ವ್ಯಕ್ತಿ ಚಿತ್ರ: ವಾಹ್ ಉಸ್ತಾದ್ ವಾಹ್ ಇನ್ನು ನೆನಪು ಮಾತ್ರ; ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಜೀವನ ಪಥ, ಪ್ರಶಸ್ತಿ ಪುರಸ್ಕಾರ ವಿವರ
Dec 15, 2024 11:55 PM IST
ವಾಹ್ ಉಸ್ತಾದ್ ವಾಹ್ ಇನ್ನು ನೆನಪು ಮಾತ್ರ; ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಜೀವನ ಪಥ, ಪ್ರಶಸ್ತಿ ಪುರಸ್ಕಾರ ವಿವರ. (ಕಡತ ಚಿತ್ರ)
Zakir Hussain Death: ತಬಲಾ ಮೇಲೆ ಭಾರತದ ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅವರ ಕೈ ಬೆರಳುಗಳ ಕುಣಿತದ ಸದ್ದು ಕಿವಿಯೊಳಗೆ ಅನುರಣಿಸುತ್ತಿದ್ದರೂ ಅದು ಕ್ಷೀಣವಾಗಿದೆ. ವಾಹ್ ಉಸ್ತಾದ್ ವಾಹ್ ಇನ್ನು ನೆನಪು ಮಾತ್ರ. ಜಾಕಿರ್ ಹುಸೇನ್ ವಿಧಿವಶರಾದರು. ಅವರ ಜೀವನ ಪಥ, ಪ್ರಶಸ್ತಿ ಪುರಸ್ಕಾರ ವಿವರ ಇಲ್ಲಿದೆ.
Zakir Hussain Death: ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಹೆಸರು ಕೇಳಿದ ಕೂಡಲೇ ತಬಲಾ ಸದ್ದು ಸಂಗೀತ ರಸಿಕರ ಕಿವಿಯೊಳಗೆ ಅನುರಣಿಸುವುದು ಸಹಜ. 90 ರ ದಶಕದಲ್ಲಿ ತಾಜ್ ಮಹಲ್ ಚಹಾದ ಅದೊಂದು ಜಾಹೀರಾತು ನೋಡಲು ಕಾತರಿಸುತ್ತಿದ್ದ ದಿನಗಳವು. 30 ಸೆಕೆಂಡ್ ಜಾಹೀರಾತಿನಲ್ಲಿ ತಬಲಾ ಮೇಲೆ ಕುಣಿದಾಡುತ್ತಿದ್ದ ಬೆರಳುಗಳು, ಆಗ ಹೊರಹೊಮ್ಮುತ್ತಿದ್ದ ತಬಲಾ ಸದ್ದು ತಲೆದೂಗುವಂತೆ ಮಾಡುತ್ತಿತ್ತು. ಕೊನೆಗೆ, ವಾಹ್ ಉಸ್ತಾದ್ ವಾಹ್ ಎಂಬ ಮಾತಿಗೆ ವಾಹ್ ತಾಜ್ ಎನ್ನಿ ಎಂಬ ಮಾತು ಈಗ ಕ್ಷೀಣವಾಗಿ ಕೇಳಿದಂತೆ ಭಾಸವಾಗುತ್ತಿದೆ. ತಬಲಾ ಮೇಲೆ ಆ ಬೆರಳುಗಳ ನರ್ತನದ ಸದ್ದಿನಲೆಗಳು ಇನ್ನೂ ಕಿವಿಯೊಳಗೆ ಗುಂಯಿಗುಡುತ್ತಿವೆ. ಆದರೆ ಆ ಸದ್ದು ಬಹಳ ಕ್ಷೀಣವಾಗಿದೆ… ಹೌದು, ತಬಲಾ ಮೇಲೆ ಕುದುರೆಯಂತೆ ಓಡುತ್ತ ಸದ್ದು ಮಾಡುತ್ತಿದ್ದ ಕೈ ಬೆರಳುಗಳು ನಿಸ್ತೇಜವಾಗಿವೆ. ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಇನ್ನಿಲ್ಲ. ಅವರು ಇಂದು (ಡಿಸೆಂಬರ್ 15) ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಅಲ್ಪ ಕಾಲದ ಅನಾರೋಗ್ಯದ ಬಳಿಕ ಕೊನೆಯುಸಿರೆಳೆದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರ ಸ್ನೇಹಿತ ಕೊಳಲುವಾದಕ ರಾಕೇಶ್ ಚೌರಾಸಿಯಾ ಅವರು ನಿಧನವಾರ್ತೆಯನ್ನು ದೃಢಪಡಿಸಿದ್ದಾರೆ.
