Assembly Elections: ಚುನಾವಣಾ ಪ್ರಕ್ರಿಯೆ ಆರಂಭಿಸಲು ಕೇಂದ್ರ ಚುನಾವಣಾ ಆಯೋಗ ಸೂಚನೆ, ಕರ್ನಾಟಕಕ್ಕೂ ಕಾಲಿಟ್ಟ ಚುನಾವಣಾ ಬಿಸಿ
Dec 09, 2022 07:03 PM IST
ಸಾಂದರ್ಭಿಕ ಚಿತ್ರ
- ಕರ್ನಾಟಕದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗವು ಪತ್ರ ಬರೆದಿದ್ದು, ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಕುರಿತು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಪ್ರಕಟವಾದ ತಕ್ಷಣ ಇಡೀ ದೇಶದ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಕಾಂಗ್ರೆಸ್, ಬಿಜೆಪಿಗೆ ಗೆಲ್ಲಬೇಕೆಂಬ ಹಠವಿರುವ ಪ್ರಮುಖ ರಾಜ್ಯವಿದು. ಇದೇ ಸಮಯದಲ್ಲಿ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದೆ.
ಕರ್ನಾಟಕದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗವು ಪತ್ರ ಬರೆದಿದ್ದು, ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಕುರಿತು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಯಾವುದೇ ಒಬ್ಬ ಅಧಿಕಾರಿಯನ್ನು ಅವರ ಸ್ವಂತ ಜಿಲ್ಲೆಗೆ ನಿಯೋಜನೆ ಮಾಡಬಾರದು ಎಂದು ಪತ್ರದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಹೀಗಾಗಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಲ್ಲಿ ಬಹುತೇಕರಿಗೆ ವರ್ಗಾವಣೆ ಅಥವ ಬೇರೆ ಜಿಲ್ಲೆಗೆ ನಿಯೋಜನೆಯ ಬಿಸಿಯೂ ಸದ್ಯದಲ್ಲಿಯೇ ತಟ್ಟಲಿದೆ.
ಅಧಿಕಾರಿಗಳು ಕಳೆದ ಮೂರು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೆ, ಇಲ್ಲವೇ ನಾಲ್ಕು ವರ್ಷ ಪೂರೈಸಿದ್ದರೆ, ಅಂತಹ ಅಧಿಕಾರಿಗಳನ್ನು 2026ರ ಮೇ 31ಕ್ಕೆ ಕೊನೆಗೊಳ್ಳುವಂತೆ ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗವು ಪತ್ರದಲ್ಲಿ ಉಲ್ಲೇಖಿಸಿದೆ.
ಕೇಂದ್ರ ಚುನಾವಣಾ ಆಯೋಗವು ರಾಜ್ಯ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ "ಅಧಿಕಾರಿಗಳನ್ನು ಸ್ವಂತ ಜಿಲ್ಲೆಗಳಿಗೆ ನಿಯೋಜನೆ ಮಾಡಬಾರದುʼʼ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಜಿಲ್ಲಾ ಹಂತದ ಅಧಿಕಾರಿಗಳಾದ ಡಿಇಒ, ಡೆಪ್ಯುಟಿ ಡಿಇಒ, ಆರ್ಒ/ಎಆರ್ಒ, ಇಆರ್ಒ, ಎಇಆರ್ಒ, ನೋಡಲ್ ಅಧಿಕಾರಿಗಳು ಜೊತೆಗೆ ಎಡಿಎಂ, ಎಸ್‍ಡಿಎಂ, ಎಸಿ, ಜಂಟಿ ಆಯುಕ್ತರು, ತಹಶೀಲ್ದಾರ್, ಬಿಡಿಒ ಸೇರಿದಂತೆ ಮತ್ತಿತರ ಅಧಿಕಾರಿಗಳನ್ನು ಕೂಡ ಅವರವರ ಜಿಲ್ಲೆಗೆ ನಿಯೋಜನೆ ಮಾಡಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ನಿಯಮವು ವಿವಿಧ ಇಲಾಖೆ, ವಿಭಾಗ, ಸಂಸ್ಥೆಗಳ ಅಧಿಕಾರಿಗಳಿಗೆ ಅನ್ವಯವಾಗಲಿದೆ. ಐಜಿ, ಡಿಐಜಿ, ಎಸ್‍ಎಸ್‍ಪಿ, ಎಸ್‍ಪಿ, ಹೆಚ್ಚುವರಿ ಎಸ್‍ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‍ಐ, ಎಚ್‍ಸಿ, ಪಿಸಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕೂಡ ಈ ನಿಯಮ ಜಾರಿಯಾಗಲಿದೆ. ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಗಳನ್ನು, ಯಾವುದೇ ಕಾರಣಕ್ಕೂ ಅವರ ತವರು ಜಿಲ್ಲೆಗೆ ನಿಯೋಜನೆ ಮಾಡಬಾರದು ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಎಲ್ಲಾದರೂ ಅಧಿಕಾರಿಗಳು ಈಗಾಗಲೇ ಅದೇ ಜಿಲ್ಲೆಯಲ್ಲಿ ಮೂರು ವರ್ಷ ಪೂರೈಸಿದ್ದರೆ ಅಥವಾ ನಾಲ್ಕನೇ ವರ್ಷ ನಡೆಯುತ್ತಿದ್ದರೆ ಅವರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು. ಚಿಕ್ಕ ಜಿಲ್ಲೆಗಳಾದರೆ ಅವರನ್ನು ಪಕ್ಕದ ಜಿಲ್ಲೆಗೂ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಎಲ್ಲಾದರೂ ಚುನಾವಣಾ ಆಯೋಗದ ನಿರ್ದೇಶನದ ಹೊರತಾಗಿಯೂ ಯಾವುದೇ ಅಧಿಕಾರಿಗಳು ತಮ್ಮಸ್ವಂತ ಜಿಲಲೆಯಲ್ಲಿ ಕಾರ್ಯನಿರ್ವಹಿಸುವುದು ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.
ಯಾವುದಾದರೂ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿದ್ದರೆ ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಸೂಚಿಸಲಾಗಿದೆ. ಎಲ್ಲಾದರೂ ಅಧಿಕಾರಿಗಳ ಸೇವಾವಧಿ ಮುಗಿದು ಆರು ತಿಂಗಳಾಗಿದ್ದರೆ, ಅವರನ್ನೂ ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ.