‘ಹನುಮಂತ ನಮ್ಮ ನಡುವೆ ಸಾಂಸ್ಕೃತಿಕವಾಗಿ ಬೇರೂರಿದ್ದಾನೆ, ಧಾರ್ಮಿಕವಾಗಿ ಅಲ್ಲ’: ನಿರ್ದೇಶಕ ಪ್ರಶಾಂತ್ ವರ್ಮಾ
Jan 10, 2024 07:27 PM IST
‘ಹನುಮಂತ ನಮ್ಮ ನಡುವೆ ಸಾಂಸ್ಕೃತಿಕವಾಗಿ ಬೇರೂರಿದ್ದಾನೆ, ಧಾರ್ಮಿಕವಾಗಿ ಅಲ್ಲ’: ನಿರ್ದೇಶಕ ಪ್ರಶಾಂತ್ ವರ್ಮಾ
- ಫ್ಯಾಂಟಸಿ ಕಥೆಯೊಳಗೆ ಸೂಪರ್‌ಹೀರೋ ಪರಿಕಲ್ಪನೆಯ ಹನುಮಾನ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಇದೇ ಸಿನಿಮಾ ಬಗ್ಗೆ ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮಾ, ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ.
Hanuman Movie: ಹನುಮಾನ್ ಸಿನಿಮಾ ಘೋಷಣೆ ಆದಾಗಲೇ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದವು. ಕಿರು ಟೀಸರ್ ಮೂಲಕವೇ ದೇಶದ ಸಿನಿ ಪ್ರೇಮಿಗಳ ಕುತೂಹಲಕ್ಕೂ ಈ ಸಿನಿಮಾ ಒಗ್ಗರಣೆ ಹಾಕಿತ್ತು. ಅದಾದ ಬಳಿಕ ಚಿತ್ರದ ಒಂದೊಂದೇ ಝಲಕ್ ಹೆಚ್ಚೆಚ್ಚು ಗಮನ ಸೆಳೆದವು. ಟ್ರೇಲರ್ ಮೂಡಿಬಂದ ರೀತಿ ಕಂಡು, ಇದೊಂದು ಬೇರೆಯದೇ ರೀತಿಯ ಸಿನಿಮಾ ಎಂದೇ ಮಾತನಾಡಿಕೊಂಡರು. ಇತ್ತ ಇದೊಂದು ಫಿಕ್ಷನ್ ಕಥೆ, ಸೂಪರ್ ಹೀರೋ ಪರಿಕಲ್ಪನೆಯಲ್ಲಿ ಮೂಡಿಬಂದ ಸಿನಿಮಾ ಎಂದು ಹೇಳಿಕೊಂಡಿತ್ತು ಚಿತ್ರತಂಡ. ಇದೀಗ ಇದೆಲ್ಲದಕ್ಕೂ ಉತ್ತರ ಸಿಗುವ ಸಮಯ ಬಂದಿದೆ. ಅಂದರೆ, ಜನವರಿ 12ರಂದು ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಹನುಮಾನ್ ಚಿತ್ರದಲ್ಲಿ ತೇಜ ಸಜ್ಜ, ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ರಾಜ್ ದೀಪಕ್ ಶೆಟ್ಟಿ ಮತ್ತು ವಿನಯ್ ರೈ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿರಂಜನ್ ರೆಡ್ಡಿ ಕಂದಗಟ್ಲ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೂಲ ತೆಲುಗು ಜತೆಗೆ ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳ ಜತೆಗೆ ಮರಾಠಿ, ಇಂಗ್ಲಿಷ್, ಸ್ಪ್ಯಾನಿಷ್, ಕೊರಿಯನ್, ಜಪಾನೀಸ್ ಮತ್ತು ಚೈನೀಸ್ ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆ ಆಗಲಿದೆ. ಈಗ ಈ ಸಿನಿಮಾ ಬಗ್ಗೆ HTಗೆ ಸಂದರ್ಶನ ನೀಡಿರುವ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮದೇ ಧಾಟಿಯಲ್ಲಿ ಹನುಮಾನ್‌ನನ್ನು ವರ್ಣಿಸಿದ್ದಾರೆ.
