logo
ಕನ್ನಡ ಸುದ್ದಿ  /  ಮನರಂಜನೆ  /  ಆನಂದ್‌ ದೇವರಕೊಂಡ ನಟನೆಯ ಬೇಬಿ ಸಿನಿಮಾದಲ್ಲಿ ಡ್ರಗ್ಸ್‌ ದೃಶ್ಯ; ನಿರ್ಮಾಪಕರಿಗೆ ನೋಟಿಸ್‌

ಆನಂದ್‌ ದೇವರಕೊಂಡ ನಟನೆಯ ಬೇಬಿ ಸಿನಿಮಾದಲ್ಲಿ ಡ್ರಗ್ಸ್‌ ದೃಶ್ಯ; ನಿರ್ಮಾಪಕರಿಗೆ ನೋಟಿಸ್‌

HT Kannada Desk HT Kannada

Sep 15, 2023 08:56 AM IST

google News

ಡ್ರಗ್ಸ್‌ ದೃಶ್ಯಕ್ಕೆ ಸಂಬಂಧಿಸಿದಂತೆ 'ಬೇಬಿ' ಸಿನಿಮಾ ನಿರ್ಮಾಪಕರಿಗೆ ಹೈದರಾಬಾದ್‌ ಪೊಲೀಸರಿಂದ ನೋಟಿಸ್‌ ಜಾರಿ

  • ಬೇಬಿ ಸಿನಿಮಾ ಜುಲೈ 14ರಂದು ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಮಾದಕ ವಸ್ತು ಸೇವನೆಯನ್ನು ಉತ್ತೇಜಿಸುವ ದೃಶ್ಯವನ್ನು ಗಮನಿಸಿದ ಹೈದರಾಬಾದ್‌ ಪೊಲೀಸರು ಚಿತ್ರತಂಡಕ್ಕೆ ನೋಟಿಸ್‌ ನೀಡಿದ್ದು ಎನ್‌ಸಿಬಿ ಮುಂದೆ ಹಾಜರಾಗುವಂತೆ ಚಿತ್ರದ ನಿರ್ಮಾಪಕರಿಗೆ ಸೂಚಿಸಿದ್ದಾರೆ.

ಡ್ರಗ್ಸ್‌ ದೃಶ್ಯಕ್ಕೆ ಸಂಬಂಧಿಸಿದಂತೆ 'ಬೇಬಿ' ಸಿನಿಮಾ ನಿರ್ಮಾಪಕರಿಗೆ ಹೈದರಾಬಾದ್‌ ಪೊಲೀಸರಿಂದ ನೋಟಿಸ್‌ ಜಾರಿ
ಡ್ರಗ್ಸ್‌ ದೃಶ್ಯಕ್ಕೆ ಸಂಬಂಧಿಸಿದಂತೆ 'ಬೇಬಿ' ಸಿನಿಮಾ ನಿರ್ಮಾಪಕರಿಗೆ ಹೈದರಾಬಾದ್‌ ಪೊಲೀಸರಿಂದ ನೋಟಿಸ್‌ ಜಾರಿ

ಸಿನಿಮಾ ನಟರಾಗಲೀ, ಅವರ ಸಿನಿಮಾಗಳಾಗಲೀ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೆಂದು ಬಯಸುತ್ತಾರೆ. ಆದರೆ ಕೆಲವೊಂದು ಸಿನಿಮಾಗಳು ವಿವಾದಕ್ಕೆ ಎಡೆ ಮಾಡಿಕೊಡುತ್ತವೆ. ಇದೀಗ ತೆಲುಗಿನ 'ಬೇಬಿ' ಸಿನಿಮಾ ಕೂಡಾ ವಿವಾದಕ್ಕೆ ಸಿಲುಕಿದ್ದು ಹೈದರಾಬಾದ್‌ ಪೊಲೀಸರು ಚಿತ್ರತಂಡಕ್ಕೆ ನೋಟಿಸ್‌ ಜಾರಿ ಮಾಡಿದ್ದಾರೆ.

