Aviva Bidapa Family: ಅವಿವಾ ಬಿದ್ದಪ್ಪ ಕುಟುಂಬವನ್ನೂ ಬಿಟ್ಟಿಲ್ಲ ವಿವಾದ...ತಂದೆ, ಅಣ್ಣ ಅರೆಸ್ಟ್ ಆಗಿದ್ದೇಕೆ?
Dec 22, 2022 08:14 PM IST
ಅವಿವಾ ಬಿದ್ದಪ್ಪ ಫ್ಯಾಮಿಲಿ ವಿವಾದ
- ಬ್ಯಾಗಿನಲ್ಲಿ ಮಾರಿಜುನಾ (ಮಾದಕ ವಸ್ತು) ಕಂಡು ಬಂದ ಆರೋಪದ ಮೇಲೆ 2005 ರಲ್ಲಿ ಪ್ರಸಾದ್ ಬಿದ್ದಪ್ಪ ಅವರನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆಗ ಕೆಲವು ಗಣ್ಯರು ದುಬೈ ಸರ್ಕಾರಕ್ಕೆ ಶಿಪಾರಸು ಪತ್ರ ಬರೆದಿದ್ದರಿಂದ ಪ್ರಸಾದ್ ಬಿದ್ದಪ್ಪ ಅವರಿಗೆ ಶಿಕ್ಷೆ ಆಗುವುದು ತಪ್ಪಿತ್ತು,
ವಿವಾದ ಎಂಬ ಭೂತ ಆಗ್ಗಾಗ್ಗೆ ಸೆಲೆಬ್ರಿಟಿಗಳನ್ನು ಕಾಡುತ್ತಲೇ ಇರುತ್ತದೆ. ಕೆಲವೊಮ್ಮೆ ಇದು ತಿಳಿಯದೆ ಆದರೆ, ಕೆಲವೊಮ್ಮೆ ಪ್ರಚಾರದ ಸಲುವಾಗಿ ಕೆಲವರು ವಿವಾದಕ್ಕೆ ಒಳಗಾಗುತ್ತಾರೆ. ವಿವಾದ ಎನ್ನುವುದು ಬಾಲಿವುಡ್ ಹಾಗೂ ಇತರ ಚಿತ್ರರಂಗ ಮಾತ್ರವಲ್ಲ ಕನ್ನಡ ಚಿತ್ರರಂಗವನ್ನು ಕೂಡಾ ಬಿಟ್ಟಿಲ್ಲ. ಸದ್ಯಕ್ಕೆ ಬಳ್ಳಾರಿಯ ಹೊಸಪೇಟೆಯಲ್ಲಿ ದರ್ಶನ್‌ಗೆ ಅವಮಾನವಾದ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಇದರ ಜೊತೆಗೆ ಅಭಿಷೇಕ್ ಅಂಬರೀಶ್ ಮದುವೆ ಆಗ್ತಿರುವ ಅವಿವಾ ಬಿದ್ದಪ್ಪ ಕುಟುಂಬ ವಿವಾದಕ್ಕೆ ಒಳಗಾಗಿದ್ದ ವಿಚಾರವೂ ರಿವೀಲ್ ಆಗಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಹಾಗೂ ಜುಡಿತಾ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ, ಡಿಸೆಂಬರ್ 11 ರಂದು ನಟ ಅಭಿಷೇಕ್ ಅಂಬರೀಶ್ ಜೊತೆ ನಡೆದಿತ್ತು. ಅಭಿಷೇಕ್ ಮದುವೆ ಫಿಕ್ಸ್ ಆಗಿದ್ದು ಅವರು ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದಾಗಿನಿಂದ ಆ ಲಕ್ಕಿ ಗರ್ಲ್ ಯಾರಿರಬಹುದು ಎಂಬು ಕುತೂಹಲ ಎಲ್ಲರಿಗೂ ಕಾಡಿತ್ತು. ನಂತರ ಅದು ಅವಿವಾ ಬಿದ್ದಪ್ಪ ಎಂದು ತಿಳಿದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದರು. ಅವಿವಾ ಬಿದ್ದಪ್ಪ ಕೂಡಾ ತಂದೆಯಂತೆ ಫ್ಯಾಷನ್ ಡಿಸೈನರ್. ಅಕೆ ಮಾಡೆಲ್ ಹಾಗೂ ಬ್ಯುಸ್ನೆಸ್ ವುಮನ್ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅವಿವಾ ಹಾಗೂ ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಈಗ ತಮ್ಮ ಪ್ರೀತಿಗೆ ಹಿರಿಯರ ಒಪ್ಪಿಗೆ ಪಡೆದು ಅಧಿಕೃತ ಮುದ್ರೆ ಹಾಕಿರುವುದು ತಿಳಿದಿರುವ ವಿಚಾರ. ಆದರೆ ಕುಟುಂಬ ಕೂಡಾ ಕಾಂಟ್ರವರ್ಸಿಗಳಿಂದ ಈ ಹೊರತಾಗಿಲ್ಲ.
