Anasuya Bharadwaj: ದುಡ್ಡು ಕೊಟ್ಟು ಟ್ರೋಲ್ ಮಾಡಿಸಿ, ಮಾನ ಹರಾಜು ಹಾಕಿದ್ದು ಆ ಸ್ಟಾರ್ ನಟನೇ; ಮೌನ ಮುರಿದ ನಟಿ ಅನುಸೂಯಾ ಭಾರದ್ವಾಜ್
Jun 08, 2023 03:58 PM IST
ದುಡ್ಡು ಕೊಟ್ಟು ನನ್ನನ್ನು ಟ್ರೋಲ್ ಮಾಡಿಸಿ ಮಾನ ಹರಾಜು ಹಾಕಿದ್ದು ಆ ಸ್ಟಾರ್ ನಟನೇ; ನಟಿ ಅನುಸೂಯಾ ಭಾರದ್ವಾಜ್ ಆರೋಪ
- ವಿಜಯ್ ದೇವರಕೊಂಡ ಮತ್ತು ಅನುಸೂಯಾ ಭಾರದ್ವಾಜ್ ನಡುವಿನ ಮುನಿಸು ಇಂದು ನಿನ್ನೆಯದಲ್ಲ. ಇದೀಗ ಆ ಮುನಿಸಿಗೆ ಕಾರಣ ಏನಿರಬಹುದೆಂದು ಸ್ವತಃ ಅನಸೂಯಾ ಮೌನ ಮುರಿದಿದ್ದಾರೆ.
Anasuya Bharadwaj: ತೆಲುಗು ನಟಿ ಅನುಸೂಯಾ ಭಾರದ್ವಾಜ್ ಮತ್ತು ನಟ ವಿಜಯ್ (Vijay Deverakonda) ದೇವರಕೊಂಡ ನಡುವಿನ ಮುಸುಕಿನ ಕಾಳಗ ಇಂದು ನಿನ್ನೆಯದಲ್ಲ. 2017ರಿಂದ ಈ ಇಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಅನುಸೂಯಾ ನೇರವಾಗಿ ವಿಜಯ್ ಬಗ್ಗೆ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ.
ಅದು 2017. ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದರ ಜತೆಗೆ ಸಿನಿಮಾದಲ್ಲಿ ವಿಜಯ್ ಬಾಯಿಂದ ಕೆಟ್ಟ ಪದಗಳ ಗುಚ್ಛವೇ ಹೊರಬಂದಿತ್ತು. ಅದೇ ಬೈಗುಳಗಳನ್ನು ಸಿನಿಮಾ ಬಿಡುಗಡೆ ಆದ ಬಳಿಕವೂ ಸಾವಿರಾರು ಅಭಿಮಾನಿಗಳ ಮುಂದೆಯೇ ಮತ್ತೆ ಮತ್ತೆ ಹೇಳಿದ್ದರು. ವಿಜಯ್ ಅವರ ಈ ನಡೆ ಅನುಸೂಯಾ ಅವರಿಗೆ ಬೇಸರ ತರಿಸಿತ್ತು.
ಸಾರ್ವಜನಿಕವಾಗಿ ಒಬ್ಬ ನಾಯಕನಾದವನು ಹೇಗಿರಬೇಕು ಎಂಬುದನ್ನು ಅನುಸೂಯಾ ಹೇಳಿದ್ದರು. ಅಂದಿನಿಂದ ಇಬ್ಬರ ನಡುವೆ ಮುಸುಕಿನ ಕಾಳಗ ಏರ್ಪಟ್ಟಿತ್ತು. ಸೋಷಿಯಲ್ ಮೀಡಿಯಾದಲ್ಲಿಯೂ ಅನುಸೂಯಾ ಬಗ್ಗೆ ವಿಜಯ್ ಅವರ ಅಭಿಮಾನಿಗಳು ಟ್ರೋಲ್ ಮಾಡುವುದೂ ಮುಂದುವರಿಯಿತು. ಅದ್ಯಾವ ಮಟ್ಟಿಗೆ ಎಂದರೆ, ಫ್ಯಾನ್ಸ್‌ಗಳ ಈ ನಡೆ ಕಂಡು ಅನುಸೂಯಾ ರೋಸಿ ಹೋಗಿದ್ದರು. ಇದೀಗ ಅಂದಿನ ಆ ಘಟನೆಯ ಬಗ್ಗೆ ಇಂಡಿಯಾ ಟುಡೇ ಜತೆಗೆ ಸಂದರ್ಶನ ನೀಡಿದ್ದಾರೆ. ಅವರಾಡಿದ ಮಾತುಗಳು ಹೀಗಿವೆ.
