logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆಗಳಲ್ಲಿ ಬಿಡಾಡಿ ಪ್ರಾಣಿಗಳಿಂದ ಅಪಘಾತ ಹೆಚ್ಚಳ; ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಪೊಲೀಸರ ಮನವಿ

ಬೆಂಗಳೂರು ರಸ್ತೆಗಳಲ್ಲಿ ಬಿಡಾಡಿ ಪ್ರಾಣಿಗಳಿಂದ ಅಪಘಾತ ಹೆಚ್ಚಳ; ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಪೊಲೀಸರ ಮನವಿ

HT Kannada Desk HT Kannada

Jul 11, 2024 08:05 AM IST

google News

ಬೆಂಗಳೂರು ರಸ್ತೆಗಳಲ್ಲಿ ಬಿಡಾಡಿ ಪ್ರಾಣಿಗಳಿಂದ ಅಪಘಾತ ಹೆಚ್ಚಳ (File Photo)

    • ಬೆಂಗಳೂರಿನಲ್ಲಿ ವಾಹನ ಸವಾರರಿಗೆ ನಿತ್ಯ ಏನಾದರೂ ತೊಂದರೆ ಎದುರಾಗುತ್ತಲೇ ಇರುತ್ತದೆ. ರಸ್ತೆ ಹೊಂಡದಂತಾಗಿ ಅಪಘಾತ ಸಂಭವಿಸಿದ್ರೆ, ಇನ್ನೂ ಕೆಲವೊಮ್ಮೆ ಬಿಡಾಡಿ ಪ್ರಾಣಿಗಳು ರಸ್ತೆ ಮಧ್ಯೆ ಅಡ್ಡ ಬರುವ ಕಾರಣ ಅಪಘಾತ ಸಂಭವಿಸುತ್ತದೆ. ಹೀಗಾಗಿ ಬಿಡಾಡಿ ಪ್ರಾಣಿಗಳನ್ನು ತೆರವುಗೊಳಿಸುವಂತೆ ಇದೀಗ  ಸಂಚಾರ ಪೊಲೀಸರು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು ರಸ್ತೆಗಳಲ್ಲಿ ಬಿಡಾಡಿ ಪ್ರಾಣಿಗಳಿಂದ ಅಪಘಾತ ಹೆಚ್ಚಳ (File Photo)
ಬೆಂಗಳೂರು ರಸ್ತೆಗಳಲ್ಲಿ ಬಿಡಾಡಿ ಪ್ರಾಣಿಗಳಿಂದ ಅಪಘಾತ ಹೆಚ್ಚಳ (File Photo) (AFP)

ಬೆಂಗಳೂರು: ನಗರದಲ್ಲಿ ಎಲ್ಲಿ ನೋಡಿದರೂ ಬಿಡಾಡಿ ದನಗಳು, ಎಮ್ಮೆಗಳು, ನಾಯಿಗಳು ಸೇರಿದಂತೆ ಇತರೆ ಪ್ರಾಣಿಗಳು ಅಡ್ಡಾಡುತ್ತಿರುತ್ತವೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದು, ಹಲವಾರು ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಪ್ರಾಣಿಗಳನ್ನು ರಸ್ತೆಯಿಂದ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.

ಹೌದು, ಬಿಡಾಡಿ ದನಗಳು, ಶ್ವಾನಗಳು ಹಾಗೂ ಇತರೆ ಪ್ರಾಣಿಗಳು ರಸ್ತೆ ಮಧ್ಯದಲ್ಲಿ ಓಡಾಡುವುದರಿಂದ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅಪಘಾತಗಳು ಸಹ ಸಂಭವಿಸಿದ್ದು, ಈ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬೇಕು. ಈ ಪ್ರಾಣಿಗಳನ್ನು ರಸ್ತೆಯಿಂದ ತೆರವುಗೊಳಿಸುವಂತೆ ಬಿಟಿಪಿ (ಬೆಂಗಳೂರು ಟ್ರಾಫಿಕ್ ಪೊಲೀಸ್) ಬಿಬಿಎಂಪಿಯನ್ನು ಕೋರಿಕೊಂಡಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಸಮಸ್ಯೆಯು ಯಾವ ಸ್ವರೂಪದಲ್ಲಿದೆ ಮತ್ತು ಅದರಿಂದಾದ ಗಂಭೀರ ಪರಿಣಾಮಗಳು ಏನೇನು ಎಂಬ ಬಗ್ಗೆ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಅವರು ವಿವರಿಸಿದ್ದಾರೆ. ‘ಬಿಡಾಡಿ ದನಗಳು ಹಾಗೂ ಇತರೆ ಪ್ರಾಣಿಗಳು ರಸ್ತೆ ಮಧ್ಯದಲ್ಲಿ ಹೋಗುವುದರಿಂದ, ವಾಹನ ಚಾಲಕರು ಅವುಗಳನ್ನು ತಪ್ಪಿಸಲು ಪ್ರಯತ್ನಿಸಿ ಅಪಘಾತಗಳಿಗೆ ತುತ್ತಾಗಿದ್ದಾರೆ’ ಎಂದು ಹೇಳಿದರು.