ಜುಲೈ 14 ರಂದು ರಿಲೀಸ್‌ ಆಗಿದ್ದ ಸಿನಿಮಾ

ವಿಜಯ್‌ ದೇವರಕೊಂಡ ಸಹೋದರ ಆನಂದ್‌ ದೇವರಕೊಂಡ ನಟಿಸಿರುವ 'ಬೇಬಿ' ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ಮಾದಕ ವಸ್ತು ಸೇವನೆಯನ್ನು ಉತ್ತೇಜಿಸುವ ದೃಶ್ಯ ಇದೆ ಎಂಬ ಆರೋಪ ಕೇಳಿ ಬಂದಿದೆ. ಬೇಬಿ ಸಿನಿಮಾ ಜುಲೈ 14ರಂದು ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಮಾದಕ ವಸ್ತು ಸೇವನೆಯನ್ನು ಉತ್ತೇಜಿಸುವ ದೃಶ್ಯವನ್ನು ಗಮನಿಸಿದ ಹೈದರಾಬಾದ್‌ ಪೊಲೀಸರು ಚಿತ್ರತಂಡಕ್ಕೆ ನೋಟಿಸ್‌ ನೀಡಿದ್ದು ಎನ್‌ಸಿಬಿ ಮುಂದೆ ಹಾಜರಾಗುವಂತೆ ಚಿತ್ರದ ನಿರ್ಮಾಪಕರಿಗೆ ಸೂಚಿಸಿದ್ದಾರೆ.

ನಾಯಕಿ, ಪ್ರೀತಿಯ ಹೆಸರಿನಲ್ಲಿ ಇಬ್ಬರು ಯುವಕರನ್ನು ಮೋಸ ಮಾಡುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಿನಿಮಾ ಸೂಪರ್‌ ಹಿಟ್‌ ಆದ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಇದೀಗ ಹೈದರಾಬಾದ್‌ ಪೊಲೀಸ್‌ ಕಮಿಷನರ್‌ ಸಿವಿ ಆನಂದ್‌ ಶಾಕ್‌ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್‌ ಅಪಾರ್ಟ್‌ಮೆಂಟ್‌ ಒಂದರಲ್ಲಿ ರೇವ್‌ ಪಾರ್ಟಿ ಮಾಡುತ್ತಿದ್ದ ಕೆಲವನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ತೆಲುಗು ಸಿನಿಮಾ ನಿರ್ಮಾಪಕ ಕೂಡಾ ಇದ್ದರು.

ಪೊಲೀಸ್‌ ಕಮಿಷನರ್‌ ಸಿವಿ ಆನಂದ್‌ ಸುದ್ದಿಗೋಷ್ಠಿ

ಇದೇ ವಿಚಾರಕ್ಕೆ ಸುದ್ದಿಗೋಷ್ಠಿ ನಡೆಸಿದ್ದ ಹೈದರಾಬಾದ್‌ ನಗರ ಪೊಲೀಸ್‌ ಆಯುಕ್ತ ಸಿವಿ ಆನಂದ್‌, ''ನಾವು ದಾಳಿ ಮಾಡಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಕಂಡು ಬಂದ ದೃಶ್ಯಗಳಿಗೂ, ಬೇಬಿ ಸಿನಿಮಾ ದೃಶ್ಯಗಳಿಗೂ ಹೋಲಿಕೆ ಇದೆ. ಸಿನಿಮಾಗಳು ಜನರಿಗೆ ಮಾದರಿ ಆಗಿರಬೇಕು, ಜನರ ಹಾದಿ ತಪ್ಪಿಸುವಂತೆ ಇರಬಾರದು. ಲಕ್ಷಾಂತರ ಜನರು ನೋಡುವ ಸಿನಿಮಾದಲ್ಲಿ ಡ್ರಗ್ಸ್‌ ಸೇವನೆಯನ್ನು ಉತ್ತೇಜಿಸುವ ದೃಶ್ಯ ಇದೆ, ಅದು ಸಮಾಜಕ್ಕೆ ಮಾರಕ. ಆದ್ದರಿಂದ ಚಿತ್ರತಂಡಕ್ಕೆ ನೋಟಿಸ್‌ ನೀಡಿದ್ದೇವೆ. ಮುಂದೆ ರಿಲೀಸ್‌ ಆಗಲಿರುವ ಸಿನಿಮಾಗಳಲ್ಲಿ ಇಂತಹ ದೃಶ್ಯಗಳು ಇರಬಹುದೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಒಂದು ವೇಳೆ ಅಂತಹ ದೃಶ್ಯಗಳಿರುವ ಸಿನಿಮಾಗಳಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ'' ಎಂದು ಸಿವಿ ಆನಂದ್‌ ಮಾಹಿತಿ ನೀಡಿದ್ದಾರೆ.

'ಬೇಬಿ' ಚಿತ್ರವನ್ನು ಮಾಸ್‌ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿ ಶ್ರೀನಿವಾಸ್‌ ಕುಮಾರ್‌ ನಾಯ್ಡು ನಿರ್ಮಿಸಿದ್ದು ಸಾಯಿ ರಾಜೇಶ್‌ ನೀಲಂ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಆನಂದ್‌ ದೇವರಕೊಂಡ, ವೈಷ್ಣವಿ ಚೈತನ್ಯ, ವಿರಾಜ್‌ ಅಶ್ವಿನ್‌, ನಾಗೇಂದ್ರ ಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ.

ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