ಕೆಟ್ಟ ಬೈಗುಳದಿಂದ ಶುರುವಾಯ್ತು ಮುಸುಕಿನ ಗುದ್ದಾಟ
"ವಿಜಯ್ ಮತ್ತು ನಾನು ತುಂಬ ದಿನಗಳಿಂದ ಸ್ನೇಹಿತರಾಗಿದ್ದೆವು. 2017ರಲ್ಲಿ ಅರ್ಜುನ್ ರೆಡ್ಡಿ ಸಿನಿಮಾ ಬಿಡುಗಡೆ ಆದಾಗ ಅದರಲ್ಲಿನ ಕೆಟ್ಟ ಪದಗಳ ಬಳಕೆಯನ್ನು ಸೆನ್ಸಾರ್ ಮಂಡಳಿ ಮ್ಯೂಟ್ ಮಾಡಿತ್ತು. ಚಿತ್ರಮಂದಿರಕ್ಕೆ ಭೇಟಿ ನೀಡಿದ ವೇಳೆಯೂ ಅಭಿಮಾನಿಗಳಿಂದಲೇ ಮ್ಯೂಟ್ ಆದ ಡೈಲಾಗ್‌ಗಳನ್ನು ಹೇಳಿಸಿದ್ದರು ವಿಜಯ್. ಸಿನಿಮಾದಲ್ಲೇನೋ ಅವರು ಕೆಟ್ಟದಾಗಿ ಬಯ್ಯುವ ಪಾತ್ರ ಮಾಡಿದ್ದರು. ಆದರೆ, ಅದನ್ನೇ ರಿಯಲ್ ಲೈಫ್‌ನಲ್ಲಿ ಅಳವಡಿಸಿಕೊಳ್ಳುವುದು ಸರಿಯಲ್ಲ. ಪ್ರೇಕ್ಷಕರ ಬಾಯಿಂದ ಅದನ್ನು ಹೇಳಿಸುವುದು ಒಳ್ಳೆಯದಲ್ಲ. ಒಬ್ಬ ತಾಯಿಯಾಗಿ ಈ ರೀತಿಯ ಕೆಟ್ಟ ಪದಗಳು ನಿಜಕ್ಕೂ ನನ್ನನ್ನು ಅಪ್‌ಸೆಟ್ ಮಾಡಿತು. ಈ ಬಗ್ಗೆ ವಿಜಯ್ ಜತೆಗೂ ಮಾತನಾಡಿದೆ, ಈ ರೀತಿಯ ಪದಗಳನ್ನು ರಿಯಲ್ ಲೈಫ್‌ನಲ್ಲಿ ಪ್ರೋತ್ಸಾಹಿಸಬೇಡ ಎಂದಿದ್ದೆ" ಎಂದಿದ್ದಾರೆ.
ಟ್ರೋಲ್‌ಗೆ ಆಹಾರವಾದ ಅನುಸೂಯಾ
ಮುಂದುವರಿದು ಮಾತನಾಡುವ ಅನುಸೂಯಾ,"ವಿಜಯ್‌ಗೆ ಹಾಗೇ ಹೇಳಿದ ಬಳಿಕ ನನ್ನ ಹೆಸರಿನ ಮೇಲೆ ಅವರ ಅಭಿಮಾನಿಗಳು ತುಂಬ ಕೆಟ್ಟದಾಗಿ ಟ್ರೋಲ್ ಮಾಡಿದರು. ನಿಜಕ್ಕೂ ನಾನು ಖಿನ್ನತೆಗೆ ಜಾರಿದೆ. ಆನ್‌ಲೈನ್‌ನಲ್ಲಿ ನಿತ್ಯ ಒಂದಲ್ಲ ಒಂದು ಟೀಕೆಗಳು ಕೇಳಿಬರುತ್ತಿದ್ದವು. ಹೀಗಿರುವಾಗಲೇ 2019ರಲ್ಲಿ ವಿಜಯ್ ದೇವರಕೊಂಡ ಅವರ ತಂದೆ ಮೀಕು ಮಾತ್ರಮೇ ಚಪ್ತಾ ಸಿನಿಮಾದಲ್ಲಿ ನನಗೊಂದು ಪಾತ್ರವನ್ನು ನೀಡಿದರು. ಆಗ ಎಲ್ಲವೂ ಚೆನ್ನಾಗಿತ್ತು.
"ಶೂಟಿಂಗ್ ಸಂದರ್ಭದಲ್ಲಿ ವಿಜಯ್ ಅವರ ತಂಡದ ಸದಸ್ಯರೊಬ್ಬರು ಸತ್ಯವನ್ನು ತಿಳಿಸಿದರು. ವಿಜಯ್ ದೇವರಕೊಂಡ ಅವರೇ ಕೆಲವು ಟ್ರೋಲರ್ಸ್‌ಗೆ ದುಡ್ಡು ನೀಡಿ ನನ್ನನ್ನು ನಿಂದಿಸುವಂತೆ ಹೇಳಿದ್ದರು ಎಂಬುದು. ಆಗ ನಿಜಕ್ಕೂ ನನಗೆ ಶಾಕ್ ಆಯ್ತು. ಈ ವಿಚಾರ ವಿಜಯ್‌ಗೆ ಗಮನಕ್ಕೆ ಬಂದಿದೆಯೇ? ಅವರ ಗಮನಕ್ಕೆ ಬಾರದೇ ಇಷ್ಟೆಲ್ಲ ನಡೆಯಲು ಸಾಧ್ಯವೇ? ಎಂದು ಸಂದರ್ಶನದಲ್ಲಿ ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.