logo
ಕನ್ನಡ ಸುದ್ದಿ  /  ಮನರಂಜನೆ  /  ಸೀರಿಯಲ್ ಶೂಟಿಂಗ್ ಹೇಗಿರುತ್ತೆ, ಮೊದಲೇ ಎಷ್ಟು ಎಪಿಸೋಡ್ ರೆಡಿ ಇರ್ಬೇಕು? ನಾತಿಚರಾಮಿ ಧಾರಾವಾಹಿ ನಿರ್ದೇಶಕ ರಾಮ್ ಜತೆ Ht ಮಾತುಕತೆ

ಸೀರಿಯಲ್ ಶೂಟಿಂಗ್ ಹೇಗಿರುತ್ತೆ, ಮೊದಲೇ ಎಷ್ಟು ಎಪಿಸೋಡ್ ರೆಡಿ ಇರ್ಬೇಕು? ನಾತಿಚರಾಮಿ ಧಾರಾವಾಹಿ ನಿರ್ದೇಶಕ ರಾಮ್ ಜತೆ HT ಮಾತುಕತೆ

Suma Gaonkar HT Kannada

Nov 04, 2024 04:51 PM IST

google News

ನಾತಿಚರಾಮಿ ಧಾರಾವಾಹಿ ನಿರ್ದೇಶಕ ರಾಮ್ ಜಯಶೀಲ್ ಜತೆ HT ಮಾತುಕತೆ

    • ಉದಯ ಟಿವಿಯಲ್ಲಿ ಇಂದಿನಿಂದ (ನವೆಂಬರ್ 4) ಹೊಸ ಧಾರಾವಾಹಿ ನಾತಿಚರಾಮಿ ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಹಿರಿತೆರೆಗಿಂತ ಕಿರುತೆರೆಯೇ ವೇಗವಾಗಿ ಮುನ್ನುಗ್ಗುತ್ತಿರುವ ಸದ್ಯದ ವಾತಾವರಣದಲ್ಲಿ ಹೊಸ ಧಾರಾವಾಹಿ ನಾತಿಚರಾಮಿ ಹೇಗೆ ವೀಕ್ಷಕರನ್ನು ಸೆಳೆಯಲು ತಯಾರಾಗಿದೆ ಎಂದು ನಿರ್ದೇಶಕ ರಾಮ್‌ HT ಜೊತೆ ಮಾತುಕತೆ ನಡೆಸಿದ್ದಾರೆ. 
ನಾತಿಚರಾಮಿ ಧಾರಾವಾಹಿ ನಿರ್ದೇಶಕ ರಾಮ್ ಜಯಶೀಲ್ ಜತೆ HT ಮಾತುಕತೆ
ನಾತಿಚರಾಮಿ ಧಾರಾವಾಹಿ ನಿರ್ದೇಶಕ ರಾಮ್ ಜಯಶೀಲ್ ಜತೆ HT ಮಾತುಕತೆ

ಉದಯ ಟಿವಿಯಲ್ಲಿ ಇಂದಿನಿಂದ (ನವೆಂಬರ್ 4) ಹೊಸ ಧಾರಾವಾಹಿ ನಾತಿಚರಾಮಿ ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಹಿರಿತೆರೆಗಿಂತ ಕಿರುತೆರೆಯೇ ವೇಗವಾಗಿ ಮುನ್ನುಗ್ಗುತ್ತಿರುವ ಸದ್ಯದ ವಾತಾವರಣದಲ್ಲಿ ಹೊಸ ಧಾರಾವಾಹಿ ನಾತಿಚರಾಮಿ ಹೇಗೆ ವೀಕ್ಷಕರನ್ನು ಸೆಳೆಯಲು ತಯಾರಿ ನಡೆಸಿದೆ ಎಂಬುದು ನಿಜಕ್ಕೂ ಕುತೂಹಲಕರ. ಅದ್ದೂರಿ ಚಿತ್ರೀಕರಣ, ಪ್ರಚಾರದ ಅಬ್ಬರ ಮುಂತಾದ ಕಿರುತೆರೆ ಟ್ರೆಂಡಿಂಗ್ ವಿಚಾರಗಳ ನಡುವೆ ನಾತಿಚರಾಮಿ ಸೀರಿಯಲ್ ಕುರಿತು ಕೆಲವು ವಿಚಾರಗಳನ್ನು ಧಾರಾವಾಹಿ ನಿರ್ದೇಶಕ ರಾಮ್ HT ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

ಪ್ರಶ್ನೆ: ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದೀರಾ? ಶೂಟಿಂಗ್ ಅನುಭವ ಹೇಗಿತ್ತು?