ನೆನಪಿನಂಗಳದಾಳದಲ್ಲಿದ್ದಾರೆ ಜಾಕಿರ್ ಹುಸೇನ್; ಜಾಕಿರ್ ಜೀವನ ಪಥ
ಭಾರತದ ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ 1951ರ ಮಾರ್ಚ್ 9 ರಂದು ಮುಂಬಯಿನಲ್ಲಿ ಜನಿಸಿದರು. ಜಾಗತಿಕವಾಗಿ ತಬಲಾ ಎಂದಾಗ ನೆನಪಾಗುವ ಒಂದೇ ಒಂದು ಹೆಸರು ಜಾಕಿರ್ ಹುಸೇನ್ ಎಂಬಂತೆ ತಮ್ಮ ಛಾಪು ಮೂಡಿಸಿದವರು. ವಿಶ್ವ ವಿಖ್ಯಾತ ತಬಲಾ ವಾದಕ ಅಲ್ಲಾಹ್ ರಖಾ ಅವರ ಹಿರಿಯ ಮಗನಾಗಿ ಜನಿಸಿದ ಜಾಕಿರ್ ಹುಸೇನ್, ಬಾಲ್ಯದಲ್ಲೇ ತನ್ನ ಪ್ರತಿಭೆಯ ಮೂಲಕ ಗಮನಸೆಳೆದವರು. ಏಳು ವರ್ಷದ ಬಾಲಕನಿದ್ದಾಗಲೇ ಸಾರ್ವಜನಿಕವಾಗಿ ತಬಲಾ ವಾದನ ಪ್ರದರ್ಶನ ನೀಡಿದ್ದ ಜಾಕಿರ್ ಹುಸೇನ್, 12ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಛೇರಿ ಪ್ರವಾಸ ಶುರು ಮಾಡಿಕೊಂಡರು. ಆರು ದಶಕಗಳ ವೃತ್ತಿ ಬದುಕಿನಲ್ಲಿ ಸಾಧಿಸಿದ ಮೈಲಿಗಲ್ಲುಗಳು ಅನೇಕ.
ಪೌರಾಣಿಕ ಗಿಟಾರ್ ವಾದಕ ಜಾನ್ ಮೆಕ್ಲಾಫ್ಲಿನ್, ಪಿಟೀಲು ವಾದಕ ಎಲ್. ಶಂಕರ್ ಮತ್ತು ತಾಳವಾದ್ಯ ವಾದಕ ಟಿ.ಹೆಚ್ ಅವರ ಸಹಯೋಗದೊಂದಿಗೆ 1970 ರ ದಶಕದಲ್ಲಿ 'ವಿಕ್ಕು' ವಿನಾಯಕರಾಮ್ ಜತೆಗೂಡಿ ಶಕ್ತಿ ಫ್ಯೂಶನ್ ಗ್ರೂಪ್ ರಚಿಸಿದರು. ಇದು ಭಾರತದ ಶಾಸ್ತ್ರೀಯ ಸಂಗೀತವನ್ನು ಜಾಝ್‌ನೊಂದಿಗೆ ಬೆಸೆಯಿತು. ಸಮಕಾಲೀನ ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಹೊಸ ಮಾದರಿಯ ಸಂಗೀತ ಪ್ರಕಾರವನ್ನು ಸೃಷ್ಟಿಸಿ ತನ್ನದೇ ಛಾಪು ಮೂಡಿಸಿತು. ಅವರ ಸಂಗೀತ ವೃತ್ತಿಜೀವನವು ಅವರ ಬಹುಮುಖ ಪ್ರತಿಭೆ ಮತ್ತು ಲಯ, ಮಾಧುರ್ಯ ಮತ್ತು ಸಂಸ್ಕೃತಿಯ ಆಳ ತಿಳಿವಳಿಕೆಗೆ ಸಾಕ್ಷಿಯಾಗಿದೆ. ಅವರು ಜಾರ್ಜ್ ಹ್ಯಾರಿಸನ್, ರವಿ ಶಂಕರ್ ಮತ್ತು ವ್ಯಾನ್ ಮಾರಿಸನ್ ಅವರಂತಹ ಹೆಸರಾಂತ ಕಲಾವಿದರೊಂದಿಗೆ ಕೆಲಸ ಮಾಡಿದ್ದರು. ಗ್ರೇಟ್‌ಫುಲ್ ಡೆಡ್ ಅಂಡ್ ಅರ್ಥ್, ವಿಂಡ್ ಅಂಡ್ ಫೈರ್‌ನ ಆಲ್ಬಂಗಳಲ್ಲಿ ಸಹ ಪ್ರದರ್ಶನ ನೀಡಿದ್ದರು. 