ಅಯ್ಯೋ ವಿಧಿಯೇ! ಸಮಂತಾ ರುತ್ ಪ್ರಭು ಮನೆಯಲ್ಲಿ ಸೂತಕ, ಮಾಜಿ ಪತಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ
Nov 30, 2024 12:47 PM IST
ಸಮಂತಾ ಮಾಜಿ ಪತಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ
Samantha ruth Prabhu: ಹೈದರಾಬಾದ್‌ನ ಮನೆಯಲ್ಲಿ ನಾಗಚೈತನ್ಯ- ಶೋಭಿತಾ ಧೂಲಿಪಾಲ ಜೋಡಿಯ ಮದುವೆ ಸಂಭ್ರಮ ಜೋರಾಗಿದ್ದರೆ, ಅತ್ತ ಮಾಜಿ ಪತ್ನಿ ಸಮಂತಾ ಅವರ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
Samantha Ruth Prabhu Father Dies: ಬಹುಭಾಷಾ ನಟಿ ಸಮಂತಾ ಅವರ ಮನೆಯಲ್ಲೀಗ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಸಮಂತಾ ಅವರ ತಂದೆ ಜೋಸೆಫ್ ಪ್ರಭು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ "ಅಪ್ಪಾ.. ನಾವು ಮತ್ತೆ ಭೇಟಿಯಾಗುವವರೆಗೆ" ಎಂದು ಒಡೆದ ಹೃದಯದ ಪೋಸ್ಟ್ ಹಂಚಿಕೊಂಡು ಭಾವುಕರಾಗಿದ್ದರು. ನಟಿಯ ಈ ಪೋಸ್ಟ್ ನೋಡಿದ ಫ್ಯಾನ್ಸ್ ಕಾಮೆಂಟ್ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ಇತ್ತ ಟಾಲಿವುಡ್ ಅಂಗಳದಲ್ಲಿ ಅಕ್ಕಿನೇನಿ ಕುಟುಂಬ ಮದುವೆ ಸಂಭ್ರಮದಲ್ಲಿದೆ. ಸಮಂತಾ ಅವರ ಮಾಜಿ ಪತಿ, ನಾಗಚೈತನ್ಯ ಶೋಭಿತಾ ಧೂಲಿಪಾಲ ಅವರನ್ನು ಎರಡನೇ ಮದುವೆ ಆಗುತ್ತಿದ್ದಾರೆ. ಈಗಾಗಲೇ ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಕಾರ್ಯಗಳೂ ಬಿರುಸು ಪಡೆದುಕೊಂಡಿವೆ. ಡಿಸೆಂಬರ್ 4ರಂದು ನಾಗಚೈತನ್ಯ- ಶೋಭಿತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆ ಸಂಭ್ರಮದ ನಡುವೆಯೇ, ಮಾಜಿ ಪತ್ನಿ ಸಮಂತಾ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿದೆ.
ಮದುವೆ ಸಂಭ್ರಮದಲ್ಲಿ ನಾಗಚೈತನ್ಯ
ಈಗಾಗಲೇ ಹೈದರಾಬಾದ್‌ನ ನಾಗಚೈತನ್ಯ ಅವರ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಅರಿಶಿಣ ಶಾಸ್ತ್ರ, ಸಂಗೀತ ಶಾಸ್ತ್ರದ ಕಾರ್ಯಕ್ರಮಗಳು ನಡೆಯುತ್ತಿವೆ. ತುಂಬಿದ ಮನೆಯಂತಾಗಿದೆ ಅಕ್ಕಿನೇನಿ ಕುಟುಂಬ. ಇತ್ತ ಶೋಭಿತಾ ಮನೆಯಲ್ಲಿಯೂ ಮದುವೆ ತಯಾರಿ ಜೋರಾಗಿದೆ. ಮಂಗಳಸ್ನಾನದ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನೇನು ಈ ಜೋಡಿಯ ಅದ್ಧೂರಿ ಕಲ್ಯಾಣಕ್ಕೆ ನಾಲ್ಕು ದಿನಗಳಷ್ಟೇ ಬಾಕಿ. ಮದುವೆಗೆಂದೇ ತಮ್ಮದೇ ಆದ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಮಂಟಪದ ಸೆಟ್ ಸಹ ತಲೆ ಎತ್ತಿದೆ.
ಗಾಯದ ಮೇಲೆ ಬರೆ..
ನಟಿ ಸಮಂತಾ ರುತ್ ಪ್ರಭುಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾಜಿ ಪತಿ ನಾಗ ಚೈತನ್ಯ ಸಮಂತಾಗೆ ಡಿವೋರ್ಸ್ ನೀಡಿದ ಮೂರು ವರ್ಷಗಳ ಬಳಿಕ, ಶೋಭಿತಾ ಧೂಳಿಪಾಲ ಜತೆಗೆ ಎರಡನೇ ಮದುವೆ ಆಗುತ್ತಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಈ ಜೋಡಿಯ ಅದ್ಧೂರಿ ನಿಶ್ಚಿತಾರ್ಥ ನೆರವೇರಿತ್ತು. ಬಳಿಕ ಡಿಸೆಂಬರ್‌ನಲ್ಲಿಯೇ ಮದುವೆ ನಡೆಯಲಿದೆ ಎಂದು ಆವತ್ತೇ ನಿಶ್ಚಯಿಸಲಾಗಿತ್ತು. ಇದೀಗ ಆ ಸಂಭ್ರಮ ನಡೆಯುತ್ತಿದೆ. ಇತ್ತ ಮಾಜಿ ಪತಿಯ ಮದುವೆ, ಅತ್ತ ಅಪ್ಪನ ಸಾವು ಸಮಂತಾಗೆ ಅರಗಿಸಿಕೊಳ್ಳದಂತಾಗಿದೆ.
ಡಿವೋರ್ಸ್ ಬಳಿಕ ಅಪ್ಪನ ಹೇಳಿದ್ದೇನು?
ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಬಳಿಕ ಸಮಂತಾ ಅವರ ತಂದೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಅವರ ಅಂದಿನ ಮಾತು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ. "ಬಹಳ ಹಿಂದೆಯೇ, ಒಂದು ಕಥೆ ಇತ್ತು. ಆ ಕಥೆ ಇನ್ನು ಮುಂದೆ ಅಸ್ತಿತ್ವದಲ್ಲಿ ಇರಲ್ಲ! ಆದ್ದರಿಂದ, ಹೊಸ ಕಥೆಯನ್ನು ಪ್ರಾರಂಭಿಸೋಣ; ಹೊಸ ಅಧ್ಯಾಯದೊಂದಿದೆ! ನನ್ನ ನೋವಿನಿಂದ ಹೊರಬರಲು ನನಗೆ ತುಂಬ ಸಮಯ ಹಿಡಿಯಿತು. ಬದುಕು ತುಂಬ ಚಿಕ್ಕದು, ಅದೇ ನೋವಿನ ಜತೆಗೆ ಕುಳಿತುಕೊಳ್ಳುವುದು ಅಸಾಧ್ಯ" ಎಂದಿದ್ದರು.