ಉತ್ತರ: ನಾತಿಚರಾಮಿ ಧಾರಾವಾಹಿ ಶೂಟಿಂಗ್ ಸಲುವಾಗಿ ಬಹುತೇಕ ಇಡೀ ದಕ್ಷಿಣ ಭಾರತ ರೌಂಡ್ ಹಾಕಿದ್ದೇವೆ. ಬೆಂಗಳೂರು, ಹೈದ್ರಾಬಾದ್, ಚೆನ್ನೈ ಹಾಗೂ ಮಧುರೈಗಳಲ್ಲಿ ಸೀರಿಯಲ್ ಶೂಟ್ ಆಗಿದೆ. ಧಾರಾವಾಹಿಗಳ ಶೂಟಿಂಗ್ ಜನಜಂಗುಳಿ ಇರುವ ಮಾರುಕಟ್ಟೆಗಳಲ್ಲಿ ಇದ್ದರೆ ಸಾಮಾನ್ಯವಾಗಿ ಕೆಲವು ಸವಾಲುಗಳು ಎದುರಾಗುತ್ತದೆ. ಅದೇ ಸವಾಲುಗಳನ್ನು ನಾವು ಸಹ ಎದುರಿಸುವಂತಾಗಿತ್ತು. ಅದರಲ್ಲೂ ನಾವು ಮಧುರೈ ಹೂವಿನ ಮಾರ್ಕೆಟ್ನಲ್ಲಿ ಆಗಷ್ಟೇ ಶೂಟಿಂಗ್ ಆರಂಭ ಮಾಡಿದ್ದೆವು. ಅಲ್ಲಿ ಓಡಾಟ ಮಾಡುವವರಿಗೆ ಹಾಗೂ ಅಲ್ಲಿನ ವ್ಯಾಪಾರಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಶೂಟಿಂಗ್ ಮಾಡುವುದು ಒಂದು ದೊಡ್ಡ ಟಾಸ್ಕ್ ಆಗಿತ್ತು. ಆದರೆ ಒಳಾಂಗಣದಲ್ಲಿ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಅಷ್ಟೊಂದು ಸವಾಲು ಇರುವುದಿಲ್ಲ. ಆದರೂ ಎಲೆಕ್ಟ್ರಿಸಿಟಿ ಸಮಸ್ಯೆ, ಮನೆಯನ್ನು ಬಾಡಿಗೆಗೆ ಕೊಟ್ಟವರ ಸಮಸ್ಯೆ ಇದೆಲ್ಲವನ್ನು ಅರ್ಥ ಮಾಡಿಕೊಂಡು ಶೂಟಿಂಗ್ ಮಾಡಬೇಕಾಗುತ್ತದೆ. ಈಗ ಬಿಡುಗಡೆಯಾದ ಪ್ರೋಮೋ ಚಿತ್ರೀಕರಣ ಆಗಿದ್ದು ಶೃಂಗೇರಿಯ ವಿಶ್ವನಾಥಪುರ ಅಗ್ರಹಾರದಲ್ಲಿ.

ಪ್ರಶ್ನೆ: ಒಂದು ಸೀರಿಯಲ್ ಮೇಕಿಂಗ್ನಲ್ಲಿ ಎಷ್ಟು ಜನರ ಶ್ರಮ ಇರುತ್ತದೆ?

ಉತ್ತರ: ಒಂದು ಸೀರಿಯಲ್ ಆಗ್ಬೇಕು ಎಂದರೆ ಕೆಲಸಕ್ಕೆ ಅಗತ್ಯವಿರುವ ಪರಿಣಿತ ಕೆಲಸಗಾರರ ಸಂಖ್ಯೆಯೂ ಹೆಚ್ಚು. ದಿನದಿಂದ ದಿನಕ್ಕೆ ಈ ಅವಶ್ಯಕತೆ ಹೆಚ್ಚಾಗುತ್ತಲೇ ಇರುತ್ತದೆ. ಹೊರಾಂಗಣ ಶೂಟಿಂಗ್ ಹೋದಾಗ ಆರ್ಟಿಸ್ಟ್, ಟೆಕ್ನಿಷಿಯನ್ಸ್, ಮೇಕಪ್ ಆರ್ಟಿಸ್ಟ್ ಸೇರಿ ಹಲವು ವಿಭಾಗಗಳಲ್ಲಿ ಸಾಕಷ್ಟು ಜನರ ಅವಶ್ಯಕತೆ ಇದ್ದೇ ಇರುತ್ತದೆ. ಕಡಿಮೆ ಅಂದ್ರೂ 30 ರಿಂದ 40 ಅಥವಾ 60.. ಹೀಗೆ ಪರಿಣಿತರ ಸಂಖ್ಯೆ ಏರುತ್ತಲೇ ಇರುತ್ತದೆ. ಒಂದು ಧಾರಾವಾಹಿ ಅಂದರೆ ಅಷ್ಟೊಂದು ಪರಿಣಿತರ ಸಂಯೋಜನೆ ಬೇಕೇ ಬೇಕು.

