ ಈ ಹನುಮಂತು (ತೇಜ). ಈ ಹಳ್ಳಿ ಅಭಿವೃದ್ಧಿಯಿಂದ ದೂರ. ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ ಮತ್ತು ದೊಡ್ಡ ಹನುಮಂತನ ಪ್ರತಿಮೆ ಪ್ರಮುಖ ಆಕರ್ಷಣೆ. ಹನುಮಂತುಗೆ ತನ್ನ ಜೀವನದಲ್ಲಿ ಅಗಾಧ ಸಾಧನೆ ಮಾಡುವಂತಹ ಒಂದು ಸಂದರ್ಭ ಎದುರಾಗುತ್ತದೆ. ಅದು ಮೈಕಲ್ ಮತ್ತು ಆತನ ಸ್ನೇಹಿತ ಸಿರಿಯನ್ನು ಸೆಳೆಯುತ್ತದೆ. ಇದಾದ ಬಳಿಕ ಹಲವು ಘಟನೆಗೂ ನಡೆಯುತ್ತವೆ. ಇದು ಅಂಜನಾದ್ರಿ ಮತ್ತು ಜಗತ್ತನ್ನು ತೊಂದರೆಗೆ ಸಿಲುಕಿಸುತ್ತದೆ. ಈ ಸವಾಲನ್ನು ಎದುರಿಸುವ ಕಥೆಯೇ ಹನುಮಂತು ಸಿನಿಮಾದ ಜೀವಾಳ”. ಸಿನಿಮಾದ ವಿಮರ್ಶೆ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.