logo
ಕನ್ನಡ ಸುದ್ದಿ  /  ಮನರಂಜನೆ  /  ಹನುಮಾನ್‌ ಸಿನೆಮಾಕ್ಕೆ ಭರಪೂರ ಫಸಲು; ಹನ್ನೊಂದು ದಿನದಲ್ಲಿ 218 ಕೋಟಿ ಗಳಿಸಿದ ತೇಜ ಸಜ್ಜಾ ಸಿನೆಮಾ

ಹನುಮಾನ್‌ ಸಿನೆಮಾಕ್ಕೆ ಭರಪೂರ ಫಸಲು; ಹನ್ನೊಂದು ದಿನದಲ್ಲಿ 218 ಕೋಟಿ ಗಳಿಸಿದ ತೇಜ ಸಜ್ಜಾ ಸಿನೆಮಾ

Praveen Chandra B HT Kannada

Jan 23, 2024 06:41 PM IST

google News

ಹನುಮಾನ್‌ ಸಿನೆಮಾದ ಬಾಕ್ಸ್‌ ಆಫೀಸ್‌ ವರದಿ

    • HanuMan worldwide box office day 11: ಪ್ರಶಾಂತ್‌ ವರ್ಮಾ ನಿರ್ದೇಶನದ ತೇಜ ಸಜ್ಜಾ ನಟನೆಯ ಹನುಮಾನ್‌ ಸಿನೆಮಾವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮುಂದುವರೆಸಿದೆ. ಕಳೆದ 11 ದಿನದಲ್ಲಿ 218 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ.
ಹನುಮಾನ್‌ ಸಿನೆಮಾದ ಬಾಕ್ಸ್‌ ಆಫೀಸ್‌ ವರದಿ
ಹನುಮಾನ್‌ ಸಿನೆಮಾದ ಬಾಕ್ಸ್‌ ಆಫೀಸ್‌ ವರದಿ

ಬೆಂಗಳೂರು: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಹನುಮಾನ್‌ ಸಿನೆಮಾವು ಭರ್ಜರಿ ಗಳಿಕೆ ಮುಂದುವರೆಸಿದೆ. ತೇಜ ಸಜ್ಜ ನಟನೆಯ ಹನುಮಾನ್‌ ಸಿನಿಮಾವು ಈಗ ಎರಡನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕಳೆದ ಹನ್ನೊಂದು ದಿನಗಳಲ್ಲಿ 218.42 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಫಿಲ್ಮ್‌ ಟ್ರೇಡ್‌ ವಿಶ್ಲೇಷಕರಾದ ಮನೋಬಾಲಾ ವಿಜಯಬಾಲನ್‌ ಮಾಹಿತಿ ನೀಡಿದ್ದಾರೆ. ಹನುಮಾನ್‌ ಸಿನಿಮಾವು ಬಾಯ್ಮಾತಿನ ಪ್ರಚಾರದ ಮೂಲಕವೇ ಖ್ಯಾತಿ ಪಡೆದಿದೆ. ಗುಂಟೂರು ಖಾರಂನಂತಹ ದೊಡ್ಡ ಬಜೆಟ್‌ನ ತೆಲುಗು ಸಿನೆಮಾಕ್ಕಿಂತಲೂ ಹೆಚ್ಚು ಗಳಿಕೆ ಮಾಡಿರುವುದು ಹನುಮಾನ್‌ ಸಿನಿಮಾದ ಹೆಚ್ಚುಗಾರಿಕೆ.