ಪ್ರಶ್ನೆ: ಬೇರೆ ಧಾರಾವಾಹಿಗಳಿಗಿಂತ ನಾತಿಚರಾಮಿಯಲ್ಲಿ ನೀವೇನು ಭಿನ್ನವಾಗಿ ಕೊಡಲು ಬಯಸಿದ್ದೀರಿ?

ಉತ್ತರ: ನಾವು ನಾತಿಚರಾಮಿ ಧಾರಾವಾಹಿಯ ಮೂಲಕ ಕ್ವಾಲಿಟಿ ಕಂಟೆಂಟ್ ಕೊಡುವ ಪ್ರಯತ್ನ ಮಾಡಿದ್ದೇವೆ. ಸಾಕಷ್ಟು ಜನರು ಪ್ರೋಮೋ ನೋಡಿ ಉತ್ತಮ ಅಭಿಪ್ರಾಯ ತಿಳಿಸಿದ್ದಾರೆ. ವೀಕ್ಷಕರು ಯಾವುದನ್ನು ಬಯಸುತ್ತಾರೋ ಅದನ್ನೇ ನಾವು ನೀಡಬೇಕಾಗುತ್ತದೆ. ಖಂಡಿತ ವೀಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ನಾವು ಈ ಧಾರಾವಾಹಿ ಮಾಡುತ್ತಿದ್ದೇವೆ ಎಂಬ ನಂಬಿಕೆ ನಮಗಿದೆ. ಒಂದು ಎಪಿಸೋಡ್ ನೋಡಿದವರು ಖಂಡಿತ ಇನ್ನೊಂದು ಎಪಿಸೋಡ್ಗಾಗಿ ಕಾಯುತ್ತಾರೆ. ಆ ರೀತಿಯ ಕ್ವಾಲಿಟಿ ಮತ್ತು ಆ ಕ್ಯೂರಿಯಾಸಿಟಿ ಉಳಿಸುವ ಎಲ್ಲ ಪ್ರಯತ್ನವನ್ನೂ ನಾವು ನಾತಿಚರಾಮಿಯಲ್ಲಿ ನೀಡಿದ್ದೇವೆ.

ಪ್ರಶ್ನೆ: ಒಂದು ಧಾರಾವಾಹಿ ಮಾಡಬೇಕು ಎಂದರೆ ಎಷ್ಟು ಎಪಿಸೋಡ್ ಮೊದಲೇ ರೆಡಿ ಇರುತ್ತದೆ?

ಉತ್ತರ: ಖಂಡಿತ, ಎಪಿಸೋಡ್ ಬ್ಯಾಂಕಿಂಗ್ ಎಂಬುದು ತುಂಬಾ ಮುಖ್ಯವಾಗುತ್ತದೆ. ಒಂದು ಧಾರಾವಾಹಿ ಮಾಡಬೇಕು ಎಂದರೆ ಅದಕ್ಕೆ ಮುಂಚಿತವಾಗಿ ಒಂದಿಷ್ಟು ಎಪಿಸೋಡ್ಗಳು ರೆಡಿ ಇರಬೇಕು. ಒಂದೊಂದು ಚಾನೆಲ್ಗಳ ಬೇಡಿಕೆ ಒಂದೊಂದು ರೀತಿಯಾಗಿರುತ್ತದೆ. ಈಗ ನಾತಿಚರಾಮಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾರಣ 15 ಎಪಿಸೋಡ್ಗಳನ್ನು ಅವರು ಮುಂಚಿತವಾಗಿ ಕೇಳಿರುತ್ತಾರೆ. ನಾವು ಅಷ್ಟನ್ನು ರೆಡಿ ಇಟ್ಟುಕೊಳ್ಳಬೇಕಾಗುತ್ತದೆ. ಇನ್ನು ಜೀ ಕನ್ನಡದಲ್ಲಿ ಕಡಿಮೆ ಅಂದ್ರೂ 5 ಎಪಿಸೋಡ್ ರೆಡಿ ಇಟ್ಟುಕೊಳ್ಳಬೇಕು. ನಾವೆಷ್ಟು ಎಪಿಸೋಡ್ ಬ್ಯಾಂಕಿಂಗ್ ಇಟ್ಟುಕೊಳ್ಳುತ್ತೇವೋ ಅಷ್ಟು ಒಳ್ಳೆಯದು.