ಅವಿವಾ ಬಿದ್ದಪ್ಪ 2013 ರಲ್ಲಿ ತೆರೆ ಕಂಡ 'ಅಲೆ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇದರ ನಂತರ ಅವರು ಬೇರೆ ಸಿನಿಮಾಗಳಲ್ಲಿ ನಟಿಸಲಿಲ್ಲ. ಅವಿವಾ ಮೊದಲಿನಿಂದಲೂ ಹೆಣ್ಣು ಮಕ್ಕಳ ಹಕ್ಕುಗಳ ಪರ ದನಿ ಎತ್ತುತ್ತಲೇ ಬಂದಿದ್ದಾರೆ. ಇನ್ನು ಅವಿವಾ ಬಿದ್ದಪ್ಪಗೆ ಇದು ಎರಡನೇ ಮದುವೆ ಎನ್ನಲಾಗುತ್ತಿದೆ. 2015ರಲ್ಲಿ ಅವಿವಾ, ಇದಕ್ಕೂ ಮುನ್ನ ಉದ್ಯಮಿ ವಿಕ್ರಮ್ ಮೆಹ್ತಾ ಎಂಬುವರನ್ನು ಮದುವೆಯಾಗಿದ್ದು 2016ರಲ್ಲಿ ಮೊದಲ ಮದುವೆಯಿಂದ ಹೊರ ಬಂದಿದ್ದರು ಎಂಬ ಮಾತು ಕೇಳಿಬಂದಿದೆ. ಆದರೆ ಇದರ ಬಗ್ಗೆ ಸೂಕ್ತ ಮಾಹಿತಿ ಇಲ್ಲ.
ಬ್ಯಾಗಿನಲ್ಲಿ ಮಾರಿಜುನಾ (ಮಾದಕ ವಸ್ತು) ಕಂಡು ಬಂದ ಆರೋಪದ ಮೇಲೆ 2005 ರಲ್ಲಿ ಪ್ರಸಾದ್ ಬಿದ್ದಪ್ಪ ಅವರನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆಗ ಕೆಲವು ಗಣ್ಯರು ದುಬೈ ಸರ್ಕಾರಕ್ಕೆ ಶಿಪಾರಸು ಪತ್ರ ಬರೆದಿದ್ದರಿಂದ ಪ್ರಸಾದ್ ಬಿದ್ದಪ್ಪ ಅವರಿಗೆ ಶಿಕ್ಷೆ ಆಗುವುದು ತಪ್ಪಿತ್ತು, ಸುಮಾರು 33 ದಿನಗಳ ಬಳಿಕ ಪ್ರಸಾದ್ ಬಿದ್ದಪ್ಪ ಬಿಡುಗಡೆ ಆಗಿದ್ದರು ಎಂಬ ಸುದ್ದಿ ಇದೆ. ಇನ್ನು 2006ರಲ್ಲಿ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದರು. ಮಧ್ಯರಾತ್ರಿವರೆಗೂ ತೆರೆದಿದ್ದ ನೈಟ್ ಕ್ಲಬ್‌ವೊಂದನ್ನು ಬಂದ್ ಮಾಡಿಸಲು ಹೋದ ಪೊಲೀಸರ ಮೇಲೆ ಆಡಂ ಬಿದ್ದಪ್ಪ ಹಲ್ಲೆ ಮಾಡಿ ನಿಂದಿಸಿದ್ದರು ಎಂಬ ಆರೋಪದ ಮೇಲೆ ಅಶೋಕನಗರ ಪೊಲೀಸರು ಬಂಧಿಸಿದ್ದರು.