1991 ರಲ್ಲಿ ಮಿಕ್ಕಿ ಹಾರ್ಟ್ ಅವರೊಂದಿಗೆ ರಚಿಸಲಾದ ಅವರ ಆಲ್ಬಂ ಪ್ಲಾನೆಟ್ ಡ್ರಮ್, ಅತ್ಯುತ್ತಮ ವಿಶ್ವ ಸಂಗೀತ ಆಲ್ಬಮ್‌ಗಾಗಿ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತೀಯ ಸಂಗೀತದ ಜಾಗತಿಕ ರಾಯಭಾರಿಯಾಗಿ ಅವರ ಸ್ಥಾನವನ್ನು ಗಟ್ಟಿಗೊಳಿಸಿತು. ಅವರು 2024 ರಲ್ಲಿ 66 ನೇ ಗ್ರ್ಯಾಮಿ ಪ್ರಶಸ್ತಿಯಲ್ಲಿ ಹಲವು ಪ್ರಶಸ್ತಿ ಸೇರಿ ವೃತ್ತಿ ಜೀವನದ ಉದ್ದಕ್ಕೂ ಹಲವು ಗ್ರ್ಯಾಮಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಉಸ್ತಾದ್ ಜಾಕಿರ್ ಹುಸೇನ್‌ರಿಗೆ ಒಲಿದ ಪ್ರಶಸ್ತಿ ಪುರಸ್ಕಾರ
ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ, 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯ ಗೌರವ ಪ್ರಾಪ್ತಿಯಾಗಿದೆ. 1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ದತ್ತಿ ನೀಡಿ ಗೌರವಿಸಲಾಯಿತು. 1999 ರಲ್ಲಿ ಆರ್ಟ್ಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಕೂಡ ಸಿಕ್ಕಿತ್ತು. ಗ್ಲೋಬಲ್ ಡ್ರಮ್ ಪ್ರಾಜೆಕ್ಟ್‌ಗಾಗಿ ಅವರ 2009 ರ ಗ್ರ್ಯಾಮಿ ಪ್ರಶಸ್ತಿಯ ಗೆಲುವು (ಮಿಕ್ಕಿ ಹಾರ್ಟ್‌ನ ಸಹಯೋಗದೊಂದಿಗೆ) ಸಂಗೀತಕ್ಕೆ ಅವರ ನವೀನ ವಿಧಾನವನ್ನು ಪರಿಚಯಿಸಿತು. ಪ್ರಪಂಚದಾದ್ಯಂತದ ವೈವಿಧ್ಯಮಯ ಲಯಗಳು ಮತ್ತು ಧ್ವನಿಗಳನ್ನು ಸಂಯೋಜಿಸಿತು. ವೃತ್ತಿಜೀವನದುದ್ದಕ್ಕೂ ಹುಸೇನ್ ಅವರು ದಿ ಬೀಟಲ್ಸ್, ಜಾನ್ ಮೆಕ್ಲಾಫ್ಲಿನ್, ಹರಿಪ್ರಸಾದ್ ಚೌರಾಸಿಯಾ, ರವಿ ಶಂಕರ್ ಮತ್ತು ಇತರ ಅನೇಕ ಪ್ರಸಿದ್ಧ ಸಂಗೀತಗಾರರೊಂದಿಗೆ ತಬಲಾ ವಾದಕರಾಗಿ ಗಮನಸೆಳೆದರು.
