Dr Bro: ಎಲ್ಲಿದ್ದಾರೆ ಡಾ ಬ್ರೋ, ಗಗನ್ ಶ್ರೀನಿವಾಸ್ ಕಾಣೆಯಾಗಿದ್ದಾರ, ಚೀನಾ ಜೈಲಲ್ಲಿದ್ದಾರ; ನಮಸ್ಕಾರ ದೇವ್ರು ಇಲ್ಲಿದೆ ಉತ್ತರ
Dec 14, 2023 11:27 AM IST
Dr Bro: ಎಲ್ಲಿದ್ದಾರೆ ಡಾ ಬ್ರೋ, ಗಗನ್ ಶ್ರೀನಿವಾಸ್ ಕಾಣೆಯಾಗಿದ್ದಾರ?
- Dr Bro Youtube: ನಮಸ್ಕಾರ ದೇವ್ರು ಖ್ಯಾತಿಯ ಡಾ. ಬ್ರೋ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಕಳೆದ ಹಲವು ದಿನಗಳಿಂದ ಏಕೆ ಯಾವುದೇ ವಿಡಿಯೋ ಅಪ್ಲೋಡ್ ಮಾಡುತ್ತಿಲ್ಲ? ಅವರು ಕಾಣೆಯಾಗಿದ್ದಾರ, ಚೀನಾ ಸರಕಾರ ಬಂಧನದಲ್ಲಿಟ್ಟಿದೆಯೇ ಇತ್ಯಾದಿ ಊಹಾಪೋಹಗಳಿಗೆ ಗ್ಲೋಬಲ್ ಕನ್ನಡಿಗ ಯೂಟ್ಯೂಬ್‌ನಲ್ಲಿ ಇದೀಗ ಉತ್ತರ ದೊರಕಿದೆ.
ಕನ್ನಡಿಗರ ಅಚ್ಚುಮೆಚ್ಚಿನ ಯೂಟ್ಯೂಬರ್‌ಗಳಲ್ಲಿ ಡಾ. ಬ್ರೋ ಖ್ಯಾತಿಯ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಜನಪ್ರಿಯರು. ಪ್ರತಿನಿತ್ಯ ವಿವಿಧ ದೇಶಗಳಿಗೆ ಹೋಗಿ ಮನೆಮಗನಂತೆ ಅಲ್ಲಿನ ವಿಶೇಷಗಳ ಕುರಿತು ಮಾಹಿತಿ ನೀಡುವ ಈತನ ಚಾನೆಲ್‌ಗೆ ಸಾಕಷ್ಟು ವೀಕ್ಷಕರಿದ್ದಾರೆ. ಪ್ರತಿನಿತ್ಯ ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿರುವ ಡಾ. ಬ್ರೋ ಕಳೆದ ಹಲವು ದಿನಗಳಿಂದ ಏಕೆ ಸೈಲೆಂಟ್ ಆಗಿದ್ದಾರೆ? ಅವರ ಚಾನೆಲ್‌ನಲ್ಲಿ ಏಕೆ ಯಾವುದೇ ಹೊಸ ವಿಡಿಯೋಗಳು ಅಪ್ಲೋಡ್ ಆಗುತ್ತಿಲ್ಲ ಇತ್ಯಾದಿ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಎದ್ದಿದ್ದವು. ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ.
ಗಗನ್ ಶ್ರೀನಿವಾಸ್ ಅವರು ಯೂಟ್ಯೂಬ್‌ನಲ್ಲಿ ಕೊನೆಯದಾಗಿ ನವೆಂಬರ್ 29ರಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಇದಾದ ಬಳಿಕ ಯಾವುದೇ ವಿಡಿಯೋ ಅಪ್ಲೋಡ್ ಮಾಡಿರಲಿಲ್ಲ. ಪ್ರತಿನಿತ್ಯ ಹಲವು ವಿಡಿಯೋಗಳು ಅಪ್ಲೋಡ್ ಆಗುತ್ತಿರುವ ಗಗನ್ ಶ್ರೀನಿವಾಸ್ ಚಾನೆಲ್ ಏಕಾಏಕೀ ಮೌನಕ್ಕೆ ಜಾರಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಎದ್ದಿದ್ದವು.
ಗ್ಲೋಬಲ್ ಕನ್ನಡಿಗ ಯೂಟ್ಯೂಬ್‌ನಲ್ಲಿ ದೊರಕಿದ ಉತ್ತರ
ಇಂದು ಗ್ಲೋಬಲ್ ಕನ್ನಡಿಗ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಟ ಮಹಾಬಲ ರಾವ್ ಅವರು ಈ ಕುರಿತು ಒಂದು ವಿಡಿಯೋ ಮಾಡಿದ್ದಾರೆ. ಏನಾಗಿದೆ ಡಾ. ಬ್ರೋಗೆ, ಕಾಣೆಯಾಗಿದ್ದಾರ? ಚೀನಾ ಸರಕಾರ ಬಂಧಿಸಿ ಇಟ್ಟಿದೆಯೇ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತ ಅವರು ಸತ್ಯ ಏನೆಂದು ತಿಳಿಸಿದ್ದಾರೆ.