ಪೊಲೀಸ್ ಠಾಣೆಯಲ್ಲಿದ್ದ ಮಗನನ್ನು ನೋಡಲು ಹೋದ ಜುಡಿತ್ ಬಿದ್ದಪ್ಪ ಕೂಡಾ ಪೊಲೀಸರನ್ನು ನಿಂದಿಸಿದರೆಂಬ ಕಾರಣಕ್ಕೆ ಅವರ ಮೇಲೆ ಕೂಡಾ ಕೇಸ್ ದಾಖಲಾಗಿತ್ತು. ಆದರೆ ಜುಡಿತ್ ಬಿದ್ದಪ್ಪ ತಮ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಮರೆಯಾಗಿದ್ದರು. ಪೊಲೀಸರು ಅವರಿಗಾಗಿ ಹುಡುಕಾಡುವ ಸಮಯದಲ್ಲಿ ಜುಡಿತ್ ಬಿದ್ದಪ್ಪ ತಾವೇ ಪೊಲೀಸ್ ಠಾಣೆಗೆ ತೆರಳಿ ಸರಂಡರ್ ಆಗಿದ್ದರು. ಆಗ ಅವರನ್ನು ಅರೆಸ್ಟ್ ಮಾಡಿದ್ದ ಪೊಲೀಸರು ನಂತರ ರಿಲೀಸ್ ಮಾಡಿದ್ದರು.
ಇದೇ ವರ್ಷ ಮತ್ತೊಮ್ಮೆ ಆಡಂ ಬಿದ್ದಪ್ಪ, ಇಂದಿರಾ ನಗರ ಪೊಲೀಸರಿಂದ ಅರೆಸ್ಟ್ ಆಗಿದ್ದರು. ನಟಿ ಸಂಜನಾ ಗಲ್ರಾನಿ 7 ತಿಂಗಳ ಗರ್ಭಿಣಿ ಆದ ಸಮಯದಲ್ಲಿ ಅಶ್ಲೀಲ ಸಂದೇಶ ಕಳಿಸಿದ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಆಕೆ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿತ್ತು. ನನಗೆ ಆಡಂ ಬಿದ್ದಪ್ಪ ಕ್ಲೋಸ್ ಇಲ್ಲ. ಪ್ರಸಾದ್ ಬಿದ್ದಪ್ಪ ಕಡೆಯಿಂದ ಅವರು ಪರಿಚಯ ಅಷ್ಟೇ. ಆದರೆ ಆತ ನನಗೆ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಲೇ ಇದ್ದರು. ನನಗೆ ಇದು ಬಹಳ ನೋವುಂಟುಮಾಡಿತ್ತು. ಆದ್ದರಿಂದ ಪೊಲೀಸರಿಗೆ ದೂರು ನೀಡಬೇಕಾಗಿ ಬಂತು ಎಂದು ಸಂಜನಾ ಮಾಧ್ಯಮಗಳ ಬಳಿ ಬೇಸರ ತೋಡಿಕೊಂಡಿದ್ದರು.