Mysuru News: ಹೆಚ್ಡಿ ಕೋಟೆಯಲ್ಲಿ ಹುಲಿ ಕಳೇಬರ ಪತ್ತೆ; ಮತ್ತೊಂದು ಹುಲಿ ಜೊತೆ ಕಾದಾಟದ ವೇಳೆ ಸಾವಿನ ಶಂಕೆ
Dec 16, 2024 12:08 AM IST
ಹೆಚ್ಡಿ ಕೋಟೆಯಲ್ಲಿ ಹುಲಿ ಕಳೇಬರ ಪತ್ತೆ; ಮತ್ತೊಂದು ಹುಲಿ ಜೊತೆ ಕಾದಾಟದ ವೇಳೆ ಸಾವಿನ ಶಂಕೆ
- Tiger found dead: ಮುಸುಕಿನ ಜೋಳ ಬೆಳೆದ ಜಮೀನಿನಲ್ಲಿ ಒಂದೂವರೆ ವರ್ಷದ ಹುಲಿಯ ಕಳೇಬರ ಪತ್ತೆಯಾಗಿದೆ. ಇದು ಮತ್ತೊಂದು ಹುಲಿ ಜೊತೆ ಕಾದಾಟ ನಡೆಸುವ ವೇಳೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಹೆಚ್ಡಿ ಕೋಟೆ (ಮೈಸೂರು): ತಾಲೂಕಿನ ಕೆಜಿ ಹುಂಡಿ ಗ್ರಾಮದಲ್ಲಿ ಮುಸುಕಿನ ಜೋಳ ಬೆಳೆದ ಜಮೀನಿನಲ್ಲಿ ಹುಲಿಯ ಕಳೇಬರ ಶನಿವಾರ (ಡಿಸೆಂಬರ್ 14) ಪತ್ತೆಯಾಗಿದೆ. ಇದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೆಟ್ಟಿಕುಪ್ಪ ವನ್ಯಜೀವಿ ವಲಯದಿಂದ 3 ಕಿಮೀ ದೂರದಲ್ಲಿದೆ. ಮೃತಪಟ್ಟ ಹುಲಿಯ ದೇಹ ಮುಸುಕಿನ ಜೋಳ ಬೆಳೆದ ಜಮೀನಿನಲ್ಲಿದೆ. ಹುಲಿಯು ಅಂದಾಜು 1.5 ರಿಂದ 2 ವರ್ಷ ವಯಸ್ಸಿನದಾಗಿದ್ದು, ತೊಡೆಯ ಮತ್ತು ಸೊಂಟದ ಮಾಂಸ ಖಂಡಗಳನ್ನು ಹೊರತುಪಡಿಸಿ ದೇಹದ ಎಲ್ಲಾ ಪ್ರಮುಖ ಭಾಗಗಳು, ಕೋರೆಹಲ್ಲು, ಉಗುರುಗಳು, ವಿಸ್ಕರ್ಸ್ ಮೃತ ದೇಹದಲ್ಲೇ ಇರುವುದು ಕಂಡು ಬಂದಿದೆ.
ಇದು ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸುವ ವೇಳೆ ಮೃತಪಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ವೈದ್ಯಾಧಿಕಾರಿಗಳಾದ ಡಾ. ಮುಜಿಬ್ ಮತ್ತು ಡಾ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು (ಡಿಸೆಂಬರ್ 15ರ) ಬೆಳಿಗ್ಗೆ ಹುಲಿಯ ಮರಣೋತ್ತರ ಪರೀಕ್ಷೆಯನ್ನು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರು (ಮೈಸೂರು ವೃತ್ತ), ಪ್ರಾದೇಶಿಕ ವಿಭಾಗ ಮೈಸೂರು ಡಿಸಿಎಫ್, ಎಚ್‌ಡಿ ಕೋಟೆ ಉಪ ವಿಭಾಗದ ವಲಯಾರಣ್ಯಾಧಿಕಾರಿ, ಇಬ್ಬರು ಪಶುವೈದ್ಯರು, ಎನ್ಟಿಸಿಎ ಪ್ರತಿನಿಧಿ, ಪಿಸಿಸಿಎಫ್ (ವನ್ಯಜೀವಿ) ಪ್ರತಿನಿಧಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಎನ್ಟಿಸಿಎ ಪ್ರಮಾಣಿಕೃತ ಕಾರ್ಯ ವಿಧಾನದಂತೆ (SOP) ದೇಹವನ್ನು ವಿಲೇವಾರಿ ಮಾಡಲಾಯಿತು.
ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದೇನು?
ಮೆಟಲ್ ಡಿಟೆಕ್ಟರ್ ಸ್ಕ್ಯಾನಿಂಗ್ ಮಾಡಲಾಗಿದ್ದು, ಯಾವುದೇ ಬುಲೆಟ್ ಆಗಲೀ ಬುಲೆಟ್ ಗಾಯದ ಗುರುತುಗಳು ಕಂಡುಬಂದಿಲ್ಲ, ಯಾವುದೇ ವಿದ್ಯುತ್ ಆಘಾತದ ಲಕ್ಷಣಗಳು ಕಂಡುಬಂದಿಲ್ಲ. ಸಾಂದರ್ಭಿಕ ಪುರಾವೆಗಳಂತೆ ಸಾವಿನ ಸ್ಥಳದ ಬಳಿ 2 ವಿಭಿನ್ನ ಗಾತ್ರದ ಹುಲಿ ಹೆಜ್ಜೆ ಗುರುತುಗಳ ಕಂಡು ಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಹುಲಿಯು ಮತ್ತೊಂದು ವಯಸ್ಕ ಹುಲಿಯೊಂದಿಗೆ ಕಾದಾಟದಲ್ಲಿ ಮಾರಣಾಂತಿಕ ಗಾಯದಿಂದ ಸಾವಿಗೀಡಾಗಿರುವುದು ಕಂಡು ಬಂದಿದ್ದು, ಹೆಚ್ಚಿನ ತನಿಖೆಗಾಗಿ ದೇಹದ ವಿವಿಧ ಅಂಗಾಂಗಗಳ ಮಾದರಿಗಳನ್ನು ವಿಧಿ ವಿಘ್ನಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹುಲಿ ಮೃತಪಟ್ಟ ಸ್ಥಳದಲ್ಲಿ ಸುತ್ತಲೂ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಪರಿಶೀಲನೆ ನಡೆಸಿ ನಂತರ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಎಂದು ಮೈಸೂರು ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.
ಗ್ರಾಮಸ್ಥರಿಗೆ ಭೀತಿ
ಕಳೆದ ಹಲವು ದಿನಗಳಿಂದ ಪಟ್ಟಣ ವ್ಯಾಪ್ತಿಯ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಲಿ ಮತ್ತು ಮರಿ ಹುಲಿಗಳು ನಿರಂತರವಾಗಿ ಓಡಾಡುತ್ತಿದ್ದದ್ದು ರೈತರಿಗೆ ಕಾಣಿಸಿಕೊಂಡು ಭೀತಿಯನ್ನು ಉಂಟು ಮಾಡಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಅರಣ್ಯ ಇಲಾಖೆಯ ಡಿಸಿಎಫ್ ಬಸವರಾಜು, ಎಸಿಎಫ್ ಅಭಿಷೇಕ್, ಆರ್ಎಫ್ಓ ಹನುಮಂತರಾಜು ಸ್ಥಳ ಪರಿಶೀಲನೆ ನಡೆಸಿದ್ದಾರೆ.