Kalki 2898 ad Tickets: ಬೆಂಗಳೂರಲ್ಲಿ ಗುರುವಾರದಿಂದಲೇ ಕಲ್ಕಿ 2898 ಎಡಿ ಅಬ್ಬರ; ಬೆಂಗಳೂರಲ್ಲಿ 2 ಪಟ್ಟು ಹೆಚ್ಚಾಗಿದೆ ಸಿನಿಮಾ ಟಿಕೆಟ್ ದರ
Jun 27, 2024 10:36 AM IST
Kalki 2898 ad Tickets: ಗುರುವಾರದಿಂದಲೇ ಕಲ್ಕಿ 2898 ಎಡಿ ಅಬ್ಬರ
- Kalki 2898 ad Tickets: ಈ ವಾರ ಜೂನ್ 28ರಂದು ಪ್ರಭಾಸ್, ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ kalki 2898 ad ಸಿನಿಮಾ ಬಿಡುಗಡೆಯಾಗುತ್ತಿದೆ. ಅದಕ್ಕೂ ಒಂದು ದಿನ ಮುನ್ನವೇ ಆಯ್ದ ಥಿಯೇಟರ್‌ಗಳಲ್ಲಿ kalki 2898 ad ಸಿನಿಮಾದ ಪ್ರೀಮಿಯರ್ ಶೋ ನಡೆಯಲಿದೆ.
ಬೆಂಗಳೂರು: ಈ ವಾರ (ಜೂನ್ 27)ರಂದು ಪ್ರಭಾಸ್, ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ kalki 2898 ad ಸಿನಿಮಾ ಬಿಡುಗಡೆಯಾಗುತ್ತಿದೆ. ಶುಕ್ರವಾರ ಬದಲು ಗುರುವಾರವೇ ಹತ್ತು ಹಲವು ಥಿಯೇಟರ್‌ಗಳಲ್ಲಿ kalki 2898 ad ಸಿನಿಮಾದ ಪ್ರೀಮಿಯರ್ ಶೋ ನಡೆಯಲಿದೆ. ಗುರುವಾರ ಬೆಳಗ್ಗೆ 5 ಗಂಟೆಯಿಂದಲೇ ಶೋ ಆರಂಭವಾಗಲಿದೆ. ಗುರುವಾರ ಟಿಕೆಟ್ ದರವೂ ದುಪ್ಪಟ್ಟು ಇದ್ದು, ಕಲ್ಕಿ ಸಿನಿಮಾ ನೋಡಲು ಕಾತರರಾಗಿರುವ ಕಿಸೆಗೆ ತುಸು ಹೊಡೆತ ನೀಡಲಿದೆ.
ಕಲ್ಕಿ 2898 ಎಡಿ ಸಿನಿಮಾದ ಟಿಕೆಟ್ ದರ
ಬೆಂಗಳೂರಿನಲ್ಲಿ ಗೋಪಾಲನ್ ಸಿನಿಮಾಸ್- ಆರ್ಕೆಡ್ ಮಾಲ್, ಮೈಸೂರು ರಸ್ತೆ, ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್, ಪ್ರಸನ್ನ ಡಿಜಿಟಲ್ 4ಕೆ ಸಿನಿಮಾ- ಮಾಗಡಿ ರಸ್ತೆ, ಭಾರತಿ ಥಿಯೇಟರ್ (ಪೀಣ್ಯ), ವೈಷ್ಣವಿ ಮತ್ತು ವೈಭವಿ ಸಿನಿಮಾಸ್- ಉತ್ತರಹಳ್ಳಿ, ವಿ ಸಿನಿಮಾಸ್- ಟಿಸಿ ಪಾಳ್ಯ ಥಿಯೇಟರ್‌ಗಳಲ್ಲಿ ಈ ಸಿನಿಮಾದ ಕನ್ನಡ ವರ್ಷನ್‌ನ ಪ್ರೀಮಿಯರ್ ಶೋ ಇರಲಿದೆ. ಉಳಿದ ಬಹುತೇಕ ಥಿಯೇಟರ್‌ಗಳಲ್ಲಿ ತೆಲುಗು ಅಥವಾ ಇತರೆ ಭಾಷೆಗಳಲ್ಲಿ ಪ್ರೀಮಿಯರ್ ಆಗಲಿದೆ. ಇವುಗಳಲ್ಲಿ ಪ್ರಸನ್ನ, ಭಾರತಿ, ವೈಷ್ಣವಿ, ವೈಭವ್ ಹೊರತುಪಡಿಸಿ ಉಳಿದ ಮಲ್ಟಿಫ್ಲೆಕ್ಸ್‌ಗಳಲ್ಲಿ kalki 2898 ad ಸಿನಿಮಾದ ಟಿಕೆಟ್ ದರ ದುಪ್ಪಟ್ಟು ಇದೆ. ಅಂದರೆ, ಗೋಲ್ಡ್ ಕ್ಲಾಸ್‌ಗೆ 400 ರೂಪಾಯಿ, ಇತರೆ ಕ್ಲಾಸ್‌ಗೆ 600 ರೂಪಾಯಿ ಇದೆ. ಶುಕ್ರವಾರದಿಂದ ರೆಗ್ಯುಲರ್ ದರದಲ್ಲಿ ಸಿನಿಮಾ ಟಿಕೆಟ್ ದೊರಕುವ ನಿರೀಕ್ಷೆಯಿದೆ. ಆದರೆ, ಇದು ಅಡ್ವಾನ್ಸಡ್ ಬುಕ್ ಆಗಿರುವುದರಿಂದ ಕಲ್ಕಿ ಸಿನಿಮಾದ ಕುರಿತು ಕ್ರೇಜ್ ಹೆಚ್ಚು ಇರುವವರು ದುಪ್ಪಟ್ಟು ದರ ನೀಡಿ ಸಿನಿಮಾ ವೀಕ್ಷಿಸಬಹುದು.