ಏನಾಗಿದೆ ಡಾ. ಬ್ರೋಗೆ?
ಕನ್ನಡದ ಜನಪ್ರಿಯ ಯೂಟ್ಯೂಬ್ ಚಾನೆಲ್‌ಗಳಾದ ಗ್ಲೋಬಲ್ ಕನ್ನಡಿಗ, ಫ್ಲೈಯಿಂಗ್ ಪಾಸ್‌ಪೋರ್ಟ್ ಮತ್ತು ಡಾ. ಬ್ರೋ ಅವರು ಜತೆಯಾಗಿ ಒಂದು ದಿನ ಪ್ರವಾಸ ಹೋಗಿರುವ ವಿವರವನ್ನು ಮಹಾಬಲ ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ಡಾ. ಬ್ರೋ ಎಲ್ಲೂ ಕಾಣೆಯಾಗಿಲ್ಲ ಎಂದಿದ್ದಾರೆ. ಈ ಮೂರು ಚಾನೆಲ್‌ನವರು ವರ್ಷಕ್ಕೊಮ್ಮೆ ಜತೆಯಾಗಿ ಪ್ರವಾಸ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಈ ಬಾರಿ ಎಲ್ಲರೂ ಜತೆಯಾಗಿ ಶೃಂಗೇರಿಗೆ ಹೋಗಿದ್ದಾರೆ.
"ಕಳೆದ ಎರಡು ಮೂರು ದಿನಗಳಿಂದ ನನ್ನ ಫೋನ್ ಕಂಟ್ಯೂನಸ್ ಆಗಿ ರಿಂಗ್ ಆಗ್ತಾ ಇದೆ. ಕೆಲವು ನ್ಯೂಸ್ ಚಾನೆಲ್‌ನವರು ಕೂಡ ಕಾಲ್ ಮಾಡುತ್ತಿದ್ದರು. ಡಾ. ಬ್ರೋಗೆ ಏನೋ ತೊಂದರೆಯಾಗಿದೆಯಂತೆ, ಅವರ ಆರೋಗ್ಯ ಸರಿ ಇಲ್ವಂತೆ ಇತ್ಯಾದಿ ಊಹಾಪೋಹಗಳು ಇದ್ದವು. ನಾನು ಒಬ್ಬರೊಬ್ಬರಿಗೆ ಉತ್ತರಿಸಲು ಹೋಗಲಿಲ್ಲ" ಎಂದು ಮಹಾಬಲ ಅವರು ಹೇಳಿದ್ದಾರೆ. ಜತೆಗೆ, ತಾವು ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಾವೆಲ್ಲರೂ ಜತೆಯಾಗಿ ಶೃಂಗೇರಿ ಪ್ರವಾಸಕ್ಕೆ ಹೋಗಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ರಕ್ತ ಸಂಬಂಧಗಳ ಮೀರಿದ ಬಂಧವಿದು, ಯಾವ ಬಿಂದುವಿನಲ್ಲಿ ಸಂಧಿಸಿಹುದು... ಎಂಬ ಹಿನ್ನಲೆ ಧ್ವನಿಯಲ್ಲಿ ಗ್ಲೋಬಲ್ ಕನ್ನಡಿಗ ವಿಡಿಯೋದಲ್ಲಿ ಈ ಯೂಟ್ಯೂಬರ್‌ಗಳ ಸ್ನೇಹವನ್ನು ತೋರಿಸಲಾಗಿದೆ. "ಕಳೆದ ವರ್ಷ ನಾವೆಲ್ಲರೂ ಹೊನ್ನಾವರದಲ್ಲಿ ಮಹಾ ಸಂಗಮವಾಗಿದ್ದೇವು. ಈ ಬಾರಿ ಶೃಂಗೇರಿಯಲ್ಲಿ ಒಟ್ಟಾಗಿದ್ದೇವೆ" ಎಂದು ಮಹಾಬಲರಾವ್ ಹೇಳಿದ್ದಾರೆ. ʼ
ಡಾ. ಬ್ರೋ ಕ್ಷೇಮವಾಗಿದ್ದಾರೆ ಎಂದು ತಿಳಿದು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಜತೆಗೆ, ಇಂತಹ ಸಮಯದಲ್ಲಿ ಸುಳ್ಳುಸುದ್ದಿ ಹಬ್ಬಿಸಬೇಡಿ ಎಂದು ಸಾಕಷ್ಟು ಜನರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಡಾ. ಬ್ರೋ ಕುರಿತು ಮತ್ತು ಮೂವರು ಯೂಟ್ಯೂಬರ್‌ಗಳ ಸ್ನೇಹದ ಕುರಿತು ಸಾಕಷ್ಟು ಜನರು ಖುಷಿ ವ್ಯಕ್ತಪಡಿಸಿದ್ದು, ಇದು ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದ್ದಾರೆ.
ವಿಭಾಗ