ಸಮಕಾಲೀನ ತಬಲಾ ವಾದಕರ ಪೈಕಿ ಜಾಕಿರ್ ಹುಸೇನ್ ಯಾಕೆ ಜನಪ್ರಿಯರಾದರು
ಜಾಕಿರ್ ಹುಸೇನ್ ಅವರು ಸಮಕಾಲೀನ ತಬಲಾ ವಾದಕರ ಪೈಕಿ ಎದ್ದು ಕಾಣುವಂತೆ ಜನಪ್ರಿಯರಾಗಲು ಕಾರಣವೇನು? - ಇದು ಸಹಜ ಕುತೂಹಲದ ಪ್ರಶ್ನೆ. ತಬಲಾ ವಾದನದ ಕೌಶಲದ ಒಂದೇ ಕಾರಣಕ್ಕೆ ಅವರು ಜನಪ್ರಿಯರಾದುದಲ್ಲ. ಅವರು ಸಾಂಪ್ರದಾಯಿಕ ವಾದನದ ಜತೆಗೆ ಹೊಸತನ ಕಂಡುಕೊಂಡು ಅಳವಡಿಸುವಲ್ಲಿ ಯಶಸ್ವಿಯಾದುದೇ ಅವರ ಸಾಮರ್ಥ್ಯಕ್ಕೆ ಕೈಗನ್ನಡಿಯಾಯಿತು. ಏಕಕಾಲದಲ್ಲಿ ಜಾಗತಿಕ ಮಟ್ಟದ ಪ್ರಭಾವವನ್ನು ಅವರು ತಮ್ಮ ವಾದನದಲ್ಲಿ ಅಳವಡಿಸಿಕೊಂಡು ಗಮನಸೆಳೆದರು. ಹಾಗೆ ಜಾಗತಿಕ ಪ್ರಭಾವವನ್ನು ಅಳವಡಿಸುವಾಗ ಹುಸೇನ್ ಅವರು, ಭಾರತೀಯ ಸಂಗೀತದ ಶಾಸ್ತ್ರೀಯ ಅಡಿಪಾಯಗಳಿಗೆ ನಿಷ್ಠರಾಗಿರುವುದರ ಮಹತ್ವವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅದನ್ನು ಉಳಿಸಿಕೊಂಡರು ಕೂಡ. ಭಾರತೀಯ ಶಾಸ್ತ್ರೀಯ ಸಂಗೀತದ ಸಂಕೀರ್ಣ ಲಯಗಳನ್ನು ಜಾಝ್ ಮತ್ತು ರಾಕ್‌ನಂತಹ ಪಾಶ್ಚಾತ್ಯ ಪ್ರಕಾರಗಳೊಂದಿಗೆ ವಿಲೀನಗೊಳಿಸುವುದಕ್ಕೆ ಅವರ ಈ ತತ್ತ್ವಶಾಸ್ತ್ರವು ಅವಕಾಶ ಮಾಡಿಕೊಟ್ಟಿತು. ಹಾಗಾಗಿ ಅವರು ಉಳಿದವರಿಗಿಂತ ಭಿನ್ನವಾಗಿ ಎದ್ದು ಕಾಣುತ್ತಾರೆ.
ಸಂಗೀತ ಕಛೇರಿಗಳಲ್ಲಿ ತಬಲಾ ವಾದಕನ ಪಾತ್ರದ ಬಗ್ಗೆ ಜಾಕಿರ್ ಹುಸೇನ್ ಅವರು ಪದೇಪದೆ ಮಾತನಾಡುತ್ತಿರುತ್ತಿದ್ದರು. ಇದೊಂದು ರೀತಿ ಮನೋವೈದ್ಯನ ಪಾತ್ರ. ಸಂಗೀತಗಾರರ ಮನಸ್ಥಿತಿ, ಉದ್ದೇಶಗಳಿಗೆ ಅಂತರ್ಬೋಧೆಯಿಂದ ತಬಲಾ ವಾದಕ ಪ್ರತಿಸ್ಪಂದಿಸಬೇಕು. ವಿವಿಧ ಸಂಗೀತ ಸಂಪ್ರದಾಯ, ಪ್ರಕಾರಗಳ ಕಲಾವಿದರೊಂದಿಗೆ ಅವರ ಮನಸ್ಸಿಗೆ ಪೂರಕವಾಗಿ ಸ್ಪಂದಿಸಿ ಸಹಕರಿಸುವ ಜಾಕಿರ್ ಹುಸೇನ್ ಅವರ ಸಾಮರ್ಥ್ಯವು ಅವರ ಕಲಾತ್ಮಕ ಭಾವದ ವಿಶಿಷ್ಟ ಲಕ್ಷಣವಾಗಿ ಅವರನ್ನು ಜನಪ್ರಿಯಗೊಳಿಸಿತು.