ತೆಲುಗು ಆವೃತ್ತಿಯ ಕಲ್ಕಿ 2898 ಎಡಿ ಸಿನಿಮಾ ಬೆಂಗಳೂರಿನಲ್ಲಿ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರೀಮಿಯರ್ ಆಗುತ್ತಿದೆ. ಬೆಳಗ್ಗೆಯಿಂದಲೇ ಶೋಗಳು ಆರಂಭವಾಗಲಿವೆ. ಕೆಲವೊಂದು ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವದ ಟಿಕೆಟ್ ದರ 500 ರೂಪಾಯಿ ಇದೆ. ಕೆಲವು ಥಿಯೇಟರ್‌ಗಳಲ್ಲಿ(ಕಾಮಕ್ಯದಂತಹ ಸಾಮಾನ್ಯ ಚಿತ್ರಮಂದಿರಗಳಲ್ಲಿ) ಟಿಕೆಟ್ ದರ 250 ರೂಪಾಯಿ ಇದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ವಿವಿಧ ಅವಧಿಗಳಲ್ಲಿ ವಿವಿಧ ಭಾಷೆಗಳಲ್ಲಿ ಕಲ್ಕಿ ಸಿನಿಮಾ ಪ್ರದರ್ಶನ ಕಾಣಲಿದೆ.
ಇತ್ತೀಚೆಗೆ ಕಲ್ಕಿ 2898 ಎಡಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಈ ಟ್ರೇಲರ್‌ನಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಹಾಗೂ ಅವಳ ಮಗುವನ್ನು ಉಳಿಸಲು ಅಮಿತಾಬ್ ಬಚ್ಚನ್ ಹೋರಾಟ ನಡೆಸುವಂತಹ ದೃಶ್ಯಗಳು ಈ ಟ್ರೇಲರ್‌ನಲ್ಲಿದ್ದವು. ಕಮಲ್ ಹಾಸನ್ ಪಾತ್ರವು "ಮನುಷ್ಯನು ಎಷ್ಟೇ ಯುಗ ಕಳೆದರೂ ಬದಲಾಗುವುದಿಲ್ಲ" ಎಂದು ಹೇಳುವ ದೃಶ್ಯವೂ ಈ ಟ್ರೇಲರ್‌ನಲ್ಲಿತ್ತು. ಪ್ರಭಾಸ್ ಹೊಸ ರೋಬೋ ಸೂಟ್‌ನಲ್ಲಿ ಆಗಮಿಸಿ ಈ ಸಿನಿಮಾದಲ್ಲಿ ರೋಬೋಗಳಂತಹ ಪಾತ್ರಗಳ ಅಬ್ಬರವೂ ಇರುವ ಸೂಚನೆ ನೀಡಲಾಗಿದೆ.
ಟ್ರೇಲರ್ ಬಿಡುಗಡೆಗೆ ಮುನ ಕಲ್ಕಿ 2898 ಎಡಿ ತಂಡವು ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ, ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ದೀಪಿಕಾ ಪಡುಕೋಣೆ ಕಪ್ಪು ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಅಮಿತಾಬ್ ಬಚ್ಚನ್ ಅವರು ಅಶ್ವಿನಿ ದತ್ ಅವರ ಪಾದಗಳನ್ನು ಮುಟ್ಟಿ ಚಿತ್ರದ ನಿರ್ಮಾಪಕರನ್ನು ಶ್ಲಾಘಿಸಿದ್ದು ಎಲ್ಲರ ಗಮನ ಸೆಳೆಯಿತು.
ಇದು ನಾಗ್ ಅಶ್ವಿನ್ ಅವರ ಮೂರನೇ ಸಿನಿಮಾ. ಯೆವಡೆ ಸುಬ್ರಮಣ್ಯಂ ಮತ್ತು ಮಹಾನಟಿ ಸಿನಿಮಾದ ಮೂಲಕ ನಾಗ್ ಗಮನ ಸೆಳೆದಿದ್ದರು. ನಟಿ ಕೀರ್ತಿ ಸುರೇಶ್ ಬುಜ್ಜಿ (ಬಿಯು-ಜೆಜೆಡ್ -1 ಎಂದು ಸ್ಟೈಲಿಸ್) ಎಂಬ ವಾಹನಕ್ಕೆ ಧ್ವನಿಯಾಗಿದ್ದಾರೆ. ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಬ್ ಬಚ್ಚನ್ , ಗರ್ಭಿಣಿ ಮಹಿಳೆ ಸುಮತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಅವರು ಸುಪ್ರೀಂ ಯಾಸ್ಕಿನ್ ಎಂಬ ವಿಲನ್ ರೋಲ್‌ನಲ್ಲಿ ಈ ಸಿನಿಮಾದಲ್ಲಿದ್ದಾರೆ. ಬಹುತಾರಾಗಣದ ಈ ಸಿನಿಮಾದ ರನ್ ಟೈಮ್ 3 ಗಂಟೆಗೂ ತುಸು ಹೆಚ್ಚಿದ್ದು, ಸಿನಿಮಾ ಪ್ರೇಕ್ಷಕರಿಗೆ ದೊಡ್ಡ ಸಿನಿಮಾವೊಂದನ್ನು ನೋಡುವ ಅವಕಾಶವನ್ನು ಚಿತ್ರತಂಡ ನೀಡಿದೆ.