ಹನುಮಾನ್‌ ಸಿನೆಮಾದ ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ

ಸಿನೆಮಾ ವಹಿವಾಟು ವಿಶ್ಲೇಷಕರಾದ ಮನೋಬಾಲಾ ವಿಜಯ ಬಾಲನ್‌ ಅವರು ಈ ಕುರಿತು ಟ್ವೀಟ್‌ ಮಾಡಿದ್ದಾರೆ. "ಹನುಮಾನ್‌ ಸಿನಿಮಾದ ಜಾಗತಿಕ ಬಾಕ್ಸ್‌ ಆಫೀಸ್‌ ವರದಿ ಹೀಗಿದೆ. ಹನುಮಾನ್‌ ಎರಡನೇ ಸದೃಢ ಸೋಮವಾರಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ 225 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನ 21.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ 29.72 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನ 24.16 ಕೋಟಿ ರೂ. ಮತ್ತು ನಾಲ್ಕನೇ ದಿನ 25.63 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಐದನೇ ದಿನ 19.57 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆರನೇ ದಿನ 15.40 ಕೋಟಿ ರೂ., 7ನೇ ದಿನ 14.75 ಕೋಟಿ ರೂ. ಮತ್ತು 8ನೇ ದಿನ 14.20 ಕೋಟಿ ರೂ. ಗಳಿಕೆ ಮಾಡಿದೆ. ಇದೇ ರೀತಿ 9ನೇ ದಿನ 20.37 ಕೋಟಿ ರೂಪಾಯಿ ಮತ್ತು 10ನೇ ದಿನ 23.91 ಕೋಟಿ ರೂಪಾಯಿ ಗಳಿಕೆ ಮಾಡಿದೆ. 11ನೇ ದಿನ 9.36 ಕೋಟಿ ರೂಪಾಯಿ ಗಳಿಸಿದೆ. ಒಟ್ಟು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 218.42 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಹನುಮಾನ್‌ ಸಿನಿಮಾವು ಪ್ರಶಾಂತ್‌ ವರ್ಮಾ ಬರೆದ ಮತ್ತು ನಿರ್ದೇಶನದ ಸೂಪರ್‌ ಹೀರೋ ಸಿನಿಮಾವಾಗಿದೆ. ಪ್ರೈಮ್‌ಶೋ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಮಾಡಿದ ಈ ಸಿನೆಮಾದಲ್ಲಿ ಅಮೃತಾ ಅಯ್ಯರ್‌, ವರಲಕ್ಷ್ಮಿ ಶರತ್‌ ಕುಮಾರ್‌, ವಿನಯ್‌ ರೈ, ರಾಜ್‌ ದೀಪಕ್‌ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಚ್‌ನಿಲ್ಕ್‌.ಕಾಂ ಪ್ರಕಾರ ಈ ಸಿನೆಮಾ ಭಾರತದಲ್ಲಿ ಇಲ್ಲಿಯವರೆಗೆ 138.9 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಜೈ ಹನುಮಾನ್‌

ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಹನುಮಾನ್‌ ಸಿನಿಮಾದ ನಿರ್ದೇಶಕರಾದ ಪ್ರಶಾಂತ್‌ ವರ್ಮಾ ಅವರು ತನ್ನ ಮುಂದಿನ ಸಿನೆಮಾಕ್ಕೆ ಜೈ ಹನುಮಾನ್‌ ಎಂಬ ಹೆಸರು ಇಟ್ಟಿದ್ದಾರೆ. ಈ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಬಿಡುಗಡೆ ಮಾಡಿದ್ದಾರೆ. "ಹನುಮಾನ್‌ ಸಿನಿಮಾದ ಕುರಿತು ಜಗತ್ತಿನಾದ್ಯಂತ ಜನರು ತೋರಿದ ಪ್ರೀತಿಗೆ ಹೃದಯ ತುಂಬಿ ಬಂದಿದೆ. ಜೈ ಹನುಮಾನ್‌ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕಾರ್ಯವನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಈ ಸಂದರ್ಭದಲ್ಲಿ ಆರಂಭಿಸುತ್ತಿದ್ದೇವೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ರಾಮ ದೇಗುಲಕ್ಕೆ ಹನುಮಾನ್‌ ತಂಡದ ದೇಣಿಗೆ

ಹನುಮಾನ್‌ ಸಿನೆಮಾದ ವಿತರಕ ಸಂಸ್ಥೆಗಳಲ್ಲಿ ಒಂದಾದ ಮೈತ್ರಿ ಮೂವಿ ಮೇಕರ್ಸ್‌ ಭಾನುವಾರ ರಾಮ ಮಂದಿರಕ್ಕೆ 2.6 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದೆ. ಸಿನೆಮಾ ತಂಡವು ಪ್ರತಿ ಟಿಕೆಟ್‌ನ 5 ರೂಪಾಯಿಯನ್ನು ಈ ದೇಣಿಗೆಗಾಗಿ ನೀಡಲಾಗುತ್ತದೆ. ಇಲ್ಲಿಯವರೆಗೆ ತೆಲುಗು ಸಿನೆಮಾವು 53 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಮಾರಾಟ ಮಾಡಿದೆ. ಇದರಿಂದ 2.66 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇತ್ತೀಚೆಗೆ ತೆಲಂಗಾಣದ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ. ಕಿಶಾನ್‌ ರೆಡ್ಡಿ ಅವರು ಹನುಮಾನ್‌ ನಟ ತೇಜ ಸಜ್ಜರಿಗೆ ದೆಹಲಿಯಲ್ಲಿ ಸನ್ಮಾನ ಮಾಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