‘ವಾಹನ ಚಾಲಕರಿಗೆ ರಸ್ತೆಯಲ್ಲಿ ಸಂಚರಿಸುವಾಗ ಪ್ರಮುಖ ತೊಡಕು ಉಂಟಾಗುವುದೇ ಬಿಡಾಡಿ ದನಗಳದ್ದು. ಇವುಗಳನ್ನು ದಾಟಿ ಮುಂದೆ ಹೋಗುವಲ್ಲಿ ವಾಹನ ಸವಾರರು ಪಡಿಪಾಟಲು ಪಡಬೇಕಾಗುತ್ತದೆ. ಬಿಡಾಡಿ ದನಗಳನ್ನು ನಿಭಾಯಿಸುವುದೇ ವಾಹನ ಚಾಲಕರಿಗೆ ದೈನಂದಿನ ಸವಾಲಾಗಿದೆ. ಈ ಎಲ್ಲಾ ಸಮಸ್ಯೆಯ ಸೂಕ್ಷ್ಮತೆಯ ಹೊರತಾಗಿಯೂ, ಗೋವುಗಳನ್ನು ಪೂಜಿಸಲಾಗುತ್ತದೆ. ಸಂಚಾರ ಇಲಾಖೆ ಅಥವಾ ಬಿಬಿಎಂಪಿ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ರಾಜ್ಯಶಾಸ್ತ್ರದ ಪ್ರಾಧ್ಯಾಪಕಿ ಮತ್ತು ದಿನನಿತ್ಯ ವಾಹನಗಳಲ್ಲಿ ಓಡಾಡುವ ಆಲಿಸ್ ಜಾನ್ ಹೇಳಿದ್ದಾರೆ.

ಸೂಕ್ತ ಸ್ಥಳಾವಕಾಶದ ಕೊರತೆ

ಈ ಸಮಸ್ಯೆಯನ್ನು ಒಪ್ಪಿಕೊಂಡಿರುವ ಬಿಬಿಎಂಪಿಯ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಪ್ರಾಣಿಗಳನ್ನು ಬಿಡಲು ಸ್ಥಳದ ಕೊರತೆಯ ಬಗ್ಗೆ ಉಲ್ಲೇಖಿಸಿದ್ದಾರೆ. ‘ಅಂತಹ ಜಾನುವಾರುಗಳನ್ನು ಸೆರೆಹಿಡಿಯುತ್ತೇವೆ. ಆದರೆ, ನಮಗೆ ಸೂಕ್ತ ಸೌಲಭ್ಯದ ಕೊರತೆಯಿದೆ. ಒಂದು ಸಮಯದಲ್ಲಿ ಸುಮಾರು 10 ಪ್ರಾಣಿಗಳನ್ನು ಇರಿಸಬಹುದು. ಇದರಿಂದ ಬೀದಿ ಬದಿ ಪ್ರಾಣಿಗಳನ್ನು ತೆರವುಗೊಳಿಸುವ ನಮ್ಮ ಸಾಮರ್ಥ್ಯಕ್ಕೆ ಪೆಟ್ಟು ಕೊಟ್ಟಂತಾಗುತ್ತದೆ. ಪ್ರಾಣಿಗಳನ್ನು ತೆರವುಗೊಳಿಸಿ, ಅದಕ್ಕೆ ವ್ಯವಸ್ಥೆ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಮಾಲೀಕರಿಗೆ ತಮ್ಮ ಜಾನುವಾರುಗಳನ್ನು ಮರಳಿ ಪಡೆಯಲು ನಾವು ಮೂರು ದಿನಗಳ ಕಾಲಾವಕಾಶ ನೀಡುತ್ತೇವೆ. ಒಂದು ವೇಳೆ ಮರಳಿ ಪಡೆಯದಿದ್ದಲ್ಲಿ ಅಂತಹ ಹಸುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ’ ಎಂದು ಬಿಬಿಎಂಪಿ ಜಂಟಿ ನಿರ್ದೇಶಕ (ಪಶುಸಂಗೋಪನೆ) ರವಿಕುಮಾರ್ ಹೇಳಿದ್ದಾರೆ.

ದಂಡ ಹೆಚ್ಚಿಸಲು ಬಿಬಿಎಂಪಿ ಚಿಂತನೆ

ಇನ್ನು ಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಅಂಥವರ ವಿರುದ್ಧ ದಂಡ ಹೆಚ್ಚಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. 600 ರೂ.ಗಳಿಂದ 3,000 ರೂ.ಗಳವರೆಗೆ ದಂಡ ಹೆಚ್ಚಿಸಲು ಬಿಬಿಎಂಪಿ ಚಿಂತಿಸಿದೆ. ‘ಪ್ರಾಣಿಗಳನ್ನು ಸೆರೆಹಿಡಿದು ಅದಕ್ಕೆ ಸೂಕ್ತ ಸ್ಥಳಾವಕಾಶದ ಕೊರತೆಯಿರುವ ಹಿನ್ನೆಲೆಯಲ್ಲಿ ಮಾಲೀಕರಿಗೆ ಹೆಚ್ಚಿನ ದಂಡ ವಿಧಿಸಬಹುದು. ಇದರಿಂದ ಮಾಲೀಕರು ತಮ್ಮ ಹಸುಗಳನ್ನು ರಸ್ತೆಗೆ ಬಿಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು’ ಎಂದು ರವಿಕುಮಾರ್ ಅವರು ವಿವರಿಸಿದರು. ಅಲ್ಲದೆ, ಪ್ರತಿ ಎಂಟು ವಲಯಗಳಲ್ಲಿ ಗೋಶಾಲೆ ಸ್ಥಾಪಿಸುವಂತೆ ನಾಗರಿಕ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