ಪ್ರಶ್ನೆ: ಧಾರಾವಾಹಿ ಆರಂಭವಾಗುವಾಗಲೇ ಕಥೆ ಹೇಗೆ ಅಂತ್ಯವಾಗುವುದು ಎಂದು ನಿರ್ಧಾರವಾಗುತ್ತಾ ಅಥವಾ ಜನರ ಪ್ರತಿಕ್ರಿಯೆ ಹೇಗಿದೆ ಎನ್ನುವ ಮೂಲಕ ನಿರ್ಧಾರ ಮಾಡುತ್ತೀರಾ?

ಉತ್ತರ: ಧಾರಾವಾಹಿ ಆರಂಭವಾಗುವಾಗ ಸಾಮಾನ್ಯವಾಗಿ ಒನ್ಲೈನರ್ ಅಂತ ಇರುತ್ತದೆ. ಆ ಕಥೆಯನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಮೊದಲೇ ಎಲ್ಲ ಕಥೆ ಅಥವಾ ಸಂಭಾಷಣೆ ಬರೆದು ರೆಡಿ ಇರೋದಿಲ್ಲ. ಒಂದು ನೂರು ಎಪಿಸೋಡ್ ಆಗುವಷ್ಟರಲ್ಲಿ ಕಥೆ ಇಲ್ಲಿಯವರೆಗೆ ಬಂದಿರಬೇಕು. 50 ಎಪಿಸೋಡ್ಗೆ ಒಂದು ಕಥೆ ಬ್ರೇಕ್ ಆಗಬೇಕು. 100 ಎಪಿಸೋಡ್ ಆಗುವಾಗ ಕಥೆಯ ಕಾಲು ಭಾಗ ಅಥವಾ ಮುಕ್ಕಾಲು ಭಾಗ ಕವರ್ ಆಗಿರಬೇಕು. ಹೀಗೆ ನಾವು ನಿರ್ಧಾರ ಮಾಡಿಕೊಂಡಿರುತ್ತೇವೆ.

ಪ್ರಶ್ನೆ: ತಾರಾಗಣದಲ್ಲಿ ಯಾರ್ಯಾರಿದ್ದಾರೆ?

ಉತ್ತರ: ನಾಯಕ ನಟನಾಗಿ - ಯಶವಂತ್

ನಾಯಕ ನಟಿ - ಮನಸ್ವಿ ಗೌಡ

ಅಮ್ಮನ ಪಾತ್ರದಲ್ಲಿ - ಮಹಾಲಕ್ಷ್ಮೀ

ಚಿಕ್ಕಪ್ಪನ ಪಾತ್ರದಲ್ಲಿ - ರವಿ ಮೂರೂರು

ನಟಿ ತಾಯಿ ಪಾತ್ರದಲ್ಲಿ - ಲಕ್ಷ್ಮೀ ಭಟ್

ಅಣ್ಣನ ಪಾತ್ರದಲ್ಲಿ - ರಾಜೇಶ್ ದ್ರುವ

ಅತ್ತಿಗೆ ಪಾತ್ರದಲ್ಲಿ - ದಿವ್ಯಶ್ರೀ ನಾಯ್ಕ್

ರಾಮ್‌ ಅವರು ಈ ಹಿಂದೆ ಜೊತೆ ಜೊತೆಯಲಿ ಧಾರಾವಾಹಿ ಹಾಗೂ ಗೌರೀ ಶಂಕರ ಧಾರಾವಾಹಿ ನಿರ್ದೇಶನ ಮಾಡಿದ್ದರು. ಒಂದಂಕಿ ಕಾಡು ಸಿನಿಮಾ ಕೂಡ ಮಾಡಿದ್ದಾರೆ.
ನಾತಿಚರಾಮಿ ಧಾರಾವಾಹಿಯನ್ನು ನೀವು ಸನ್‌ ನೆಕ್ಸ್ಟ್‌ನಲ್ಲೂ ನೋಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