ಸಾಂಸ್ಕೃತಿಕವಾಗಿ ಬೇರೂರಿರುವ ಸೂಪರ್‌ಹೀರೋ ಚಲನಚಿತ್ರ
ಈ ಚಿತ್ರದ ಹಿಂದಿನ ಸ್ಫೂರ್ತಿಯ ಯಾರು ಎಂದು ಕೇಳಿದಾಗ, “ನಾನು ಯಾವಾಗಲೂ ಸೂಪರ್ ಹೀರೋ ಚಿತ್ರ ಮಾಡಲು ಬಯಸುತ್ತೇನೆ. ವಾಸ್ತವವಾಗಿ, ನಾನೂ ಸೂಪರ್ ಹೀರೋ ಆಗಲು ಬಯಸಿದ್ದೆ! ಆದರೆ, ಅದು ಸಾಧ್ಯವಾಗದಿದ್ದಕ್ಕೆ, ಆ ಥರದ ಸಿನಿಮಾ ಮಾಡಬಹುದಲ್ಲ ಎಂದು ಯೋಚಿಸಿ, ಹನುಮಾನ್ ಸಿನಿಮಾ ಮಾಡಿದ್ದೇನೆ"
"ಇದು ಹಾಲಿವುಡ್‌ನ ಯಾವುದೋ ಮಾರ್ವೆಲ್ ತರಹದ ಸೂಪರ್ ಹೀರೋ ಸಿನಿಮಾ ಆಗಬೇಕೆಂದು ನಾನು ಬಯಸಲಿಲ್ಲ. ಆದರೆ, ಇದು ಸ್ಥಳೀಯ ಮತ್ತು ನಮ್ಮೆಲ್ಲರ ನಡುವೆ ಸಾಂಸ್ಕೃತಿಕವಾಗಿ ಬೇರೂರಿರುವ ವ್ಯಕ್ತಿಯದ್ದೇ ಚಿತ್ರವಾಗಬೇಕು ನಿರ್ಧರಿಸಿದ್ದೆ. ಆಗ ನನ್ನ ಮನಸ್ಸಿಗೆ ಬಂದ ಮೊದಲ ಆಲೋಚನೆ ಹನುಮಾನ್. ಹನುಮಂತ ನಮ್ಮ ನಡುವೆ ಸಾಂಸ್ಕೃತಿಕವಾಗಿ ಬೇರೂರಿರುವ ಸೂಪರ್ ಹೀರೋ. ಧಾರ್ಮಿಕವಾಗಿ ಅಲ್ಲ. ಅದಾದ ಬಳಿಕ ಅಲ್ಲಿಂದ ಕಥೆ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುತ್ತ ಹೋಯಿತು" ಎಂದಿದ್ದಾರೆ ನಿರ್ದೇಶಕರು.
ಇನ್ನು ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ಮಿಂಚು ಹರಿಸಿದ್ದಾರೆ. ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿರೋದು ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ಕಂಡಿದೆ. ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ನಾಯಕ ನಟ ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಗಮನ ಸೆಳೆಯುತ್ತಿದೆ. ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ.
ಯಥೋ ಧರ್ಮ ತತೋ ಹನುಮಾ... ಯಥೋ ಹನುಮ ತತೋ ಜಯ... (ಎಲ್ಲಿ ಸದಾಚಾರವಿದೆಯೋ ಅಲ್ಲಿ ಹನುಮಂತನು, ಮತ್ತು ಎಲ್ಲಿ ಹನುಮಂತ ಇದ್ದಾನೋ ಅಲ್ಲಿ ಜಯವಿದೆ) ಎಂಬ ಡೈಲಾಗ್ ಮೂಲಕ ಹನುಮಾನ್ ಪ್ರಪಂಚನ್ನು ಪರಿಚಯಿಸಲಾಗಿದೆ. ಅಂಜನಾದ್ರಿ ಬೆಟ್ಟ, ಹನುಮಾನ್ ಪ್ರತಿಮೆ ಟ್ರೇಲರ್‌ನಲ್ಲಿ ಹೈಲೈಟ್ ಆಗಿತ್ತು. ಇದೀಗ ಅದೇ ಸಿನಿಮಾ ಕಣ್ತುಂಬಿಕೊಳ್ಳಲು ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ.